ಮೂಡುಬಿದಿರೆ : ವಿಶಾಲ ಬಯಲು ರಂಗಮಂದಿರ…….. ತ್ರಿವರ್ಣಗಳಿಂದ ಸುಂದರವಾಗಿ ಅಲಂಕೃತಗೊಂಡ ದೊಡ್ಡ ವೇದಿಕೆ….ಶಿಸ್ತುಬದ್ಧ ಎನ್ಸಿಸಿ ಕೆಡೆಟ್ಗಳು….ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು….ಇದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಂದರಿ ಆನಂದ ಆಳ್ವ ಆವರಣದಲ್ಲಿ ಕಂಡುಬಂದ ಸ್ವಾತಂತ್ರ್ಯ ದಿನದ ಸಂಭ್ರಮ. ಈ ಸಂಭ್ರಮಕ್ಕೆ ಮುಕುಟ ಮಣಿಯಾದವರು ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಡೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ಅಂಗಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕವೃಂದ ಹಾಗೂ ಮೂಡುಬಿದಿರೆಯ ಜನತೆ ಈ ಅಪರೂಪದ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾದರು.
ಕಾರ್ಯಕ್ರಮದ ಮುಖ್ಯಅತಿಥಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಡೆ ಮಾತನಾಡಿ, `ನಮ್ಮಲ್ಲಿ ರಾಷ್ಟ್ರೀಯತೆಯ ಕಲ್ಪನೆ ಕಡಿಮೆಯಿದೆ. ನಾವು ಈ ಪರಿಕಲ್ಪನೆಯನ್ನು ರೂಢಿಸಿಕೊಂಡಾಗ, ರಾಷ್ಟ್ರಕ್ಕಾಗಿ ಬದುಕುವ ಪಣ ತೊಟ್ಟಾಗ ಮಾತ್ರ ದೇಶಕ್ಕೆ ಒಳ್ಳೆ ಭವಿಷ್ಯವಿದೆ. ನಮ್ಮ ಭವಿಷ್ಯವನ್ನು ಭದ್ರವಾಗಿ ರೂಪಿಸಿಕೊಂಡರೆ, ಒಳ್ಳೆಯ ಪ್ರಜೆಯಾದರೆ ದೇಶ ಉತ್ತಮ ನಾಳೆಗಳನ್ನು ಕಾಣಬಹುದು’ ಎಂದರು.
ಬ್ರಿಟಿಷ್ ದಾಸ್ಯ ಹಾಗೂ ಮಾನಸಿಕ ದಾಸ್ಯಗಳ ಬಗ್ಗೆ ಮಾತನಾಡಿದ ಅವರು ಭಾರತವು ಈ ದಾಸ್ಯಗಳಿಂದಾಗಿ ತುಂಬಾ ಹಿಂದೆ ಉಳಿದಿತ್ತು. ಆದರೆ ಈ ೬೮ ವರ್ಷಗಳಲ್ಲಿ ಭಾರತ ತುಂಬಾ ಮುಂದುವರೆದಿದೆ.ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ನಾವು ಅಹಿಂಸೆಯ ಮೂಲಕ ಅಭಿವ್ಯಕ್ತಿಯನ್ನು ಸಾಧಿಸಿದವರು. ಈ ಹೋರಾಟಗಳಿಗೆ ನಮ್ಮ ದೇಶವಾಸಿಗಳು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ ಎಂದರು.
ಸಂಭ್ರಮ ಕಾಣಲು ಬಂದ ಮಳೆ : ಮುಖ್ಯಅತಿಥಿಗಳ ಭಾಷಣ ಮುಗಿಯುತ್ತಿದ್ದಂತೆ ರಭಸವಾದ ಮಳೆ ಆರಂಭವಾಯಿತು. ಮಳೆ ಎಷ್ಟೇ ಜೋರಾದರೂ ಸಹ ಯಾವ ವಿದ್ಯಾರ್ಥಿಯೂ ಕೂಡ ಕದಲದೇ ಕಾರ್ಯಕ್ರಮಕ್ಕೆ ನಿಂತದ್ದು ವಿಶೇಷವಾಗಿತ್ತು. ರಾಷ್ಟ್ರೀಯ ಭಾವೈಕ್ಯತೆಗೀತೆಯನ್ನು ಹಾಡುವಾಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿದ್ದ ಧ್ವಜಗಳನ್ನು ಹೆಮ್ಮೆಯಿಂದ ಬೀಸುತ್ತಿದ್ದರು; ಇದೇ ಸಮಯಕ್ಕೆ ಬಯಲು ರಂಗಮಂದಿರದ ಸುತ್ತಲಿಂದಲೂ ಕೇಸರಿ, ಬಿಳಿ, ಹಸಿರು ಬಣ್ಣದ ಬೆಲೂನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಯಿತು. ಜೋರಾದ ಮಳೆಗೆ ಸ್ಪರ್ಧೆ ನೀಡುವಂತೆ ಬೆಲೂನ್ಗಳು ಆಕಾಶದೆತ್ತರಕ್ಕೂ ಹಾರಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮುಗಿಲೆತ್ತರಕ್ಕೇರಿಸಿದ್ದವು.
ಮಳೆಯ ಮಧ್ಯೆಯೇ ವೇದಿಕೆಯ ಮೇಲೆ ಏಕಕಾಲಕ್ಕೆ ನಾಲ್ಕು ವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಲ್ಲಕಂಬ, ರೋಪ್ ಸ್ಟಂಟ್ಸ್, ಹುಲಿ ವೇಷ ಹಾಗೂ ಥಾಣೆಯ ಎಕ್ಸ್ ಒನ್ ಎಕ್ಸ್ ತಂಡದ ಸದಸ್ಯರು ನಡೆಸಿಕೊಟ್ಟ ಅಭೂತಪೂರ್ವ ಪ್ರದರ್ಶನಗಳು ನೋಡುಗರ ಮೈನವಿರೇಳಿಸುವಂತಿತ್ತು. ಕಾರ್ಯಕ್ರಮ ಮುಗಿದರೂ ಕೂಡ ಮಳೆ ಬರುತ್ತಲೇ ಇದ್ದುದು ಮಳೆ ಈ ಸ್ವಾತಂತ್ರ್ಯ ಸಂಭ್ರಮವನ್ನು ಕಾಣಲು ಬಂದಿದೆಯೇನೂ ಎಂಬ ಅಚ್ಚರಿಯನ್ನು ಮೂಡಿಸುತ್ತಿತ್ತು. ಕಾರ್ಯಕ್ರಮಕ್ಕೆ ಬಂದ ಮೂಡುಬಿದಿರೆಯ ಜನತೆ `ಕಾರ್ಯಕ್ರಮಕ್ಕೆ ಬಂದಿದ್ದು ಒಳ್ಳೆಯದಾಯಿತು. ಎಷ್ಟು ದುಡ್ಡು ಕೊಟ್ಟರೂ ಇಂತಹ ಸಂತೋಷ, ಸಂಭ್ರಮ ಎಲ್ಲೂ ಕಾಣಲು ಸಿಗುವುದಿಲ್ಲ’ ಎಂದು ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದುದು ಕಾರ್ಯಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಹೊಸಕಟ್ಟಡಗಳ ಉದ್ಘಾಟನೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವರ ತಂದೆ ಮಿಜಾರುಗುತ್ತು ಆನಂದ ಆಳ್ವರು ಆಳ್ವಾಸ್ನ ಹೊಸಕಟ್ಟಡಗಳನ್ನು ಉದ್ಘಾಟಿಸಿದರು. ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಕಾಲೇಜು ಹಾಗೂ ವಿದ್ಯಾರ್ಥಿನಿಲಯಗಳ ಎಂಟು ಕಟ್ಟಡಗಳನ್ನು ಉದ್ಘಾಟಿಸಲಾಯಿತು.
ಮನತಣಿಸಿದ ಸಾಂಸ್ಕೃತಿಕ ಕಾರ್ಯಕ್ರಮ : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. `ಸುಸ್ವರ’ ಸಂಗೀತ ಕಾರ್ಯಕ್ರಮ, ಇಂಡಿಯಾಸ್ ಗಾಟ್ ಟ್ಯಾಲೆಂಟ್ನ ಸೀಸನ್-೬ ರ ಅಂತಿಮ ಸ್ಪರ್ಧೆಯಲ್ಲಿದ್ದ ಥಾಣೆಯ ಎಕ್ಸ್ ಒನ್ ಎಕ್ಸ್ ತಂಡದಿಂದ ನೃತ್ಯ ಕಾರ್ಯಕ್ರಮ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ನಡೆಯಿತು.ವೈವಿಧ್ಯಮಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನತಣಿಸಿದವು.
ಭಾರತಕ್ಕೆ ಬೇಕಿರುವುದು ಭವಿಷ್ಯ ಬರೆಯಬಲ್ಲ ಸಿಪಾಯಿಗಳು:ಡಾ.ಡಿ.ವೀರೇಂದ್ರ ಹೆಗ್ಡೆ
ಸಾಧನೆಯ ಹಸಿವು ನಮ್ಮಲ್ಲಿರಬೇಕು. ನಮ್ಮ ಸಾಧನೆಗಾಗಿ ನಾವು ಯಾರನ್ನೂ ಅವಲಂಬಿಸಬಾರದು. ನಾನೇನಾದರೂ ಸಾಧಿಸುತ್ತೇನೆ ಹಾಗೂ ಸಾಧಿಸಲೇಬೇಕೆಂಬ ಛಲ ನಮ್ಮಲ್ಲಿರಬೇಕು. ನಮಗಿಂದು ಬೇಕಾಗಿರುವುದು ಭವಿಷ್ಯವನ್ನು ಬರೆಯಬಲ್ಲ ಸಿಪಾಯಿಗಳು ಎಂದು ಡಾ.ಡಿ.ವೀರೇಂದ್ರ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.