ನಮ್ಮ ಇತಿಹಾಸವು ವಿದೇಶೀ ಆಕ್ರಮಣಕಾರರನ್ನು ವೀರರು ಎಂದು ವೈಭವೀಕರಿಸುತ್ತದೆ. ಅನೇಕ ವಿದೇಶೀ ವೀರರನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ವರ್ಣಿಸಲಾಗುತ್ತದೆ. ನಾವು ಯಾವ ವಿದ್ಯಾರ್ಥಿಯನ್ನು ಪ್ರಪಂಚ ಗೆದ್ದ ಶೂರ ಯಾರೆಂದೇ ಕೇಳಿದರೂ ಥಟ್ಟನೆ ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಬಹುತೇಕ ಹಿರಿಯರೂ ಇದಕ್ಕೆ ಹೊರತಾಗಿಲ್ಲ. ಇಷ್ಟು ಮಾತ್ರವಲ್ಲದೆ ಇತಿಹಾಸದಲ್ಲಿ ಓದಿದಂತೆ ಮುಹಮ್ಮದ್ ಘಜನಿ, ಘೋರಿ ಎಂದು ಗಿಳಿಪಾಠವನ್ನು ಒಪ್ಪಿಸುತ್ತೇವೆ. ಜಗತ್ತಿನಲ್ಲೇ ಅತ್ಯಂತ ಶೂರರು ಜನಿಸಿದ ನಾಡು ಗ್ರೀಕ್ ಎನ್ನುತ್ತೇವೆ. ಗ್ರೀಕರ ಶೌರ್ಯವನ್ನು ಕೊಂಡಾಡುತ್ತೇವೆ. ಅಲೆಕ್ಸಾಂಡರ್ ಎಂಬ ವೀರನ ಗುಣಗಾನ ಮಾಡುತ್ತೇವೆ. ಅಲೆಕ್ಸಾಂಡರ್ ಪ್ರಪಂಚವನ್ನೇ ಗೆದ್ದಿದ್ದ ಎಂದು ಹೆಮ್ಮೆಯಿಂದ ಹೇಳುತ್ತೇವೆ. ವೀರ ಭೂಮಿ ಭಾರತ ವೀರ – ಶೂರರ ನಾಡಾಗಿರಲಿಲ್ಲವೇ?. ಇತಿಹಾಸದುದ್ದಕ್ಕೂ ಭಾರತೀಯ ಪರಾಕ್ರಮಿಗಳನ್ನು ಕಡೆಗಣಿಸಿ ಪರಕೀಯರ ಶೌರ್ಯದ ಕಥೆಗಳನ್ನೇ ಹೇಳಲಾಯಿತು. ಪಠ್ಯಪುಸ್ತಕಗಳ ಮೂಲೆಯಲ್ಲಿ ಒಂದು ಬಾರಿಯೂ ಉಲ್ಲೇಖವಿರದ ಅನೇಕ ವೀರರು ನಮ್ಮ ನೆಲವನ್ನು ಆಳಿದ್ದಾರೆ ಎಂಬುದು ನಮಗೇ ಅರಿವಿಲ್ಲದಿರುವುದು ನಮ್ಮ ವಿಪರ್ಯಾಸ. ನಮಗೆ ಪರಕೀಯರಾದ ಮೊಘಲರ ಬಗ್ಗೆ ಇರುವ ಜ್ಞಾನದ 100 ನೇ ಒಂದು ಭಾಗ ಜ್ಞಾನವೂ ನಮ್ಮದೇ ರಾಜವಂಶಗಳ ಬಗೆಗಿಲ್ಲ. ರಜಪೂತರು, ಮರಾಠರು, ಹೊಯ್ಸಳರು, ಪಲ್ಲವರು, ಚೋಳರು, ಚೇಲರು ಹೀಗೆ ಅನೇಕ ರಾಜವಂಶಗಳು ನಮ್ಮನ್ನಾಳಿವೆ. ಹೀಗೆ ನಮ್ಮ ದೇಶದ ಕಾಶ್ಮೀರ ಉಪಖಂಡವನ್ನು ಆಡಳಿತ ನಡೆಸಿದ ಪ್ರಬಲ ಅರಸೊತ್ತಿಗೆಗಳಲ್ಲಿ ಕಾರ್ಕೊಟ ರಾಜವಂಶವೂ ಒಂದಾಗಿದೆ. ಇಂತಹ ರಾಜವಂಶದಲ್ಲಿ ಅತ್ಯಂತ ಪ್ರಬಲ ಆಡಳಿತಗಾರನಾಗಿದ್ದ ಅರಸನೇ ಲಲಿತಾದಿತ್ಯ.
ಕ್ರಿಸ್ತಪೂರ್ವ 724 ರಿಂದ ಕ್ರಿಸ್ತಪೂರ್ವ 760 ನೇ ಇಸವಿಯ ವರೆಗೆ ಕಾಶ್ಮೀರವನ್ನಾಳಿದ್ದ ರಾಜನೇ ಲಲಿತಾದಿತ್ಯ. ಇವನಿಗೆ ಮುಕ್ತಾಪಿದಾ ಎಂಬ ಇನ್ನೊಂದು ಹೆಸರು ಕೂಡಾ ಇದೆ. 12 ನೇ ಶತಮಾನದ ಕಾಶ್ಮೀರದ ಪ್ರಸಿದ್ಧ ಇತಿಹಾಸಗಾರ ಹಾಗೂ ಲೇಖಕರಾಗಿದ್ದ ಕಲ್ಹಣನು ತನ್ನ ರಾಜತರಂಗಿಣಿ ಕೃತಿಯಲ್ಲಿ ಲಿಲಿತಾದಿತ್ಯನ ಕುರಿತಾಗಿ ಬಹಳಷ್ಟು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಕಾರ್ಕೊಟ ರಾಯಾ ಪ್ರತಾಪಾದಿತ್ಯ ಮತ್ತು ರಾಣಿ ನರೇಂದ್ರ ಪ್ರಭಾ ಅವರ ಮೂವರು ಮಕ್ಕಳಲ್ಲಿ ಕಿರಿಯ ಪುತ್ರನೇ ಲಲಿತಾದಿತ್ಯ. ಕಲ್ಹಣನ ಪ್ರಕಾರ ಲಲಿತಾದಿತ್ಯನು 36 ವರ್ಷ 7 ತಿಂಗಳು 11 ದಿನಗಳಷ್ಟು ಕಾಲ ರಾಜ್ಯಭಾರವನ್ನು ನಡೆಸಿದ್ದನು. ಲಲಿತಾದಿತ್ಯನು ಪುರಾಣಗಳಲ್ಲಿ ಲಭ್ಯವಿರುವ ನಾಗರಾಜ ಕಾರ್ಕೋಟಕನ ವಂಶಸ್ಥನೆಂದೂ ಹೇಳಲಾಗುತ್ತದೆ. ತನ್ನ ಜೀವನದ ಬಹುಪಾಲು ಸಮಯವನ್ನು ದಂಡಯಾತ್ರೆಗಳಲ್ಲೇ ಕಳೆದಿದ್ದ ಲಲಿತಾದಿತ್ಯನ ಜೀವನವನ್ನು ಕಲ್ಹಣನು ಈ ರೀತಿಯಾಗಿ ವಿವರಿಸಿದ್ದಾನೆ.
ಲಲಿತಾದಿತ್ಯನು ಅಂತರ್ವೇದಿ ಎಂಬ ರಾಜ್ಯವನ್ನು ಆಕ್ರಮಿಸಿದನು. ಇದರ ರಾಜಧಾನಿಯು ಕನ್ಯಕುಬ್ಜವಾಗಿತ್ತು. ಅಲ್ಲಿಯ ರಾಜ ಯಶೋವರ್ಮನು ಸುದೀರ್ಘವಾದ ಯುದ್ಧದ ಬಳಿಕ ಶಾಂತಿಯ ಒಪ್ಪಂದವೊಂದನ್ನು ತಯಾರಿಸಿದನು. ಆದರೆ ಒಪ್ಪಂದದಲ್ಲಿ ಮೊದಲಿಗೆ ಯಶೋವರ್ಮನ ಹೆಸರನ್ನು ಬರೆಯಲಾಗಿತ್ತು ಎಂಬ ಕಾರಣಕ್ಕಾಗಿ ಯುದ್ಧದಲ್ಲಿ ಸೋತುಹೋದ ಯಶೋವರ್ಮನನ್ನು ಲಲಿತಾದಿತ್ಯನು ರಾಜ ಪದವಿಯಿಂದ ಉಚ್ಛಾಟಿಸಿದನು. ಮಹಾಕವಿಗಳಾದ ವಕ್ಷತಿ ಮತ್ತು ಭವಭೂತಿಗಳಿಂದ ಸೇವೆಯನ್ನು ಪಡೆಯುತ್ತಿದ್ದ ಯಶೋವರ್ಮನು ಲಲಿತಾದಿತ್ಯನ ಸಾಮಂತ ಅರಸನಾಗಿ ಬದಲಾದನು. ಇದರಿಂದಾಗಿ ಯಮುನಾ ನದಿ ಮತ್ತು ಅಂದಿನ ಕಾಳಿಕಾ ನದಿಗಳ ನಡುವಿನ ಕನ್ಯಾಕುಬ್ಜ ಭೂಮಿಗೆ ಲಲಿತಾದಿತ್ಯನು ಅರಸನಾದನು. ಬಳಿಕ ಅಲ್ಲಿ 5 ಕಚೇರಿಗಳನ್ನು ಸ್ಥಾಪಿಸಿದ ಲಲಿತಾದಿತ್ಯನು ಅಲ್ಲಿ ಶಾಹಿ ಮತ್ತು ಇತರ ರಾಜಕುಮಾರರಿಗೆ ಅಧಿಕಾರವನ್ನು ನೀಡಿ ಅಧಿಕಾರವನ್ನು ಬಲಪಡಿಸಿದ ಬಳಿಕ ಲಲಿತಾದಿತ್ಯನ ಸೈನ್ಯವು ಗಂಗಾ ನದಿ ಹಿಮಾಲಯದಿಂದ ಪೂರ್ವದ ಸಮುದ್ರಕ್ಕೆ ಹರಿಯುವಂತೆ, ಪೂರ್ವ ದಿಕ್ಕಿಗೆ ಮುಂದುವರೆಯಿತು. ಲಲಿತಾದಿತ್ಯನ ಸೈನ್ಯವು ಕಾಳಿಂಗ ಮತ್ತು ಗೌಡ ರಾಜ್ಯವನ್ನು ತಲುಪಿತು. ಗೌಡದಿಂದ ಮತ್ತಷ್ಟು ಆನೆಗಳನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ಪೂರ್ವ ಸಮುದ್ರ ತೀರದಿಂದ ಲಲಿತಾದಿತ್ಯ ದಕ್ಷಿಣ ಪ್ರದೇಶಗಳಿಗೆ ತೆರಳಿದನು. ಅಲ್ಲಿ ಕರ್ಣಾಟರು ಇವರನ್ನು ಸತ್ಕರಿಸಿದರು. ಈ ಸಮಯದಲ್ಲಿ ದಕ್ಷಿಣದಲ್ಲಿ ರತ್ತ ಎಂಬ ರಾಣಿಯು ಆಡಳಿತ ನಡೆಸಿದ್ದಳು. ಆಕೆ ವಿಂಧ್ಯಾ ಪರ್ವತದ ಉದ್ದಕ್ಕೂ ಅಡೆತಡೆಗಳಿಲ್ಲದ ಸುಂದರ ರಸ್ತೆಗಳನ್ನು ನಿರ್ಮಿಸಿದ್ದಳು.
ದ್ವೀಪಗಳ ಮೂಲಕ ಸಾಗರವನ್ನು ದಾಟಿದ ಲಲಿತಾದಿತ್ಯ ಏಳು ಕೊಂಕಣಗಳನ್ನು ತಲುಪಿದನು. ಅಲ್ಲಿಂದ ಲಲಿತಾದಿತ್ಯನು ಅವಂತಿಗೆ ಮೆರವಣಿಗೆ ಹೊರಟನು. ಇತರ ರಾಜರಲ್ಲಿ ಹೆಚ್ಚಿನ ರಾಜರನ್ನು ಸೋಲಿಸಿದ ಬಳಿಕ ಲಿಲಿತಾದಿತ್ಯನು ಉತ್ತರ ಪಾಠಕ್ಕೆ ತೆರಳಿದನು. ಅಲ್ಲಿ ಅವರು ಹಲವಾರು ಪ್ರಬಲ ರಾಜರೊಂದಿಗೆ ಹೋರಾಡಿದನು. ಅವನ ಸೈನ್ಯವು ಕಾಂಭೋಜಾ ಅಶ್ವಶಾಲೆಯನ್ನು ಖಾಲಿಗೊಳಿಸಿತು. ಯುದ್ಧದಲ್ಲಿ ಲಲಿತಾದಿತ್ಯನು ಮುಮ್ಮುನಿಯನ್ನು ಮೂರು ಬಾರಿ ಸೋಲಿಸಿದ್ದನು. ಮುಂದೆ ಅವನು ಮರುಭೂಮಿಯ ರಾಜ್ಯವಾದ ಪ್ರಾಜ್ಯೋತಿಷವನ್ನು ಕೂಡಾ ಗೆದ್ದುಕೊಂಡನು. ಕೊನೆಗೆ ಲಲಿತಾದಿತ್ಯನು ತನ್ನ ವಿಜಯಗಳಿಂದ ಪಡೆದ ಅಪಾರ ಸಂಪತ್ತಿನೊಂದಿಗೆ ಕಾಶ್ಮೀರಕ್ಕೆ ಮರಳಿದನು. ಬಳಿಕ ಅವನು ತನ್ನ ಪರಿಚಾರಕರನ್ನು ಜಲಂಧರ, ಲೋಹರಾ ಮತ್ತಿತರ ದೇಶಗಳ ರಾಜರುಗಳನ್ನಾಗಿ ನೇಮಿಸಿದನು. ಲಲಿತಾದಿತ್ಯನು ಕಾಶ್ಮೀರದಲ್ಲಿದ್ದಾಗ ಹಲವಾರು ನಗರಗಳು ಮತ್ತು ದೇವಾಲಯಗಳನ್ನು ಸ್ಥಾಪಿಸಿದನು.
ಸುನಿಶ್ಚಿತಾಪುರ, ದರ್ಪಿತಾಪುರ, ಫಲಾಪುರ, ಲೋಕಾಪುಣ್ಯ ಪಟ್ಟಣ, ಪರಿಹಾಸಪುರ. ಲಲಿತಾದಿತ್ಯನು ತನ್ನ ರಾಜ್ಯದಿಂದ ದೂರವಿದ್ದಾಗ ಅವನ ವಾಸ್ತುಶಿಲ್ಪಿಯು ಲಲಿತಪುರವನ್ನು ನಿರ್ಮಿಸಿದನು. ತನ್ನ ಅಪ್ಪಣೆಯಿಲ್ಲದೆ ರಚಿಸಿದ ಕಾರಣಕ್ಕಾಗಿ ಲಲಿತಾದಿತ್ಯನು ಕ್ರೋಧಗೊಂಡಿದ್ದನು ಎಂಬುದನ್ನೂ ಕಲ್ಹಣನು ಹೇಳಿದ್ದಾನೆ. ಲಲಿತಾದಿತ್ಯನ ಪತ್ನಿ ಚಕ್ರಮಾದ್ರಿಕಾ ಸಹಾ 7000 ಮನೆಗಳಿದ್ದ ಚಕ್ರಪುರ ನಗರವನ್ನು ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ. ಪ್ರತಿ ಪಟ್ಟಣ, ಹಳ್ಳಿ, ನದಿ ಸಮುದ್ರಗಳಲ್ಲಿ ಲಲಿತಾದಿತ್ಯನು ದೇವಾಲಯಗಳನ್ನು ನಿರ್ಮಿಸಿದ್ದನು ಎಂದು ಕಲ್ಹಣನು ಉಲ್ಲೇಖಿಸಿದ್ದಾನೆ. ಈ ದೇವಾಲಯಗಳಲ್ಲಿ ಚಿನ್ನ ಮತ್ತು ಬೆಳ್ಳಿಗಳಿಂದ ನಿರ್ಮಿಸಿದ ದೇವತೆ ಮತ್ತು ಸೇವಕರ ವಿಗ್ರಹಗಳನ್ನೂ ಪ್ರತಿಷ್ಠಾಪಿಸಿದನು. ಕಲ್ಹಣನ ಪ್ರಕಾರ ಕೇಶವ, ನಹಾರಿ, ಮುಕ್ತವಾನ್ ಸೇರಿದಂತೆ ವಿಷ್ಣುವಿನ ವಿವಿಧ ಅಂಶಗಳಿಗೆ ಮೀಸಲಾಗಿರುವ ದೇವಾಲಯಗಳನ್ನು ಲಲಿತಾದಿತ್ಯನು ನಿರ್ಮಿಸಿದ್ದನು. ಲೋಕಾಪುಣ್ಯ ಪಟ್ಟಣವನ್ನು ನಿರ್ಮಿಸಿದ ಬಳಿಕ ಅದನ್ನು ವಿಷ್ಣುವಿಗೆ ಅರ್ಪಿಸಲಾಯಿತು. ಪರಿಹಾಸ ಕೇಶವಪುರದಲ್ಲಿ 84000 ತೊಲದ ಚಿನ್ನದ ಮುಕ್ತ ಕೇಶವನ ಚಿನ್ನದ ಚಿತ್ರ, 84000 ತೊಲದ ಬೆಳ್ಳಿಯ ಪರಿಹಾಸ ಕೇಶವನ ಬೆಳ್ಳಿಯ ಮೂರ್ತಿಗಳನ್ನೂ ರಚಿಸಲಾಗಿತ್ತು.
ಕಲ್ಹಣನ ಪ್ರಕಾರ ವಿಶ್ವ ವಿಜಯವನ್ನು ಪ್ರಾರಂಭಿಸುವಾಗ ಲಲಿತಾದಿತ್ಯನು ಭೂತೇಶ ದೇವಾಲಯದಿಂದ ಒಂದು ಕೋಟಿ ರೂಪಾಯಿಗಳನ್ನು ಪಡೆದುಕೊಂಡು ಕಾಶ್ಮೀರಕ್ಕೆ ಮರಳಿದ ಬಳಿಕ 11 ಕೋಟಿ ರೂಪಾಯಿಗಳನ್ನು ಮರಳಿಸಿದ್ದರು. ಬಳಿಕ ಶಿವನಿಗೆ ಜಾಸ್ಟರುದ್ರ ಕಲ್ಲಿನ ದೇವಾಲಯವನ್ನು ನಿರ್ಮಿಸಿ ದೇವಾಲಯಕ್ಕೆ ಹಲವಾರು ಗ್ರಾಮಗಳನ್ನು ದೇಣಿಗೆಯಾಗಿ ನೀಡಿದನು. ಲಾಲಿತ್ಯಪುರದಲ್ಲಿ ಸೂರ್ಯ ದೇವಾಲಯವನ್ನು ನಿರ್ಮಿಸಿ ಕನ್ಯಾಕುಬ್ಜ ಮತ್ತಿತರ ಗ್ರಾಮಗಳನ್ನು ಈ ದೇವಾಲಯಕ್ಕೆ ದತ್ತಿಯಾಗಿ ನೀಡುತ್ತಾನೆ. ಇದರ ಜೊತೆಯಲ್ಲಿ ಪ್ರಸಿದ್ಧ ಮಾರ್ತಾಂಡ ಸೂರ್ಯ ದೇವಾಲಯ ಮತ್ತು ಸುತ್ತಲಿನ ಪಟ್ಟಣವನ್ನೂ ಲಲಿತಾದಿತ್ಯನು ನಿರ್ಮಿಸಿದ್ದನು. ಇಷ್ಟು ಮಾತ್ರವಲ್ಲದೆ ರಾಜನು ಅನೇಕ ಬೌದ್ಧ ವಿಹಾರಗಳನ್ನೂ ನಿರ್ಮಿಸಿದ್ದನು. ಪ್ರಜೆಗಳ ಬಗ್ಗೆ ಅತೀವ ಕಾಳಜಿ ಪ್ರೀತಿಯನ್ನು ಹೊಂದಿದ್ದ ಅರಸನಾಗಿದ್ದ ಲಲಿತಾದಿತ್ಯನ ಸಾಹಸದ ಕಥೆಗಳು ಇಂದಿಗೂ ಕಾಶ್ಮೀರದಲ್ಲಿ ಜೀವನವಾಗಿವೆ. ಕಾಶ್ಮೀರಿ ಪಂಡಿತರು ಇಂದಿಗೂ ಲಲಿತಾದಿತ್ಯನನ್ನು ಹೆಮ್ಮೆಯಿಂದ ಭಾರತದ ಅಲೆಕ್ಸಾಂಡರ್ ಎಂದು ಕರೆಯುತ್ತಾರೆ. ಅವನು ನಿರ್ಮಿಸಿದ ಮಾರ್ತಾಂಡ ದೇವಾಲಯವು ಅನೇಕ ಬಾರಿ ಮತಾಂಧ ಪರಕೀಯರ ಆಕ್ರಮಣಕ್ಕೆ ಒಳಗಾಗಿ ಇಂದು ಶಿಥಿಲಾವಸ್ಥೆಯನ್ನು ತಲುಪಿರುವಂತೆಯೇ, ಲಲಿತಾದಿತ್ಯನ ಸಾಹಸದ ಕಥೆಯೂ ಐತಿಹಾಸದ ಪುಟಗಳಿಂದ ಅಳಿಸುತ್ತಿದೆ ಎಂಬುದು ಅತ್ಯಂತ ವಿಷಾದಕರ ವಿಚಾರ.
ಭಾರತದ ಮುಕುಟಮಣಿ ಕಾಶ್ಮೀರವನ್ನು ಆಳುತ್ತಾ ಮಧ್ಯ ಏಷ್ಯಾ ಇಂದಿನ ಅಫ್ಘಾನಿಸ್ತಾನವನ್ನೂ ಗೆದ್ದಿದ್ದ ವೀರನ ಕುರಿತಾಗಿ ಅರಿಯುವುದು ನಮ್ಮ ಕರ್ತವ್ಯ ಮಾತ್ರವಲ್ಲ ನಮ್ಮ ಹೆಮ್ಮೆ ಕೂಡ. ದಕ್ಷಿಣ ಭಾರತ, ಪಶ್ಚಿಮ ಭಾರತ ಮಾತ್ರವಲ್ಲದೆ ವಿಂಧ್ಯ ಪರ್ವತಗಳನ್ನೂ ಆಳುತ್ತಿದ್ದ ವೀರ ಲಲಿತಾದಿತ್ಯ ಮುಕ್ತಪೀಠ ಭಾರತದ ಇತಿಹಾಸದ ಸುವರ್ಣ ಇತಿಹಾಸದ ಹೊಳೆಯುವ ವಜ್ರ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.