ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಭೀಕರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ನರಹತ್ಯೆಯೊಂದು ನಾಡಿನ ಜನರ ಸ್ಮರಣೆಯಿಂದ ಅಳಿದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋಗಿತ್ತು. ಸರ್ಕಾರ ಅಲ್ಲಿ ಕೇವಲ ಹತ್ಯೆಯನ್ನಷ್ಟೇ ಪ್ರಾಯೋಜಿಸಿರಲಿಲ್ಲ, ಹತ್ಯೆಯ ಸುದ್ದಿಯು ಹೊರಜಗತ್ತಿಗೆ ತಿಳಿಯದಂತೆ ಮಾಧ್ಯಮಗಳನ್ನೂ ಕಟ್ಟಿಹಾಕಿತ್ತು. ಯಾವ ಸರ್ಕಾರಿ ದಾಖಲೆಯನ್ನು ಹುಡುಕಿದರೂ ಅಲ್ಲಿ ಸತ್ತವರ ಸಂಖ್ಯೆ ಹತ್ತಕ್ಕಿಂತ ಹೆಚ್ಚಲ್ಲ. ಆದರೆ ಅಲ್ಲಿ ನಿಜವಾಗಿ ಹತ್ಯೆಗೊಳಗಾದವರು ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚುಜನ ! 1979 ರಲ್ಲಿ ಅಂತಹದ್ದೊಂದು ಘೋರ ಹತ್ಯಾಕಾಂಡ ನಡೆದದ್ದು ಪಶ್ಚಿಮ ಬಂಗಾಳದಲ್ಲಿ. ಅಂದರೆ 42 ವರ್ಷಗಳ ಹಿಂದೆ. ಆದರೆ ಈ ಘಟನೆಯನ್ನು ಎಷ್ಟು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ ಎಂದರೆ ಇಂದಿಗೂ ಈ ದೇಶದ ಮಾನವ ಹಕ್ಕುಗಳ ಪರವಾದ ಯಾವ ಹೋರಾಟಗಾರರೂ ಈ ಕುರಿತು ಮಾತನಾಡುವುದಿಲ್ಲ. ಹಾಗೆ ಮಾತನಾಡದೇ ಇರುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಈ ಹತ್ಯೆಯನ್ನು ಪ್ರಾಯೋಜಿಸಿದ್ದು ಪಶ್ಚಿಮ ಬಂಗಾಳವನ್ನು ಆಳಿದ ಜ್ಯೋತಿ ಬಸು ನೇತೃತ್ವದ ಕಮ್ಮುನಿಷ್ಟ್ ಸರ್ಕಾರ !!
ಸತ್ತುಹೋದ ವ್ಯಕ್ತಿಗಳಿಗೆ ಅಂತ್ಯ ಸಂಸ್ಕಾರಗಳೂ ಇಲ್ಲದೆ, ಶವಗಳು ನದಿಯಲ್ಲಿ ತೇಲಿಹೋದ ಯಾತನೆ, ಮೃತರಾದ ಎಳೆಯ ಮಕ್ಕಳ ಶವಗಳನ್ನು ಚಲಿಸುವ ರೈಲಿನಿಂದ ಹಳಿಗಳ ಮೇಲೆಸೆದುಹೋದ ತಾಯಂದಿರ ವೇದನೆ, ಸಾಮಾಹಿಕ ಅತ್ಯಾಚಾರಕ್ಕೊಳಗಾಗಿ ಕಾಡಿನ ನಡುವೆ ಅನಾಥ ಶವಗಳಾಗಿ ಕೊಳೆತು ಹೋದ ಮಹಿಳೆಯರ ನೋವನ್ನು ಈ ದೇಶದ ಚರಿತ್ರೆಯ ಪುಟಗಳಿಂದ ವ್ಯವಸ್ಥಿತವಾಗಿ ಮರೆಮಾಡಲಾಗಿದೆ. ಬೆರಳೆಣಿಕೆಯ ದಿನಪತ್ರಿಕೆಗಳಿದ್ದ ಕಾಲಕ್ಕೆ ಈ ಘಟನೆಯನ್ನು ತಿಳಿದೂ ವರದಿ ಮಾಡಲಾರದ ಭಯ, ವರದಿ ಮಾಡಿದ ಪತ್ರಿಕೆಗಳಿಗೆ ಸರ್ಕಾರದ ಜಾಹಿರಾತುಗಳನ್ನು ತಡೆಹಿಡಿಯುವ ಬೆದರಿಕೆಯ ಕಾರಣದಿಂದ ಸತ್ಯ ಕಥೆ ಬಂಗಾಳದ ಗಡಿಯನ್ನು ದಾಟಲೇ ಇಲ್ಲ.
ಹೊರಜಗತ್ತು ಈ ಘಟನೆಯ ಭೀಕರತೆಯನ್ನು ಅರಿತುಕೊಂಡದ್ದು 2019 ರಲ್ಲಿ ಪತ್ರಕರ್ತ ದೀಪ್ ಹಲ್ದೀರ್ ಅವರ “ BLOOD ISLAND -An Oral History of the Marichjhapi Massacre” ಎಂಬ ಕೃತಿ ಪ್ರಕಟವಾದಾಗಲೇ. ಈ ಕೃತಿ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳು,ಚಳವಳಿಗಾರರು, ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಕಾನೂನು ಹೋರಾಟಗಾರರೂ ಸೇರಿದಂತೆ ಒಂಭತ್ತು ಜನರು ತಮ್ಮ ನೆನಪಿನ ಬುತ್ತಿಯನ್ನು ಲೇಖಕರ ಜತೆಯಲ್ಲಿ ಬಿಚ್ಚಿಟ್ಟುಕೊಂಡ ಮಾತುಗಳ ಸಂಕಲನ. ಮರೆತುಹೋದ ಸಾಮೂಹಿಕ ನರಹತ್ಯೆಯೊಂದರ ನೆನಪಿನ ಕಥೆಗಳು. 176 ಪುಟಗಳ ಈ ನೋವಿನ ಕಥನವನ್ನು ಓದುತ್ತಿದ್ದಂತೆ ನಮ್ಮ ಕಣ್ಣಂಚು ಒದ್ದೆಯಾಗಿರುವುದು ಮಾತ್ರವಲ್ಲ, ಜಗತ್ತಿನ ಕಣ್ಮುಂದೆ ಮಾನವತೆಯ ಮಹಾನ್ ಮೂರ್ತಿಗಳೆಂಬಂತೆ ತಮ್ಮನ್ನು ತಾವು ಚಿತ್ರಿಸಿಕೊಂಡ ಕಮ್ಯುನಿಷ್ಟರ ರಕ್ತದಾಹದ, ಅಮಾನವೀಯತೆಯ ಕುರಿತು ಅಸಹ್ಯ ಹುಟ್ಟದಿರಲಾರದು. ನಾಲ್ಕು ದಶಕಗಳ ಹಿಂದೆ ಸತ್ತ ವ್ಯಕ್ತಿಗಳ ಮೃತದೇಹಗಳನ್ನು ಮಾತ್ರ ಹೂತು ಹಾಕಿದ್ದಲ್ಲ, ಎಲ್ಲಾ ದಾಖಲೆಗಳನ್ನೂ ಹೂತುಹಾಕಿದ್ದರು ಎನ್ನುವ ಸತ್ಯ ದರ್ಶನವಾಗುತ್ತದೆ.
ಸ್ವಾತಂತ್ರ್ಯ ಪಡೆಯುತ್ತಿದ್ದಂತೆ ಭಾರತ ವಿಭಜನೆಯಾಗಿ ಹುಟ್ಟಿಕೊಂಡ ಪೂರ್ವ ಪಾಕಿಸ್ಥಾನ ಮುಂದೆ ಬಾಂಗ್ಲಾದೇಶವಾಯಿತು. ಜೋಗೇಂದ್ರನಾಥ್ ಮಂಡಲ್ ಅವರ ಭರವಸೆಯ ಮಾತುಗಳ ಕಾರಣದಿಂದ ಬಹುತೇಕ ದಲಿತ ಮತು ಹಿಂದುಳಿದ ವರ್ಗದ ಹಿಂದುಗಳು ಭಾರತ ವಿಭಜನೆಯಾದಾಗ ಪಾಕಿಸ್ಥಾನದಲ್ಲೇ ನೆಲೆ ನಿಂತಿದ್ದರು. ಆ ದೇಶದಲ್ಲಿ ಮುಸ್ಲಿಂ ಮೂಲಭೂತವಾದದ ನಡುವೆ ಸಿಲುಕಿದ ಹಿಂದುಗಳು ಪ್ರಾಣ, ಮಾನ ಉಳಿಸಿಕೊಳ್ಳಲು ಅನಿವಾರ್ಯವಾಗಿ 1970 -71 ರ ಸುಮಾರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಾರತದ ಆಶ್ರಯವನ್ನು ಬಯಸಿ ವಲಸೆ ಬರಬೇಕಾಯಿತು. ಹೀಗೆ ವಲಸೆ ಬಂದವರಲ್ಲಿ ನಾಮಶೂದ್ರ ದಲಿತ ಸಮುದಾಯದ ಜನರೇ ಬಹುದೊಡ್ಡ ಸಂಖ್ಯೆಯಲ್ಲಿದ್ದುದು. ಭಾರತ ಸರ್ಕಾರ ದಂಡಕಾರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಪುನರ್ವಸತಿ ಕ್ಯಾಂಪ್ಗಳನ್ನು ಸೃಷ್ಟಿಸಿತ್ತಾದರೂ ಅದು ನರಕ ಸದೃಶವಾದ ಬದುಕೆ ಆಗಿತ್ತು. ಹೀಗಾಗಿ ದಂಡಕಾರಣ್ಯದ ಕ್ಯಾಂಪ್ಗಳಿಂದ ಲಕ್ಷಾಂತರ ಸಂಖ್ಯೆಯ ಹಿಂದುಗಳು ಪಶ್ಚಿಮ ಬಂಗಾಳದ ಕಡೆಗೆ ವಲಸೆ ಹೋಗಿ ಅಲ್ಲೇ ನೆಲೆಯೂರುವ ಪ್ರಯತ್ನದಲ್ಲಿದ್ದರು .ಇಂತಹ ನಿರಾಶ್ರಿತ ವಲಸಿಗರು ತಮ್ಮದೇ ಆದ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಸುಂದರ್ಬನ್ ಕಾಡುಗಳ ನಿರ್ಜನ ದ್ವೀಪ ಪ್ರದೇಶವಾಗಿದ್ದ ಮರಿಚ್ಹಾಪಿಯನ್ನು ( Marichjhapi) ಸೇರಿಕೊಂಡಿದ್ದರು.
ಪಶ್ಚಿಮ ಬಂಗಾಳ ಮತ್ತು ಕೇಂದ್ರದಲ್ಲೆರಡೂ ಕಡೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂಗಾಳಿ ನಿರಾಶ್ರೀತರ ಬದುಕನ್ನು ಹಸನಾಗಿಸಲು ನಿರಾಸಕ್ತಿಯನ್ನು ತೋರುತ್ತಿದ್ದ ಕಾಲಕ್ಕೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ತಾವು ಅಧಿಕಾರಕ್ಕೆ ಬಂದರೆ ನಿರಾಶ್ರೀತರಿಗೆ ತಮ್ಮ ರಾಜ್ಯದ ಸುಂದರ್ಬನ್ ಪ್ರದೇಶದಲ್ಲೇ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆಯನ್ನು ಅನೇಕ ಭಾರಿ ನೀಡಿದ್ದರು. ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಕಮ್ಯುನಿಷ್ಟರನ್ನು ನಂಬಿದ್ದರು. ಚುನಾವಣೆ ನಡೆದಾಗ ಜ್ಯೋತಿ ಬಸು ನೇತೃತ್ವದ ಎಡರಂಗ ಅಧಿಕಾರವನ್ನೂ ಪಡೆದಿತ್ತು. ಭರವಸೆಯ ದಿನಗಳನ್ನು ನಿರೀಕ್ಷಿಸುತ್ತಿದ್ದ ನಿರಾಶ್ರೀತರು ಬಂಗಾಳದ ಬೇರೆ ಬೇರೆ ಕಡೆಗಳಲ್ಲಿ ನೆಲೆಯೂರುವ ಪ್ರಯತ್ನದಲ್ಲಿದ್ದರು. 1.5 ಲಕ್ಷಕ್ಕಿಂತಲೂ ಹೆಚ್ಚು ಹಿಂದೂ ನಿರಾಶ್ರಿತರು ಮರಿಚ್ಹಾಪಿಯಲ್ಲಿ ಕನಸಿನ ನಾಳೆಗಳ ನಿರೀಕ್ಷೆಯಲ್ಲಿ ಬದುಕು ರೂಪಿಸಿಕೊಳ್ಳುತ್ತಿದ್ದರು. ಆ ದ್ವೀಪದಲ್ಲಿ ತಮ್ಮದೇ ಆದ ಗ್ರಾಮವೊಂದನ್ನು ರಚಿಸಿ, ಗುಡಿಸಲುಗಳನ್ನು ಕಟ್ಟಿಕೊಂಡಿದ್ದರು. ನಾಲ್ಕು ಅಕ್ಷರಗಳನ್ನು ಕಲಿಯುವ ಆಸೆಯಿಂದ ಶಾಲೆಯೊಂದನ್ನು ಕಟ್ಟಿಕೊಂಡು ತಮ್ಮಲ್ಲೇ ಒಬ್ಬರನ್ನು ಶಿಕ್ಷಕರನ್ನಾಗಿಯೂ ನೇಮಿಸಿಕೊಂಡಿದ್ದರು. ಸುತ್ತಲಿನ ಉಪ್ಪು ನೀರಿನ ನಡುವೆ ಕುಡಿಯುವ ಸಿಹಿನೀರಿಗಾಗಿ ಕೊಳವೆಯೊಂದನ್ನು ತೋಡಿಕೊಂಡಿದ್ದರು. ದೋಣಿ ನಿರ್ಮಿಸಿ ಮೀನುಗಾರಿಕೆಯನ್ನೂ ಆರಂಭಿಸಿ,ಪಕ್ಕದ ದ್ವೀಪಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಬೆಳೆಸಿಕೊಂಡು ಆಹಾರ ವಸ್ತುಗಳನ್ನು ಖರೀಸುತ್ತಾ ಬದುಕು ನಡೆಸುತ್ತಿದ್ದರು.
ಚುನಾವಣೆಯಲ್ಲಿ ಗೆದ್ದು ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ತಮ್ಮದೇ ಭರವಸೆಯ ಮಾತುಗಳಿಗೆ ಬೆನ್ನು ಹಾಕಿದ ಕಮ್ಯುನಿಷ್ಟರು, ಪಶ್ಚಿಮ ಬಂಗಾಳದಲ್ಲಿ ನಿರಾಶ್ರೀತರಿಗೆ ಜಾಗವಿಲ್ಲ, ಬಲತ್ಕಾರದಿಂದಲಾದರೂ ನಿರಾಶ್ರೀತರನ್ನು ಹೊರಗೆ ಕಳುಹಿಸಲಾಗುವುದೆಂದು ಘೋಷಿಸಿದರು. ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದ ನಿರಾಶ್ರಿತರು ಮರಳಿ ದಂಡಕಾರಣ್ಯಕ್ಕೆ ತೆರಳಬೇಕೆಂದು ಆದೇಶಿಸುತ್ತಾರೆ. ಸರ್ಕಾರ ಪೋಲಿಸ್ ಮತ್ತು ಪಕ್ಷದ ಕಾರ್ಯಕರ್ತರ ಮೂಲಕ ಬಂಗಾಳದಲ್ಲಿರುವ ನಿರಾಶ್ರಿತರನ್ನು ಬಂಗಾಳ ಬಿಟ್ಟು ಹೋಗುವಂತೆ ಕಿರುಕುಳ ನೀಡಲಾರಂಭಿಸಿದರು. ಸಾವಿರಾರು ಸಂಖ್ಯೆಯಲ್ಲಿ ನಿರಾಶ್ರಿತರನ್ನು ಒತ್ತಾಯಪೂರ್ವಕವಾಗಿ ರೈಲು, ಟ್ರಕ್ಗಳಿಗೆ ತುಂಬಿಸಿ ದಂಡಕಾರಣ್ಯಕ್ಕೆ ಕಳುಹಿಸಲಾಯಿತು. ಮರಿಚ್ಹಾಪಿ ದ್ವೀಪದಲ್ಲಿ ಈಗ ತಾನೆ ಹೊಸ ಬದುಕು ಕಟ್ಟಿಕೊಳ್ಳಲಾರಂಭಿಸಿದ ಜನರ ಪಾಲಿಗೆ ಸರ್ಕಾರದ ಈ ನಿರ್ಧಾರ ಆಘಾತವನ್ನು ಉಂಟುಮಾಡಿತು. ವರ್ಷಗಳ ಕಾಲದ ಪರಿಶ್ರಮದಿಂದ ನಿರ್ಜನ ದ್ವೀಪ ಈಗ ಹಸನಾದ ಬದುಕಿನ ತಾಣವಾಗಿತ್ತು. ದ್ವೀಪ ಬಿಟ್ಟು ತೆರಳಲು ನಿರಾಕರಿಸಿದ ಕಾರಣಕ್ಕಾಗಿ ದ್ವೀಪದ ಜನರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡದ್ದು ಮಾನವ ಹಕ್ಕಿನ ಉಲ್ಲಂಘನೆಯಷ್ಟೇ ಅಲ್ಲ, ಮಾನವ ಘನತೆಯ ನಿರಾಕರಣೆಯೂ ಹೌದು.
ಮರಿಚ್ಹಾಪಿ ದ್ವೀಪದ ಜನರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯದ ಸ್ವರೂಪವನ್ನು ಊಹಿಸಲೂ ಸಾಧ್ಯವಿಲ್ಲದಷ್ಟು ಘೋರವಾಗಿತ್ತು. ಆ ದ್ವೀಪದ ಜನ ಆಹಾರೋತ್ಪನ್ನಕ್ಕಾಗಿ, ಔಷಧಿಗಾಗಿ ಸುತ್ತಲಿನ ಬೇರೆ ಬೇರೆ ದ್ವೀಪಗಳನ್ನು ಅವಲಂಭಿಸಿದ್ದರು.ಇದನ್ನು ಅರಿತೇ ಸರ್ಕಾರ ಈ ದ್ವೀಪದ ಮೇಲೆ ಆರ್ಥಿಕ ದಿಗ್ಭಂಧನವನ್ನು ಹೇರಿತು. ದ್ವೀಪದ ಸುತ್ತ ನೂರಾರು ಪೋಲಿಸರ ಸರ್ಪಗಾವಲನ್ನು ಹಾಕಲಾಗಿತ್ತು. ಸುಮಾರು ಹದಿನೆಂಟು ದಿನಗಳ ಈ ಕಾಲ ಮುಂದುವರಿದ ಈ ದಿಗ್ಭಂಧನ ನಿರಾಶ್ರಿತರ ಬದುಕನ್ನು ಅಕ್ಷರಶಃ ನರಕಸದೃಶಗೊಳಿಸಿತು, ಸಾವಿನ ದವಡೆಗೆ ದೂಡಿತು.ಆಹಾರ, ಔಷಧಿ ಮತ್ತು ಶುದ್ಧ ಕುಡಿಯುವ ನೀರಿನ ಸಂಗ್ರಹವೇ ಇಲ್ಲದಿದ್ದ ದ್ವೀಪದ ಜನ ಬದುಕುವುದಕ್ಕಾಗಿ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರೋಗಪೀಡಿತ ವೃದ್ದರು, ಇನ್ನೂ ಈ ಲೋಕದ ಬದುಕಿಗೆ ಕಣ್ದೆರೆಯುತ್ತಿದ್ದ ಅಮಾಯಕ ಮಕ್ಕಳು ಔಷದೋಪಾಚಾರವಿಲ್ಲದೆ ಪ್ರತಿನಿತ್ಯ ಸತ್ತುಬೀಳುತ್ತಿದ್ದರು.ಇದ್ದ ಆಹಾರ ಸಂಗ್ರಹ ಮುಗಿದ ಮೇಲಂತೂ ಜನ ದ್ವೀಪದಲ್ಲಿ ಸಿಗುತ್ತಿದ್ದ ಯಾವುದೋ ಸಸ್ಯದ ಎಲೆ, ಹುಲ್ಲು, ಕಾಯಿಗಳನ್ನು ತಿಂದು ಬದುಕುವ ಪ್ರಯತ್ನ ಮಾಡಿದರೆ, ಅದೇ ಅವರ ಪಾಲಿಗೆ ವಿಷವಾಗಿ ಪ್ರಾಣವನ್ನು ಆಹುತಿ ಪಡೆದಿತ್ತು. ಒಂದಷ್ಟು ಜನ ಪ್ರಾಣದ ಹಂಗು ತೊರೆದು ಪೋಲಿಸರ ಕಣ್ಣುತಪ್ಪಿಸಿ ನೆರೆಯ ದ್ವೀಪಕ್ಕೆ ಹೋಗಿ ಆಹಾರವನ್ನು ತರಲು ಪ್ರಯತ್ನಿಸಿದಾಗ ಪೋಲಿಸರ ಗುಂಡೇಟಿಗೆ ಸತ್ತು ಕರಣ್ಕಾಳಿ ನದಿಯಲ್ಲಿ ಶವವಾಗಿ ತೇಲುತ್ತಿದ್ದರು. ಕೊನೆಯ ಪ್ರಯತ್ನವೆಂಬಂತೆ ಮಹಿಳೆಯರೇ ದೋಣಿ ಚಲಾಯಿಸಿ ನೆರೆಯ ದ್ವೀಪಕ್ಕೆ ಹೋಗುವ ಪ್ರಯತ್ನವನ್ನಾದರೂ ಮಾಡಿ ದ್ವೀಪದ ಜನರನ್ನು ಬದುಕಿಸಬಹುದೇನೋ? ಎಂಬ ನಂಬಿಕೆಯಿಂದ, ಪೋಲಿಸರು ಕನಿಷ್ಠಪಕ್ಷ ಮಹಿಳೆಯರ ಮೇಲಾದರೂ ದಾಳಿ ಮಾಡದೇ ಇರಬಹುದೆನ್ನುವ ಭರವಸೆಯಿಂದ ನದಿಗಿಳಿದಿದ್ದ ದೋಣಿಯಲ್ಲಿದ್ದ ಮಹಿಳೆಯರ ಮೇಲೂ ಪೋಲಿಸರು ಗುಂಡು ಹಾರಿಸಿದಾಗ ನದಿಗೆ ಹಾರಿ ಈಜಿ ದಡಸೇರುವ ಯತ್ನದಲ್ಲಿದ್ದ ಮಹಿಳೆಯರನ್ನೂ ಗುಂಡುಹಾರಿಸಿ ಕೊಂದುಹಾಕಿದ, ಜೀವಂತವಾಗಿ ಸೆರೆಸಿಕ್ಕಿದ ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಹತ್ಯೆಗೈದು ಕಾಡಿನಲ್ಲಿ ಎಸೆಯುವ ಮೂಲಕ ಪೋಲಿಸರು ಜನರ ನಿರಿಕ್ಷೆಯನ್ನು ಮಣ್ಣುಮಾಡಿದ್ದರು.
ದ್ವೀಪದಲ್ಲಿದ್ದ ಜನರ ಪಾಲಿಗೆ ಜೀವಾಮೃತದಂತೆ ಕುಡಿಯುವ ನೀರನ್ನು ಪೂರೈಸುತ್ತಿದ್ದ ಕೊಳವೆ ಬಾವಿಯ ಒಳಗೆ ರಾತ್ರಿಯ ಹೊತ್ತು ವಿಷ ಸುರಿದ ಪರಿಣಾಮ ತಿಳಿಯದೇ ಅದೇ ನೀರನ್ನು ಕುಡಿದು ಮಕ್ಕಳೂ ಸೇರಿ ಹತ್ತಾರು ಜನ ಸಾವಿಗೊಳಗಾಗಿದ್ದರು ಎಂದರೆ ಕ್ರೌರ್ಯದ ತೀವ್ರತೆ ಯಾವ ಸ್ವೃರೂಪದಲ್ಲಿತ್ತು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. “ After economic restrictions on Marichihapi settlers in January 1979, many of them died of starvation.Children were the worst affected.Their bodies were thrown in the river.Fishermen caught bodies in nets, instead of fish !” ಎಂಬ ಮಾತು ಕ್ರೌರ್ಯದ ಅಕ್ಷರಶಃ ನಿದರ್ಶನವಾಗಿದೆ. ಸರ್ಕಾರದ ಅಮಾನವೀಯ ಆರ್ಥಿಕ ದಿಗ್ಭಂಧನವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ, ಕಮ್ಯುನಿಷ್ಟ್ ಸರ್ಕಾರಿ ಪ್ರಾಯೋಜಿತ ಗೂಂಡಾಗಳು ದ್ವೀಪಕ್ಕೆ ನುಗ್ಗಿ ಅಲ್ಲಿನ ಮನೆಗಳನ್ನು ಬೆಂಕಿ ಹಚ್ಚಿ ದ್ವಂಸ ಮಾಡಿದ್ದರು.ನ್ಯಾಯಾಲಯ ದಿಗ್ಬಂಧನಕ್ಕೆ ತಡೆಯಾಜ್ಞೆ ನೀಡಿತಾದರೂ ಅದಾಗಲೇ ದ್ವೀಪ ಪ್ರದೇಶ ಸುಟ್ಟು ನಾಶವಾಗಿತ್ತು.ನ್ಯಾಯಾಲಯವು ತನಿಖೆ ಮಾಡಿ ಸತ್ಯಶೋಧನಾ ವರದಿ ನೀಡಲು ಉನ್ನತ ಸಮಿಯನ್ನು ರಚಿಸಿತಾದರೂ ಈ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಸೇರಲೇ ಇಲ್ಲ. ಸರ್ಕಾರದ ಪ್ರತಿನಿಧಿಗಳ ಹೊರತಾದ ತಂಡ ವರದಿ ಸಂಗ್ರಹಕ್ಕಾಗಿ ಅಲ್ಲಿಗೆ ಬೇಟಿ ನೀಡಲು ಹೋದರೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಂಡದ ಸದಸ್ಯರನ್ನು ದ್ವೀಪ ಪ್ರವೇಶಕ್ಕೆ ಅವಕಾಶ ನೀಡದೆ ಸತಾಯಿಸಿದ್ದರು. ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಿದಾಗ ಯಾವುದೇ ಫೋಟೋ ತೆಗೆಯದಂತೆ ನಿರ್ಬಂಧಿಸಿ ಆಯ್ದ ಕಲವು ಪ್ರದೇಶಗಳನ್ನಷ್ಟೇ ಬೇಟಿಮಾಡಲು ಅವಕಾಶ ನೀಡಿದ್ದರು.
ತಂದೆಯನ್ನು ಕಳೆದುಕೊಂಡ ಮಕ್ಕಳು, ಗಂಡನನ್ನು ಕಳೆದುಕೊಂಡ ಮಹಿಳೆಯರು, ಹೆಂಡತಿಯನ್ನು ಕಳೆದುಕೊಂಡ ಗಂಡಂದಿರು, ಸಹೋದರಿಯರನ್ನು ಕಳೆದುಕೊಂಡ ಸಹೋದರರು. . . ಹೀಗೆ ದ್ವೀಪದ ತುಂಬಾ ಕಂಡ ದೃಶ್ಯಗಳಿವು.ಹೀಗೆ ಕಳೆದುಹೋದವರು ಏನಾದರು? ಎಲ್ಲಿ ಹೋದರು? ಅವರು ಜೀವಂತವಿದ್ದಾರೆಯೆ? ಅಥವಾ ಸತ್ತು ಹೋದ ಅವರುಗಳ ಮೃತ ದೇಹವನ್ನು ನದಿಯಲ್ಲಿ ಎಸೆಯಲಾಯಿತೇ? ಎಂದು ತಿಳಿಯದೇ ಹೋದ ಸ್ಥಿತಿಯೇ ಕಾಣುತ್ತಿತ್ತು. ಆರ್ಥಿಕ ದಿದ್ಭಂಧನದ ಅವಧಿಯಲ್ಲಿ ಹಸಿವಿನಿಂದ ಸತ್ತವರು, ಪೋಲಿಸರು ಗುಡಿಸಲುಗಳಿಗೆ ಬೆಂಕಿ ಹಚ್ಚಿದಾಗ ಸತ್ತವರು,ಗುಂಡೇಟು ಬಿದ್ದು ಸತ್ತುಹೋದವರು ಮಾತ್ರವಲ್ಲ, ಬಲಾತ್ಕಾರದಿಂದ ಟ್ರಕ್ಕು , ರೈಲುಗಳಲ್ಲಿ ಒಬ್ಬರ ಮೇಲೊಬ್ಬರಂತೆ ತುಂಬಿಸಿ ಕಳಿಹಿಸುತ್ತಿದ್ದ ದೃಶ್ಯ ಕಸಾಯಿಕಾಣೆಗೆ ಸಾಗಿಸುವ ಪ್ರಾಣಿಗಳಿಗಿಂತಲೂ ಕೀಳಲಾಗಿತ್ತು. ಹಾಗೆ ಸಾಗಾಟದ ವೇಳೆ ಪ್ರಾಣ ಕಳೆದುಕೊಂಡವರು ಅನೇಕರು. ಹೀಗೆ ಈ ದ್ವೀಪದಿಂದ ನಿರಾಶ್ರಿತರನ್ನು ತೆರವು ಗೊಳಿಸುವ ಪಶ್ಚಿಮ ಬಂಗಾಳ ಸರ್ಕಾರದ ಅಮಾನುಷ ಪ್ರಯತ್ನಕ್ಕೆ ಸತ್ತವರು ಮೌಖಿಕ ದಾಖಲೆಗಳು ಹೇಳುವಂತೆ ಕನಿಷ್ಠ 7,000-10,000 ಜನರು. ಇದೂ ಕೂಡ ಅಂದಾಜು ಸಂಖ್ಯೆ. ನಿಜವಾಗಿ ಸಾವಿನ ಸಂಖ್ಯೆ ಇನ್ನಷ್ಟೂ ಅಧಿಕ. ಹೀಗಿದ್ದರೂ ಸರ್ಕಾರ ಮಾತ್ರ ಅಲ್ಲಿ ಸತ್ತವರು ಹತ್ತಕ್ಕಿಂತ ಹೆಚ್ಚಲ್ಲ ಎನ್ನುತ್ತಿತ್ತು!!
ಕಮ್ಯುನಿಷ್ಟ್ ಸರ್ಕಾರ ಯಾಕೆ ಅಷ್ಟೊಂದು ಅಮಾನುಷವಾಗಿ ದ್ವೀಪದಿಂದ ಜನರನ್ನು ತೆರವು ಮಾಡಿತು? ಮೇಲ್ನೋಟಕ್ಕೆ ಈ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ, ಅರಣ್ಯ ಸಂರಕ್ಷಣೆಯ ಉದ್ದೇಶದಿಂದ ಎಂದು ಬಿಂಬಿಸಿಕೋಂಡಿತು. ಆದರೆ ವಾಸ್ತವ ಏನೆಂದರೆ ನಿರಾಶ್ರಿತರಾಗಿ ಬಂದ ಜನರು ಬಹುತೇಕ ನಾಮಶೂದ್ರ ಸಮುದಯದ ದಲಿತರಾಗಿದ್ದರು.ಬಂಗಾಳ ಕಮ್ಯುನಿಸ್ಟ್ ಪಕ್ಷ ಮೇಲ್ವರ್ಗ(ಭದ್ರಲೋಕ)ದ ಕೈಹಿಡಿತದಲ್ಲಿತ್ತು. ಜಾತಿರಹಿತ,ವರ್ಗರಹಿತ ಸಮಾಜದ ಬಗ್ಗೆ ಮಾತುಗಳನ್ನು ಆಡುತ್ತಿದ್ದ ಕಮ್ಯುನಿಷ್ಟರು ಸ್ವತಃ ಜಾತಿವಾದಿ ಮನಸ್ಸುಗಳೇ ಆಗಿದ್ದರು. ದಲಿತ ಸಮುದಾಯದ ವಿರುದ್ಧದ ಜಾತಿ ಪೂರ್ವಾಗ್ರಹವೇ ಇಲ್ಲಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳಲು ಮುಖ್ಯ ಕಾರಣವಾಗಿತ್ತು. ದ್ವೀಪದ ಬದುಕನ್ನು ಜೈಲಿನ ಬದುಕಿಗಿಂತಲೂ ಧಾರುಣವಾಗಿಸಿದ ಸರ್ಕಾರ ಮಾನವ ಘನತೆಯನ್ನು ಮರೆತು ನಿರಾಶ್ರಿತರೊಂದಿಗೆ ನಡೆದುಕೊಂಡಿತ್ತು. ಪ್ರತಿರೋಧ ತೋರಿದವರ ಹಣೆಗೆ ಗುಂಡಿಟ್ಟುಕೊಂದು ಶವವನ್ನು ಚೀಲದಲ್ಲಿ ತುಂಬಿಸಿ ಭಾರವಾದ ಕಲ್ಲೊಂದನ್ನು ಕಟ್ಟಿ ಹೆಣಗಳನ್ನು ನದಿಗೆಸೆದು ಬಿಡುತ್ತಿದ್ದ ಪರಿಣಾಮ ಹೆಣಗಳೂ ತೇಲುತ್ತಿರಲಿಲ್ಲವಂತೆ!! ನಿರಾಶ್ರಿತ ಜನರು ಪಾಣಿಗಿಂತಲೂ ಕೀಳಾದ ಈ ಬದುಕನ್ನು ಕಂಡಿದ್ದರು. “ಸಾವೆಂಬುದು ಬಂದೇ ಬರುತ್ತದೆ.ಆದರೆ ಅಂತಹ ಸಾವಾದರೂ ಘನತೆಯದ್ದಾಗಲಿ” ಎನ್ನುವುದಷ್ಟೇ ಅವರುಗಳ ಅಂತಃಕರಣದ ಆಸೆಯಾಗಿತ್ತು.ಆದರೆ “Humanity died on that island in 1979”.
ದೀಪ್ ಹಲ್ದಿರ್ ಎಂಬ ಪತ್ರಕರ್ತ ದಾಖಲಿಸಿದ ಈ ಎಲ್ಲಾ ಘಟನೆಗಳು ಅಂದಿನ ಭಯಾನಕ ಬದುಕಿನ ಸಾಕ್ಷಿಗಳಾಗಿ ಉಳಿದಿದೆ. ಅಚ್ಚರಿ ಎಂದರೆ ತಮ್ಮದೇ ನಾಡಿನ ನಾಗರಿಕರನ್ನು ಇಷ್ಟೊಂದು ದಾರುಣವಾಗಿ ಹತ್ಯೆ ಮಾಡಿದ ಘಟನೆ ನಡೆದು 42 ವರ್ಷಗಳ ಬಳಿಕವಾದರೂ ಈ ಹತ್ಯಾಕಾಂಡದ ರೂವಾರಿಗಳ ವಿರುದ್ದ ಯಾವ ತನಿಖೆಯೂ ಆಗಲಿಲ್ಲ.ತನಿಖೆಯೇ ಆಗದ ಹೊರತು ಇನ್ನು ಶಿಕ್ಷೆಯ ಮಾತೆಲ್ಲಿ?
ಡಾ.ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.