https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 21st September 2021

×
Home About Us Advertise With s Contact Us

ಕಾರ್ಮಿಕ ಕಲ್ಯಾಣದ ಅಂಬೇಡ್ಕರ್ ಕನಸು

ಕಾರ್ಮಿಕ ದಿನಾಚರಣೆಯಂದು ಭಾರತದ ಕಾರ್ಮಿಕರು ತಮ್ಮ ಕಲ್ಯಾಣದ ಕನಸಿನ ಸಾಕಾರದ ಹಿನ್ನೆಲೆಯಲ್ಲಿ ಯಾರನ್ನು ನೆನಪು ಮಾಡಿಕೊಳ್ಳಬೇಕು? ಕಾರ್ಲ್ ಮಾರ್ಕ್ಸ್ ರನ್ನೋ? ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೋ? ಈ ಪ್ರಶ್ನೆಯು ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು. ಕಾರ್ಮಿಕ ಕಲ್ಯಾಣಕ್ಕೂ ಅಂಬೇಡ್ಕರ್ ಗೂ ಏನು ಸಂಬಂಧ? ಕಾರ್ಮಿಕ ಸಂಘಟನೆ, ಚಳವಳಿ, ಹಕ್ಕುಗಳ ಕುರಿತಾದ ಮಾತುಗಳೆಲ್ಲಾ ಕಾರ್ಲ್ ಮಾರ್ಕ್ಸ್ ನ ಕಡೆಗೆ ಹೆಚ್ಚಾಗಿ ಹೊರಳಿಕೊಳ್ಳುತ್ತದೆ. ಆದರೆ ಭಾರತದ ಕಾರ್ಮಿಕರು ಮಾರ್ಕ್ಸ್ ಗಿಂತ ಹೆಚ್ಚು ಸ್ಮರಿಸಬೇಕಾದ ಪ್ರಾಥಃಸ್ಮರಣೀಯ ವ್ಯಕ್ತಿ ಎಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಬಾಬಾಸಾಹೇಬರ ಬದುಕಿನ ಮಹತ್ವದ ಹೋರಾಟಗಳಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿನ ಹೋರಾಟವೂ ಒಂದಾಗಿತ್ತು. ಆದರೆ ನಮ್ಮ ವಿದ್ವತ್ ವಲಯವಾಗಲೀ, ಚಳವಳಿಗಾರರೇ ಆಗಲಿ ಅಂಬೇಡ್ಕರ್ ಎಂದಾಗ ದಲಿತ ನಾಯಕ ಎಂದು ಬ್ರಾಂಡ್ ಮಾಡಿದ ಪರಿಣಾಮ ಅಂಬೇಡ್ಕರ್ ಅವರ ವ್ಯಕ್ತಿತ್ವದ ಬಹು ಆಯಾಮಗಳು ಮರೆಗೆ ಸಂದಿದೆ. ಅಂತಹ ಒಂದು ಆಯಾಮವೆಂದರೆ ಅಂಬೇಡ್ಕರ್ ಕಾರ್ಮಿಕ ಸಮುದಾಯದ ಏಳ್ಗೆಗಾಗಿ ನಡೆಸಿದ ಪ್ರಯತ್ನ. ಈ ಮುಖವನ್ನು ಅಂಬೇಡ್ಕರ್‍ವಾದಿಗಳೂ ಪರಿಚಯಿಸುವುದಿಲ್ಲ, ಕಾರ್ಮಿಕ ಚಳವಳಿಯ ನೇತಾರರೂ ಸ್ಮರಿಸುವುದಿಲ್ಲ.

ಅಂಬೇಡ್ಕರ್ 1942 -1946ರಲ್ಲಿ ಗವರ್ನರ್ ಜನರಲ್ ಅವರ ಕಾರ್ಯಕಾರಿ ಪರಿಷತ್‍ನ ಸದಸ್ಯರಾಗಿ ಕಾರ್ಮಿಕ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮಂತ್ರಿಗಳಾಗಿದ್ದರು. ಅವರು ಈ ಕಾಲಾವಧಿಯಲ್ಲಿ ಭಾರತದ ಕಾರ್ಮಿಕರ ಬದುಕಿನ ಸಂಕಷ್ಟಗಳನ್ನು ಪರಿಹರಿಸುವ ಹಲವು ಕಾನೂನುಗಳನ್ನು ರೂಪಿಸಿ, ಶ್ರಮಿಕರ ಬದುಕಿಗೆ ಬೆಳಕು ತಂದ ಸೂರ್ಯನೇ ಆಗಿದ್ದರು. ಅವರು ಕಾರ್ಮಿಕ ಶಕ್ತಿಯ ಬೆಲೆಯನ್ನು ಅರಿತ ವಿರಳ ನಾಯಕರುಗಳಲ್ಲಿ ಒಬ್ಬರು. ರಾಷ್ಟ್ರವೊಂದರ ಕಲ್ಯಾಣ ಅದು ಕಾರ್ಮಿಕ ಶಕ್ತಿಯನ್ನು ಅವಲಂಭಿಸಿದೆ , ಹಾಗಾಗಿ ಕಾರ್ಮಿಕರೇ ಕಲ್ಯಾಣ ರಾಷ್ಟ್ರವೊಂದರ ನಿಜವಾದ ಶಕ್ತಿ ಎಂದು ಗುರುತಿಸಿದ್ದರು. ‘‘ಹಣ ನೀಡಿ ಕಾರ್ಮಿಕರನ್ನು ಪಡೆದರೂ ಅವರನ್ನು ಬೇಕಾದಂತೆ ನಡೆಸಿಕೊಳ್ಳುವಂತಿಲ್ಲ.ಕಾರ್ಮಿಕರೂ ಮನುಷ್ಯರೇ. ಮಾನವ ಹಕ್ಕು ಏನೇನಿದೆಯೋ ಅದೆಲ್ಲವೂ ಕಾರ್ಮಿಕರಿಗೂ ಇರಬೇಕಾದದ್ದೇ’’ ಎಂದು ಬಲವಾಗಿ ಪ್ರತಿಪಾದಿಸಿದವರು ಅಂಬೇಡ್ಕರ್. ವೈಸರಾಯ್ ಕಾರ್ಯಕಾರಿ ಪರಿಷತ್‍ನ ಸದಸ್ಯರಾಗಿದ್ದಾಗ ಭಾರತದ ಕಾರ್ಮಿಕರ ಕಲ್ಯಾಣದ ಕನಸನ್ನು ಸಾಧಿಸುವ ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಕಾರ್ಮಿಕರ ಹಿತವನ್ನು ಕಾಪಾಡುವ ಕಾನೂನುಗಳನ್ನು ರೂಪಿಸಿದರು. ನಮ್ಮ ದೇಶದ ಕಾರ್ಮಿಕ ನೀತಿಗಳು ರೂಪುಪಡೆದು, ಅದು ಸಾಂಸ್ಥಿಕ ರೂಪದಲ್ಲಿ ಕಾರ್ಯನಿರ್ವಹಿಸಲು ಕಾರಣರಾದವರು ಬಾಬಾಸಾಹೇಬರು.

ಕಾರ್ಮಿಕ ಹೋರಾಟ, ಕಾರ್ಮಿಕ ಸಂಘಟನೆಗಳು ಎಂದಾಗಲೆಲ್ಲಾ ಅದು ಕಾರ್ಮಿಕರು ಮತ್ತು ಮಾಲಿಕರ ನಡುವಿನ ಸಂಘರ್ಷದ ಸ್ವರೂಪವನ್ನೇ ಪಡೆಯುತ್ತದೆ. ಅದಕ್ಕೆ ಮುಖ್ಯ ಕಾರಣ ಕಮ್ಯುನಿಷ್ಟರು. ಯಾಕೆಂದರೆ ಕಾರ್ಮಿಕರ ನಡುವೆ ಸಂಘಟನೆಗಳನ್ನು ಮೊದಲಿಗೆ ಕಟ್ಟಿಕೊಂಡವರು ಕಮ್ಯುನಿಷ್ಟರೇ. ಆದರೆ ಕಮ್ಯುನಿಷ್ಟರ ದೃಷ್ಟಿಕೋನದಲ್ಲೇ ದೋಷವಿದೆ. ಅವರಿಗೆ ಸಂಘರ್ಷದ ಹೊರತಾಗಿ ಸಮನ್ವಯದ ಕಲ್ಪನೆಯೇ ಇಲ್ಲ. ಆದರೆ ಅಂಬೇಡ್ಕರ್ ಮೊದಲಬಾರಿಗೆ ಸರ್ಕಾರ, ಮಾಲಿಕರು ಮತ್ತು ಕಾರ್ಮಿಕರ ನಡುವೆ ಸಮನ್ವಯವನ್ನು ಸಾಧಿಸುವ ಮಹತ್ವಾಕಾಂಕ್ಷೆಯನ್ನು ಸಾಧಿಸುತ್ತಾರೆ. ಹಾಗೆಂದು ಅವರು ಕಾರ್ಮಿಕರಿಗಿರುವ ಮುಷ್ಕರದ , ಪ್ರತಿಭಟನೆಯ ಹಕ್ಕುಗಳನ್ನು ನಿರಾಕರಿಸುವುದಿಲ್ಲ. ಹಾಗೆ ನೋಡಿದರೆ 1937ರಲ್ಲಿ ರಚಿಸಲಾಗಿದ್ದ ‘ Industrial Dispute Bill -1937’ ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡಿದ್ದ ಕಾರಣಕ್ಕಾಗಿಯೇ ಅದನ್ನು ವಿರೋಧಿಸಿದವರು ಅಂಬೇಡ್ಕರ್. ಅವರು ಕಾರ್ಮಿಕರಿಗೆ ಮತ್ತೆ ಮತ್ತೆ ಕಮ್ಯುನಿಷ್ಟರಿಂದ ದೂರವಿರಿ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಕಮ್ಯುನಿಷ್ಟ್ ಕಾರ್ಮಿಕ ಸಂಘಗಳು ಹೇಗೆ ದಲಿತ ಕಾರ್ಮಿಕ ವಿರೋಧಿಯಾಗಿದ್ದಾವೆ ಎನ್ನುವುದನ್ನು ನಿದರ್ಶನ ಸಹಿತ ತೋರಿಸುತ್ತಾರೆ. ಮುಂಬೈ ಮಹಾನಗರದ ಬಟ್ಟೆಗಿರಣಿಗಳಲ್ಲಿ ದಲಿತ ಕಾರ್ಮಿಕರಿಗೆ ಉತ್ತಮ ದರ್ಜೆಯ ಉದ್ಯೋಗವಾಗಿದ್ದ ಗಿರಣಿಯೊಳಗೆ ಬಟ್ಟೆಯನ್ನು ನೇಯುವ ಕೆಲಸಗಳನ್ನು ನಿರಾಕರಿಸಲಾಗಿತ್ತು. ಕಮ್ಯುನಿಷ್ಟರೇ ಪ್ರಬಲವಾಗಿದ್ದ ಈ ಕಾರ್ಮಿಕ ಸಂಘಗಳಲ್ಲಿ ಅಂಬೇಡ್ಕರ್ ಬಟ್ಟೆ ಗಿರಣಿಯ ಎಲ್ಲಾ ಕೆಲಸಗಳಿಗೂ ದಲಿತ ಕಾರ್ಮಿಕರನ್ನು ಮುಕ್ತವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಾರೆ. ಆಗ ಇದೇ ಕಮ್ಯುನಿಷ್ಟ್ ಕಾರ್ಮಿಕ ಸಂಘಗಳು ದಲಿತರನ್ನು ಎಲ್ಲಾ ಕೆಲಸಗಳಿಗೆ ಗಿರಣಿಯೊಳಗೆ ಬಿಟ್ಟುಕೊಳ್ಳುವುದನ್ನು ವಿರೋಧಿಸಿದ್ದವು!!.

ಕಾರ್ಮಿಕ ಸಮುದಾಯದೊಳಗೆ ಹೆಚ್ಚು ಶೋಷಣೆಗೊಳಗಾದವರು ದಲಿತ ಕಾರ್ಮಿಕರು ಎಂದು ಗುರುತಿಸಿ ಅವರ ಹಕ್ಕುಗಳ ಪರವಾಗಿ ಹೋರಾಡಿದಾಗ, ಕಮ್ಯುನಿಷ್ಟ್ ಕಾರ್ಮಿಕ ನಾಯಕರು ಈ ಹೋರಾಟ ಕಾರ್ಮಿಕರನ್ನು ವಿಭಜಿಸುವ ಪ್ರಯತ್ನ ಎಂದು ಅಂಬೇಡ್ಕರ್ ಅವರನ್ನು ನಿಂದಿಸಿದ್ದರು. 1945ರಲ್ಲಿ ಉಪನ್ಯಾಸ ಒಂದರಲ್ಲಿ ಮಾತನಾಡುತ್ತಾ ಕಾರ್ಮಿಕರಿಗೆ ನೀಡಿದ ಸಲಹೆ “ ನೀವು ಕಮ್ಯುನಿಷ್ಟರಿಂದ ಜಾಗರೂಕರಾಗಿರಿ. ಏಕೆಂದರೆ ಕಳೆದ ಕೆಲವು ವರ್ಷಗಳ ಅವರ ಕೃತಿಯ ಮೇಲಿಂದ ಅವರು ಕಾರ್ಮಿಕರ ಅಹಿತವನ್ನು ಸಾಧಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಕಾರ್ಮಿಕರ ವೈರಿಗಳು ಎಂದು ನನಗನ್ನಿಸುತ್ತಿದೆ. ಕಾಂಗ್ರೆಸ್ ಬಂಡವಾಳದಾರರ ಸಂಸ್ಥೆಯೆಂದು ಕಮ್ಯುನಿಷ್ಟರು ಹೇಳುತ್ತಾರೆ. ಅದೇ ಕಾಲಕ್ಕೆ ಕಾರ್ಮಿಕರು ಅಲ್ಲಿ ಪ್ರವೇಶ ಮಾಡುವಂತೆ ಉಪದೇಶ ಮಾಡುತ್ತಾರೆ! ಹಿಂದೂಸ್ಥಾನದ ಕಮ್ಯುನಿಷ್ಟರಿಗೆ ಅವರದ್ದೇ ಆದ ಒಂದು ಧೋರಣೆಯಿಲ್ಲ.ಅವರಿಗೆ ಎಲ್ಲ ಸ್ಫೂರ್ತಿ ರಶಿಯದಿಂದಲೇ ಸಿಗುತ್ತದೆ. ಕಮ್ಯುನಿಷ್ಟರಿಗೆ ಭಾರತೀಯ ಕಾರ್ಮಿಕರ ಬಗೆಗೆ ಆತ್ಮೀಯತೆ ಇದೆಯೇ? ನೀವು ಕಮ್ಯುನಿಷ್ಟ್‍ರಿಂದ ನಿರ್ಲಿಪ್ತರಾಗುಳಿಯಿರಿ. ಅವರಿಗೆ ನಮ್ಮ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್ನಿನಲ್ಲಿ ಅವಕಾಶ ಕೊಡಬೇಡಿ” ಎಂದಿದ್ದರು. ಕಾರ್ಮಿಕ ಸಂಘಟನೆಯ ನಿಜವಾದ ಅಗತ್ಯ ಇರುವುದು ಭಾರತಕ್ಕೆ. ಆದರೆ ಭಾರತದಲ್ಲಿರುವ ಕಾರ್ಮಿಕ ಸಂಘಟನೆಗಳು ಕೊಳೆತು ನಾರುವ ಹೊಂಡವಾಗಿದೆ ಎನ್ನುತ್ತಾ, ಇದಕ್ಕೆ ಕಾರಣವನ್ನು ಕಂಡುಕೊಂಡ ಅಂಬೇಡ್ಕರ್ ಈ ದೋಷದ ಮೂಲವನ್ನು ಗುರುತಿಸಿದ್ದು ಕಮ್ಯುನಿಸಂನಲ್ಲಿ. “ಕಮ್ಯುನಿಸಂ ತತ್ವದ ಮೇಲೆ ನಂಬಿಕೆ ಇಡುವ ಕಾರ್ಮಿಕ ನಾಯಕತ್ವ ಬೇರೆಯದೇ ಮಾರ್ಗವನ್ನು ಹಿಡಿದಿದ್ದಾರೆ. ಕಮ್ಯುನಿಷ್ಟರಿಗಿಂತ ಕಾರ್ಮಿಕರನ್ನು ಹೆಚ್ಚು ನಾಶಮಾಡಿದವರು ಮತ್ತೊಬ್ಬರು ಇರಲಿಕ್ಕಿಲ್ಲ” ಎನ್ನುತ್ತಾರೆ.

ಕಾರ್ಮಿಕ ಸಂಘಟನೆಗಳ ಪತನದ ಕಾರಣವನ್ನು ಅವಲೋಕಿಸುತ್ತಾ, “ಇಂದು ಕಾರ್ಮಿಕ ಸಂಘಟನೆಯ ಬೆನ್ನೆಲುಬು ಯಾವುದಾದರೂ ಕಾರಣಕ್ಕೆ ಮುರಿದಿದ್ದರೆ, ಮಾಲಿಕರು ಯಾವುದಾದರೂ ಕಾರಣಕ್ಕೆ ಏಳ್ಗೆಯನ್ನು ಹೊಂದಿದ್ದರೆ, ಅದರ ಏಕೈಕ ಕಾರಣ ಒಂದು ಕಾಲದಲ್ಲಿ ಕಾರ್ಮಿಕ ಸಂಘಟನೆಯ ಮೇಲೆ ಕಮ್ಯುನಿಷ್ಟರ ಪೂರ್ಣಹಿಡಿತವಿತ್ತು.ಅವರು ಅದರ ದುರ್ಬಳಕೆ ಮಾಡಿಕೊಂಡರು. ಕಾರ್ಮಿಕರಲ್ಲಿ ಅಸಂತೋಷ ನಿರ್ಮಾಣ ಮಾಡುವುದೇ ಅವರ ಧ್ಯೇಯವಿದ್ದಂತೆ ತೋರುತ್ತದೆ. ಯಾಕೆಂದರೆ ಅತೃಪ್ತ ಕಾರ್ಮಿಕ ಸಂಘಟನೆಯ ಮೂಲಕ ಕ್ರಾಂತಿಮಾಡಿ, ಕಾರ್ಮಿಕ ರಾಜ್ಯ ಸ್ಥಾಪನೆ ವÁಡಬಹುದು ಎನ್ನುವುದು ಅವರ ನಂಬಿಕೆ. ಆದರೆ ಕ್ರಾಂತಿ ಯಶಸ್ವಿಯಾಗಲು ಬರೀ ಅಸಂತೋಷವಷ್ಟೇ ಸಾಲದು.ನ್ಯಾಯ, ಅಗತ್ಯ ಮತ್ತು ಸಾಮಾಜಿಕ , ರಾಜಕೀಯ ಹಕ್ಕಿನ ಗಂಭೀರ ಹಾಗೂ ಪರಿಪೂರ್ಣ ಅರಿವಿನ ಅಗತ್ಯವಿದೆ. ಆದೇ ಕಮ್ಯುನಿಷ್ಟರು ಇದನ್ನೆಲ್ಲಾ ಗಾಳಿಗೆ ತೂರಿ ಕಾರ್ಮಿಕರಲ್ಲಿ ಅಸಂತೋಷ ನಿರ್ಮಾಣ ಮಾಡುವ ಒಂದು ದೈವೀ ಸಾಧನವೆಂದೇ ಮುಷ್ಕರವನ್ನು ಕಂಡಿದ್ದಾರೆ. ಇದರಿಂದ ಅವರ ಮುಖ್ಯ ಶಕ್ತಿ ಮತ್ತು ಸತ್ತೆಯ ಮುಖ್ಯ ಸ್ತ್ರೋತವಾಗಿದ್ದ ಕಾರ್ಮಿಕ ಸಂಘಟನೆಯನ್ನು ಖಂಡಿತವಾಗಿಯೂ ನಾಶಮಾಡಿದರು. ಬೆಂಕಿ ಹಚ್ಚುವಾಗ ಅದು ತನ್ನ ಮನೆಗೂ ವ್ಯಾಪಿಸಿಕೊಳ್ಳಬಹುದು ಎಂಬ ಪ್ರಜ್ಞೆಯೂ ಇಲ್ಲದ ಕಮ್ಯುನಿಷ್ಟ್ ಮನುಷ್ಯ ಕಿಚ್ಚು ಹಚ್ಚುವ ವ್ಯಕ್ತಿಯೆಂದೇ ಸಾಬೀತಾಗಿದ್ದಾನೆ” ಎಂದು ಹೇಳುವ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿರುವ ಮುಖ್ಯ ವೇದನೆ ಎಂದರೆ ಕಮ್ಯುನಿಷ್ಟರು ಸೇರಿ ಕಾರ್ಮಿಕ ಹೋರಾಟವನ್ನು ನಾಶಗೊಳಿಸಿದ್ದರು ಎಂದೇ.

ಹಾಗಾದರೆ ಅಂಬೇಡ್ಕರ್ ಅವರ ರಚನಾತ್ಮಕ ಕೊಡುಗೆ ಭಾರತೀಯ ಕಾರ್ಮಿಕ ವರ್ಗಕ್ಕೆ ಏನು? ಈ ಕಾರ್ಮಿಕ ದಿನಾಚರಣೆಯ ದಿನವೂ ಯಾರೂ ಇದನ್ನು ಸ್ಮರಿಸಿಕಳ್ಳುವುದಿಲ್ಲ. ಅಂಬೇಡ್ಕರ್ ಆಶಯವಿದ್ದುದೇ ಕಾರ್ಮಿಕ ಕಲ್ಯಾಣದಲ್ಲಿ. ಭಾರತದಲ್ಲಿ ಕಾರ್ಮಿಕ ಹಕ್ಕುಗಳನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಬಹುದಾದ ನಿಜವಾದ ಕಾರ್ಮಿಕ ನಾಯಕ ಎಂದರೆ ಅಂಬೇಡ್ಕರ್. ಬಹುಶಃ ಅಂಬೇಡ್ಕರ್ ಈ ಇಲಾಖೆಯಲ್ಲಿ ಕೈಯಾಡಿಸದೇ ಹೋಗಿದ್ದರೆ ನಮ್ಮ ದೇಶದ ಕಾರ್ಮಿಕರ ಬದುಕಿನ ಕಲ್ಯಾಣದ ಕನಸು ಈ ಪ್ರಮಾಣದಲ್ಲಿ ಎತ್ತರಿಸಲ್ಪಡುತ್ತಿರಲಿಲ್ಲ.ನಮ್ಮ ಕಾರ್ಮಿಕರ ಪ್ರತಿಯೊಂದು ಹಕ್ಕುಗಳ ಹಿಂದೆ ಅವರ ಪರಿಶ್ರಮವಿದೆ.

ಕಾರ್ಮಿಕ ಇಲಾಖೆಯ ಹೊಣೆ ಹೊತ್ತ ಅಂಬೆಡ್ಕರ್ ಕಾರ್ಮಿಕ ಇಲಾಖೆಗೆ ಬೇಕಾದ ನೀತಿ ನಿಯಮಾವಳಿಗಳನ್ನು ರೂಪಿಸುತ್ತಾ, ಒಂದೊಂದು ವೃತ್ತಿಕ್ಷೇತ್ರದ ಕಾರ್ಮಿಕರಿಗೆ ಸಂಬಂಧಿಸಿದಂತೆ ವೃತ್ತಿ ಭದ್ರತೆ, ಕಾರ್ಮಿಕ ಹಕ್ಕುಗಳಿಗೆ ರಕ್ಷಣೆ, ಗೌರವ ಪೂರ್ವಕವಾಗಿ ವೃತ್ತಿ ನಿರ್ವಹಿಸಲು ಬೇಕಾದ ಕಾನೂನುಗಳನ್ನು ರೂಪಿಸುವಲ್ಲಿ ಅವರ ಪರಿಶ್ರಮವಿದೆ. ಕಾರ್ಮಿಕರ ಗೌರವಕ್ಕೆ ಚ್ಯುತಿಯಾಗದಂತೆ ರೂಪಿಸಿದ ನಿಯಮಗಳ ಆಶಯ ಸ್ವಾತಂತ್ರ್ಯೋತ್ತರ ಭಾರತದಲ್ಲೂ ಫಲಕೊಟ್ಟಿದೆ. ಕಾರ್ಮಿಕ ಹಕ್ಕುಗಳು ಸುರಕ್ಷಿತವಾಗಿದೆ ಎಂದರೆ ಅದರ ಹಿಂದೆ ಬಾಬಾಸಾಹೆಬರ ಚಿಂತನೆ ಇದೆ. 14 ಗಂಟೆಗಳ ಕಾಲ ನಿರಂತರವಾಗಿ ಗುಲಾಮರಂತೆ ದುಡಿಯಬೇಕಾಗಿದ್ದ ಕಾರ್ಮಿಕರಿಗೆ ಆರೋಗ್ಯಪೂರ್ಣ ದುಡಿಮೆಯ ಅವದಿಯನ್ನು 8 ಗಂಟೆಗಳಿಗೆ ನಿಗದಿಪಡಿಸಿದ ನಿಯಮ ಅಂಬೇಡ್ಕರ್ ಅವರ ದೂರದೃಷ್ಟಿಗೆ ಮತ್ತು ಕಾರ್ಮಿಕ ಕಾಳಜಿಗೆ ಸಾಕ್ಷಿ ಎನ್ನಬಹುದು. ದುಡಿಯುವ ಜನರಿಗೆ ಒಂದೆಡೆ ಅಸುರಕ್ಷಿತವಾದ ವಾತಾವರಣದಲ್ಲಿ ದುಡಿಯಬೇಕಾಗಿದ್ದ ಅನಿವರ್ಯತೆ, ಇನ್ನೊಂದೆಡೆ ಗರಿಷ್ಠ ಅವಧಿಯ ದುಡಿಮೆ, ಇವುಗಳ ಜತೆಗೆ ಮಹಿಳಾ ಕಾರ್ಮಿಕರಿಗಂತೂ ಅಸ್ಪಷ್ಟ ಭವಿಷ್ಯ ! ಮಹಿಳಾ ಕಾರ್ಮಿಕರ ಸುರಕ್ಷಿತತೆ, ಅವರ ಉದ್ಯೋಗ ಭದ್ರತೆಗೆ ಯಾವ ಕಾನೂನುಗಳೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ದುಡಿಯುವ ಮಹಿಳೆಯರಿಗೆ ಎಂಟು ವಾರಗಳ ವೇತನ ಸಹಿತವಾದ ಹೆರಿಗೆ ರಜೆಯನ್ನು ನೀಡಿ ತಾಯ್ತನದ ವಿಶ್ರಾಂತಿಯ ಅವಕಾಶವನ್ನು ಒದಗಿಸಿದವರು ಅಂಬೇಡ್ಕರ್. ಕಾರ್ಮಿಕ ಕಲ್ಯಾಣ ನಿಧಿಯ ಪರಿಕಲ್ಪನೆಯನ್ನು ಜಾರಿಗೊಳಿಸಿದರು. ಸಮಾನ ದುಡಿಮೆಗೆ ಸಮಾನ ವೇತನದ ಜಾರಿಯು ಮೊದಲ ಬಾರಿಗೆ ಸಾಧ್ಯವಾದುದು ಭವಿಷ್ಯದ ಭಾರತದ ಸಮಾನತೆಯ ಕನಸಿಗೆ ನೀರೆರೆದಂತಾಯಿತು.

ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ತಾವು ಕಟ್ಟಿಕೊಳ್ಳುವ ಟ್ರೇಡ್ ಯುನಿಯನ್‍ಗಳಿಗೆ ಮಾನ್ಯತೆ ಸಿಗುವಂತೆ ಮಾಡಿದ್ದು ಮಾತ್ರವಲ್ಲದೆ, ಕಾರ್ಮಿಕ ಒಕ್ಕೂಟಗಳ ನೋಂದಣಿ,ಪ್ರತಿಭಟನೆಯ ಹಕ್ಕುಗಳೂ ಸೇರಿದಂತೆ ಕಾರ್ಮಿಕ ಧ್ವನಿಗೆ ಮನ್ನಣೆ ನೀಡಿ ಉಳಿಸಿದರು. ಕಾರ್ಮಿಕರಿಗೆ ಪ್ರತಿಭಟಿಸುವ ಹಕ್ಕು ಇಲ್ಲದೆ ಇರುವುದು ಎಂದರೆ ಅದು ಗುಲಾಮಿತನಕ್ಕೆ ಸಮ ಎನ್ನುತ್ತಾರೆ. 1942ರಲ್ಲಿ ಮೊದಲ ಬಾರಿಗೆ ಜಂಟಿ ಕಾರ್ಮಿಕ ಸಮ್ಮೇಳನವನ್ನು ಸಂಘಟಿಸಿದಾಗ, ಅಲ್ಲಿ ಸರ್ಕಾರದ ಪ್ರತಿನಿಧಿಗಳ ಜತೆಗೆ ಮಾಲಿಕರು ಮತ್ತು ಕಾರ್ಮಿಕರ ಪ್ರತಿನಿಧಿಗಳಿಗೆ ಅವಕಾಶ ನೀಡಲಾಯಿತು. ಸರ್ಕಾರ, ಮಾಲಿಕರು ಮತ್ತು ಕಾರ್ಮಿಕರು ಸೇರಿದ ತ್ರಿಪಕ್ಷೀಯ ಸಂಬಂಧವು ದೇಶದ ಆರ್ಥಿಕ ರಚನೆಯಲ್ಲಿ ಮಹತ್ವದ ಸ್ಥಾನವನ್ನು ವಹಿಸುತ್ತದೆ ಎನ್ನುವುದನ್ನು ಕಂಡುಕೊಂಡಿದ್ದರು. ಈ ತ್ರಿಪಕ್ಷೀಯ ಸಮ್ಮೇಳನ ‘ದೃಷ್ಟಿಕೋನದಲ್ಲಿ ಮಾಡಿಕೊಂಡ ಮೂಲಭೂತ ಪರಿವರ್ತನೆ’ ಎಂದು ಗುರುತಿಸುತ್ತಾರೆ. ಈ ತ್ರಿಪಕ್ಷೀಯ ಸಮ್ಮೇಳನ ಕಾರ್ಮಿಕ ಪ್ರತಿನಿಧಿಗಳಿಗೆ ಮಾಲಿಕರ ಪ್ರತಿನಿಧಿಗಳೊಂದಿಗೆ ಬೇಟಿಯಾಗುವ ಅತಿಮುಖ್ಯ ವಿಷಯಗಳನ್ನು ಚರ್ಚಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಒದಗಿಸಿತ್ತು. ಟ್ರೇಡ್ ಯುನಿಯನ್‍ಗಳು ಸರ್ಕಾರದ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಎಷ್ಟು ಸಹಕಾರಿ ಎನ್ನುವುದನ್ನು ಗುರುತಿಸಿದ್ದರು. ಇಡೀ ದೇಶಕ್ಕೆ ಅನ್ವಯವಾಗುವ ಏಕರೂಪದ ಕಾರ್ಮಿಕ ಕಾನೂನಿನ ಅವಶ್ಯಕತೆಯನ್ನು ಪ್ರತಿಪಾದಿಸುತ್ತಾರೆ. ಅಂಬೇಡ್ಕರ್ ಪ್ರಕಾರ ಕೇವಲ ಕೆಲಸದ ವಾತಾವರಣವು ಉತ್ತಮವಾಗಿರುದರಿಂದ ಕಾರ್ಮಿಕರು ತೃಪ್ತರಾಗುವುದಿಲ್ಲ.ಅವರಿಗೆ ಬೇಕಾದದ್ದು ಉತ್ತಮ ಬದುಕು. ಕಾರ್ಮಿಕರ ಪ್ರಕಾರ ಸ್ವಾತಂತ್ರ್ಯ ಎಂದರೆ ಸಂಯಮದ ಅಭಾವ ಎಂಬ ನೇತ್ಯಾತ್ಮಕ ಭಾವನೆಯಲ್ಲ, ಅದು ತುಂಬಾ ಇತ್ಯಾತ್ಮಕವಾದದ್ದು ಎನ್ನುತ್ತಾರೆ. ಹೀಗೆ ಕಾರ್ಮಿಕರ ಬದುಕಿಗೆ ಸುರಕ್ಷತೆಯನ್ನು ನೀಡುವ ಪ್ರಯತ್ನ, ಅದಕ್ಕಾಗಿ ಕಾರ್ಮಿಕರು ಪ್ರತಿಭಟಿಸಲೂ ಅವಕಾಶ, ಅವರ ಏಳ್ಗೆಗಾಗಿ ಸಂಘಟನೆ ಕಟ್ಟಿಕೊಂಳ್ಳುವ ಎಲ್ಲಾ ಅವಕಾಶಗಳನ್ನು ಒದಗಿಸಿದ ಅಂಬೇಡ್ಕರ್ ಅಂದಿನ ಕಾರ್ಮಿಕ ನಾಯಕತ್ವವನ್ನು ಕಂಡು ತೀವ್ರ ನಿರಾಶೆಗೆ ಒಳಗಾಗಿದ್ದರು. ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಕಾರ್ಮಿಕರಿಗಾಗಿಯೇ ತಮ್ಮನ್ನು ಮುಡಿಪಾಗಿಟ್ಟುಕೊಂಡ ಕಾರ್ಮಿಕ ಧುರೀಣರು ಇಲ್ಲ ಎಂದು ವಿಷಾದಿಸಿದ್ದರು. ಅವರಿಗೆ ಕಾರ್ಮಿಕ ಕಲ್ಯಾಣ ಎನ್ನುವುದು ಸಾಮಾಜಿಕ ಸಮಾನತೆಯ ಕನಸಿನ ಸಾಕಾರದ ದಾರಿಯಾಗಿತ್ತು.ಅದು ಸಾಮಾಜಿಕ ನ್ಯಾಯದ ಕುರಿತಾದ ಅವರ ಕಾಳಜಿಯಾಗಿತ್ತು. ಅಸ್ಪೃಶ್ಯತೆಯ ನಿವಾರಣೆಗೂ ಅದೊಂದು ಮಾರ್ಗವೇ ಆಗಿತ್ತು. ಇಂತಹ ಅಂಬೇಡ್ಕರ್ ಮುಂದೆ ಸಂವಿಧಾನ ಶಿಲ್ಪಿಯಾದಾಗ ವಂಚಿತರೆಲ್ಲರಿಗೂ ನ್ಯಾಯಯುತವಾದ ಬದುಕು ಕಟ್ಟಿಕೊಳ್ಳಲು ಬೇಕಾದ ದಾರಿಯನ್ನು ನ್ಯಾಯದ ದಾರಿಯಲ್ಲೇ ತೋರಿದರು. ಭಾರತ ಇಂತಹ ಮಹಾನ್ ಕಾರ್ಮಿಕ ನಾಯಕನ ಕೊಡುಗೆಯನ್ನು ಮರೆಯಬಾರದು.

ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top