ಸೃಷ್ಟಿ ಒಂದು ಪವಾಡ. ಒಂದು ಮಗುವನ್ನು ಭೂಮಿಗೆ ತರಬೇಕಾದರೆ, ಹೊತ್ತವಳು ಪಡುವ ನೋವು ಹೇಳಲು ಪದಗಳೇ ಇಲ್ಲವೇನೋ. ಹೇಳಬೇಕೆಂದರೆ, ತನ್ನ ಜೀವವನ್ನೇ ಪಣಕ್ಕಿಟ್ಟು ಮತ್ತೊಂದು ಜೀವವನ್ನು ಭೂಮಿಗಿಳಿಸುವ ಕಾರ್ಯ ಅದು. ಪ್ರಕೃತಿ ಸಹಜ ಕ್ರಿಯೆಯಾದರೂ ಹೆತ್ತಬ್ಬೆಯ ನೋವು, ತನ್ನ ಮಗುವಿನ ಮುಗ್ಧ ನಗುವನ್ನು ನೋಡುವಾಗ ಅದೆಲ್ಲವನ್ನೂ ಮರೆತು ಬರುವ ಸಂತಸದ ನಗು, ಇವೆಲ್ಲವೂ ವರ್ಣನಾತೀತ. ಅದಕ್ಕೇ ಜೀವ ಕೊಡುವ ತಾಯಿ ದೇವರ ಸ್ವರೂಪವಾಗಿರುವುದು. ಹೌದು, ಸೃಷ್ಟಿಸುವ ಶಕ್ತಿ ಇರುವುದು ತಾಯಿಗೊಬ್ಬಳಿಗೇ. ಅದಕ್ಕೇ ಪ್ರಕೃತಿ ಮಾತೆಯಾಗಿರುವುದು.
ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಉಕ್ತಿಯೊಂದಿದೆ. ಅಂದರೆ ತಾಯಿ ತನ್ನ ಮಕ್ಕಳಿಗೆ ಸದಾ ಒಳಿತನ್ನೇ ಬಯಸುವ ಸಾಕಾರ ಮೂರ್ತಿ. ಉಪ್ಪಿರದ ಆಹಾರ ಹೇಗೆ ಸಪ್ಪೆಯೋ, ಹೇಗೆ ನಾಲಿಗೆಗೆ ರುಚಿಸದೋ, ಹಾಗೆಯೇ ಅಮ್ಮನಿರದ ಬದುಕೂ ಸಹ ಸಪ್ಪೆ. ಮಕ್ಕಳ ನೋವಿನಲ್ಲಿ ತಾನೂ ಅಳುತ್ತಾಳೆ. ಮಕ್ಕಳ ನಗುವಿನಲ್ಲಿ ತನ್ನ ಬದುಕಿನ ಸಂತಸವನ್ನು ಕಾಣುವವಳು ಆಕೆ. ಅಮ್ಮ ಎಂಬ ಶಬ್ಧವೇ ಅದ್ಭುತ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಗಮನಿಸಿ. ಅವರ ನೋವಿನಲ್ಲಿ ಮೊದಲು ಹೊರಬರುವ ಉದ್ಘಾರವೇ ‘ಅಮ್ಮ’. ಅಮ್ಮ ಎಂಬ ದೇವರ ಶಕ್ತಿಯೇ ಅಂತದ್ದು.
ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಡುವ ಅವಳು, ತನ್ನ ಕಷ್ಟದಲ್ಲಿಯೂ ಮಕ್ಕಳ ನಗುವನ್ನು ಬಯಸುತ್ತಾಳೆ. ತಾನು ಕಷ್ಟಪಟ್ಟರೂ ಚಿಂತಿಲ್ಲ. ನನ್ನ ಮಕ್ಕಳು ಮಾತ್ರ ಸದಾ ಕಾಲ ನೆಮ್ಮದಿಯಲ್ಲಿರಬೇಕು. ಅವರಿಗೆ ಕಷ್ಟ ಬಾರದಿರಲಿ ಎಂದು ಬೇಡುವವಳು ಅವಳು. ತಾನು ಹೊಟ್ಟೆ ತುಂಬಾ ಊಣ್ಣುತ್ತೇನೋ ಅರಿಯದು, ಆದರೆ ತನ್ನ ಮಕ್ಕಳಿಗೆ ಹಸಿವಿನ ನೋವು, ಬದುಕಿಗೆ ಕಷ್ಟ ಕೊಡಬೇಡ ಎಂದು ಬಯಸುವ ಏಕೈಕ ಹೃದಯ ಇದ್ದರೆ ಅದು ತಾಯಿಯ ಹೃದಯ.
ಕಾಲ ಬದಲಾಗುತ್ತಿದೆ. ಕಾಲನ ಕೈಯಲ್ಲಿ ಜನರ ಚಿಂತನೆಗಳೂ ಬದಲಾಗುತ್ತಿವೆ. ಇದಕ್ಕೆ ತಕ್ಕಂತೆ ಸಮಾಜ, ಜನರ ಚಿಂತನಾ ಶೈಲಿ ಎಲ್ಲವೂ ಬದಲಾಗುತ್ತಿದೆ. ಇಂದಿನ ಯವ ಜನರಲ್ಲಿ ಕೆಲವರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಸಾಕ್ಷಿ ನಮಗೆ ವೃದ್ಧಾಶ್ರಮಗಳಲ್ಲಿ ಕಾಣುತ್ತದೆ. ಅಂದು ತನ್ನ ಜೀವವನ್ನೇ ಪಣಕ್ಕಿಟ್ಟು ಭೂಮಿಗೆ ತಂದವಳನ್ನೇ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಬಿಡುವವರಿಗೇನೋ ಕಡಿಮೆ ಇಲ್ಲ. ಕಾರಣ ಬಿಡುವಿರದ ಬದುಕು. ನಮ್ಮ ಬದುಕಿನ ನಡುವೆ ‘ಹೆತ್ತವರು’ ಸರಿಹೊಂದುವುದಿಲ್ಲ. ಅವರಿಗೋ ವಯಸ್ಸಾಯಿತು. ಚಾಕರಿ ಮಾಡುವವರು ಬೇಕಲ್ಲಾ, ಹೀಗೆ ಹತ್ತು ಹಲವು ಕಾರಣಗಳನ್ನು ಹೇಳಿ ಹುಟ್ಟಿಗೆ ಕಾರಣರಾದವರನ್ನೇ ತಿರಸ್ಕರಿಸುವ ಮಟ್ಟಕ್ಕೆ ಬಂದಿದ್ದಾರೆ. ನಾನು, ನನ್ನ ಪತಿ/ಪತ್ನಿ, ಮಕ್ಕಳ ನಡುವೆ ಹೆತ್ತವರೇಕೆ? ಎಂಬ ತಿರಸ್ಕಾರ ಭಾವದಿಂದ ಎಲ್ಲೋ ಕೆಲವು ಮಂದಿ ಹೆತ್ತವರಿಗೆ ಒಪ್ಪೊತ್ತು ಊಟ ಹಾಕುವುದಕ್ಕೂ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬುದೇ ದುರಂತ. ತಂದೆ – ತಾಯಿಗೆ ದೇವರ ಸ್ಥಾನಮಾನ ನೀಡುವ ಭಾರತೀಯ ಸಮಾಜದಲ್ಲಿಯೂ ಇಂತಹ ಮನಸ್ಥಿತಿಯನ್ನು ಹೊಂದಿದವರಿದ್ದಾರೆ ಎಂಬುದು ಒಪ್ಪಲೇಬೇಕಾದ ಸತ್ಯ. ಇಂತಹ ಯೋಚನೆಗಳನ್ನು ಹೊಂದಿರುವವರು ಮೊದಲು ಯೋಚಿಸಬೇಕಾದ ಅಂಶವೊಂದಿದೆ, ‘ಇಂದು ನಾನು ನನ್ನ ಹೆತ್ತವರನ್ನು ಅನಾಥಾಶ್ರಮದ, ವೃದ್ಧಾಶ್ರಮದ ಪಾಲು ಮಾಡಿದ್ದೇನೆ. ಇದನ್ನೇ ನನ್ನ ಮಕ್ಕಳೂ ಸಹ ನೋಡುತ್ತಿದ್ದಾರೆ. ನಾಳೆ ನನ್ನ ವೃದ್ಧಾಪ್ಯದಲ್ಲಿಯೂ ನನ್ನ ಮಕ್ಕಳು ನನ್ನನ್ನೂ ಹೀಗೆಯೇ ಕೈಬಿಡಬಹುದು’ ಎಂಬ ಅರಿವು ನಮ್ಮಲ್ಲಿ ಮೂಡಬೇಕಿದೆ. ಅದಕ್ಕೂ ಮಿಗಿಲಾಗಿ ಅವರಿಂದಲೇ ನಾವು, ಅವರೇ ಇರದಿದ್ದಿದ್ದರೆ ನಾವೆಲ್ಲಿರುತ್ತಿದ್ದೆವು?, ನಮಗಾಗಿ ಅವರ ಬದುಕನ್ನೇ ಪಣಕ್ಕಿಟ್ಟು, ನಮ್ಮ ಬದುಕು ರೂಪಿಸಿದ ಅವರು ನಮ್ಮ ದೇವರು ಎಂಬ ಅಭಿಮಾನದ ಜೊತೆಗೆ, ಅವರ ಮೇಲಿನ ಪ್ರೀತಿಯೊಂದಿದ್ದರೆ ಅವರಿಗೆ ಅದಕ್ಕಿಂತ ಮಿಗಿಲಾದ ಸಃತೋಷ ಬೇರಿರಲಿಕ್ಕಿಲ್ಲವೇನೋ.
ಆದ್ದರಿಂದ ಅಮ್ಮ, ಅಪ್ಪ ಯಾರೇ ಇರಲಿ, ಅವರು ನಮ್ಮ ಬದುಕಿಗಾಗಿ ಅವರ ಬದುಕು ಸವೆಸಿದವರು. ಅವರ ಜೀವಿತಾವಧಿಯ ತುಂಬ ನಾವವರನ್ನು ಪ್ರೀತಿಸುವುದು, ಅವರಿಗೆ ಸಂತೋಷ ನೀಡುವತ್ತ ಗಮನ ಹರಿಸಿದಲ್ಲಿ ಇಂತಹ ದಿನಗಳ ಆಚರಣೆಯಲ್ಲಿಯೂ ಒಂದು ಅರ್ಥ ಬರುತ್ತದೆ. ಕೇವಲ ಒಂದು ದಿನದ ಆಚರಣೆಯ ಹಿನ್ನೆಲೆಯಲ್ಲಿ ಅವರ ಫೋಟೋ ಸ್ಟೇಟಸ್ ಹಾಕಿ ಶುಭಾಶಯ ಕೋರುವ ನಾವು, ನಿತ್ಯವೂ ಅವರ ಸಂತೋಷಕ್ಕಾಗಿ ನಮ್ಮ ಕೈಲಾದದ್ದನ್ನು ಮಾಡಿದರೆ ಆ ಜೀವಗಳು ಅದೆಷ್ಟು ಸಂತೋಷ ಪಡಬಹುದು ಅಲ್ಲವೇ. ಹಾಗಾಗಿ ಹೆತ್ತವರನ್ನು ಅವರ ಕೊನೆಯ ಕಾಲದಲ್ಲಿ ನಮ್ಮಿಂದ ಹೊರತಾದ ಬೇರೊಂದು ಪ್ರಪಂಚಕ್ಕೆ ಕಳುಹಿಸುವುದಲ್ಲ. ನಮ್ಮ ಜೊತೆಗೇ ಇರಿಸಿಕೊಂಡು, ಅವರೊಂದಿಗೆ ನಿತ್ಯ ಒಂದಷ್ಟು ಹೊತ್ತು ಸಂತಸದಿಂದ ಕಳೆದಲ್ಲಿ ನಿತ್ಯವೂ ನಮಗೆ ಅಮ್ಮಂದಿರ ದಿನ , ಅಪ್ಪನ ದಿನ ವೇ.
ಕೊನೆಯದಾಗಿ, ಅಮ್ಮನಾಗುವುದು ಪ್ರತಿಯೊಂದು ಹೆಣ್ಣಿನ ಕನಸು. ಮಾತೃತ್ವದ ಸುಖ ಹೆಣ್ಣಿಗಲ್ಲದೆ ಮತ್ಯಾರಿಗೂ ಸಿಗುವುದು ಸಾಧ್ಯವಿಲ್ಲ. ಅದಕ್ಕೆ ಹೆಣ್ಣು ವಿಶೇಷ. ಹೆಣ್ಣಿರದೆ ಪ್ರಪಂಚವನ್ನು ಊಹಿಸುವುದು ಅಸಾಧ್ಯ. ಅದಕ್ಕಾಗಿ ಪ್ರಪಂಚ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿರುವುದು. ಹೆಣ್ಣಿನಿಂದ ಸೃಷ್ಟಿಯೂ ಸಾಧ್ಯ, ದುಷ್ಟರ ನಿರ್ನಾಮವೂ ಸಾಧ್ಯ ಎಂಬುದಕ್ಕೆ ನಮ್ಮ ಪುರಾಣಗಳಲ್ಲಿಯೂ ಹಲವು ಉಲ್ಲೇಖಗಳನ್ನು ನಾವು ಕಾಣಬಹುದು. ಭೂಮಿ ಹುಟ್ಟಿದಲ್ಲಿಂದ ಇಲ್ಲಿಯ ವರೆಗೂ ಸೃಷ್ಟಿಯ ಸೊಬಗು ಅಡಗಿರುವುದೇ ಮಾತೆಯ ಒಡಲಲ್ಲಿ. ಅಂತಹ ಮಮತೆಯ ಮಾತೆಯರಿಗೆ ತಾಯಂದಿರ ದಿನದ ಶುಭಾಶಯಗಳು.
✍️ ಭುವನ ಬಾಬು ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.