ಶಿವಮೊಗ್ಗ: ಇಂದು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಗಣ್ಯರು ಹೊಳೆಬಾಗಿಲಿನಲ್ಲಿ ಅಂಬಾರಗೋಡ್ಲು- ಕಳಸವಳ್ಳಿ ಸಂಪರ್ಕಿಸುವ ದೇಶದ ಎರಡನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಆಗಿರುವ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಿ, ನೂತನ ಸೇತುವೆಯಲ್ಲೇ ಸಂಚರಿಸಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಸಂಸದ ಬಿವೈ ರಾಘವೇಂದ್ರ ಅವರು, “ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂಧೂರ ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ” ಕರ್ನಾಟಕದ ಮಲೆನಾಡ ರಾಜಧಾನಿಯ ಕಲಶಕ್ಕೆ ಮುಕುಟದ ಮಣಿಯಾಗಿ ಪ್ರಜ್ವಲಿಸುತ್ತಿದ್ದ “ಶರಾವತಿ ನದಿ” ಯ ಹಿನ್ನೀರಿಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ ರಾಜ್ಯದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತ ಐತಿಹಾಸಿಕ ಕೇಬಲ್ ಆಧಾರಿತ 2.25 ಕಿ.ಮೀ ಉದ್ದದ ಸುಮಾರು 423.00 ಕೋಟಿ ಅನುದಾನದಲ್ಲಿ ದೇಶದ ಎರಡನೇ ಅತಿ ದೊಡ್ಡ ಸಂಪರ್ಕ ಸೇತುವೆ “ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು – ಕೊಲ್ಲೂರು (ಸ್ಥಳೀಯರ ಹೊಳೆಬಾಗಿಲು ಸೇತುವೆ)” ಸಂಪರ್ಕ ಕಲ್ಪಿಸುವ ಸೇತುವೆ ಇಂದು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರು ಹಾಗೂ ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಜೊತೆಗೂಡಿ ರಾಷ್ಟ್ರಕ್ಕೆ ಸಮರ್ಪಿಸಿದ ಭಾವನಾತ್ಮಕ ಕ್ಷಣ” ಎಂದಿದ್ದಾರೆ.
ನಿರಂತರ ಆರು ದಶಕಗಳ ಹಿನ್ನೀರಿನ ಪ್ರದೇಶದ ಬಂಧುಗಳ ಹೋರಾಟದ ಕೂಗನ್ನು ಆಲಿಸಿ ಕೇಂದ್ರ ಸರ್ಕಾರ ಸುಮಾರು 423 ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಂಕಲ್ಪದ ಫಲ ಮತ್ತು ನಿಮ್ಮೆಲ್ಲರ ನಿಸ್ವಾರ್ಥ ಪ್ರೀತಿಯ ಆಶೀರ್ವಾದ ಬಲದಿಂದ ಈ ಒಂದು ಐತಿಹಾಸಿಕ ಘಟನೆಗೆ ನಮ್ಮ ಮಲೆನಾಡು ಸಾಕ್ಷಿಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇದರೊಂದಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದ ಜನರ ಕೂಗಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಇರುವ ಸರ್ಕಾರ ಎ೦ದು ಮತ್ತೊಮ್ಮೆ ದೇಶಕ್ಕೆ ಸಂದೇಶ ರವಾನಿಸಿದೆ. ಜೊತೆಗೆ ಶಂಕು ಸ್ಥಾಪನೆ ಮಾಡಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತನ್ನ ಅಧಿಕಾರದ ಅವಧಿಯಲ್ಲಿ ಉದ್ಘಾಟನೆ ಮಾಡುವ ಸಂಪ್ರದಾಯ ಮುಂದುವರೆಸಿ ಇತಿಹಾಸ ನಿರ್ಮಿಸುತ್ತಿದೆ ಎಂದರು.
ಈ ಒಂದು ಸೇತುವೆ ಕೇವಲ ಶರಾವತಿ ಹಿನ್ನೀರಿನ ಸಂತ್ರಸ್ತರ ಬವಣೆ ಮಾತ್ರ ನೀಗಿಸುವುದಲ್ಲದೆ ನಮ್ಮ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಇನ್ನಷ್ಟು ಬಾಂಧವ್ಯ ಬೆಸೆಯುವ ಕಾಲಘಟಕ್ಕೆ ಮುನ್ನುಡಿ ಬರೆಯುವುದು ನಿಶ್ಚಿತ. ಜೊತೆಗೆ ಎರಡು ಜಿಲ್ಲೆಗಳ ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ಸಮ್ಮಿಲನ ಗಟ್ಟಿಯಾಗುವುದು ಹೊಸ ಶಖೆಯ ಆರಂಭಕ್ಕೆ ಸಾಕ್ಷಿಯಾಗಲಿದೆ. ಈ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತ ಐತಿಹಾಸಿಕ ಸಂದರ್ಭದಲ್ಲಿ ಈ ಸೇತುವೆ ಹೋರಾಟಕ್ಕೆ ದಶಕಗಳಿಂದ ಹೋರಾಟ ನಡೆಸುತ್ತಿದ್ದ ಶ್ರೀ ಪ್ರಸನ್ನ ಕೆರೆಕೈ ಅವರು ಸೇರಿದಂತೆ ಇನ್ನೂ ನೂರಾರು ಹೋರಾಟಗಾರರನ್ನು ನೆನಪು ಮಾಡಿಕೊಂಡು ಹೃದಯ ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.