ಕೆಳಗಿನ ಈ ಹೇಳಿಕೆಗಳನ್ನು ಸುಮ್ಮನೆ ಗಮನಿಸುತ್ತಾ ಹೋಗಿ.
* ಮುಸ್ಲಿಮರೆಲ್ಲರೂ ಜಾತ್ಯತೀತರೆಂದು ನಾನು ಹೇಳುತ್ತೇನೆ. ಮುಸ್ಲಿಮರು ಕೋಮುವಾದಿಗಳಾಗಬೇಕಾದ ಅಗತ್ಯವಿದೆ. ಒಬ್ಬ ಮುಸ್ಲಿಂ ಕೋಮುವಾದಿಯಲ್ಲ. ತನಗಾಗಿ ಅವನು ಮತ ಹಾಕುವುದಿಲ್ಲ.
– ಶಾಜಿಯಾ ಇಲ್ಮಿ ಆಗ ಎಎಪಿ, ಈಗ ಬಿಜೆಪಿ.
* ಬಡತನವೆನ್ನುವುದು ಒಂದು ಮನಸ್ಸಿನ ಸ್ಥಿತಿ, ಅಷ್ಟೆ. ಆಹಾರ, ಹಣ ಅಥವಾ ಸಾಮಗ್ರಿಗಳ ಕೊರತೆ ಇದೆ ಎಂದು ಇದರ ಅರ್ಥವಲ್ಲ. ಆತ್ಮವಿಶ್ವಾಸ ಇದ್ದರೆ, ಬಡತನವನ್ನು ಮೆಟ್ಟಿ ನಿಲ್ಲಬಹುದು.
– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
* ಹೆಂಡತಿಗೆ ವಯಸ್ಸಾದಂತೆ ಆಕೆಯ ಬಗೆಗಿನ ಮೋಹ ಕಡಿಮೆಯಾಗುವಂತೆ ಕಾಲ ಸರಿದಂತೆ, ಗೆಲುವಿನ ಸಂತಸ ಕಡಿಮೆಯಾಗುತ್ತದೆ.
– ಭಾರತ ಪಾಕಿಸ್ಥಾನದ ವಿರುದ್ಧ ಟಿ-೨೦ ಚಾಂಪಿಯನ್ಶಿಪ್ ಪಂದ್ಯ ಗೆದ್ದ ಬಳಿಕ ಆಗಿನ ಕಾಂಗ್ರೆಸ್ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜೈಸ್ವಾಲ್ ಹೇಳಿಕೆ.
* ಆಣೆಕಟ್ಟು ತುಂಬಲು ನಾವೇನು ಅದರಲ್ಲಿ ಮೂತ್ರ ಮಾಡಬೇಕೆ?
– ಬರಗಾಲಪೀಡಿತ ರೈತರು ಆಣೆಕಟ್ಟು ನೀರನ್ನು ಬಿಡುವಂತೆ ಸತ್ಯಾಗ್ರಹ ನಡೆಸಿದಾಗ ಆಗಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೀಡಿದ ಹೇಳಿಕೆ.
* ನಿರ್ಭಯ ರಾತ್ರಿ ೧೧ ಗಂಟೆ ವೇಳೆಯಲ್ಲಿ ತನ್ನ ಸ್ನೇಹಿತನೊಂದಿಗೆ ಸಿನಿಮಾ ನೋಡಲು ಹೋಗುವ ಅಗತ್ಯವಾದರೂ ಏನಿತ್ತು ? ಶಕ್ತಿಮಿಲ್ ಅತ್ಯಾಚಾರ ಪ್ರಕರಣವನ್ನೇ ತೆಗೆದುಕೊಳ್ಳಿ. ಆಕೆ ನಿರ್ಜನ ಪ್ರದೇಶಕ್ಕೆ ಸಂಜೆ ೬ ರ ವೇಳೆಗೆ ಹೋಗಿದ್ದೇಕೆ?
– ಆಶಾ ಮಿರ್ಜೆ, ಮಹಾರಾಷ್ಟ್ರದ ಮಹಿಳಾ ಆಯೋಗದ ಸದಸ್ಯೆ
* `ಆಪ್ಕೋ ತಯ್ ಕರ್ನಾ ಹೈ ಕಿ ದಿಲ್ಲಿ ಮೆ ಸರ್ಕಾರ್ ರಾಮ್ಜಾದೋಂ ಕಿ ಬನೇಗೀ ಯಾ ಹರಾಮ್ಜಾದೋಂ ಕಿ. ಏ ಆಪ್ಕಾ ಫೈಸ್ಲಾ ಹೈ (ದಿಲ್ಲಿಯಲ್ಲಿ ರಾಮನಿಗೆ ಹುಟ್ಟಿದವರ ಸರ್ಕಾರ ಬೇಕೆ ಅಥವಾ ಅನೈತಿಕವಾಗಿ ಹುಟ್ಟಿದವರ ಸರ್ಕಾರ ಬೇಕೆ, ನೀವೇ ನಿರ್ಧರಿಸಿ).
– ಸಾಧ್ವಿ ನಿರಂಜನ ಜ್ಯೋತಿ, ಕೇಂದ್ರ ಬಿಜೆಪಿ ಸಚಿವೆ
* ಹುಟ್ಟುವಾಗ ಪ್ರತಿಯೊಂದು ಮಗುವೂ ಮುಸ್ಲಿಂ ಆಗಿ ಜನಿಸುತ್ತದೆ. ಅನಂತರ ತಂದೆ-ತಾಯಿಯರು ಮತ್ತು ಸಮಾಜ ಅದನ್ನು ಬೇರೆ ಧರ್ಮಕ್ಕೆ ಮತಾಂತರಿಸುತ್ತಾರೆ.
– ಅಸಾದುದ್ದೀನ್ ಓವೈಸಿ, ಮಜ್ಲಿಸ್ ಪಕ್ಷದ ಸಾಂಸದ
* ಪೊಲೀಸರಿಗೆ ಸುಮ್ಮನಿರಲು ಹೇಳಿ. ಆಗ ಯಾರು ಶಕ್ತಿಶಾಲಿಗಳೆಂದು ನಿಮಗೆ ಗೊತ್ತಾಗುತ್ತದೆ. ಫತ್ವದ ಪ್ರಕಾರ, ನಾವು ಹೈದರಾಬಾದ್ನಲ್ಲಿ ಈ ಹೆಂಗಸಿನ (ತಸ್ಲೀಮ ನಸ್ರೀನ್) ತಲೆಯನ್ನು ಕತ್ತರಿಸಬೇಕೆಂದು ಬಯಸಿದ್ದೇವೆ.
-ಅಕ್ಬರುದ್ದೀನ್ ಓವೈಸಿ, ಮಜ್ಲಿಸ್ ಪಕ್ಷದ ಶಾಸಕ
* ಆರೆಸ್ಸೆಸ್ ಬಾಂಬ್ ತಯಾರಿಸಲು ತನ್ನ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ.
– ದಿಗ್ವಿಜಯ ಸಿಂಗ್
* ರಾಜೀವ್ ಗಾಂಧಿ ನೈಜೀರಿಯನ್ ಹೆಂಗಸನ್ನು ಮದುವೆಯಾಗಿದ್ದರೆ, ಬಿಳಿಬಣ್ಣದ ಸೋನಿಯಾಳನ್ನು ಮದುವೆಯಾಗದೇ ಇದ್ದಿದ್ದರೆ ಕಾಂಗ್ರೆಸ್ ಪಕ್ಷ ಸೋನಿಯಾಳನ್ನು ಪಕ್ಷಾಧ್ಯಕ್ಷೆಯಾಗಿ ಮಾಡುತ್ತಿತ್ತೇ?
– ಗಿರಿರಾಜ್ ಸಿಂಗ್, ಕೇಂದ್ರ ಸರ್ಕಾರದ ಬಿಜೆಪಿ ಸಚಿವ
* ವಿಶ್ವಕಪ್ ಕ್ರಿಕೆಟ್ ಗೆದ್ದರೆ ಭಾರತದ ಪುಂಸತ್ವ ಮತ್ತು ಅತಿಪೌರುಷದ ರಾಷ್ಟ್ರೀಯತೆ ಇನ್ನಷ್ಟು ಹೆಚ್ಚಾಗಬಹುದು. ಬಹುಸಂಖ್ಯಾತ ರಾಷ್ಟ್ರೀಯತೆಯು ಇನ್ನಷ್ಟು ಆಕ್ರಮಣಕಾರಿಯಾಗಿ ವಿಜೃಂಭಿಸಬಹುದು.
– ಆಶೀಶ್ ನಂದಿ, ಪ್ರಗತಿಪರ ಪತ್ರಕರ್ತ
* ಭಾರತ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿರುವುದು ಇಡೀ ದೇಶಕ್ಕೇ ಅವಮಾನ.
– ಅರ್ನಾಬ್ ಗೋಸ್ವಾಮಿ, ‘ಟೈಮ್ಸ್ ನೌ’ ಚಾನಲ್ ಸಂಪಾದಕ
* ಶ್ರೀರಾಮ ಒಬ್ಬ ಸ್ತ್ರೀಲೋಲ, ಕುಡುಕ ಆಗಿದ್ದ. ಆತ ಏಕಪತ್ನಿ ವ್ರತಸ್ಥ ಆಗಿರಲಿಲ್ಲ.
– ಪ್ರೊ. ಕೆ.ಎಸ್. ಭಗವಾನ್, ವಿಚಾರವಾದಿ ಲೇಖಕ
* ಭಗವದ್ಗೀತೆ ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುತ್ತದೆ. ಖುರಾನ್ ಮಾತ್ರ ಮುಸ್ಲಿಮರೆಲ್ಲರೂ ಒಂದೇ ಎಂದು ಹೇಳುತ್ತದೆ. ಆದ್ದರಿಂದ ಜಾತಿ ಪದ್ಧತಿಯನ್ನು ಎತ್ತಿಹಿಡಿಯುವ ಭಗವದ್ಗೀತೆಯನ್ನು ಸುಡಬೇಕು.
– ಅಗ್ನಿಶ್ರೀಧರ್, ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕ
ಮೇಲಿನ ಈ ಎಲ್ಲಾ ಹೇಳಿಕೆಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದವು. ಈ ಹೇಳಿಕೆಗಳನ್ನು ಯಥಾವತ್ತಾಗಿ ಇಲ್ಲಿ ತೆಗೆದುಕೊಳ್ಳಲಾಗಿದೆ. ಇದಕ್ಕೆ ಯಾವುದೇ ಮಸಾಲೆ ಬೆರೆಸುವ ಪ್ರಯತ್ನ ಮಾಡಿಲ್ಲ. ಇಂತಹ ಹೇಳಿಕೆ ನೀಡಿದ ಬಳಿಕ, ಕೆಲವರು ಮಾತ್ರ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂದೋ ಅಥವಾ ‘ನನ್ನ ಹೇಳಿಕೆಯನ್ನು ಮಾಧ್ಯಮದಲ್ಲಿ ತಿರುಚಲಾಗಿದೆ’ ಎಂದೋ ಅನಂತರ ಅಲವತ್ತುಕೊಂಡಿದ್ದಿದೆ. ಅದು ಹಾಗೆಯೇ. ಹೇಳಿಕೆ ಕೊಡುವಾಗ ಹಿಂದೆ-ಮುಂದೆ ಯೋಚಿಸದೆ ಕೊಟ್ಟು, ಅನಂತರ ನಾನು ಹಾಗೆ ಹೇಳಿಯೇ ಇಲ್ಲ ಎನ್ನುವುದು ಹಲವರ ಜನ್ಮಸಿದ್ಧ ಜಾಯಮಾನ !
ಇಂತಹ ವಿವಾದಾತ್ಮಕ, ಅಸಂಬದ್ಧ ಹೇಳಿಕೆಗಳನ್ನು ಯಾರೋ ಬೀದಿಯಲ್ಲಿ ಹೋಗುವವರು ಹೇಳಿದ್ದರೆ ಅದಕ್ಕೆ ನಾನು-ನೀವೆಲ್ಲಾ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ಏಕೆಂದರೆ ಬೀದಿಯಲ್ಲಿ ಹೋಗುವವರು ಮಾತನಾಡಿದ್ದಕ್ಕೆ ಅಂತಹ ಬೆಲೆ ಇರುವುದಿಲ್ಲ. ಅದೇ ರೀತಿ ಯಾರೋ ಪಡ್ಡೆ ಹುಡುಗರು ಅಥವಾ ಬೇಜವಾಬ್ದಾರಿ ವ್ಯಕ್ತಿಗಳು ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದರೆ ಅದಕ್ಕೂ ತಲೆ ಬಿಸಿ ಮಾಡಿಕೊಳ್ಳಬೇಕಾಗಿರಲಿಲ್ಲ.
ಆದರೆ ಮೇಲಿನ ಹೇಳಿಕೆಗಳನ್ನು ನೀಡಿದವರು ಪಡ್ಡೆಗಳಲ್ಲ, ಬೇಜವಾಬ್ದಾರಿ ವ್ಯಕ್ತಿಗಳೂ ಅಲ್ಲ. ಬೀದಿಯಲ್ಲಿ ಹೋಗುವ ಬಿಕನಾಸಿಗಳೂ ಅಲ್ಲ. ಅವರೆಲ್ಲಾ ಸಮಾಜದಲ್ಲಿ ಗಣ್ಯರೆಂಬ ‘ಬಿರುದು’ ಹೊತ್ತವರು. ರಾಜಕೀಯ ಪಕ್ಷಗಳ ಗಣ್ಯಾತಿಗಣ್ಯರು, ಸಾಮಾಜಿಕ ಪ್ರತಿಷ್ಠೆ ಉಳ್ಳವರು. ಸಾರ್ವಜನಿಕವಾಗಿ ಗುರುತಿಸಲ್ಪಡುವಂತಹವರು. ಇಂತಹವರು ಯಾವುದೇ ಹೇಳಿಕೆ ನೀಡುವಾಗ ಮನಸ್ಸಿಗೆ ತೋಚಿದಂತೆ ಹೇಳಿದರೆ ಅದರಿಂದಾಗುವ ದುಷ್ಪರಿಣಾಮಗಳೇನು ಎಂಬುದು ಅವರಿಗೆ ಗೊತ್ತಿದೆಯೇ? ತನ್ನ ಇಂತಹ ಹೇಳಿಕೆಯಿಂದ ಸಮಾಜದ ಮೇಲಾಗುವ ಪರಿಣಾಮವೇನು ಎಂಬುದನ್ನು ಅವರು ಏಕೆ ಯೋಚಿಸುತ್ತಿಲ್ಲ?
ಕೆಲವು ‘ಗಣ್ಯರು’ ಸಮಾಜದ ಮೇಲೆ ದುಷ್ಪರಿಣಾಮ ಬೀರಲೆಂದೇ ಇಂತಹ ಹೇಳಿಕೆ ನೀಡುತ್ತಾರೆಂಬುದು ರಹಸ್ಯವಲ್ಲ. ಅಕ್ಬರುದ್ದೀನ್ ಓವೈಸಿ, ಕೆ.ಎಸ್. ಭಗವಾನ್, ಅಗ್ನಿಶ್ರೀಧರ್, ಅರ್ನಾಬ್ ಥರದವರು ಈ ಪಟ್ಟಿಗೆ ಸೇರುತ್ತಾರೆ. ಸಾಮಾಜಿಕ ನೆಮ್ಮದಿ, ಸಾಮರಸ್ಯ ಹಾಳುಗೆಡಹುವುದೇ ಇಂಥವರ ಹುನ್ನಾರವಾಗಿರುತ್ತದೆ. ಇವರ ಬಾಯಿಯಿಂದ ಇದಕ್ಕಿಂತಲೂ ಉತ್ತಮವಾದ, ಸಮಾಜಕ್ಕೆ ಶಕ್ತಿ, ನೆಮ್ಮದಿ ನೀಡುವ ಹೇಳಿಕೆಗಳು ಹರಿದುಬರುವುದೇ ಇಲ್ಲ. ಮನಸ್ಸಿನ ತುಂಬಾ, ತಲೆಯ ತುಂಬಾ ವಿಷವೇ ತುಂಬಿರುವಾಗ ಮುತ್ತಿನಂತಹ ಮಾತುಗಳು, ಅಮೃತದ ನುಡಿಗಳು ಹೇಗೆ ಹೊರಬಂದಾವು? ಬೆಳ್ಳುಳ್ಳಿ ತಿಂದರೆ ಬಾಯಿಂದ ಲವಂಗದ ಸುವಾಸನೆ ಹೊಮ್ಮಲು ಸಾಧ್ಯವೆ?
ಆದರೆ ಇನ್ನು ಕೆಲವರ ಬಗ್ಗೆ ಹೀಗೆ ಹೇಳುವಂತಿಲ್ಲ. ಅವರ ಮನಸ್ಸಿನಲ್ಲಿ ವಿಷ ತುಂಬಿಲ್ಲ. ತಲೆಯಲ್ಲೂ ತುಂಬಿಲ್ಲ. ಆದರೆ ಏನಾದರೊಂದು ಹೇಳಿಕೆ ನೀಡುವ ಮೂಲಕ ಪ್ರಸಿದ್ಧಿ ಗಿಟ್ಟಿಸಬೇಕು ಎಂಬ ಹುಂಬ ಹಂಬಲದಿಂದ ಅಸಂಬದ್ಧ ಹೇಳಿಕೆ ನೀಡುವುದುಂಟು. ಆದರೆ ಅದು ವಿವಾದ ಸೃಷ್ಟಿಸಿದಾಗ, ಗಾಬರಿಯಾಗಿ ತಾನು ಆ ಅರ್ಥದಲ್ಲಿ ಹೇಳಿದ್ದಲ್ಲ ಎಂದೋ ಅಥವಾ ತಪ್ಪು ಅರ್ಥ ಕೊಡುವ ಈ ಹೇಳಿಕೆಗಾಗಿ ನಾನು ವಿಷಾದಿಸುತ್ತೇನೆ ಎಂದೋ ಅವರು ತಕ್ಷಣ ತೇಪೆ ಹಾಕುವುದುಂಟು. ಸಾದ್ವಿ ನಿರಂಜನ ಜ್ಯೋತಿ, ರಾಹುಲ್ ಗಾಂಧಿ, ದಿಗ್ವಿಜಯ ಸಿಂಗ್, ಗಿರಿರಾಜ್ ಸಿಂಗ್ ಥರದವರು ಈ ಪಟ್ಟಿಗೆ ಸೇರುತ್ತಾರೆ.
ಈ ಎರಡೂ ಥರದವರು ಸಾಮಾಜಿಕ ಸಾಮರಸ್ಯಕ್ಕೆ, ಸಮಾಜದ ನೆಮ್ಮದಿಗೆ ಹುಳಿ ಹಿಂಡುವವರೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಥವರು ತಮ್ಮ ಅಸಂಬದ್ಧ ಹೇಳಿಕೆಗಳ ಮೂಲಕ ಸಮಾಜದಲ್ಲಿ ಗೊಂದಲ, ಗಡಿಬಿಡಿ, ವಿಘ್ನಸಂತೋಷವನ್ನು ನಿರ್ಮಿಸುತ್ತಲೇ ಇರುತ್ತಾರೆ. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು – ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದಂತಿರಬೇಕು ಎಂದು. ಬಸವಣ್ಣನವರು ಬಹಳ ಹಿಂದೆಯೇ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ… ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಎಂದು ಎಚ್ಚರಿಸಿದ್ದರು. ಮಾತು ಆಡಿದ ಮೇಲೆ, ಮುತ್ತು ಒಡೆದ ಮೇಲೆ ಏನೂ ಮಾಡುವಂತಿಲ್ಲ. ಅದನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಕಷ್ಟ. ಮಾತನಾಡಿದ ಮೇಲೆ ಏನೇ ಸ್ಪಷ್ಟನೆ ಕೊಟ್ಟರೂ ಮೊದಲು ಆಡಿದ ಮಾತಿನ ಪರಿಣಾಮ ಜನರ ಮನದಲ್ಲಿ ಅಚ್ಚಳಿಯದೆ ದಾಖಲಾಗಿರುತ್ತದೆ. ಅದನ್ನು ಅಷ್ಟು ಸುಲಭವಾಗಿ ಅಳಿಸುವುದು ಕಷ್ಟ.
***
ಪ್ರಗತಿಪರರು, ವಿಚಾರವಾದಿಗಳೆನಿಸಿಕೊಂಡವರು ತಮ್ಮನ್ನು ಸದಾ ಕಾಲ ಪ್ರಚಾರದ ಪ್ರಭಾವಳಿಯಲ್ಲಿ ಇಟ್ಟುಕೊಳ್ಳಲು ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಹಾಗೆ ಕೊಡದಿದ್ದರೆ ತಾವೆಲ್ಲಿ ಸಾರ್ವಜನಿಕವಾಗಿ ನಗಣ್ಯರಾಗಿ ಬಿಡುತ್ತೇವೋ ಎಂಬ ಭೀತಿ ಅವರಲ್ಲಿ ಕಾಡುತ್ತಿರುತ್ತದೆ. ಪ್ರಚಾರದಲ್ಲಿರದಿದ್ದರೆ ತಮ್ಮ ಅಸ್ತಿತ್ವವೇ ಕಳೆದುಹೋದೀತು ಎಂಬ ದಿಗಿಲು ಅವರಿಗೆ! ಅದರಲ್ಲೂ ಹಿಂದೂ ಧರ್ಮದ ವಿರುದ್ಧ, ಹಿಂದು ದೇವ-ದೇವತೆಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದರೆ ತಾವು ಸದಾಕಾಲ ಪ್ರಸಿದ್ಧಿ ಗಿಟ್ಟಿಸುತ್ತಿರಬಹುದು ಎಂಬ ರಹಸ್ಯ ಈ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತು. ಶ್ರೀರಾಮನನ್ನು, ಭಗವದ್ಗೀತೆಯನ್ನು, ರಾಮಾಯಣ-ಮಹಾಭಾರತಗಳನ್ನು ವಿನಾಕಾರಣ ಟೀಕಿಸುತ್ತಿದ್ದರೆ ತಮ್ಮ ಟಿಆರ್ಪಿ ಹೆಚ್ಚುತ್ತದೆ ಎಂಬ ಭ್ರಮೆ ಇವರೆಲ್ಲರದು.
ಇದು ಈಗಲ್ಲ, ಹಿಂದಿನಿಂದಲೂ ಇದೆ. ಶ್ರೀರಾಮನನ್ನು, ರಾಮಾಯಣವನ್ನು ಟೀಕಿಸಿದವರಲ್ಲಿ ಭಗವಾನ್, ಅಗ್ನಿಶ್ರೀಧರ್, ಜಿ.ಕೆ. ಗೋವಿಂದರಾವ್ ಅವರೇ ಮೊದಲಿಗರಲ್ಲ. ದ್ರಾವಿಡ ಚಳುವಳಿ ಹುಟ್ಟುಹಾಕಿದ ಪೆರಿಯಾರ್ ರಾಮಸ್ವಾಮಿ ಹಿಂದೆ ಸೇಲಂನಲ್ಲಿ ಶ್ರೀರಾಮ ಸೀತೆಯ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದರು. ಕನ್ನಡದ ಸಾಹಿತಿ ಪೋಲಂಕಿ ರಾಮಮೂರ್ತಿ ‘ಸೀತಾಯಣ’ ಎಂಬ ಕೃತಿಯಲ್ಲಿ ಸೀತೆಯನ್ನು ವೇಶ್ಯೆಗೆ ಹೋಲಿಸಿ ಸೀತೆಯ ಮಾನ ಹರಾಜು ಹಾಕಿದ್ದರು. ಸೋಜಿಗವೆಂದರೆ ಶ್ರೀರಾಮನನ್ನು, ರಾಮಾಯಣವನ್ನು ಹೇಯವಾಗಿ ಟೀಕಿಸಿದ ಪೆರಿಯಾರ್ ರಾಮಸ್ವಾಮಿ, ಪೋಲಂಕಿ ರಾಮಮೂರ್ತಿ ಅವರೆಲ್ಲ ಇಟ್ಟುಕೊಂಡಿದ್ದು ಮಾತ್ರ ಅದೇ ಶ್ರೀರಾಮನ ಹೆಸರು! ಕನಿಷ್ಠ ಪಕ್ಷ ತಮ್ಮ ಹೆಸರನ್ನಾದರೂ ಅವರು ಬದಲಿಸಿಕೊಳ್ಳಬಹುದಿತ್ತು. ಪೆರಿಯಾರ್ ರಾಮಸ್ವಾಮಿ, ಪೋಲಂಕಿ ರಾಮಮೂರ್ತಿ, ಭಗವಾನ್ ಮೊದಲಾದ ‘ಹಿಂದು ಕೋಮುವಾದ’ದ ದಟ್ಟ ವಾಸನೆ ಹೊಡೆಯುವ ಹೆಸರಿನ ಬದಲಿಗೆ ಕಡ್ಡಿಪುಡಿ, ತುರುಚೇಗಿಡ, ತಂಬಾಕು, ಜಾಲಿಮುಳ್ಳು xxx ಇತ್ಯಾದಿ ಜಾತ್ಯತೀತ ಭಾವನೆ ಬಿಂಬಿಸುವ ಹೆಸರುಗಳನ್ನು ಇಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅವರ ಜಾತ್ಯತೀತತೆಗೆ ಆಗ ಭಂಗ ಬರುತ್ತಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಇಡೀ ದೇಶದಲ್ಲಿ ಸ್ವಚ್ಛತೆಯ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ. ಕೇವಲ ದೇಶ ಸ್ವಚ್ಛವಾದರೆ ಸಾಲದು. ದೇಶವಾಸಿಗಳ, ಅದರಲ್ಲೂ ಪ್ರತಿಷ್ಠಿತರ, ಗಣ್ಯಾತಿಗಣ್ಯರ, ಸೆಲೆಬ್ರಿಟಿಗಳ ಕೆಟ್ಟುಕೆರಹಿಡಿದ ಕೊಳಕು ಮನಸ್ಸುಗಳು, ವಿಷ ಉಗುಳುವ ದರಿದ್ರ ನಾಲಿಗೆಗಳು ಮೊದಲು ಸ್ವಚ್ಛವಾಗಬೇಕು. ಅದಕ್ಕಾಗಿ ವಿವೇಕದ, ತಿಳಿವಳಿಕೆಯ ಟಂಗ್ ಕ್ಲೀನರ್ ಹಾಕಿ ಇಂತಹ ನಾಲಿಗೆಗಳನ್ನು ಗಸಗಸ ಉಜ್ಜಬೇಕು. ಸ್ವಚ್ಛ ಭಾರತ ಅಭಿಯಾನದ ಜೊತೆಗೆ, ಸ್ವಚ್ಛ ನಾಲಿಗೆ ಆಂದೋಲನವನ್ನೂ ಹಮ್ಮಿಕೊಳ್ಳಬೇಕು. ಸಾಮಾಜಿಕ ನೆಮ್ಮದಿಗೆ, ಸಾಮರಸ್ಯದ ಬದುಕಿಗೆ ಇದು ಅಗತ್ಯವೆಂದು ನಿಮಗನಿಸುವುದಿಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.