ಶ್ರೀ ಶಂಕರರ ಜೀವನ ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ತಮ್ಮ ಕೆಲವ 34 ವರ್ಷ ಅವಧಿಯಲ್ಲಿ ಇಡೀ ಭಾರತವನ್ನ ಮೂರು ಬಾರಿ ಸುತ್ತಿದವರು. ಅಂದೇ ದೇಶದ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದವರು.
ಶಂಕರರ ಜೀವನದಲ್ಲಿ ಮೂರು ಅಂಶಗಳನ್ನು ನಾವು ಗಮನಿಸಬೇಕು.
1. ತಾಯಿ ಬಗೆಗೆ ತೋರಿಸಿದ್ದ ಕಾಳಜಿ
2. ಹಿಂದೂ ಸನಾತನ ಧರ್ಮದ ಪುನರುತ್ಥಾನ
3. ಮುಂದೆ ಹಿಂದೂ ಧರ್ಮಕ್ಕೆ ಸಂಕಷ್ಟ ಒದಗಬಹುದೆಂದು ಯೋಚಿಸಿ 4 ಆಮ್ನಾಯ ಪೀಠಗಳ ಸ್ಥಾಪನೆ
ದೇಶ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಶಂಕರರಿಗೆ ತಮ್ಮ ವೃದ್ಧ ತಾಯಿ ಆರ್ಯಾಂಬೆಯ ಅವಸಾನ ಸಮೀಪಿಸಿತೆಂದು ತಿಳಿದು ಬಂದಿತು. ತಾನು ಎಲ್ಲಿದ್ದರೂ ತಾಯಿಯ ಹತ್ತಿರಕ್ಕೆ ಬರುತ್ತೇನೆಂದು ಮಾತು ಕೊಟ್ಟಿದ್ದರು. ಆ ಮೇರೆಗೆ ಕಾಲಟಿಗೆ ಹಿಂತಿರುಗಿದರು. ಮಗ ಬಂದನೆಂದು ತಾಯಿಗೆ ತುಂಬಾ ಸಂತೋಷ. ಆದರೆ ತಾಯಿಯ ಮರಣ ಹತ್ತಿರವಾಗುತ್ತಿದೆ ಎಂದು ಶಂಕರರಿಗೆ ತಿಳಿಯಿತು. ಆತ್ಮವನ್ನು ಉದ್ಧರಿಸುವ “ಶಿವಭುಜಂಗ ಸ್ತೋತ್ರ”ವನ್ನೂ “ವಿಷ್ಣು ಸ್ತೋತ್ರ”ವನ್ನೂ ತಾಯಿಗೆ ನೀಡಿ ಆಕೆಗೆ ಸನ್ಮರಣವನ್ನೂ ಸದ್ಗತಿಯನ್ನೂ ಕೋರಿದರು. ಶಂಕರರ ತಾಯಿ ತೀರಿಕೊಂಡರು. ಆಕೆಯ ದೇಹವನ್ನು ಅಗ್ನಿಗೆ ಅರ್ಪಿಸಬೇಕಾಗಿತ್ತು; ಆದರೆ ಶಂಕರರ ಬಂದುಗಳು ಯಾರೂ ಸಹಾಯಕ್ಕೆ ಬರಲಿಲ್ಲ. ಸನ್ಯಾಸಿಗಳು ತಾಯಿ-ತಂದೆ ಎಂದು ಯಾರಿಗೇ ಆಗಲಿ ಅಂತ್ಯ ಸಂಸ್ಕಾರ ಮಾಡುವ ಹಾಗಿಲ್ಲ. ಆದರೂ ಶಂಕರಾಚಾರ್ಯರು, ಸನ್ಯಾಸಿಗಳಾಗಿ ತಮ್ಮಧರ್ಮಕ್ಕೆ ವಿರೋಧಬಾರದಂತೆ, ತಾಯಿಯ ದೇಹಕ್ಕೆ ಸಂಸ್ಕಾರ ಮಾಡಿದರು. ತೀರಿಕೊಂಡು ಯಾರ ದೇಹಕ್ಕೆ ಆಗಲಿ, ಕಡೆಯ ಸಂಸ್ಕಾರ ಮಾಡುವುದು ಪವಿತ್ರ ಕರ್ತವ್ಯವಲ್ಲವೇ? ತಾವೊಬ್ಬರೇ ಕಷ್ಟದಿಂದ ತಾಯಿಯ ಶವವನ್ನು ಸಾಗಿಸಿ, ಅದನ್ನು ಅಗ್ನಿಗೆ ಅರ್ಪಿಸಿದರು. ಶಂಕರರು ತಾಯಿಗೆ ಈ ಕಡೆಯ ಸೇವೆ ಸಲ್ಲಿಸಿ ಕೃತಾರ್ಥರಾದರು.
ಶ್ರೀ ಶಂಕರರ ಜೀವನದಲ್ಲಿ ಅನಂತರದ ಮುಖ್ಯ ಪ್ರಸಂಗ ಶೃಂಗೇರಿಗೆ ಆಗಮಿಸಿದ್ದು. ಈ ಕ್ಷೇತ್ರ ಕನ್ನಡ ನಾಡಿನಲ್ಲಿ ತುಂಗಾತೀರದಲ್ಲಿರುವ ಅತಿ ರಮಣೀಯ ಸ್ಥಳ. ಹಿಂದಿನ ಕಾಲದಿಂದ ವಿಭಾಂಕ, ಋಷ್ಯಶೃಂಗ ಮುಂತಾದ ಮಹಾಋಷಗಳ ತಪೋಭೂಮಿಯಾಗಿದ್ದ ಪವಿತ್ರ ಸ್ಥಳ. ಈ ಸ್ಥಳದ ಪ್ರಸನ್ನತೆಯಿಂದ ಆಕರ್ಷಿತರಾದ ಶಂಕರರು ಈ ಸ್ಥಳದಲ್ಲಿ ತಮ್ಮ ಪ್ರಥಮ ವೇದಾಂತ ಜ್ಞಾನಪೀಠವನ್ನು ಸ್ಥಾಪಿಸಿದರು. ವಿದ್ಯಾಧಿದೇವತೆಯಾದ ಶ್ರೀ ಶಾರದೆಯನ್ನು ಪ್ರತಿಷ್ಠಿಸಿ, ಸುರೇಶ್ವರರನ್ನು ಶಾರದಾಪೀಠದ ಆಚಾರ್ಯರನ್ನಾಗಿ ನೇಮಿಸಿದರು. ಆಚಾರ್ಯ ಶಂಕರರ ದೃಷ್ಟಿಯಲ್ಲಿ ಇಡೀ ಭಾರತವೇ ಒಂದು ಧರ್ಮಕ್ಷೇತ್ರ. ಇದರ ಕ್ಷೇಮ, ಸಂಘಟನೆಗಳು ಧರ್ಮದ ತಳಹದಿಯ ಮೇಲೆಯೇ ಆಗಬೇಕಾದ್ದದ್ದು. ಸಂಘಟನೆಯ ಅಂಗವಾಗಿ ಭಾರತದ ನಾಲ್ಕು ಮೂಲೆಗಳಲ್ಲಿ ವೇದಾಂತ ಪ್ರಸಾರಕ್ಕೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ನಾಲ್ಕು ಕೇಂದ್ರಗಳನ್ನು ನಿರ್ಮಿಸಬೇಕೆಂದು ಆಚಾರ್ಯರ ಯೋಜನೆ. ಈ ಯೋಜನೆಯ ಪ್ರಥಮ ಹಂತ ಶೃಂಗೇರಿಯಲ್ಲಿ ನಡೆದ ಶಾರದಾ ಪೀಠದ ಸ್ಥಾಪನೆ. ಇದು ದಕ್ಷಿಣ ಭಾರತಕ್ಕೆ ದಿಗ್ದರ್ಶನ ನೀಡಲು ನಿಯೋಜಿಸಿದರೆ, ಪೂರ್ವದಲ್ಲಿ ಜಗನ್ನಾಥದಲ್ಲಿ ಗೋವರ್ಧನ ಪೀಠವನ್ನು, ಪಶ್ಚಿಮದಲ್ಲಿ ದ್ವಾರಕೆಯಲ್ಲಿ ಕಾಳಿಕಾ ಪೀಠವನ್ನು, ಉತ್ತರದಲ್ಲಿ ಬದರಿಕಾಶ್ರಮದಲ್ಲಿ ಜ್ಯೋತಿರ್ಪಿಠವನ್ನು, ಸ್ಥಾಪಿಸಿದರು. ಈ ಪೀಠಗಳಿಗೆ “ಆಮ್ನಾಯ” ಪೀಠಗಳೆಂದು ಹೆಸರು.
‘ಸೃಷ್ಟಿಯಲ್ಲಿ ಇರುವುದು ಒಂದೇ ವಸ್ತು; ಅದೇ ಬ್ರಹ್ಮ. ಈ ಬ್ರಹ್ಮದ ಅನುಭವವೇ ಆನಂದದ ಅನುಭವ. ಎಲ್ಲರಲ್ಲೂ ಎಲ್ಲೆಲ್ಲೂ ಬ್ರಹ್ಮವೇ ಆಗಿರುವಾಗ, ಎಲ್ಲವೂ ಬ್ರಹ್ಮವೇ ಆಗಿರುವಾಗ – ಇಲ್ಲಿ ಭೇದಭಾವಕ್ಕೆ ಅವಕಾಶವೇ ಇರದು. ನಮ್ಮ ದಿಟವಾದ ಸ್ವರೂಪವಾದ ಬ್ರಹ್ಮ, ಎಂದರೆ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದೇ ಮೋಕ್ಷ. ಇದಕ್ಕಾಗಿ ನಾವೇನೂ ಶ್ರಮ ಪಡಬೇಕಿಲ್ಲ; ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಂಡರೆ ಸಾಕು.’ ಇದು ಶಂಕರಾಚಾರ್ಯರ ಉಪದೇಶದ ಸಾರ ಎನ್ನಬಹುದು.
ಜೀವನದ ಚಟುವಟಿಕೆಗಳನ್ನು ಕುರಿತು ಅದ್ವೈತಿಯ ದೃಷ್ಟಿಯನ್ನು ಹೀಗೆ ಸಂಗ್ರಹಿಸಬಹುದು
ಯೋಗರತವೋ ವಾ ಭೋಗರತೋವಾ ಸಂಗರತೋ ವಾ ಸಂಗವಿಹೀನಃ ।
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ।।
(ಯೋಗದಲ್ಲಿ ತೊಡಗಿರಲಿ, ಭೋಗಿಯಾಗಿರಲಿ, ಎಲ್ಲರ ಜೊತೆಯಲ್ಲಿರಲಿ, ಏಕಾಂತ ವಾಸ ಮಾಡಲಿ, ಯಾರ ಮನಸ್ಸು ಬ್ರಹ್ಮದಲ್ಲಿ ನೆಲೆಯಾಗಿ ನಿಂತಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಆನಂದಲ್ಲೇ ಇರುತ್ತದೆ.)
ಈ ಜಗತ್ತಿನ ವಿಷಯದಲ್ಲಿ ಬೇಸರಗೊಳ್ಳುವುದಾಗಲೀ ಅನಾದರಣೆ ತೋರುವುದಾಗಲೀ ಅದ್ವೈತವಲ್ಲ. ಸೋತ ಭಾವವೋ ಗೋಳಾಟದ ಮನೋಭಾವವೋ ಅದ್ವೈತವಲ್ಲ. ವಾಸ್ತವವಾಗಿ ಅದು ಅಭಯ, ವಿಜಯ. ಏಕೆಂದರೆ ಭಗವಂತನ ಕೃಪೆಯೂ, ಶಕ್ತಿಯೂ ಅನಂತ, ನೀವು ಆ ಅನಂತದೊಂದಿಗೆ ಒಂದಾಗಬಹುದು.
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.