ತಮ್ಮ ಪ್ರಾಣ ಮಾನ ಉಳಿಸುವಂತೆ ಕೈ ಮುಗಿದು ನಿಂತಿರುವ ನೂರಾರಾ ಜನ ಮಹಿಳೆಯರು, ಅಳುತ್ತಿರುವ ಎಳೆಯ ಮಕ್ಕಳು, ಗಾಯಗಳನ್ನು ತೋರಿಸುತ್ತಿರುವ ಪುರುಷರು ಇದು ಯಾವುದೋ ಯುದ್ಧ ಪೀಡಿತ ದೇಶದ ದೃಶ್ಯವಲ್ಲ. ನಮ್ಮದೇ ದೇಶದ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಪಾಲರು ಗಲಭೆ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿದಾಗ ಕಂಡ ದೃಶ್ಯಗಳು. ಅವರೆಲ್ಲರಲ್ಲಿ ಇದ್ದುದು ಆತಂಕವೊಂದೇ. ಅವರೆಲ್ಲರು ತಮ್ಮ ಮನೆಗಳನ್ನು , ಕೃಷಿ ಭೂಮಿಯನ್ನು ತೊರೆದು ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರೀಗ ಗೂಂಡಾಗಳನ್ನು ಕಂಡರಷ್ಟೇ ಭಯಗೊಳ್ಳುತ್ತಿಲ್ಲ, ಪಶ್ಚಿಮ ಬಂಗಾಳದ ಪೋಲಿಸರನ್ನು ಕಂಡಾಗಲೂ ಅದೇ ಭಯದಲ್ಲಿ ನಡುತ್ತಿದ್ದಾರೆ ಎನ್ನುವ ಮಾತುಗಳನ್ನು ಅಲ್ಲಿನ ರಾಜ್ಯಪಾಲರು ಹೇಳುತ್ತಿರುವ ಮಾತುಗಳನ್ನು ಕೇಳಿದರೆ ಪಶ್ಚಿಮ ಬಂಗಾಳದ ನಿಜ ಸ್ಥಿತಿ ಏನೆಂದು ಯಾರಿಗಾದರೂ ಅರಿವಾಗಬಹುದು. ಬಂಗಾಳ ಚುಣಾವಣೋತ್ತರ ಹಿಂಸೆಯಿಂದ ನಲುಗಿದೆ. ರಾಜಕೀಯ ಪ್ರತೀಕಾರದ ಹಿಂಸಾಚಾರಕ್ಕೆ ಅಮಾಯಕರು ಬಲಿಪಶುಗಳಾಗಿದ್ದಾರೆ. ಮಮತಾ ದೀದಿ ನಗುತ್ತಿದ್ದಾರೆ !
ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಣ ಧಾತುವಿದ್ದಂತೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ಕಾಲಕಾಲಕ್ಕೆ ತನ್ನಲ್ಲಿ ಚುನಾವಣೆಗಳನ್ನು ನಡೆಸಿ ನ್ಯಾಯಬದ್ಧವಾದ ಶಾಸಕಾಂಗವನ್ನು ರೂಪಿಸಿಕೊಳ್ಳುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯದ ಹೊರತು ಪ್ರಜೆಗಳ ಪ್ರಭುತ್ವ ಎನ್ನುವುದು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಪ್ರಜೆಗಳು ತಮ್ಮನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮಹತ್ವದ ಪಾತ್ರವನ್ನು ಚುನಾವಣೆಗಳು ವಹಿಸುತ್ತದೆ. ಚುನಾವಣೆಗಳಲ್ಲಿ ಮತದಾರರು ನಿರ್ಭೀತಿಯಿಂದ , ಯಾವುದೇ ಆಮೀಷಗಳಿಗೆ ಒಳಗಾಗದೆ ಮತದಾನದಲ್ಲಿ ಭಾಗವಹಿಸುವಂತಾಗಬೇಕು ಎನ್ನುವುದು ಸಂವಿಧಾನದ ಆಶಯವೂ ಹೌದು.
ಜಗತ್ತಿನ ಅನೇಕ ದೇಶಗಳಲ್ಲಿ ಯಾವುದೋ ಕ್ರಾಂತಿ,ಧಂಗೆ,ಹಿಂಸೆಗಳು ಅಲ್ಲಿನ ಪ್ರಜಾಪ್ರಭುತ್ವವನ್ನು ನಾಶಮಾಡಿ ಸರ್ವಾಧಿಕಾರವನ್ನು ಹೇರಿರುವ ಉದಾಹರಣೆಗಳೂ ಇದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಕೀರ್ತಿಗೆ ಪಾತ್ರವಾದ ಭಾರತದಲ್ಲಿ ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೆ ಜನರೇ ನೇರವಾಗಿ ಮತದಾನದಲ್ಲಿ ಭಾಗವಹಿಸಿ ತಮ್ಮ ಪ್ರತಿನಿಧಿಗಳನ್ನು ಆರಿಸುತ್ತಾರೆ. ಹತ್ತಾರು ರಾಜಕೀಯ ಪಕ್ಷಗಳು, ನೂರಾರು ರಾಜಕೀಯ ನೇತಾರರು ತಾತ್ವಿಕ ಭಿನ್ನಾಭಿಪ್ರಾಯಗಳ ಆಚೆಗೆ ಪರಸ್ಪರ ಗೌರವದಿಂದ ಇರುವುದರಿಂದಲೇ ಭಾರತದ ಪ್ರಜಾಪ್ರಭುತ್ವ ಸುಂದರ ವ್ಯವಸ್ಥೆಯಾಗಿ ಕಾಣುತ್ತದೆ.
ಆದರೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಫಲಿತಾಂಶದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣೋತ್ತರ ರಾಜಕೀಯ ಹಿಂಸಾಚಾರ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ನ ಪ್ರತಿಕಾರದ ನಡವಳಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬೆಂಬಲಿಸಿದವರು ಬೀದಿ ಹೆಣಗಳಾಗುತ್ತಿರುವುದು ಪ್ರಜಾಪ್ರಭುತ್ವದ ಘೋರ ವ್ಯಂಗ್ಯವಾಗಿದೆ. ಚುನಾವಣೆಯ ಬಳಿಕ ಗೆದ್ದವರು ತನ್ನ ಕ್ಷೇತ್ರದ ಎಲ್ಲರನ್ನೂ, ಅಂದರೆ ತನಗೆ ಮತ ಹಾಕಿದ ಅಥವಾ ಹಾಕದ ಎಂದು ವಿಂಗಡಿಸದೆ ಎಲ್ಲರಿಗೂ ಪ್ರತಿನಿಧಿಯಾಗಿ ಕೆಲಸಮಾಡಬೇಕು. ಆದರೆ ಪಶ್ಚಿಮ ಬಂಗಾಳದಲ್ಲಿ ಗೆದ್ದವರು ಸೊತ ಪಕ್ಷಗಳ ಕಾರ್ಯಕರ್ತರನ್ನು ಬೀದಿ ಬೀದಿಗಳಲ್ಲಿ ಅಟ್ಟಾಡಿಸಿ ಕೊಲ್ಲತ್ತಿರುವ, ಮನೆ, ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳನ್ನು ನೋಡಿದ ಯಾರಿಗಾದರೂ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಜೀವಂತವಿದೆಯೇ ಎಂದೆನಿಸಬಹುದು. ವಾಸ್ತವದಲ್ಲಿ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆಗೈಯಲಾಗಿದೆ. ಯಾವುದೇ ರಾಜಕೀಯ ಪಕ್ಷ – ಸಿದ್ಧಾಂತವನ್ನು ಬೆಂಬಲಿಸಿಯೂ ನಿರ್ಭೀತಿಯಿಂದ ಬದುಕಬಹುದೆಂಬ ಪ್ರಜಾಪ್ರಭುತ್ವದ ಸ್ಪಿರೀಟ್ನ್ನು ನಾಶಮಾಡಲಾಗಿದೆ.
ಅಧಿಕಾರದ ಗದ್ದುಗೆಗೆ ಏರಿದ ಮಮತಾ ಬ್ಯಾನರ್ಜಿ ರಾಜಧರ್ಮಕ್ಕನುಗುಣವಾಗಿ ರಾಜ್ಯದ ಎಲ್ಲರನ್ನು ಯಾವುದೇ ತಾರತಮ್ಯ – ಬೇಧ ತೋರದೆ ರಕ್ಷಿಸುವ ಹೊಣೆಯನ್ನು ಹೊರಬೇಕಾಗಿತ್ತು. ದುರಂತವೆಂದರೆ ಬ್ಯಾನರ್ಜಿಯವರ ಕಣ್ಗಾವಲಿನಲ್ಲಿಯೇ ಅವರ ಪಕ್ಷದ ಕಾರ್ಯಕರ್ತರು ಮತ್ತು ಮತೀಯ ಮೂಲಭೂತವಾದಿಗಳು ಅಕ್ಷರಶಃ ಗೂಂಡಗಳಂತೆ ಬಿಜೆಪಿಯನ್ನು ಬೆಂಬಲಿಸಿದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಹಲ್ಲೆ ನಡೆಸುತ್ತಿದ್ದಾರೆ, ಮನೆ ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕೊಲೆ ಮಾಡಿ ಬಿಸಾಡುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಪರಿಣಾಮವಾಗಿ ಅಮಾಯಕ ಮಕ್ಕಳು , ಮಹಿಳೆಯರು ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ರಕ್ತದ ಕೋಡಿ ಹರಿದಿದೆ. ಇವೆಲ್ಲವೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಚುನಾವಣೆಯ ಗೆಲುವಿನ ವಿಜಯದ ಭಾಗವೆ ಆಗಿಬಿಟ್ಟಿತ್ತು ಎಂದರೆ ಜನ ಯಾವ ಭರವಸೆಯಲ್ಲಿ ಈ ರಾಜ್ಯದಲ್ಲಿ ಬದುಕಬೇಕು?
ರಾತ್ರೋರಾತ್ರಿ ಇಷ್ಟೆಲ್ಲಾ ಹಿಂಸೆ ನಡೆಯುತ್ತಿದ್ದಾಗ, ಸಾವಿರಾರು ಜನ ಬೀದಿಗೆ ಬಿದ್ದು ಭಯಭೀತರಾಗಿ ಪ್ರಾಣ ಕೈಯಲ್ಲಿ ಹಿಡಿದು ನಿಂತಿದ್ದಾಗ ರಾಜ್ಯದ ಮುಖ್ಯಮಂತ್ರಿಗಳು ಎಲ್ಲಿದ್ದರು? ರಾಜ್ಯದ ಪೋಲಿಸ್ ಇಲಾಖೆ ಏನು ಮಾಡುತ್ತಿತ್ತು? ಎಂದು ನೋಡಿದರೆ ಅವರೆಲ್ಲರೂ ತಮ್ಮ ವಿರುದ್ಧ ಮತಚಲಾಯಿಸಿದ, ತಮ್ಮ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಭಿನ್ನ ಸಿದ್ಧಾಂತದ ಪ್ರಜೆಗಳ ಸಾವು ನೋವಿಗೆ ಮೌನ ಸಮ್ಮತಿಯನ್ನಿತ್ತು ಸಾಕ್ಷಿಯಾಗಿ ಪ್ರತೀಕಾರದ ಲೆಕ್ಕಾಚಾರವನ್ನು ನಡೆಸುತ್ತಿದ್ದರು. ರಾಜ್ಯದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯ ನಡವಳಿಯು ಅಕ್ಷರಶಃ ಪ್ರಜಾಪ್ರಭುತ್ವದ ಅಣಕವಾಗಿತ್ತು.ಬೀದಿಗಿಳಿದ ಗೂಂಡಾಗಳನ್ನು ನಿರ್ಧಯವಾಗಿ ಮಟ್ಟಹಾಕಿ ಕಾನೂನು ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಬೇಕಾಗಿದ್ದ ಮುಖ್ಯಮಂತ್ರಿ ಚುನಾವಣಾ ಆಯೋಗವನ್ನು ಟೀಕಿಸುತ್ತಾ, ಬೀಜೆಪಿಯ ರಾಷ್ಟ್ರೀಯ ನಾಯಕತ್ವವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದರು. ಟಿಎಂಸಿಯ ವಿಜಯದ ಉನ್ಮಾದ ಮತ್ತು ಮಮತಾ ಬ್ಯಾನರ್ಜಿಯ ಸೋಲಿನ ಹತಾಶೆ ಬಂಗಾಳದ ಹಿಂಸೆಯ ಮೂಲವಾಗಿತ್ತು. ಪ್ರಜಾಪ್ರಭುತ್ವದ ಮೂಲ ಆಶಯವಾದ ಭಿನ್ನಮತ ಎನ್ನುವುದು ಪಶ್ಚಿಮ ಬಂಗಾಳದಲ್ಲಿ ಅಪರಾಧವಾಗಿತ್ತು. ಅದು ಸಾವಿನ , ಹಿಂಸೆಯ ಆಹ್ವಾನವಾಗಿತ್ತು. ಪಕ್ಷ, ಸಿದ್ಧಾಂತಗಳನ್ನು ಮೀರಿ ನಾಡಿನ ಪ್ರಜೆಗಳ ಹಿತವನ್ನು, ಪ್ರಾಣವನ್ನು, ಆಸ್ತಿಯನ್ನು ಕಾಯಬೇಕಾಗಿದ್ದ ಮುಖ್ಯಮಂತ್ರಿಯ ನೇತೃತ್ವದಲ್ಲೇ ಹಿಂಸೆ ಪ್ರಚೋದಿಸಲ್ಪಟ್ಟಿತ್ತು. ಪ್ರಭುತ್ವ ಪ್ರೇರಿತ ಹಿಂಸೆಗೆ ಪಶ್ಚಿಮ ಬಂಗಾಳ ನಲುಗಿದೆ. ಸಂವಿಧಾನಕ್ಕೆ ಬೆಂಕಿಹಚ್ಚುವ ಕ್ರೌರ್ಯ ಮತ್ತು ಪ್ರಭುತ್ವವೇ ಹಿಂಸೆಯನ್ನು ಪ್ರಾಯೋಜಿಸಿ ಪ್ರಜೆಗಳ ಸಾವಿಗೆ ಕಾರಣವಾಗುವ ಕ್ರಿಯೆಯ ತಾತ್ಪರ್ಯದಲ್ಲಿ ವ್ಯತ್ಯಾಸವಿಲ್ಲ.
ಮಮತಾ ಬ್ಯಾನರ್ಜಿಯ ನಡವಳಿಕೆಯಲ್ಲಿ ಪ್ರಜಾಪ್ರಭುತ್ವದ ಸತ್ವ ಕಾಣೆಯಾಗಿತ್ತು. ತಾನು ಸೋತು, ಪಕ್ಷ ಗೆದ್ದಾಗ ಅದನ್ನು ಸಂಯಮದಿಂದ ಸ್ವೀಕರಿಸದೆ ತನ್ನ ಶ್ವೇತ ವಸ್ತ್ರವನ್ನು ರಕ್ತಲೇಪಿತಗೊಳಿಸಿಕೊಂಡರು. ಮದವೆತ್ತ ಆಕೆಯ ಅಟ್ಟಹಾಸಕ್ಕೆ ಬಂಗಾಳಿಗಳು ಪ್ರಾಣ, ಮಾನ ಉಳಿಸಿಕೊಳ್ಳಲು ನೆರೆಯ ಅಸ್ಸಾಂಗೆ ಪಲಾಯನ ಮಾಡುತ್ತಿರುವ,ಮನೆಗಳನ್ನು ತೊರೆದು ಕಾಡು, ಹೊಲಗಳಲ್ಲಿ ಆಶ್ರಯದ ನಿರೀಕ್ಷೆಯಲ್ಲಿ ಮಕ್ಕಳು – ಮಹಿಳೆಯರು ಕಾಯುತ್ತಿದ್ದ ದೃಶ್ಯಗಳು ಪ್ರಜಾಪ್ರಭುತ್ವ ಸತ್ತು ಹೋದುದರ ಪ್ರತೀಕವಲ್ಲದೆ ಮತ್ತೇನು? ಹಿಂದೆ ಜಮ್ಮು ಕಾಶ್ಮೀರದಲ್ಲಿ ಪಂಡಿತ ಸಮುದಾಯ ಭಯೋತ್ಪಾಕರ ಅಟ್ಟಹಾಸಕ್ಕೆ ನಲುಗಿ ಊರು ತೊರೆದ ಘಟನೆಗಳು ಇನ್ನೂ ಹಸಿ ಹಸಿಯಾಗಿರುವಾಗ ಅಂತಹುದೇ ದೃಶ್ಯಗಳು ಪಶ್ಚಿಮ ಬಂಗಾಳದಲ್ಲೂ ನಡೆಯುತ್ತಿರುವುದನ್ನು ಗಮನಿಸಿದರೆ ಬಂಗಾಲ ಮತ್ತೊಂದು ಕಾಶ್ಮೀರವಾಗುತ್ತಿದೆಯೇ ಎನ್ನುವ ಆತಂಕವಾಗದಿರಲಾರದು.
ಇಷ್ಟೆಲ್ಲಾ ಹಿಂಸಾಕೃತ್ಯಗಳು ನಡೆದು, ಮಕ್ಕಳು ಮಹಿಳೆಯರು ತಾಯ್ನೆಲದಲ್ಲೇ ಪರಕೀಯರಾಗಿ ಬೀದಿಗೆ ಬಿದ್ದ ದೃಶ್ಯಗಳನ್ನು ಕಂಡೂ ಈ ದೇಶದ ಸೋಕಾಲ್ಡ್ ಬುದ್ಧಿಜೀವಿಗಳು, ಸಾಕ್ಷಿಪ್ರಜ್ಞೆಗಳು, ಸಂವಿಧಾನ ವಿಶ್ಲೇಷಕರು, ರಾಜಕೀಯ ಮುತ್ಸದ್ದಿಗಳು, ಚಳವಳಿಗಾರರು ಕನಿಷ್ಠ ಖಂಡನೆಯನ್ನೂ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಅಲ್ಲಿ ಸಾವು ನೋವಿಗೆ ತುತ್ತಾದವರು ಬಿಜೆಪಿಯನ್ನು ಬೆಂಬಲಿಸಿದವರು. ಅಂದರೆ ಸಾಯುವುದಕ್ಕಾಗಿಯೇ ಇರುವವರು !! ದೆಹಲಿಯಿಂದ ಹಿಡಿದು ನಮ್ಮ ನಮ್ಮ ಊರು ಕೇರಿಗಳಲ್ಲಿರುವ ಕವಿಗಳ, ವಕೀಲರ, ಮಾನವ ಹಕ್ಕುಗಳ ಹೋರಾಟಗಾರರ ಕಣ್ಣು ತೋಯಲಿಲ್ಲ, ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯಲಿಲ್ಲ. ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಬಂಗಾಳದಲ್ಲಿ ನಡೆದ ಹಿಂಸೆಯ ದೃಶ್ಯಗಳು, ಹಬ್ಬಿದ ಬೆಂಕಿಯ ಕೆನ್ನಾಲಿಗೆಗಳು ಮುಖಪುಟದ ಚಿತ್ರವಾಗಲಿಲ್ಲ.ಆಂದೋಲನಜೀವಿಗಳು ಕ್ಯಾಂಡಲ್ ಮಾರ್ಚ್ ಮಾಡಲಿಲ್ಲ. ರಾತ್ರೋರಾತ್ರಿ ಯಾರೂ ನ್ಯಾಯಾಂಗದ ಬಾಗಿಲು ತಟ್ಟಲಿಲ್ಲ. ಯಾಕೆಂದರೆ ಅಲ್ಲಿ ಸಾಯುತ್ತಿರುವವರು ಬಿಜೆಪಿಯನ್ನು ಬೆಂಬಲಿಸಿದವರಾಗಿದ್ದರು! ಫೆಸ್ಬುಕ್, ಟ್ವೀಟರ್ಗಳಲ್ಲಿ ಬಂಗಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದಿದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಯಾರೂ ಘರ್ಜಿಸಲಿಲ್ಲ.ಯಾಕೆಂದರೆ ಹೀಗೆ ನೊಂದು ಪ್ರಾಣಭಯದಲ್ಲಿ ಬದುಕಿದವರು ಬಿಜೆಪಿಯನ್ನು ಬೆಂಬಲಿಸಿದವರಾಗಿದ್ದರು. ಅವರು ಮಾಡಿದ ತಪ್ಪೆಂದರೆ ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದು !! ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಕುಸಿದು ಬಿದ್ದಿದೆ. ಬಂಗಾಳದ ಗವರ್ನರ್ ಹೇಳುವಂತೆ ‘‘ಪ್ರಜಾಪ್ರಭುತ್ವ ವಿನಾಶವಾಗಿದೆ’’.ಮಮತಾ ಬ್ಯಾನರ್ಜಿಯ ಚುನಾವಣಾ ಹೋರಾಟವನ್ನು ‘ಬಂಗಾಳದ ಅಸ್ಮಿತೆ’ ಎಂದವರು, ಆಕೆಯ ಗೆಲುವನ್ನು ‘ಒಕ್ಕೂಟ ವ್ಯವಸ್ಥೆಯ ಗೆಲುವು’ ಎಂದು ಸಂಭ್ರಮಿಸಿದವರಿಗೆ ದೀದಿಯ ಗಾದಿಯಡಿಯಲ್ಲಿ ನರಳಿ ಸತ್ತವರ ಆಕ್ರಂಧನ ಕೇಳಲೇ ಇಲ್ಲ.
ದೇಶದಲ್ಲಿ ಬಿಜೆಪಿ ಆಡಳಿತವಿರುವ ಯಾವುದಾದರೂ ರಾಜ್ಯ ಒಂದರ ಯಾವುದೋ ಮೂಲೆಯೊಂದರಲ್ಲಿ ಯಾರೋ ವ್ಯಕ್ತಿಯೊಬ್ಬ ಯಾರಿಂದಲೋ ಹಲ್ಲೆಗೊಳಗಾದ ಸುದ್ಧಿ ಕಿವಿಗೆ ಬಿದ್ದರೆ ಸಾಕು, ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನ ಅಪಾಯದಲ್ಲಿದೆ, ದೇಶದಲ್ಲಿ ಸರ್ವಾಧಿಕಾರಿ ಮನೋಭಾವ ಬೆಳೆಯುತ್ತಿದೆ, ಸಾಂವಿಧಾನಿಕ ಸಂಸ್ಥೆಗಳು ಅಪಾಯದಲ್ಲಿದೆ ಎಂದು ಗಂಟಲು ಹರಿಯುವಂತೆ ಊಳಿಡುವ ಮಂದಿಗೂ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಆಧಾರ ಸ್ತಂಬ ಕುಸಿದುಬಿದ್ದುದು ಕಾಣಲೇ ಇಲ್ಲ. ಶವಗಳ ಮೇಲೆ ಮುಖ್ಯಮಂತ್ರಿಯ ಗಾದಿ ಏರಿದ ಮಮತಾಳ ನಡವಳಿಕೆಯಲ್ಲಿ ಇದ್ದುದು ಸರ್ವಾಧಿಕಾರಿ ಮನೋಭಾವವೇ. ನ್ಯಾಯ ಸಮ್ಮತವಾಗಿ ಚುನಾವಣೆಯಲ್ಲಿ ಗೆದ್ದವರು ‘ರೂಲ್ ಆಫ್ ಲಾ’ಗೆ ನಿಷ್ಠರಾಗಬೇಕಾಗಿತ್ತು. ಆದರೆ ಇಲ್ಲಿ ನ್ಯಾಯ ಕಾಲ ಕಸವಾಗಿತ್ತು. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ಅದನ್ನು ಬೆಂಬಲಿಸಿದವರು ಭೀತಿಗೊಳಗಾಗುವುದೆಂದರೆ ಅದು ಪ್ರಜಾಪ್ರಭುತ್ವದ ಸೋಲು. ಗೆದ್ದವರು ಬೀದಿಯಲ್ಲಿ ನಿಂತು ತಮ್ಮ ಎದುರಾಳಿಗಳಿಗೆ ಪಾಠ ಕಲಿಸುತ್ತೇವೆ ಎಂಬ ಮನಸ್ಥಿತಿ ಪ್ರಜಾಪ್ರಭುತ್ವದ ಪತನದ ಮುನ್ಸೂಚನೆ. ಬಹುಮತವೆನ್ನುವುದು ಸರ್ವಾಧಿಕಾರ ಎಂದು ಭಾವಿಸಿದ ಪ್ರತೀಕ.
ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ಹಿಂಸೆಯನ್ನು ತಡೆದು ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಂತೆ ನೀಡಿದ ಎಚ್ಚರಿಕೆಯ ಮಾತುಗಳು, ಕೇಂದ್ರ ಸರ್ಕಾರದ ಗೃಹ ಇಲಾಖೆ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ಹಿಂಸಾಚಾರದ ಬಗ್ಗೆ ವರದಿ ಸಂಗ್ರಹಿಸಲು ಬಂಗಾಳಕ್ಕೆ ನೀಯೋಜಿಸಿದ್ದು, ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳು ರಾಜ್ಯದಲ್ಲಿ ಹಿಂಸೆಯನ್ನು ತಡೆಯಲು ವಿಫಲರಾದ ಮುಖ್ಯ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡು ಐವರು ನ್ಯಾಯಮೂರ್ತಿಗಳ ಬೆಂಚ್ನ್ನು ಚುನಾವಣೋತ್ತರ ಹಿಂಸೆಗಳ ಹಿನ್ನೆಲೆಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಆಲಿಸಲು ನೇಮಕ ಮಾಡಿದ್ದು, ಗವರ್ನರ್ ಸ್ವತಃ ಹಿಂಸಾಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದು ಬಂಗಾಳದಲ್ಲಿ ಚುನಾವಣಾ ನಂತರ ಪರಿಸ್ಥಿತಿ ಹೇಗೆ ಹದಗೆಟ್ಟಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಗಳೆನ್ನಬಹುದು. ಇಂತಹ ವಿದ್ಯಮಾನಗಳ ನಂತರವೂ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯ ನಡವಳಿಕೆಗಳಲ್ಲಿ ವ್ಯತ್ಯಾಸವಾಗಿದೆ ಎಂದೇನು ಇಲ್ಲ. ಬಂಗಾಳದ ಜನರಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವ ಯಾವ ಮಾತುಗಳನ್ನಾಗಲೀ, ಕೃತಿಯನ್ನಾಗಲೀ ಮಮತಾ ಬ್ಯಾನರ್ಜಿ ಮಾಡಿಲ್ಲ ಎನ್ನುವುದೇ ಅವರ ದಾಷ್ಟ್ಯಕ್ಕೆ ನಿದರ್ಶನ. ವಾಸ್ತವದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಕಾನೂನು ಪಾಲನೆ ಅತ್ಯುನ್ನತ ಜವಾಬ್ದಾರಿ.ಯಾಕೆಂದರೆ ಸಂವಿಧಾನದತ್ತ ವ್ಯವಸ್ಥೆಯಲ್ಲಿ ಕಾನೂನೇ ಪರಮೋಚ್ಛವಾದುದು. ಆದರೆ ಮುಖ್ಯಮಂತ್ರಿಗಳು ಅದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹಿಂಸೆಯ ಮೂಲಕ ಭಯವನ್ನು ಭಿತ್ತಿ ಯಾರೂ ತನ್ನನ್ನು ಪ್ರಶ್ನಿಸಲಾಗದು ಎಂಬ ಸವಾಲನ್ನು ಒಡ್ಡಿದ್ದಾರೆ.
ಆದರೆ ಇಲ್ಲಿ ನಡೆದ ಹಿಂಸಾತ್ಮಕ ದಾಳಿಯನ್ನು ಯಾರೋ ಕೆಲವು ವ್ಯಕ್ತಿಗಳ ಮೇಲೆ ನಡೆದ ದಾಳಿ ಎಂದೋ, ಯಾವುದೋ ಒಂದು ಸಿದ್ಧಾಂತದ ಮೇಲೆ ನಡೆದ ದಾಳಿ ಎಂದೋ ಪರಿಗಣಿಸದೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸರ್ವಾಧಿಕಾರಿ ಮನಸ್ಥಿತಿಯ ದಾಳಿ ಎಂದು ಭಾವಿಸಿ ಇಂತಹ ಮನಸ್ಥಿತಿಗಳನ್ನು ನ್ಯಾಯಯುತವಾದ ಮಾರ್ಗದಿಂದಲೇ ಮಟ್ಟ ಹಾಕದೇ ಹೋದರೆ ಇದು ದೇಶಕ್ಕೆ ಅಪಾಯಕಾರಿಯಾಗಬಲ್ಲುದು. ಬಂಗಾಳದ ರಾಜಕೀಯ ಹಿಂಸಾಚಾರದ ಕೃತ್ಯವನ್ನು ಖಂಡಿಸಲು ನಾವ್ಯಾರೂ ಬಿಜೆಪಿಯ ಬೆಂಬಲಿಗರಾಗಿರಬೇಕಾಗಿಲ್ಲ. ನಮ್ಮೊಳಗೆ ಪ್ರಜಾಪ್ರಭುತ್ವದ ಆಶಯ ಜೀವಂತವಿದ್ದರೆ ಸಾಕು.
ಡಾ. ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.