News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅರವಕುರುಚ್ಚಿಯಲಿ ಧೀರಪಥವನು ಬೆದಕಿ

ಅವರು ಖಾಕಿ ತೊಟ್ಟಾಗ ಅಜಯ್ ದೇವಗನನಂತೇನೂ ಕಾಣುತ್ತಿರಲಿಲ್ಲ. ಪತ್ರಿಕೆಗಳು ಖಡಕ್ ಪೊಲೀಸ್ ಅಧಿಕಾರಿ ಎಂದು ಬಣ್ಣಿಸಿದ್ದರೂ ದೇಹಾಕಾರ ಬಾಹುಬಲಿಯಂತೆಯೂ ಇಲ್ಲ. ಯಾವ ಕೋನದಿಂದ ನೋಡಿದರೂ ಆ ಪೊಲೀಸ್ ಅಧಿಕಾರಿ ಡೈಲಾಗ್ ಹೊಡೆಯುವ ಅಗ್ನಿ ಐಪಿಎಸ್ಸಿನ ಸಾಯಿಕುಮಾರನಂತೆ ಯಾರಿಗೂ ಕಾಣಿಸುತ್ತಿರಲಿಲ್ಲ. ಸದಾ ಏನನ್ನೋ ಧ್ಯಾನಿಸುವ ಅವಧೂತನಂತೆ ಕಾಣಿಸುವ ಆತ ಜೇಬುಗಳ್ಳರನ್ನು ಹಿಡಿದು ಅರ್ಧಗಂಟೆ ಪತ್ರಿಕಾಗೋಷ್ಠಿ ನಡೆಸುವವನಲ್ಲವೆಂದು ಮೊದಲ ನೋಟಕ್ಕೇ ತಿಳಿದುಬಿಡುತ್ತವೆ. ಆದರೂ ಕರ್ನಾಟಕ ಆತನನ್ನು ಸಿಂಗಂ ಎಂದು ಕರೆಯಿತು. ಹಾಗೇಕೆ ಕರೆಯಿತು ಎಂಬುದಕ್ಕೆ ಉತ್ತರ, ಮನುಷ್ಯನಿಗೆ ವ್ಯಕ್ತಿತ್ವವೆಂಬುದು ಧಿಮಾಕು, ದೇಹ, ಡೈಲಾಗು ಮತ್ತು ಅಧಿಕಾರಗಳಿಂದ ಬರುವುದಿಲ್ಲ ಎಂಬುದು ಮಾತ್ರ. ಹಾಗಾದರೆ ವ್ಯಕ್ತಿತ್ವ ರೂಪುಗೊಳ್ಳುವುದು ಯಾವುದರಿಂದ?

ಇವೆಲ್ಲವೂ ಇಲ್ಲದಿದ್ದರೂ ಅವರಲ್ಲೊಂದು ಚುಂಬಕ ವ್ಯಕ್ತಿತ್ವವಿದೆ. ಓದಿನಲ್ಲಿ ಮುಂದು. ಸಮಾಜದ ಚಿಂತೆಯನ್ನು ತನ್ನದೇ ಚಿಂತೆ ಎಂದುಕೊಳ್ಳುವ ದೊಡ್ಡ ಮನಸ್ಸು, ಸವಲತ್ತು-ಶ್ರೀಮಂತಿಕೆ-ಕನಸ್ಸುಗಳೆಲ್ಲವೂ ಆತನಲ್ಲಿದ್ದವು. ಇಚ್ಛೆಯಂತೆ ಐಪಿಎಸ್ ಆದರು. ಹೃದಯದ ಮಾತು, ಕರ್ತವ್ಯಪರತೆಗಳಿಂದ ಹೆಸರಾದರು. ಉನ್ನತ ಪೊಲೀಸ್ ಅಧಿಕಾರಿ ಎಂಬ ಪಟ್ಟ, ಕೈಗೊಂದು ಕಾಲಿಗೊಂದು ಆಳು, ಹೋದಬಂದಲ್ಲೆಲ್ಲಾ ಸೆಲ್ಯೂಟುಗಳು, ಮುತ್ತಿಕೊಳ್ಳುವ ಅಭಿಮಾನಿಗಳು…

ಆದರೆ ಆ ಮನುಷ್ಯನಿಗೆ ಇನ್ನೊಂದೈದು ವರ್ಷ ಹೀಗೆ ಬದುಕಿದರೆ ಟೊಳ್ಳಾಗಿ ಹೋಗುವೆ ಎಂಬ ಭಯ ಕಾಡಲಾರಂಭಿಸಿತು. ಬಹುತೇಕರಿಗೆ ಹೀಗನಿಸುತ್ತದೆ. ಆದರೆ ಅವರೆಲ್ಲರ ಪರ್ಯಾಯ ಆಯ್ಕೆ ವಿಚಿತ್ರವಾಗಿರುತ್ತವೆ. ಹಲವು ವರ್ಷಗಳ ಚಡಪಡಿಕೆಯ ನಂತರ ಒಂದು ದಿನ ತಿರುವಣ್ಣಾಮಲೈಯಲ್ಲಿ ಗಿರಿವಲಂ ಮಾಡುತ್ತಿದ್ದಾಗ ಆ ಅಣ್ಣಾಮಲೈಯೇ ಸ್ಪಷ್ಟ ದಾರಿ ತೋರಿಸಿದ. ಹಿಂದೆಮುಂದೆ ನೋಡದೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಖಾಕಿ ಕಳಚಿದರು. ಬುದ್ಧಿಹೇಳಲು ಬಂದವರ ಕಣ್ಣುತಪ್ಪಿಸಿದರು, ಆಡುವವರ ಮಾತಿಗೆ ಕಿವುಡಾದರು. ಕೊನೆಗೊಂದು ದಿನ ’ರಾಜಕೀಯಕ್ಕೆ ಸೇರುವೆ’ ಎಂದು ಘೋಷಿಸಿದರು. ಹಿಂದಿನ ರಾತ್ರಿಯವರೆಗೂ ಆತನನ್ನು ಸಿಂಗಂ ಎನ್ನುತ್ತಿದ್ದವರೇ ಮರುದಿನದಿಂದ ಶತ್ರುಗಳಂತೆ ನೋಡತೊಡಗಿದರು. ಆದರೆ ಅವರು ತನ್ನ ಎಂದಿನ ನಿರ್ಲಿಪ್ತತೆಯನ್ನು ಕಾಯ್ದುಕೊಂಡಿದ್ದರು. ಬದುಕಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ತಮಾಷೆಯೆಂದರೆ ಖಾಕಿ ಕಳಚಿದಾಗಲೇ ಆತ ಹೆಚ್ಚು ಸಿಂಗಂನಂತೆ ಕಾಣುತ್ತಿದ್ದರು!

ಕುಪ್ಪುಸ್ವಾಮಿ ಅಣ್ಣಾಮಲೈಯವರ ಈ ಕಥಾನಕ ಸಮಸ್ತ ಕರ್ನಾಟಕಕ್ಕೆ ತಿಳಿದಿದೆ. ಆದರೆ ಅಣ್ಣಾಮಲೈಯವರ ಬದುಕನ್ನು ನೋಡುತ್ತಾ ಹೋದಂತೆ ಭರ್ತ್ರಹರಿಯ ಧೀರರಾದವರು ನ್ಯಾಯಮಾರ್ಗವನ್ನು ಬಿಟ್ಟು ಸರಿಯುವುದಿಲ್ಲ’ (ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ) ಎಂಬ ಮಾತು ನೆನಪಾಗುತ್ತದೆ. ಏಕೆಂದರೆ ಬರಡು ನೆಲ ಅರವಕುರುಚ್ಚಿಯ ಬಾಲ್ಯ, ಐಪಿಎಸ್ ಬದುಕು, ರಾಜಿನಾಮೆ ಮತ್ತು ರಾಜಕಾರಣಕ್ಕೆ ಸೇರ್ಪಡೆ, ಚುನಾವಣೆಯಲ್ಲಿ ಸ್ಪರ್ಧೆ ಮತ್ತು ಸೋಲು… ಎಲ್ಲವನ್ನೂ ನೋಡಿದರೆ ಕಾಣುವುದು ಅವರು ಹಿಡಿದ ಧೀರಪಥ. ಧೀರಪಥವನ್ನೇ ಹಿಡಿದವರು ಅರಸರಾಗಲಿ, ಆಳಾಗೇ ಇರಲಿ. ಅಂಥವರಿಂದ ಸಮಾಜದಲ್ಲಿ ಒಂದು ಪರಿವರ್ತನೆಯಂತೂ ಆಗಿರುತ್ತದೆ. ಅದಕ್ಕೆ ಉದಾಹರಣೆ ಈ ಅಣ್ಣಾಮಲೈ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿರಬಹುದು, ಅದಕ್ಕೆ ಬಹಳಷ್ಟು ಜನರು ಮರುಗಿರಬಹುದು. ಆದರೆ ಮರುಗುವಂಥಾ ಸೋಲೇನೂ ಅರವಕುರುಚ್ಚಿಯಲ್ಲಿ ಸಂಭವಿಸಿಲ್ಲ. ಹಾಗೆ ನೋಡಿದರೆ ಅರವಕುರುಚ್ಚಿಯಲ್ಲಿ ಅಣ್ಣಾಮಲೈ ಗೆಲುವಿನ ಹೆಜ್ಜೆಯನ್ನೇ ಇಟ್ಟಿದ್ದಾರೆ.

ಧೀರಪಥವನ್ನು ಹಿಡಿಯುವುದು, ನ್ಯಾಯಮಾರ್ಗದಲ್ಲಿ ಸಾಗುವುದೆಲ್ಲವೂ ಹೇಳಲು-ಕೇಳಲು ಅತ್ಯಂತ ಸುಂದರ ಪದಗಳು. ಆದರೆ ಒರ್ವ ಐಪಿಎಸ್ ಅಧಿಕಾರಿಗೆ ಇವು ಮುಳ್ಳಿನ ಹಾದಿಗಳೇ. ಏಕೆಂದರೆ ರಾಜಕಾರಣವೆಂಬುದು ಎಂಥೆಂಥಾ ಕನಸ್ಸುಗಾರರನ್ನೇ ಮಣ್ಣುಮುಕ್ಕಿಸಿದೆ. ಸಂವೇದನೆಯನ್ನು ಉಂಟು ಮಾಡುವೆ ಎಂಬ ಛಾತಿವಂತರನ್ನೂ ರಾಜಕಾರಣ ಹೀನಾಯವಾಗಿ ಸೋಲಿಸಿದೆ, ಸಮಾಜವೂ ಅಷ್ಟೇ ಬೇಗ ಅಂಥವರನ್ನು ಮರೆತಿದೆ. ಮಹಾಮಹಾ ಸಿದ್ಧಾಂತಿಗಳೂ ಚುನಾವಣೆಯಲ್ಲಿ ಸ್ಪರ್ಧಿಸಿ ದಾರಿಹೋಕರಿಂದ ಸೋಲನ್ನುಂಡಿದ್ದಾರೆ. ಆಚಾರ್ಯ ಕೃಪಲಾನಿ, ಆಚಾರ್ಯ ನರೇಂದ್ರದೇವ, ದೀನದಯಾಳ ಉಪಾಧ್ಯಾಯರಂಥಾ ಮಹಾರಥಿಕರೇ ಸೋತಿದ್ದಾರೆ. ಸೋತವರನೇಕರು ಕೊಲೆಯೂ ಆಗಿಹೋಗಿದ್ದಾರೆ! ಇಂಥಾ ಹೇರಳ ಉದಾಹರಣೆಗಳಿದ್ದರೂ ಉನ್ನತ ಹುದ್ದೆಗೆ ರಾಜಿನಾಮೆ ಕೊಟ್ಟ ಅಣ್ಣಾಮಲೈಯವರ ಮುಂದಿದ್ದದ್ದು ಬಿಜೆಪಿಯಯ ಗಂಧಗಾಳಿಯೇ ಇಲ್ಲದಿದ್ದ ತಮಿಳುನಾಡು. ಬಕೇಟು ಹಿಡಿದಿದ್ದರೆ ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸ್ಪರ್ಧಿಸುವ ಅವಕಾಶಗಳಿದ್ದವು. ಅಷ್ಟೇ ಏಕೆ ಅರವಕುರುಚ್ಚಿಯ ಸಮೀಪದ ಕರೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಲಭವಾಗಿ ಗೆಲ್ಲುವ ಅವಕಾಶವೂ ಇತ್ತು. ರಾಜಕೀಯ ಪಂಡಿತರು ಅಂಥಾ ಅನೇಕ ಸಲಹೆಗಳನ್ನು ನೀಡಿದ್ದರೂ ಅವರು ಆರಿಸಿಕೊಂಡಿದ್ದು ಧೀರಪಥವನ್ನೇ. ಏಕೆಂದರೆ ಧೀರಪಥವನ್ನು ಆರಿಸಿಕೊಂಡರೆ ಮಾತ್ರ ಧ್ಯೇಯಪಥದಲ್ಲಿ ನಡೆಯಬಹುದಾಗಿತ್ತು. ಗೆದ್ದರೂ ಸೋತರೂ ಹುಟ್ಟೂರಲ್ಲೇ ಸ್ಪರ್ಧಿಸುವೆ, ಹುಟ್ಟೂರಿನ ಜನರ ಸೇವೆಗಲ್ಲದ ರಾಜಕಾರಣ ಬೇಡ ಎಂದ ಅಣ್ಣಾಮಲೈ ಜನರ ಕಣ್ಣಲ್ಲಿ ನಿಜವಾದ ಸಿಂಗಂ ಆದರು.

ನೀವೊಮ್ಮೆ ಅರವಕುರುಚ್ಚಿ ವಿಧಾನಸಭಾ ಕ್ಷೇತ್ರ/ ತಾಲೂಕಿನ ಇತಿಹಾಸವನ್ನು ಕೆದಕಿದರೆ ಭಯಾನಕವಾದ ವೆಬ್ ಸೀರಿಸ್ ಒಂದನ್ನು ನೋಡಿದ ಅನುಭವವಾಗುತ್ತದೆ. ಏಕೆಂದರೆ ಅಣ್ಣಾಮಲೈ ರಾಜಕಾರಣ ಪ್ರವೇಶಿಸಿದಾಗ ಅರವಕುರುಚ್ಚಿಯಲ್ಲಿ ಪ್ರತಿಷ್ಠಾಪಿತನಾಗಿದ್ದವನು ಸೆಂಥಿಲ್ ಬಾಲಾಜಿ. ಇಷ್ಟೂ ವರ್ಷಗಳ ತಮಿಳು ಸಿನೆಮಾಗಳ ವಿಲನ್ ಪಾತ್ರಗಳನ್ನೆಲ್ಲಾ ಒಂದು ಕಡಾಯಿಯಲ್ಲಿ ಹಾಕಿ ಭಟ್ಟಿ ಇಳಿಸಿದರೆ ಏನು ಉಳಿಯುವುದೋ ಅಂಥವನು ಈ ಸೆಂಥಿಲ್ ಬಾಲಾಜಿ. ಆತನ ವ್ಯಕ್ತಿತ್ವ ಅದೆಂಥಾ ಭಯಾನಕವಾಗಿತ್ತೆಂದರೆ ಅನೇಕ ತಮಿಳು ಸಿನೆಮಾಗಳು ಆತನನ್ನು ಹೋಲುವ ಖಳನಾಯಕನನ್ನು ಸೃಷ್ಟಿಸುತ್ತಿದ್ದವು. ಮಮತಾ ಬ್ಯಾನರ್ಜಿಯನ್ನು ಮೀರಿಸುವ ಅಲ್ಪಸಂಖ್ಯಾತ ಓಲೈಕೆ, ಫಾರೂಕ್ ಅಬ್ದುಲ್ಲಾನ ಅವಕಾಶವಾದಿತನ, ಆಜಂಖಾನನ ಗೂಂಡಾಗಿರಿ, ಕುಮಾರಸ್ವಾಮಿಯ ಜಾತಿ ಪ್ರಜ್ಞೆಗಳೆಲ್ಲವೂ ಮೇಳೈಸಿದಂತೆ ರಾಜಕಾರಣ ಮಾಡುತ್ತಿದ್ದ ಸೆಂಥಿಲ್ ಬಾಲಾಜಿ ಅರವಕುರುಚ್ಚಿಯ ಶಾಸಕನಾಗಿದ್ದ. ಜಯಲಲಿತಾ ಬದುಕಿರುವವರೆಗೆ ಆಕೆಯ ಕಾರು-ಹೆಲಿಕಾಪ್ಟರುಗಳಿಗೆಲ್ಲಾ ಉದ್ದಂಡ ನಮಸ್ಕಾರ ಮಾಡುತ್ತಿದ್ದ ಸೆಂಥಿಲ್, ಆಕೆಯ ನಿಧನಾನಂತರ ಸ್ಟಾಲಿನ್ ಬಣ ಸೇರಿಕೊಂಡ. ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಚಿವನಾಗಿದ್ದ ಆತ ಏನೂ ನಡೆದಿಲ್ಲವೆನ್ನುವಂತೆ ಡಿಎಂಕೆ ಸೇರಿ ಮತ್ತಷ್ಟು ಪ್ರಬಲನಾದ. ಆತನ ಖತರ್ನಾಕ್ ರಾಜಕಾರಣದ ವರಸೆ ಹೇಗಿತ್ತೆಂದರೆ ಹಣಬಲದಿಂದ ಯಾವ ಪಕ್ಷದಲ್ಲಿದ್ದರೂ ಗೆಲ್ಲಬಲ್ಲೆನೆಂಬ ಅಹಂಕಾರವಿತ್ತು. ಜೊತೆಗೆ ಹಣವನ್ನು ಚೆಲ್ಲಿಯೇ ಆತ ಸತತವಾಗಿ ಗೆಲ್ಲುತ್ತಿದ್ದ. 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಅಭ್ಯರ್ಥಿಗಾಗಿ ದೇಶದ ಚುನಾವಣಾ ಆಯೋಗವೇ ಅರವಕುರುಚ್ಚಿ ಚುನಾವಣೆಯನ್ನು ಮುಂದೂಡಿತ್ತು. ಅಂದರೆ ಇಡೀ ತಮಿಳುನಾಡಿನಲ್ಲಿ ಸುಸೂತ್ರವಾಗಿ ಚುನಾವಣೆ ನಡೆಸಿದರೂ ಅರವಕುರುಚ್ಚಿಯಲ್ಲಿ ಅಸಾಧ್ಯ ಎಂಬ ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದುಬಿಟ್ಟಿತ್ತು! ಸ್ವಾತಂತ್ರ್ಯಾನಂತರ ಚುನಾವಣಾ ಆಯೋಗ ಹೀಗೆ ಹೆದರಿದ್ದು, ಚುನಾವಣೆಯನ್ನು ಮುಂದೂಡಿದ್ದು ದೇಶದಲ್ಲೇ ಮೊದಲು ಎಂಬ ಕುಖ್ಯಾತಿ ಅರವಕುರುಚ್ಚಿಗಿತ್ತು.

ಅಣ್ಣಾಮಲೈ ಸ್ಪರ್ಧಿಸಬೇಕಿದ್ದಿದ್ದು ಅಂಥಾ ಸೆಂಥಿಲ್ ಬಾಲಾಜಿಯ ಛಾಯೆಯಂತಿದ್ದ ಆರ್. ಎಲಂಗೋ, ಶೇ.17.5 ಮುಸಲ್ಮಾನರು-ಶೇ.2 ಕ್ರಿಶ್ಚಿಯನ್ನರು ಸೇರಿ ಒಟ್ಟು ಒಟ್ಟು ಶೇ 19.5 ಅಲ್ಪಸಂಖ್ಯಾತ ಮತಗಳು ಮತ್ತು ಕುಸಿದುಹೋದ ದ್ರಾವಿಡವಾದವನ್ನು ವೆಂಟಿಲೇಟರಿನಲ್ಲಿಟ್ಟು ಜನರ ತಲೆಕೆಡಿಸುವ ಡಿಎಂಕೆಯ ವಿರುದ್ಧ. ಜೊತೆಗೆ ಜನರಿಗೆ ತಿಳಿಯದೇ ಇದ್ದ ಕಮಲದ ಚಿನ್ಹೆಯಿಂದ ಅವರು ಸ್ಪರ್ಧೆ ಮಾಡಬೇಕಿತ್ತು. ಕಮಲವನ್ನೇ ಕಾಣದ ಜನರೆದುರಲ್ಲಿ ಬಿಜೆಪಿ ಸಿದ್ಧಾಂತವನ್ನು ಮಂಡಿಸುವುದೆಂತು? ಸ್ವಾತಂತ್ರ್ಯಾನಂತರ 73 ವರ್ಷಗಳಲ್ಲಿ ಯಾರಿಂದಲೂ ಆಗದ ಕೆಲಸವನ್ನು ಅಣ್ಣಾಮಲೈ ಮಾಡಬೇಕಿತ್ತು. ಆಗ ಅವರಿಗೆ ಕಂಡಿದ್ದೇ ವೆಲ್ ಯಾತ್ರೆ. ಹೊರಪ್ರಪಂಚ ಅಂದುಕೊಂಡಂತೆ ತಮಿಳರೇನೂ ಪೆರಿಯಾರನ ಸಿದ್ಧಾಂತಕ್ಕೆ ಬದ್ಧರಾಗಿ ಬದುಕುತ್ತಿಲ್ಲ, ಆದರೆ ಆತನ ಹೆಸರಲ್ಲಿ ದ್ರಾವಿಡ ಪಕ್ಷಗಳು ಜನರ ದಿಕ್ಕು ತಪ್ಪಿಸುತ್ತಿವೆ ಎಂಬ ಸೂತ್ರದಿಂದ ಪಕ್ಷದ ಸಂಘಟನೆ ಆರಂಭಿಸಿದರು. ಎರಡು ತಿಂಗಳುಗಳ ಕಾಲ ತಮಿಳುನಾಡಿನಾದ್ಯಂತ ವೆಲ್ ಯಾತ್ರೆ ಯಶಸ್ವಿಯಾಗಿ ನಡೆಯಿತು. ಪೆರಿಯಾರನ ವಾದಗಳಿಗೆ ತಮಿಳು ತಲೆಗಳು ತಿಲಾಂಜಲಿ ಇಟ್ಟು ದಶಕಗಳನೇಕ ಕಳೆದಿವೆ ಎಂಬುದನ್ನು ಯಾತ್ರೆ ಸಾರಿತು. ಅದಕ್ಕೆ ಕಾರಣವಾಗಿದ್ದು ಅದೇ ಧೀರಪಥ. ಯಾತ್ರೆ ಸಾಮಾಜಿಕವಾಗಿ ಯಶಸ್ವಿಯಾಗಿದ್ದರೂ ಅರವಕುರುಚ್ಚಿ ಇನ್ನೂ ದೂರದಲ್ಲಿತ್ತು. ಏಕೆಂದರೆ ಇಡೀ ತಮಿಳುನಾಡಿನಲ್ಲೇ ಮಿನಿ ಪಾಕಿಸ್ಥಾನ ಎಂದೇ ಕುಖ್ಯಾತವಾಗಿದ್ದ ಪಲ್ಲಪಟ್ಟಿಯಲ್ಲೇ 26 ಸಾವಿರ ಜನ ಮುಸಲ್ಮಾನ ಮತದಾರರಿದ್ದರು. ಹಿಂದುಗಳಿಗೆ ಕಮಲದ ಚಿನ್ಹೆ ಅಪರಿಚಿತವಾಗಿದ್ದರೂ ಮುಸಲ್ಮಾನರಿಗೆ ಕಮಲದ ಪ್ರತೀ ದಳಗಳ ಬಗ್ಗೆಯೂ ಸ್ಪಷ್ಟತೆಯಿತ್ತು. ಬಿಜೆಪಿಯನ್ನು ಪಲ್ಲಪಟ್ಟಿ ಪ್ರವೇಶಿಸಲು ಬಿಡಲಾರೆ ಎಂಬ ಗಡ್ಡಧಾರಿಗಳ ಬೆದರಿಕೆಯನ್ನೂ ಬಿಜೆಪಿ ಅಭ್ಯರ್ಥಿ ಎದುರಿಸಬೇಕಿತ್ತು. ಅಲ್ಲದೆ 2021ರ ಚುನಾವಣೆಯನ್ನು ಡಿಎಂಕೆ ತನ್ನದೆಲ್ಲವನ್ನೂ ಪಣಕ್ಕಿಟ್ಟು ಕಣಕ್ಕಿಳಿದಿತ್ತು. ಅರವಕುರುಚ್ಚಿ ಎಂಬ ಪ್ರತಿಷ್ಠೆಯ ಕಣದಲ್ಲಿ ಡಿಎಂಕೆಯ ಸೋಲನ್ನು ನೇರ ಸ್ಟಾಲಿನನದ್ದೇ ಸೋಲು ಎಂಬಂತೆ ಅದು ಸೆಣಸಲು ನಿಂತಿತ್ತು. ಜೊತೆಗೆ ಜನರು ಪದೇ ಪದೇ ನಡೆಯುವ ಚುನಾವಣೆಗಳಲ್ಲಿ ಹಣದ ರುಚಿಯನ್ನು ಕಂಡಿದ್ದರು. ಪಕ್ಷಾಂತರ ಮಾಡುತ್ತಿದ್ದ ಸೆಂಥಿಲ್ ಬಾಲಾಜಿ 2019ರ ಉಪಚುನಾವಣೆಯನ್ನು 100 ಕೋಟಿ ರೂಪಾಯಿ ಖರ್ಚುಮಾಡಿ 39 ಸಾವಿರ ಮತಗಳ ಅಂತರದಲ್ಲಿ ಅರವಕುರುಚ್ಚಿಯನ್ನು ಗೆದ್ದಿದ್ದ! ಆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು 3162 ಮತಗಳು. ಇಂಥಾ ಕ್ಷೇತ್ರದಲ್ಲಿ ಗೆಲ್ಲಲು ಮಾತ್ರವಲ್ಲ, ಅಭ್ಯರ್ಥಿಯಾಗಲೂ ಛಾತಿ ಬೇಕು. ಹಿಂದಿನ ರಾತ್ರಿಯವರೆಗೆ ಯಾವುದೋ ಪಕ್ಷದಲ್ಲಿದ್ದು ಮರುದಿನ ಬಿಜೆಪಿ ಸೇರಿ ಎಂಎಲ್‌ಸಿ ಆಗುವ ವಿಶ್ವನಾಥರಂಥವರೂ ಇರುವ ಕಾಲದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದವನೊಬ್ಬ ಸಿದ್ಧಾಂತಕ್ಕಾಗಿ ತನ್ನ ಜೀವನವನ್ನೇ ಪ್ರಯೋಗಕ್ಕಿಟ್ಟ ಎಂಬುದಕ್ಕೆ 2021ರ ಚುನಾವಣೆ ಸಾಕ್ಷಿಯಾಯಿತು.

ಅರವಕುರುಚ್ಚಿಯಲ್ಲಿ ಅಣ್ಣಾಮಲೈ ಮಾಡಿದ್ದೆಲ್ಲವೂ ಸಿದ್ಧಾಂತಕ್ಕಾಗಿ. ನಿಷ್ಠೆ-ಪ್ರಾಮಾಣಿಕತೆ ಮತ್ತು ತಾಳ್ಮೆಯ ಮೂರ್ತಿಗಳ ಆವಶ್ಯಕತೆ ತಮಿಳುನಾಡಿಗಿತ್ತು. ಅದನ್ನು ಅಣ್ಣಾಮಲೈ ತುಂಬಿದರು. 68 ಸಾವಿರ ಮತಗಳನ್ನು ಪಡೆದು ಮುಂದಿನ ಪರಿವರ್ತನೆಗೆ ಮುನ್ನುಡಿ ಬರೆದರು. ಬಿಜೆಪಿ ಕೂಡಾ “ವಿಜಯಕ್ಕೆ ಹಪಹಪಿಸುವವನೊಡನಲ್ಲ, ಪ್ರಾಮಾಣಿಕನೊಡನೆ ನಡೆ’ ಎಂಬ ಆದರ್ಶದೊಡನೆ ಸಾಗಿ ಸಿದ್ಧಾಂತವನ್ನು ಗೆಲ್ಲಿಸಿತು.

1964ರ ’ರಾಷ್ಟ್ರಧರ್ಮ’ ಪತ್ರಿಕೆಯಲ್ಲಿ ಪಂ.ದೀನದಯಾಳ ಉಪಾಧ್ಯಾಯರು ಬರೆದ ಲೇಖನವೊಂದು ಪ್ರಸ್ತುತವಾಗುತ್ತದೆ. “ಅಭ್ಯರ್ಥಿಯಾಗುವ ವ್ಯಕ್ತಿ ಜನತೆಗಾಗಿ ಸಮರ್ಪಿತನಾಗಿರಬೇಕು ಮತ್ತು ಆತ ಒಂದು ಪಕ್ಷದ ಸದಸ್ಯನಾದ ಕಾರಣ ಆ ಪಕ್ಷದ ಶಿಸ್ತು ಹಾಗೂ ವಿಚಾರಧಾರೆಯ ಬಗ್ಗೆ ಪ್ರತಿಬದ್ಧನಾಗಿರಬೇಕು” ಎಂದಿದ್ದರು. ಬಿಜೆಪಿಯಲ್ಲಿ ಲಾಲಸೆಯ ಜನರು ಅಧಿಕಾರಕ್ಕೇರುವ ಮುನ್ನ ಹಾಗೂ ಲಾಲಸೆಯ ಜನರು ಇನ್ನೂ ಅಧಿಕಾರಕ್ಕೇರದ ಕಡೆಗಳಲ್ಲೆಲ್ಲಾ ಇಂದಿಗೂ ಬಿಜೆಪಿ ಇದೇ ಮಾನದಂಡದಲ್ಲಿ ಅಭ್ಯರ್ಥಿಗಳನ್ನು ಆರಿಸುತ್ತದೆ. ಹಾಗಾಗಿ ಅರವಕುರುಚ್ಚಿಯಲ್ಲಿ ಚುನಾವಣೆಗೂ ಮುನ್ನ ಅಭ್ಯರ್ಥಿ ಗೆದ್ದಿದ್ದಾರೆ, ಸಿದ್ಧಾಂತ ಗೆದ್ದಿದೆ. ಇಂದು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳಾಗಲು ಕೇವಲ ಬೆಂಗಳೂರೊಂದರಲ್ಲೇ ಆಕಾಂಕ್ಷಿಗಳಿದ್ದಾರೆ. ಆದರೆ ತಮಿಳುನಾಡಿನಲ್ಲಿ ಅಂಥಾ ವಾತಾವರಣ ಇಲ್ಲ. ಅದರಲ್ಲೂ ಅರವಕುರುಚ್ಚಿಯಂಥಾ ಕ್ಷೇತ್ರದಲ್ಲಂತೂ ಇಲ್ಲವೇ ಇಲ್ಲ. ಅಂಥಾ ಕ್ಷೇತ್ರದಲ್ಲಿ ಕಣಕ್ಕಿಳಿಯುವುದೆಂದರೆ ಅದು ಗೆಲ್ಲುವುದಕ್ಕಿಂತಲೂ ಮೇಲು. ತಮಿಳುನಾಡಿನ ಭವಿಷ್ಯಕ್ಕಾಗಿ ತನ್ನನ್ನು ತಾನು ತೇಯಲು ಸಿದ್ಧವಾಗುವವರು ಮಾತ್ರ ಅರವಕುರುಚ್ಚಿಯಂಥಾ ನಟೋರಿಯಸ್ ಕ್ಷೇತ್ರದಲ್ಲಿ ಸ್ಪರ್ಧಿಸಬಲ್ಲರು.

ಅಣ್ಣಾಮಲೈಯವರು ಧ್ಯೇಯಪಥದಲ್ಲಿ ಇಟ್ಟ ಧೀರ ಹೆಜ್ಜೆಯೇನೂ ಸಾಮಾನ್ಯ ಹೆಜ್ಜೆಯಲ್ಲ. ಅದು ಗುರಿಯೆಡೆಗೆ ಇಟ್ಟ ದಾಪುಗಾಲು. ಅನಾಯಾಸವಾಗಿ ಸಿಗುವ ಗುರಿಗೆ ಯಾವತ್ತೂ ಮಹತ್ವ ಕಡಿಮೆ. ಆಯಾಸದ ಸಾಧನೆಗೆ ಇಮ್ಮಡಿ ಗೌರವ. ಹಾಗಾಗಿ ಧೀರನಿಗೆ ಸೋಲೂ ಒಂಥರಾ ಗೆಲುವೆ. ಯುಧಿಷ್ಠಿರನಿಗೆ ಪಟ್ಟಾಭಿಷೇಕ ನಡೆದಿದ್ದು, ಪಾಂಡವರು ರಾಜಸೂಯವನ್ನಾಚರಿಸಿದ್ದೆಲ್ಲವೂ ವನವಾಸ, ಅಜ್ಞಾತವಾಸ ಮತ್ತು 18 ದಿನಗಳ ಘನಘೋರ ಕುರುಕ್ಷೇತ್ರದ ನಂತರವೇ. ಅರವಕುರುಚ್ಚಿಗೂ ಬರಲಿದೆ 18ರ ನಂತರದ ದಿನಗಳು. ಕವಿಗಳು, ರಪಥವನೆ ಹಿಡಿದು…ಅಸುರ ಸಂತಾನವನು ಅಳಿಸಲೆಂದು, ಹೊರಟೆವು ರಣಾಂಗಣಕೆ ಕಾದಲೆಂದು, ಕೀರ್ತಿಕಳಶವ ತಾಯ್ಗೆ ತೊಡಿಸಲೆಂದು ಹಾಡಿದ್ದು ಸುಮ್ಮನೆಯೇ?

✍️ಸಂತೋಷ್ ತಮ್ಮಯ್ಯ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top