ಭಾರತ 69ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಬ್ರಿಟಿಷರ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ಈ ಶುಭದಿನವನ್ನು ಇಡೀ ಭಾರತೀಯ ಸಮುದಾಯ ಅತೀವ ಸಡಗರದಿಂದ ಆಚರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಸಮವಸ್ತ್ರ ತೊಟ್ಟು, ಕೈಯಲ್ಲೊಂದು ಬಾವುಟ ಹಿಡಿದು ಶಾಲೆಯ ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಿಹಿ ತಿಂದ ನೆನಪಿನಿಂದ ಹಿಡಿದು ಕೆಂಪುಕೋಟೆಯಲ್ಲಿ ಪ್ರಧಾನಿ ಮಾಡುವ ಭಾಷಣದವರೆಗೂ ಸ್ವಾತಂತ್ರ್ಯ ದಿನಾಚರಣೆಯ ನೆನಪು ಸದಾ ನಮ್ಮನ್ನು ಆವರಿಸಿರುತ್ತದೆ.
ಈ ದಿನ ದೇಶದ ಮೂಲೆ ಮೂಲೆಯಲ್ಲೂ ಧ್ವಜಾರೋಹಣಗಳು ನಡೆಯುತ್ತವೆ. ದೇಶಭಕ್ತಿ ಗೀತೆಗಳು ಅನುರುಣಿಸುತ್ತವೆ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಉದ್ಘೋಷಗಳು ಮೊಳಗುತ್ತವೆ. ಕಾರು, ಬಸ್ಸು, ಲಾರಿ, ಕಟ್ಟಡ, ಕಾರ್ಖಾನೆ ಹೀಗೆ ಎಲ್ಲೆಂದರಲ್ಲಿ ಭಾರತದ ಹೆಮ್ಮೆಯ ಪ್ರತೀಕ ತ್ರಿವರ್ಣ ಧ್ವಜ ಹಾರಾಡುತ್ತದೆ. ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಇಡೀ ಸಾಮಾಜಿಕ ಜಾಲತಾಣಗಳು ಕೇಸರಿ, ಬಿಳಿ, ಹಸಿರುಮಯವಾಗಿರುತ್ತವೆ, ದೇಶಭಕ್ತಿಯ ಸಂದೇಶಗಳು ತುಂಬಿರುತ್ತವೆ. ಜನನಾಯಕರುಗಳು, ಹೋರಾಟಗಾರರು, ಸಾಧಕರು ದೇಶಭಕ್ತಿಯ ಮಾತುಗಳನ್ನಾಡಿ ನಮಗೆ ಸ್ಫೂರ್ತಿ ತುಂಬುತ್ತಾರೆ.
ಸ್ವಾತಂತ್ರ್ಯದ ಸಂಭ್ರಮ ಸಡಗರ ನಮಗೆ ಪುಕ್ಕಟೆಯಾಗಿ ಸಿಕ್ಕಿಲ್ಲ ಎಂಬುದನ್ನು ಪ್ರತಿಯೊಬ್ಬ ಭಾರತೀಯನು ನೆನಪಿಡಬೇಕು. ನಮ್ಮ ಇಂದಿನ ಸ್ವಾತಂತ್ರ್ಯಕ್ಕೆ ಅಂದು ಅದೆಷ್ಟೋ ಜೀವಗಳು ಬಲಿದಾನಗೈದಿವೆ. ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಗಾಂಧೀಜಿ, ವೀರ ಸಾವರ್ಕರ್, ಬಾಲಗಂಗಾಧರ್ ತಿಲಕ್ರಂತಹ ಮಹನೀಯರು ಬ್ರಿಟಿಷರ ಬೂಟಿನ, ಲಾಠಿಯ ಒಡೆತಗಳ ವಿರುದ್ಧ ಎದೆತಟ್ಟಿ ನಿಂತು ಭಾರತವನ್ನು ಸ್ವಾತಂತ್ರ್ಯದ ಪಥಕ್ಕೆ ಕರೆತರಲು ತಮ್ಮ ಜೀವನವನ್ನು ತೇಯ್ದಿದ್ದಾರೆ. ಅವರು ಅಂದು ನಡೆಸಿದ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರ ಭಾರತದಲ್ಲಿ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇವೆ.
ಈ ಸ್ವಾತಂತ್ರ್ಯೋತ್ಸವ ಸಡಗರ ಹೆಚ್ಚೆಂದರೆ ಒಂದೇ ವಾರ. ಬಳಿಕ ಬಸ್, ಕಾರು, ಕಟ್ಟಡ, ಕಾರ್ಖಾನೆಗಳಲ್ಲಿ ಅಳವಡಿಸಲಾಗಿದ್ದ ತ್ರಿವರ್ಣ ಧ್ವಜ ಬೀದಿಯಲ್ಲಿ ಬಿದ್ದಿರುತ್ತದೆ. ಫೇಸ್ಬುಕ್, ವಾಟ್ಸಾಪ್ನಿಂದ ದೇಶಭಕ್ತಿ ಸಂದೇಶಗಳು ಮಾಯವಾಗಿರುತ್ತದೆ. ದೇಶಭಕ್ತಿ ಗೀತೆ ಮತ್ತೆ ನಮಗೆ ನೆನಪಾಗೋದು ಇನ್ನೊಂದು ಸ್ವಾತಂತ್ರ್ಯ ದಿನಾಚರಣೆಗೇ. ಸಾಧಕರ ಸ್ಫೂರ್ತಿಯ ಮಾತುಗಳನ್ನು ನಾವು ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟಾಗಿರುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಮರುದಿನ ಕಸದ ತೊಟ್ಟಿಯಲ್ಲಿ ತ್ರಿವರ್ಣ ಧ್ವಜ ಬಿದ್ದಿದ್ದರೂ ಅದನ್ನು ಅಲ್ಲಿಂದ ತೆಗೆಯಬೇಕು ಎಂಬ ಕನಿಷ್ಠ ಜ್ಞಾನವೂ ನಮಗಿರುವುದಿಲ್ಲ. ದೇಶದ ಪರ ಮಾತನಾಡುವುದಕ್ಕಿಂತ ಹೆಚ್ಚಾಗಿ ದೇಶದ ವಿರುದ್ಧವೇ ಹೆಚ್ಚು ಮಾತನಾಡುತ್ತಿರುತ್ತೇವೆ.
ರಾಷ್ಟ್ರನಾಯಕರು ಮಾಡಿದಂತಹ ತ್ಯಾಗ, ಬಲಿದಾನಗಳನ್ನು ಮಾಡಬೇಕಾದ ಅನಿವಾರ್ಯತೆ ಸದ್ಯ ನಮಗಿಲ್ಲ. ಆದರೆ ರಾಷ್ಟ್ರ ನಾಯಕರ ಬಲಿದಾನಕ್ಕೆ ಗೌರವ ಸಲ್ಲಿಸುವ ಕಾರ್ಯವಾದರೂ ನಮ್ಮಿಂದ ನಡೆಯಬೇಕು. ಕನಿಷ್ಠ ಪಕ್ಷ ನಮ್ಮ ತ್ರಿವರ್ಣ ಧ್ವಜಕ್ಕಾದರೂ ನಾವು ಗೌರವ ನೀಡಬೇಕು. ತ್ರಿವರ್ಣ ಧ್ವಜವನ್ನು ಗೌರವಯುತವಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲದವರು ಅದನ್ನು ಖರೀದಿಸುವ ಗೋಜಿಗೆ ಹೋಗದಿರುವುದೇ ಒಳಿತು. ಬೀದಿಯಲ್ಲಿ, ಕಸದ ತೊಟ್ಟಿಯಲ್ಲಿ ಧ್ವಜ ಸಿಕ್ಕಿದರೆ ಅದನ್ನು ಅಲ್ಲಿಂದ ತೆಗೆದು ಗೌರವಯುತ ಸ್ಥಾನದಲ್ಲಾದರೂ ನಾವಿಡಬೇಕು, ಈ ನೆಲದಲ್ಲಿ ಹುಟ್ಟಿದ್ದಕ್ಕೆ ಅಷ್ಟಾದರೂ ವಿಧೇಯತೆಯನ್ನು ನಾವು ತೋರಬೇಕು.
ನಾವು ಹುಟ್ಟಿ ಬೆಳೆದ, ನಮಗೊಂದು ಗುರುತು, ನಮಗೊಂದು ನೆಲೆ ಕಲ್ಪಿಸಿದ ಈ ನಾಡಿನ ಬಗ್ಗೆ ನಾವು ಸದಾ ಹೆಮ್ಮೆಯನ್ನು ಹೊಂದಿರಬೇಕು, ಈ ದೇಶಕ್ಕೆ ಒಂದು ದಿನ ಅಭಿಮಾನ ವ್ಯಕ್ತಪಡಿಸಿದರೆ ಸಾಲದು, ಜೀವನದುದ್ದಕ್ಕೂ ಈ ದೇಶಕ್ಕೆ, ಈ ಮಣ್ಣಿಗೆ ವಿಧೇಯರಾಗಿರುವುದು ನಮ್ಮ ಕರ್ತವ್ಯ. ಭಾರತೀಯರಿಗೆ ತಮ್ಮ ಹಕ್ಕಿನ ಬಗ್ಗೆ ಇರುವಷ್ಟು ಅಭಿಮಾನ, ಕರ್ತವ್ಯದ ಮೇಲಿಲ್ಲ. ನಮ್ಮ ಹಕ್ಕಿಗಾಗಿ ನಾವು ದಿನವಿಡೀ ಹೋರಾಟ, ಪ್ರತಿಭಟನೆಗಳನ್ನು ಮಾಡಲು ಸಿದ್ಧರಿರುತ್ತೇವೆ. ಆದರೆ ಕರ್ತವ್ಯದ ಕಡೆ ಯಾರೂ ತಿರುಗಿಯೂ ನೋಡುವುದಿಲ್ಲ. ನಮ್ಮ ಈ ಮನಸ್ಥಿತಿ ಇನ್ನಾದರೂ ಬದಲಾಗಬೇಕಾಗಿದೆ.
ಸ್ವಾತಂತ್ರ್ಯ ಬಂದು 69 ವರ್ಷವಾದರೂ ಭಾರತ ಹಲವು ರಂಗಗಳಲ್ಲಿ ಹಿಂದುಳಿದಿದೆ. ಬಡತನ ಇನ್ನೂ ತಾಂಡವವಾಡುತ್ತಿದೆ. ಶಿಕ್ಷಣ ಎಂಬುದು ಪ್ರತಿಯೊಬ್ಬ ನಾಗರಿಕನನ್ನು ತಲುಪಿಲ್ಲ. ಕೊಳಚೆಗಳ ನಿರ್ಮೂಲನೆಯಾಗಿಲ್ಲ, ದೀನ ದಲಿತರ ಬದುಕು ಹಸನಾಗಿಲ್ಲ. ಅಂದು ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಹೋರಾಡಿದರು, ಆದರೆ ನಾವಿಂದು ಆ ಸ್ವಾತಂತ್ರ್ಯವನ್ನು ಉಳಿಸಲು ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಾಗಿದೆ. ಈ ದೇಶಕ್ಕಾಗಿ ಬದುಕಬೇಕಾಗಿದೆ, ಈ ದೇಶಕ್ಕಾಗಿ ಶ್ರಮಿಸಬೇಕಾಗಿದೆ.
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.