ಈ ಪುಸ್ತಕ ಓದುಗರನ್ನು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ನಡುವೆ ಒಮ್ಮೆ ಪದಗಳ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ಗಸ್ತು ಹೊಡೆಸುತ್ತದೆ. ಇದರಲ್ಲಿ ಮಳೆಯಲ್ಲಿ ಮೈತೊಳೆದು ನಿಂತ ಬೆಟ್ಟಗಳ ಹಸಿರಿನ ಆರ್ದತೆ ಇದೆ. ಚಳಿಗಾಲದಲ್ಲಿ ಬರಿಗಾಲಲ್ಲಿ ತರಗೆಲೆಗಳ ಮೇಲೆ ನಡೆದಾಡಿದ ಬೆಚ್ಚನೆಯ ಅನುಭವವಿದೆ. ಬೇಸಿಗೆಯ ಬೇಗೆಯಲ್ಲಿ ಕಾಡಿನ ಅನಾಮಧೇಯ ಜಲಪಾತಗಳಲ್ಲಿ ಮಿಂದು ಮೈಮರೆತ ಆಹ್ಲಾದಕತೆ ಇದೆ. ಈ ಎಲ್ಲ ಕಾಲಗಳಲ್ಲಿ ಹಸಿರ ಮೈಸಿರಿ ಹೇಗೆಲ್ಲ ಚಂದ ಕಾಣುತ್ತದೆ ಎಂಬ ಕಣ್ಣಿಗೆ ಕಟ್ಟುವ ವರ್ಣನೆ ಇದರಲ್ಲಿದೆ. ಇದಿಷ್ಟೇ ಅಲ್ಲದೆ ಕಾಡಿನ ಸೆರಗಿನ ನಡುವೆ ಬೆಚ್ಚಗೆ ಅಡಗಿ ಕುಳಿತ ಮನೆಗಳು, ಅದರಲ್ಲಿ ವಾಸವಾಗಿರುವವರ ಬಾಳ ಬವಣೆಗಳು, ಮಲೆನಾಡಿಗರ ಅತಿಥಿ ಸತ್ಕಾರ, ಹಿರಿಯ ಜೀವಗಳ ಕಾಡಿನ ಕಥೆಗಳು, ಕಿರಿಯ ಕಂದಮ್ಮಗಳ ಅಚ್ಚರಿಯ ನೋಟಗಳು ಇದರಲ್ಲಿದೆ.
ಕಾಲ ಬದಲಾದಂತೆ ಮಲೆನಾಡು ಹೇಗೆ ಬದಲಾಗುತ್ತಿದೆ, ಕಾಡಿಗೆ ಹಾಸು ಹೊಕ್ಕಾಗಿ ಬದುಕಿರುವ ಬೆಟ್ಟದ ಜೀವಗಳು ಹೇಗೆ ಈ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ ಎನ್ನುವ ನೈಜ ವಿವರಗಳಿವೆ. ಕೆಲವರು ಕಾಲದ ಹರಿವಿಗೆ ಸೇರಿ ಇನ್ನೆಲ್ಲೋ ಪಯಣವನ್ನು ಬದಲಿಸಿದರೆ, ಇನ್ನು ಕೆಲವರು ಕಾಲದ ಹೊಡೆತಕ್ಕೆ ಸೆಡ್ಡು ಹೊಡೆದು ನಿಲ್ಲುವ ಗಟ್ಟಿ ಮರಗಳಂತೆ ಬೇರೂರಿರುವ ಚಿತ್ರಣ ಇದರಲ್ಲಿ ವ್ಯಕ್ತವಾಗಿದೆ.
ಚಾರಣ ಕೇವಲ ಮೋಜಿಗಾಗಿ, ಸೆಲ್ಫಿಗಾಗಿ ಫೋಟೋಗಳಿಗಾಗಿ, ಹೋಗುವ ಕ್ರೀಡೆಯಲ್ಲ. ಅದೊಂದು ತಪಸ್ಸು. ಚಾರಣದಲ್ಲಿ ಏನೆಲ್ಲ ಅನುಭವಿಸಬೇಕು, ಅನುಭವಕ್ಕೆ ಮೀರಿದ್ದನ್ನು, ಕಾಡಿನ ಮೌನವನ್ನು ಅರ್ಥೈಸಿಕೊಂಡು ಅದಕ್ಕೆ ಅಕ್ಷರ ರೂಪ ನೀಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ, ‘ಮಲೆನಾಡಿನ ಚಳಿಯು ಐಸ್ಕ್ಯಾಂಡಿಯೇ ಬಂದು ನಮ್ಮನ್ನು ಚೀಪಿದ ಹಾಗೆ’, ‘ಕಾಡಿನಲ್ಲಿ ನಡೆದಾಗ ನಾಡಿನಿಂದ ಹೊತ್ತುಕೊಂಡು ಬಂದ ಬೆವರ ಹನಿಗಳು ಸತ್ತೇ ಹೋಗಿತ್ತು’ ಹೀಗೆ ಅನೇಕ ಉಪಮೆಯಗಳು ಲೇಖಕರ ಬರವಣಿಗೆಯ ಪ್ರಬುದ್ಧತೆಯನ್ನು ಹೊರ ಚೆಲ್ಲುತ್ತದೆ. ಪರಿಸರ ನಾಶ, ಹೆಚ್ಚುತ್ತಿರುವ ಅಕ್ರಮ ಕಾರ್ಯಗಾರಗಳು, ರಾಜಕೀಯ ಹೀಗೆ ಇವೆಲ್ಲದರ ನಡುವೆ ಕಾಡನ್ನು ಕಾಪಿಟ್ಟುಕೊಳ್ಳುವ ಯುವಜನತೆಯ ಜವಾಬ್ದಾರಿಯನ್ನು ಓದುಗರಿಗೆ ನೀಡುವುದರಲ್ಲಿ ಕೃತಿ ಯಶಸ್ವಿಯಾಗಿದ್ದಾರೆ. ಮಲೆನಾಡಿಗರು ಅಸ್ತೆಯಿಂದ ಓದಿ ಪಾಲಿಸ ಬೇಕಾದ ಅನಿವಾರ್ಯತೆ ಪ್ರಸ್ತುತ ಪರಿಸ್ತಿತಿಯಲ್ಲಿ ಅತ್ಯಗತ್ಯ ಎನ್ನುವುದು ನನ್ನ ಅಭಿಪ್ರಾಯ.
ಪುಸ್ತಕ : ‘ಒಂದು ಕಾಡಿನ ಪುಷ್ಪಕ ವಿಮಾನ’
ಲೇಖಕರು : ಪ್ರಸಾದ್ ಶೆಣೈ ಆರ್. ಕೆ
ಬೆಲೆ : 150 ರೂ.
✍ ಅಶ್ರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.