ಕೊರೋನಾ ವಕ್ಕರಿಸಿ ಒಂದು ವರ್ಷಗಳೇ ಕಳೆದರೂ ಅದರ ತೀವ್ರತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೊರೋನಾ ಮೊದಲ ಅಲೆಯಿಂದಾಗಿ ದೇಶ ಅನುಭವಿಸಿದ ಕಷ್ಟ-ನಷ್ಟಗಳು ಇನ್ನೂ ಯಾವುದೇ ರೀತಿಯ ಸಮರ್ಪಕ ಅಂತ್ಯವನ್ನು ಕಂಡಿಲ್ಲ.
ಆರ್ಥಿಕ ಸಂಕಷ್ಟದ ಜೊತೆಗೆ, ಆರೋಗ್ಯ, ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳನ್ನು ತಲ್ಲಣಿಸುವಂತೆ ಮಾಡಿದ್ದ ಕೊರೋನಾ, ಈ ಬಾರಿಯೂ ಮತ್ತೆ ತನ್ನ ಅಟ್ಟಹಾಸವನ್ನು ಮೆರೆಯಲಾರಂಭಿಸಿದೆ. ಕೊರೋನಾ ಎರಡನೇ ಅಲೆಯ ಮೂಲಕ ಮತ್ತೆ ಸರ್ಕಾರವನ್ನು, ಸಾರ್ವಜನಿಕರನ್ನು ಇಕ್ಕಟ್ಟಿಗೆ, ತೊಂದರೆಗೆ ಸಿಲುಕಿಸಿದೆ. ಒಂದು ಕಡೆಯಲ್ಲಿ ಆರ್ಥಿಕ ಸಂಕಷ್ಟವನ್ನು ಸರಿದೂಗಿಸುವ ಸವಾಲನ್ನು ಸರ್ಕಾರ ಎದುರಿಸುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಜನರಿಗೆ ಆರೋಗ್ಯಪೂರ್ಣ ಜೀವನ ನಡೆಸುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದಾಗಿಯೂ ಸರ್ಕಾರ ಚಿಂ(ತೆ)ತನೆಯಲ್ಲಿ ಮುಳುಗಿದೆ. ಉದ್ಯೋಗಗಳನ್ನು ಕಳೆದುಕೊಂಡಿರುವ, ಕಳೆದುಕೊಳ್ಳುತ್ತಿರುವ ಜನರ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿಯೂ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದಾಗಿ ತಲೆಕೆಡಿಸಿಕೊಂಡಿದೆ. ಜೊತೆಗೆ ರಣಕೇಕೆ ಹಾಕುತ್ತಿರುವ ಕೊರೋನಾ ಸೋಂಕನ್ನು ತಡೆಯುವ ಮಾರ್ಗ ಯಾವುದು ಎಂಬುದರ ಕುರಿತಾಗಿಯೂ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸುವ ತುರ್ತಿನಲ್ಲಿದೆ. ಇದೇ ಸಂದರ್ಭದಲ್ಲಿ ವಿಪಕ್ಷಗಳು ಮತ್ತು ಕೆಲವು ಜನರು ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳನ್ನೂ ಹೊರಿಸುತ್ತಿವೆ. ಇವೆಲ್ಲದರ ನಡುವೆ ಸಮಾಜದ ಆರ್ಥಿಕ ಅಶಕ್ತ ವಲಯ ಮತ್ತೆಲ್ಲಿ ಲಾಕ್ಡೌನ್ ಆಗುವುದೋ, ಮತ್ತೆ ಅಭದ್ರತೆ ಅನುಭವಿಸಬೇಕಾಗುವ ಪರಿಸ್ಥಿತಿ ಬರಬಹುದೋ ಎಂಬ ಭಯದಲ್ಲಿ ದಿನ ದೂಡುವಂತಾಗಿದೆ ಎಂಬುದು ಸದ್ಯದ ವಾಸ್ತವ.
ಕೊರೋನಾಗೆ ಲಸಿಕೆ ಬಂತಲ್ಲಾ? ಮತ್ತೇಕೆ ಕೊರೋನಾಗೆ ಭಯ ಪಡುವುದು ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಅನೇಕರ ಮನಸ್ಸಿನಲ್ಲಿ ಹುಟ್ಟಿರುವ ವಿಚಾರ. ಇದಕ್ಕೆ ಉತ್ತರಿಸುವುದಾದರೆ, ಕೊರೋನಾ ವಿರುದ್ಧ ನಮ್ಮ ದೇಹದಲ್ಲಿ ಇಮ್ಯುನಿಟಿ ಪವರ್ (ರೋಗ ನಿರೋಧಕ ಶಕ್ತಿ) ಯನ್ನು ಹೆಚ್ಚಿಸುವ ಸಲುವಾಗಿ ಈ ಲಸಿಕೆ ಕಂಡುಹಿಡಿಯಲಾಗಿದೆಯೇ ಹೊರೊತು, ಕೊರೋನಾ ಈ ಲಸಿಕೆ ಪಡೆದುಕೊಳ್ಳುವುದರಿಂದ ಬರುವುದೇ ಇಲ್ಲವೆಂದಲ್ಲ. ಕೊರೋನಾ ಲಸಿಕೆ ಪಡೆದುಕೊಂಡರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಕೊರೋನಾ ವೈರಸ್ಗಳು ಆಕ್ರಮಿಸಿಕೊಂಡರೂ ಅದರ ಪ್ರಭಾವ ಕಡಿಮೆ. ಲಸಿಕೆ ಪಡೆಯುವುದರಿಂದ ಕೊರೋನಾ ಸೋಂಕು ಮಾರಣಾಂತಿಕವಾಗುವುದನ್ನು ತಡೆಯಬಹುದು. ಹಾಗೆಯೇ ಒಂದೊಮ್ಮೆ ಕೊರೋನಾ ಬಂದರೂ ಜೀವ ಹಾನಿಯಾಗುವ ಸಂಭವ ಕಡಿಮೆಯಾಗುತ್ತದೆ. ಆದ್ದರಿಂದ ಲಸಿಕೆ ಪಡೆಯುವುದರಿಂದ ಕೊರೋನಾ ಸೋಂಕು ನಮ್ಮನ್ನು ಮುಟ್ಟದು, ಏಕೆಂದರೆ ನಾವು ಲಸಿಕೆ ಪಡೆದುಕೊಂಡಿದ್ದೇವೆ ಎಂಬ ಭಂಡ ಧೈರ್ಯದಿಂದ ಕೂರುವ ಬದಲು, ಕೊರೋನಾ ಬಾರದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಚಿಸುವ ಮಾಸ್ಕ್ ಧರಿಸುವುದರಿಂದ ಹಿಡಿದು ಉಳಿದೆಲ್ಲಾ ನಿಯಂತ್ರಣ ಕ್ರಮಗಳನ್ನು ಪಾಲಿಸುವುದೇ ಸೂಕ್ತ ಪರಿಹಾರ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ ಮತ್ತು ಹಾಗೆ ನಡೆದುಕೊಳ್ಳುವ ಮೂಲಕ ನಮ್ಮನ್ನು ಸೋಂಕಿನಿಂದ ಕಾಪಾಡಿಕೊಳ್ಳುವ ಮೂಲಕ ನಮ್ಮವರನ್ನೂ ಕೊರೋನಾ ಸೋಂಕಿನಿಂದ ದೂರವಿಡುವತ್ತ ನಮ್ಮ ಚಿಂತನೆಗಳು, ನಮ್ಮ ಆಚರಣೆಗಳು ಸಾಗಬೇಕಿವೆ ಎಂಬುದು ಸದ್ಯದ ತುರ್ತು.
ಅವರು ಮಾಸ್ಕ್ ಹಾಕಿಲ್ಲ, ನಾನೇಕೆ ಧರಿಸಬೇಕು ಎಂಬ ಭಾವನೆ ಬಿಟ್ಟು, ನಾನು, ನನ್ನವರು ಆರೋಗ್ಯವಾಗಿರಬೇಕಾದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಕಾರಣಗಳೇ ಇರದೆ ಸಾರ್ವಜನಿಕವಾಗಿ ಹೆಚ್ಚು ಸುತ್ತಾಟ ನಡೆಸದೇ ಇರುವುದು ಇತ್ಯಾದಿಗಳನ್ನೊಳಗೊಂಡತೆ ಇನ್ನೂ ಅನೇಕ ನಿಯಂತ್ರಣ ವಿಧಾನಗಳನ್ನು ಅನುಸರಿಸುವ ಮೂಲಕ ನಮ್ಮನ್ನು ನಾವು ಕೊರೋನಾ ಬಾರದಂತೆ ಕಾಪಾಡಿಕೊಳ್ಳುವುದು ಸಾಧ್ಯ. ಜೊತೆಗೆ ನಮ್ಮ ಆಹಾರ ಪದ್ಧತಿಯಲ್ಲಿ ರೋಗ ನಿರೋಧಕ ಅಂಶಗಳನ್ನು ಹೆಚ್ಚಾಗಿ ಪೂರೈಸಬಲ್ಲ ವಸ್ತುಗಳನ್ನು ಬಳಕೆ ಮಾಡುವ ಮೂಲಕವೂ ಕೊರೋನಾ ಅಪಾಯಕ್ಕೆ ತುತ್ತಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ.
ಮುಖ್ಯವಾಗಿ ಹೇಳುವುದಾದರೆ ಕೊರೋನಾ ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣಕ್ಕಿಂತ ಉತ್ತಮ ಮಾರ್ಗ ಮತ್ತು ಮದ್ದು ಇನ್ನೊಂದಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಜವಾಬ್ದಾರಿಗಳನ್ನು ಮರೆಯದೇ ಇದ್ದರೆ, ಸಾರ್ವಜನಿಕವಾಗಿ ನಮ್ಮ ಸಾಮಾನ್ಯ ಜೀವನಕ್ರಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಕೊರೋನಾದಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಇಲ್ಲದೇ ಹೋದಲ್ಲಿ ಮತ್ತೆ ಸರ್ಕಾರ ಕಳೆದ ಬಾರಿಯಂತೆಯೇ ಮತ್ತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವೇ ಕಾರಣರಾದಂತಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಕೊನೆಯದಾಗಿ ಹೇಳುವುದಾದರೆ, ಕೊರೋನಾ ನಿಯಂತ್ರಣದ ವಿಚಾರದಲ್ಲಿ ನಮ್ಮನ್ನು ನಾವು ಲಾಕ್ಡೌನ್ ಸ್ಥಿತಿ ಅಂದರೆ ನಿಯಂತ್ರಣಕ್ಕೆ ಒಳಪಡಿಸಿಕೊಂಡರೆ, ಕೊರೋನಾ ನಿಯಂತ್ರಣ ಕ್ರಮಗಳನ್ನು ಕ್ರಮವಾಗಿ ಮತ್ತು ಸರಿಯಾಗಿ ಅನುಸರಿಸಿದೆವೆಂದಾದಲ್ಲಿ ಮಾತ್ರ, ಸರ್ಕಾರ ಲಾಕ್ಡೌನ್ ಹೇರಿಕೆಯಂತಹ ಕಠಿಣ ನಿರ್ಧಾರಗಳನ್ನು ಮತ್ತೆ ತೆಗೆದುಕೊಳ್ಳದೇ ಇರುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂಗಳಂತಹ ಗಂಭೀರ, ಕಠಿಣ ಕ್ರಮಗಳತ್ತ ಸರ್ಕಾರ ಚಿಂತಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ನಮ್ಮ ನಮ್ಮ ಆರೋಗ್ಯ ರಕ್ಷಣೆಯ ಹೊಣೆಯನ್ನು ನಾವೇ ಹೊತ್ತುಕೊಂಡಲ್ಲಿ ಸರ್ಕಾರದ ಕಠಿಣ ನಿಯಮಗಳಿಂದ ಪಾರಾಗಬಹುದು.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.