Sunday, December 28th, 2025
ವ್ಯಕ್ತಿ ವಿಶೇಷ Admin

ಅದು 1914 ರ ಡಿಸೆಂಬರ್ ತಿಂಗಳ ಒಂದು ಸುಂದರ ಮುಂಜಾನೆ, ಸ್ಯಾನ್ ಫ್ರಾನ್ಸಿಸ್ಕೋದ ಹಳೆಯ ವೇದಾಂತ ದೇವಾಲಯದೊಳಗೆ ದೊಡ್ಡ ಸ್ಪೋಟದ ಸದ್ದೊಂದು ಕೇಳಿ ಬಂದಿತ್ತು. ದಟ್ಟ ಹೊಗೆಯ, ಛಿದ್ರಗೊಂಡ ಗಾಜಿನ ನಡುವೆ ಸ್ವಾಮಿ ತ್ರಿಗುಣಾತೀತಾನಂದರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ಸ್ವತಃ ತನ್ನ ವಿದ್ಯಾರ್ಥಿ ಎಸೆದಿದ್ದ ಬಾಂಬ್ ಅವರನ್ನು ಘಾಸಿಗೊಳಿಸಿತ್ತು. ಎರಡು ವಾರಗಳ ನಂತರ ಜನವರಿ 10, 1915 ರಂದು ಸ್ವಾಮಿ ಜೀವನ್ಮರಣ ಹೋರಾಟ ನಿಲ್ಲಿಸಿ ಇಹಲೋಕವನ್ನು ತ್ಯಜಿಸಿದ್ದರು. ಹೀಗೆ ವೇದಾಂತ ದೇಗುಲದ ಗೋಡೆಗಳೊಳಗೆ ಚರಿತ್ರೆಯೊಂದು ಮರೆಯಾಗಿ ಹೋಯಿತು. ಅದು ಒಬ್ಬ ಅಸಮಾನ್ಯ ಸನ್ಯಾಸಿಯ ಚರಿತ್ರೆ. ಪಾಶ್ಚಿಮಾತ್ಯ ಮಣ್ಣಿನಲ್ಲಿ ಮೊದಲ ಹಿಂದೂ ದೇವಾಲಯವನ್ನು ನಿರ್ಮಿಸಿದ ಮತ್ತು ಅದೇ ಸ್ಥಳದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಸನ್ಯಾಸಿಯ ಚರಿತ್ರೆ. ನಂಬಿಕೆ, ಭಕ್ತಿ ಮತ್ತು ಸಾರ್ವತ್ರಿಕ ಏಕತೆಯ ಚರಿತ್ರೆ, ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಅಮೆರಿಕದ ನೆಲದಲ್ಲಿ ಬೆಳೆಸಿದ ಚರಿತ್ರೆ.
ಸಪ್ತ ಸಾಗರದಾಚೆಗೂ ವಿಸ್ತರಿಸಿತ್ತು ಕನಸು
1902ರಲ್ಲಿ, ಸ್ವಾಮಿ ತ್ರಿಗುಣಾತೀತಾನಂದರು ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದರು. ಆಗ ಅಮೆರಿಕದಲ್ಲಿ ಭಾರತೀಯ ಆಧ್ಯಾತ್ಮಿಕತೆಯ ಬಗ್ಗೆ ಕಡಿಮೆ ತಿಳುವಳಿಕೆ ಇತ್ತು. ಸ್ವಾಮಿ ವಿವೇಕಾನಂದರ ಗುರುಭಕ್ತಿಯಿಂದ ಪ್ರೇರಿತರಾಗಿದ್ದ ಸ್ವಾಮಿಗಳು ಕೇವಲ ವೇದಾಂತವನ್ನು ಬೋಧಿಸಲು ಅಲ್ಲಿಗೆ ಬಂದಿರಲಿಲ್ಲ, ಒಂದು ದೇವಾಲಯದ ಮೂಲಕ ಅದನ್ನು ಅನುಷ್ಠಾನಕ್ಕೆ ತಂದು, ಭಾರತೀಯ ಶಿಕ್ಷಣದ ಮಾದರಿಯಾಗಿ ನಿಲ್ಲುವಂತೆ ಮಾಡಲು ಬಯಸಿದ್ದರು. “ನಾವು ಇಲ್ಲಿ ಒಂದು ದೇವಾಲಯವನ್ನು ನಿರ್ಮಿಸುತ್ತೇವೆ – ಅದು ಮಾನವಕುಲದ ಏಕತೆಯನ್ನು ಸಾರುತ್ತದೆ,” ಎಂದು ಅವರು ತಮ್ಮ ಸಣ್ಣ ಅನುಯಾಯಿಗಳ ಗುಂಪಿಗೆ ತಿಳಿಸಿದ್ದರು.
ಆದರೆ ಅವರ ಬಳಿ ಹಣವಿರಲಿಲ್ಲ, ಭೂಮಿಯಿರಲಿಲ್ಲ ಮತ್ತು ಅನುಭವವೂ ಇರಲಿಲ್ಲ. ಕೇವಲ ಅಚಲ ನಂಬಿಕೆ ಮಾತ್ರ ಇತ್ತು. ಆದರೂ, ತಿಂಗಳುಗಳಲ್ಲಿ ಸಾಕಷ್ಟು ದೇಣಿಗೆಗಳು ಹರಿದುಬಂದವು. ಒಬ್ಬ ಶಿಕ್ಷಕರಿಂದ ಐದು ಡಾಲರ್ಗಳು ಸಿಕ್ಕವು, ಕಾರ್ಮಿಕರಿಂದ ಕೈಬೆರಳೆಣಿಕೆಯ ನಾಣ್ಯಗಳು ಸಿಕ್ಕವು, ವಿಧವೆಯ ಆಭರಣಗಳು ಸಿಕ್ಕವು ಮತ್ತು ಅನಾಮಧೇಯ ಮಹಿಳಾ ಭಕ್ತರಿಂದ ದೊಡ್ಡ ಉಡುಗೊರೆಗಳು ಹರಿದು ಬಂದವು. ಇದು ಸಾಮಾನ್ಯ ಜನರ ನಂಬಿಕೆಗೆ ಸಾಕ್ಷಿಯಾಗಿತ್ತು.
ಅಸಾಧ್ಯವೆನಿಸಿದ್ದು ಸಾಧ್ಯವಾಗಿತ್ತು: ಐದು ತಿಂಗಳ ಭಕ್ತಿ ಫಲ ನೀಡಿತ್ತು
1905ರ ಆರಂಭದಲ್ಲಿ, ವೆಬ್ಸ್ಟರ್ ಸ್ಟ್ರೀಟ್ನಲ್ಲಿ ಭೂಮಿಯನ್ನು ಖರೀದಿಸಿದ ನಂತರ, ಸ್ವಾಮಿಗಳು ವಾಸ್ತುಶಿಲ್ಪಿ ಜೋಸೆಫ್ ಎ. ಲಿಯೊನಾರ್ಡ್ ಅವರನ್ನು ಸಂಪರ್ಕಿಸಿದರು. ಅವರು ಪ್ರಯೋಗಾತ್ಮಕ ವಿನ್ಯಾಸಕ್ಕೆ ಹೆಸರುವಾಸಿಯಾದ ವಾಸ್ತುಶಿಲ್ಪಿಯಾಗಿದ್ದರು. ಸ್ವಾಮಿಗಳು ತಮ್ಮದೇ ಕೈಯಿಂದ ಚಿತ್ರಿಸಿದ ಒರಟು ರೇಖಾಚಿತ್ರಗಳನ್ನು ಅವರಿಗೆ ನೀಡಿದರು – ಬಲ್ಬಸ್ ಗುಮ್ಮಟಗಳು, ಮೊನಚಾದ ಕಮಾನುಗಳು, ತೆಳುವಾದ ಮಿನಾರ್ಗಳು ಮತ್ತು ಬಂಗಾಳದ ದೇವಾಲಯ ಸಂಪ್ರದಾಯಗಳನ್ನು ಕ್ಯಾಲಿಫೋರ್ನಿಯಾದ ಕೋಟೆಯ ವಾಸ್ತುಶಿಲ್ಪದೊಂದಿಗೆ ಸಂಯೋಜಿಸುವ ಗೋಪುರಗಳು ಆ ಚಿತ್ರದಲ್ಲಿದ್ದವು.
“ಇದು ಪೂರ್ವ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರತಿನಿಧಿಸಬೇಕು,” ಎಂದು ಸ್ವಾಮಿಗಳು ವಿವರಿಸಿದರು. ಅದು ಬಹುಸಾಂಸ್ಕೃತಿಕ ಏಕತೆಯ ಸಂಕೇತವಾಗಬೇಕು ಎಂಬುದು ಅವರ ಆಶಯವಾಗಿತ್ತು. ಲಿಯೊನಾರ್ಡ್ ಅವರ ಸೂಚನೆಯನ್ನು ಪಾಲಿಸಿದರು. ಯಾಕೆಂದರೆ ಬಜೆಟ್ ಕನಿಷ್ಠವಾಗಿದ್ದರೂ, ಸ್ವಾಮಿಗಳ ಪ್ರಾಮಾಣಿಕತೆ ಅವರಿಗೆ ಮೆಚ್ಚುಗೆಯಾಗಿತ್ತು. “ತಕ್ಷಣ ಪ್ರಾರಂಭಿಸಿದರೆ ವಿರಾಮವಿಲ್ಲದೆ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು” ಎಂದು ಅವರು ಹೇಳಿದ್ದರು.
ಆಗಸ್ಟ್ 21, 1905ರ ಪೂಜೆ ವಿಶಿಷ್ಟವಾಗಿತ್ತು. ಸಂಸ್ಕೃತ ಪಠಣಗಳು ಇಂಗ್ಲಿಷ್ ಸ್ತೋತ್ರಗಳೊಂದಿಗೆ ಬೆರೆತವು. ಸಾಂಪ್ರದಾಯಿಕ ಉಡುಗೆ ತೊಟ್ಟ ಹಿಂದೂ ಪುರೋಹಿತರು ಕ್ರಿಶ್ಚಿಯನ್ ಸಾಕ್ಷಿಗಳ ಮತ್ತು ಯಹೂದಿ ವೀಕ್ಷಕರ ಪಕ್ಕದಲ್ಲಿ ನಿಂತು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಸ್ವಾಮಿಗಳು ಸ್ವತಃ ಟ್ರೋವೆಲ್ ಹಿಡಿದು ಕೆಲಸ ಮಾಡಿದರು, ಭೂಮಿ ಪೂಜೆ ನೆರವೇರಿಸಿದರು.
ನಂತರದ ಐದು ತಿಂಗಳು ಅಭೂತಪೂರ್ವವಾಗಿದ್ದವು. ಪ್ರತಿದಿನ ಬೆಳಿಗ್ಗೆ ಮಂಜಿನಲ್ಲಿ ಸ್ವಾಮಿಗಳು ಸ್ಕ್ಯಾಫೋಲ್ಡಿಂಗ್ ಮೇಲೆ ಕಾಣಿಸಿಕೊಳ್ಳುತ್ತಿದ್ದರು. ಅವರು ಧ್ಯಾನದ ನಂತರ ಕಾರ್ಮಿಕರ ನಡುವೆ ಬೆರೆತು ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದರು. ಮಿತವ್ಯಯದ ಜೀವನ ನಡೆಸುತ್ತಾ, ವಿರಳ ಊಟಗಳನ್ನು ಮಾಡುತ್ತಾ, ಅಪೂರ್ಣ ರಚನೆಯಲ್ಲಿ ಮಲಗುತ್ತಿದ್ದರು. ಅವರ ಉಪಸ್ಥಿತಿಯು ಕೆಲಸದ ಪವಿತ್ರತೆಯನ್ನು ನಿರಂತರವಾಗಿ ನೆನಪಿಸಿ ಕೊಡುತ್ತಿತ್ತು.
ಒಟ್ಟು ನಿರ್ಮಾಣ ವೆಚ್ಚ ಸುಮಾರು $70,000 ಆಗಿತ್ತು – 1905ಕ್ಕೆ ಗಣನೀಯ ಮೊತ್ತ, ಆದರೆ ಭವ್ಯ ರಚನೆಗೆ ಅತ್ಯಲ್ಪ. ಯಾವುದೇ ಭವ್ಯ ದೇಣಿಗೆಗಳಿರಲಿಲ್ಲ. ಬದಲಿಗೆ, ಸಾವಿರ ಸಣ್ಣ ಕಾರ್ಯಗಳಿಂದ ಹಣಕಾಸು ಒದಗಿ ಬಂದಿತ್ತು. ಪೂಜಾ ಸಂಗ್ರಹಗಳು, ಭಕ್ತರ ಭಾನುವಾರ ಭೋಜನಗಳು, ಉಪನ್ಯಾಸ ಶುಲ್ಕಗಳು, ವೇದಾಂತ ಗ್ರಂಥಗಳ ಮಾರಾಟ ಮತ್ತು ಸಂಸ್ಕೃತ ಹಸ್ತಪ್ರತಿಗಳು ನಿಧಿ ಸಂಗ್ರಹಕ್ಕೆ ಪೂರಕವಾದವು. ಸ್ವಾಮಿಗಳು ನಗರದಾದ್ಯಂತ ಪ್ರವಾಸ ಮಾಡಿ, ಚರ್ಚುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಡ್ರಾಯಿಂಗ್ ರೂಮ್ಗಳಲ್ಲಿ ಮಾತನಾಡಿ, ಭಾಷಣಗಳನ್ನು ಪ್ರಾಯೋಗಿಕ ಬೆಂಬಲವಾಗಿ ಪರಿವರ್ತಿಸಿದರು.
ಬೆರಗುಗೊಳಿಸುವ ವಾಸ್ತುಶಿಲ್ಪ
ದೇವಾಲಯದ ವಾಸ್ತುಶಿಲ್ಪ ಬೆರಗುಗೊಳಿಸುವಂತಿತ್ತು. ಹೊರಭಾಗದಲ್ಲಿ ಮೊಘಲ್ ಕಮಾನುಗಳು ತಾಜ್ ಮಹಲ್ ಮತ್ತು ಇಂಡೋ-ಇಸ್ಲಾಮಿಕ್ ಸ್ಮಾರಕಗಳನ್ನು ನೆನಪಿಸಿಕೊಡುವಂತಿತ್ತು. ಗುಮ್ಮಟಗಳು ಬಂಗಾಳದ ಪವಿತ್ರ ವಾಸ್ತುಶಿಲ್ಪದ ಮಾದರಿಯಲ್ಲಿತ್ತು, ಗೋಪುರಗಳು ಮಧ್ಯಕಾಲೀನ ಯುರೋಪಿಯನ್ ಕೋಟೆಗಳನ್ನು ಪ್ರತಿಧ್ವನಿಸಿದವು. ಒಳಗೆ, ಗರ್ಭಗುಡಿ ಹಿಂದೂ ಪದ್ಧತಿಯನ್ನು ಪ್ರತಿಫಲಿಸಿತು. ಇದರ ಧ್ಯಾನ ಮಂದಿರವು ಎಲ್ಲಾ ನಂಬಿಕೆಗಳನ್ನು ಸ್ವಾಗತಿಸುವಂತಿತ್ತಯ. ಗೋಡೆಗಳ ಮೇಲೆ ಸಂಸ್ಕೃತ, ಇಂಗ್ಲಿಷ್ ಮತ್ತು ಪಾಲಿ ಪ್ರಾರ್ಥನೆಗಳನ್ನು ಕೆತ್ತಲಾಗಿದೆ.
ಜನವರಿ 7, 1906ರಲ್ಲಿ ನಿರ್ಮಾಣ ಪೂರ್ಣಗೊಂಡಿತು. ಅಸಾಧ್ಯವೆಂದು ತೋರುತ್ತಿದ್ದದ್ದು, ಕನಿಷ್ಠ ಸಂಪನ್ಮೂಲಗಳೊಂದಿಗೆ ಆಧ್ಯಾತ್ಮಿಕ ಸಮುದಾಯದ ಭಕ್ತಿ ಮತ್ತು ಶಕ್ತಿಯಿಂದ ಐದು ತಿಂಗಳಲ್ಲಿ ಸಾಕಾರ ರೂಪ ಪಡೆದುಕೊಂಡಿತ್ತು. ಕಟ್ಟಡ ಉದ್ಘಾಟನೆಯ ದಿನ ನೂರಾರು ಜನರು ಒಟ್ಟುಗೂಡಿದರು. ಸ್ವಾಮಿಗಳು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು, ಕ್ರಿಶ್ಚಿಯನ್ ಪಾದ್ರಿಗಳನ್ನು ಆಶೀರ್ವದಿಸಲು ಮತ್ತು ಯಹೂದಿ ವಿದ್ವಾಂಸರನ್ನು ಪ್ರವಚನ ನೀಡಲು ಆಹ್ವಾನಿಸಿದರು. ದೇವಾಲಯದ ಬಾಗಿಲುಗಳು ಸಾರ್ವಜನಿಕರಿಗೆ ತೆರೆದವು.
“ಶುದ್ಧ ಉದ್ದೇಶ ಮತ್ತು ಅಚಲ ನಂಬಿಕೆಯಿಂದ ನಿರ್ಮಿಸಿದರೆ, ಭೂಕಂಪವೂ ಅಲುಗಾಡಿಸುವುದಿಲ್ಲ. ದೇವರು ಅವನಿಗಾಗಿ ನಿರ್ಮಿಸಿರುವುದನ್ನು ರಕ್ಷಿಸುತ್ತಾನೆ.” ಎಂದು ಸ್ವಾಮಿ ಅಂದು ಹೇಳಿದ್ದರು. ಅದೇ ವರ್ಷ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭೂಕಂಪ ಸಂಭವಿಸಿತು. ಆದರೆ ದೇವಾಲಯ ಅಚಲವಾಗಿ ಉಳಿದು ಸ್ವಾಮೀಜಿಯವರ ಮಾತುಗಳನ್ನು ಸತ್ಯವೆಂದು ಸಾಬೀತುಪಡಿಸಿತು.
ಪರಂಪರೆ ಮತ್ತು ನಿರಂತರತೆ
ಇಂದಿಗೂ 2963 ವೆಬ್ಸ್ಟರ್ ಸ್ಟ್ರೀಟ್ನಲ್ಲಿರುವ ಹಳೆಯ ವೇದಾಂತ ದೇವಾಲಯವು ಭೂಕಂಪ, ಬೆಂಕಿ ದುರಂತ ಮತ್ತು ಹಿಂಸಾಚಾರವನ್ನು ಎದುರಿಸಿ ಅಚಲವಾಗಿ ನಿಂತಿದೆ, ಧ್ಯಾನ ಕೇಂದ್ರ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿ ಸೇವೆ ಸಲ್ಲಿಸುತ್ತಿದೆ. ಇದು ಕೇವಲ ಕಟ್ಟಡವಲ್ಲ; ಭಾರತದ ಪ್ರಾಚೀನ ಆಧ್ಯಾತ್ಮಿಕ ಸಂಪ್ರದಾಯವೊಂದು ವಿದೇಶಿ ಮಣ್ಣಿನಲ್ಲಿ ಅಭಿವೃದ್ಧಿ ಹೊಂದಿ, ನೈಸರ್ಗಿಕ ವಿಕೋಪಗಳನ್ನು ಸಹಿಸಿಕೊಂಡ ಅಪೂರ್ವ ನಿದರ್ಶನ.
ಆದರೆ ಸ್ವಾಮಿಗಳ ಕಥೆ ಇಲ್ಲಿ ಮುಗಿಯಲಿಲ್ಲ. 1914ರ ಡಿಸೆಂಬರ್ನ ಒಂದು ತಂಪಾದ ಬೆಳಿಗ್ಗೆ, ದೇವಾಲಯದೊಳಗೆ ಬಾಂಬ್ ಸ್ಫೋಟದ ಸದ್ದು ಕೇಳಿಸಿತ್ತು. ಸ್ವತಃ ಅವರ ವಿದ್ಯಾರ್ಥಿಯೊಬ್ಬ ಎಸೆದ ಬಾಂಬ್ನಿಂದ ಗಾಯಗೊಂಡ ಸ್ವಾಮಿಗಳು ಎರಡು ವಾರಗಳ ನಂತರ, ಜನವರಿ 10, 1915ರಂದು ಇಹಲೋಕ ತ್ಯಜಿಸಿದರು. ಈ ಮೂಲಕ ಪಾಶ್ಚಿಮಾತ್ಯ ನಾಡಿನಲ್ಲಿ ರಾಮಕೃಷ್ಣ ವೇದಾಂತ ಚಳವಳಿಯ ಮೊದಲ ಹುತಾತ್ಮರಾದರು. ಆದರೂ, ಅವರು ನಿರ್ಮಿಸಿದ ದೇವಾಲಯ ಇಂದಿಗೂ ನಂಬಿಕೆಯ ಶಾಶ್ವತ ಸಾಕ್ಷಿಯಾಗಿ ಪಶ್ಚಿಮದ ಮೊದಲ ಹಿಂದೂ ದೇವಾಲಯಗಳಲ್ಲಿ ಒಂದಾಗಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



