ಬೆಂಗಳೂರು: ಕೋವಿಡ್ ರೆಸ್ಪಾನ್ಸ್ ಟೀಮ್ ನವದೆಹಲಿ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರಣಿ ಉಪನ್ಯಾಸ ಮಾಲಿಕೆ ‘ಪಾಸಿಟಿವಿಟಿ ಅನ್ಲಿಮಿಟೆಡ್’ ನ ಐದನೇ ದಿನದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್ ಭಾಗವತ್ ಜಿ ಅವರು, RSS ಸ್ವಯಂಸೇವಕರು ತಮ್ಮ ಶಕ್ತಿಮೀರಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಬಗ್ಗೆ ಚಿಂತೆ ಮಾಡದೆ ಇತರರಿಗೆ ಸೇವೆ ಮಾಡುತ್ತಿರುವುದರ ಕುರಿತು ಹಲವು ನಿದರ್ಶನಗಳು ಕಾಣಸಿಗುತ್ತಿವೆ. ಈ ಕಠಿಣ ಸಂದರ್ಭದಲ್ಲಿ ನಾವು ನಮ್ಮನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಅದರೊಂದಿಗೆ ಸಮಾಜದ ಸೇವೆ ಮಾಡಬೇಕು ಎಂದರು.
ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ನಕಾರಾತ್ಮಕತೆಯನ್ನು ತೊಡೆದು ಸಕಾರಾತ್ಮಕ ವಿಚಾರಗಳನ್ನು ತುಂಬುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ದೇಶದೆಲ್ಲೆಡೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕ ಧನಾತ್ಮಕ ವಿಷಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸ್ವಯಂ ಕಾರ್ಯಕರ್ತರಾಗಬೇಕು. ಇತರರಿಗೆ ಸಹಾಯ ಮಾಡಬೇಕು. ನಮ್ಮೊಳಗೊಂದು ಬೆಳಕು ಇದೆ. ಆ ಶಕ್ತಿಯನ್ನು ನಾವು ಮಾತ್ರವೇ ಗುರುತಿಸಲು, ಕಾಣಲು ಅನುಭವಿಸಲು ಸಾಧ್ಯ. ಜನರಿಗೆ ಅಗತ್ಯವಾದ ಭರವಸೆ ತುಂಬುವ, ನಿರಾಳತೆ ಒದಗಿಸುವ ನಿಟ್ಟಿನಲ್ಲಿ ಪಾಸಿಟಿವಿಟಿ ಅನ್ಲಿಮಿಟೆಡ್ ಸರಣಿ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಭಾಗವತ್ ಜಿ ಹೇಳಿದರು.
ಸೇವಾ ಭಾರತಿಯಿಂದ ಕೊರೋನಾ ಸೋಂಕಿತರಿಗೆ ನಿರಾಳತೆ ಒದಗಿಸುವ ನಿಟ್ಟಿನಲ್ಲಿ ಉಚಿತ ಹೋಮಿಯೋಪತಿಕ್ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಸೇವೆ ನಮ್ಮ ಕರ್ತವ್ಯವಾಗಿದೆಯೇ ಹೊರತು ಅದು ನಿಬಂಧನೆಯಲ್ಲ. ತಾರತಮ್ಯ ರಹಿತವಾಗಿ ಆ ಸೇವೆಯನ್ನು ನಾವು ಮಾಡಬೇಕು. ಜೊತೆಗೆ RSS ಸ್ವಯಂಸೇವಕರು ಅವಶ್ಯಕತೆ ಉಳ್ಳವರಿಗೆ ಆಹಾರ, ನೀರು ಮೊದಲಾದವುಗಳನ್ನು ಉಚಿತವಾಗಿ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ವೈದ್ಯರ ತಂಡ ಕೊರೋನಾ ಸೋಂಕಿತರಿಗೆ ಆನ್ಲೈನ್ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡುತ್ತಿದೆ. ಹಾಗೆಯೇ ಸೋಂಕಿತರ ಜೀವ ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಮಾ ದಾನ ಮಾಡುವಂತೆಯೂ ಸ್ವಯಂಸೇವಕರಿಗೆ ಸೂಚನೆ ನೀಡಲಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಜನ ಜಾಗೃತಿ ಮತ್ತು ಜನಸಹಯೋಗ ಒಂದು ಮಹತ್ವಪೂರ್ಣ ಕಾರ್ಯ, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರೊಂದಿಗೆ ಸಹ ಭಾಗಿಗಳಾಗುವ ಸಮಯವಿದು. ಯಾವುದೇ ಸೂಚನೆಗಳು ಬಂದರೂ ಅದನ್ನು ಪರಿಶೀಲಿಸಬೇಕು. ಧೈರ್ಯವಂತರೂ ಫಲಿತಾಂಶ ಲಭ್ಯ ಆಗುವವರೆಗೂ ಪ್ರಯತ್ನವನ್ನು ಕೈ ಬಿಡುವುದಿಲ್ಲ. ನಾವೆಲ್ಲರೂ ಬೇಧವನ್ನು ಮರೆತು ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕಿದೆ. ಸರಿ-ತಪ್ಪುಗಳ ಚರ್ಚೆಯನ್ನು ನಂತರವೂ ಮಾಡಬಹುದು ಎಂದು ಅವರು ತಿಳಿಸಿದರು.
ಈ ಸಂಕಷ್ಟದಿಂದ ಉದ್ಯೋಗ ಸಮಸ್ಯೆಯೂ ಸೃಷ್ಟಿಯಾಗಿದೆ, ಅಂತಹವರಿಗೆ ಸಹಾಯ ಮಾಡುವ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ನಡೆಸುವ, ಉದ್ಯೋಗ ಸೃಷ್ಟಿಕರ್ತರೊಂದಿಗೆ ಸೇರಿ ಹೊಸ ಉದ್ಯೋಗವಕಾಶ ಸೃಷ್ಟಿಸಲು ಹೆಜ್ಜೆ ಇಡುವ ಬಗ್ಗೆಯೂ ನಾವು ಯೋಚಿಸಬೇಕಾಗಿದೆ. ಜಾಗೃತರಾಗಿರೋಣ, ಕ್ರಿಯಾಶೀಲರಾಗಿರೋಣ, ನಿರಾಸೆಗೊಳ್ಳಲು ಯಾವುದೇ ಕಾರಣವಿಲ್ಲ, ನಾವು ಗೆದ್ದೇಗೆಲ್ಲುತ್ತೇವೆ ಎಂದು ಅವರು ಭರವಸೆ ತುಂಬಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.