ಕಾಸರಗೋಡು: ಈ ಬಾರಿಯ ಕೇರಳ ಚುನಾವಣೆ ಭಾರಿ ಸದ್ದು ಮಾಡುತ್ತಿದೆ, ಪಂಚರಾಜ್ಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವತ್ತ ಚಿತ್ತ ಹರಿಸಿರುವ ಬಿಜೆಪಿ ರಾಜ್ಯದಲ್ಲಿ ಮೇರು ನಾಯಕರನ್ನು ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದೆ. ಕೇರಳ ಭಾ.ಜ.ಪ ಅಧ್ಯಕ್ಷ ಕೆ. ಸುರೇಂದ್ರನ್ ಎರಡು ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿದಿದ್ದು, ಗೆಲುವು ಸಾಧಿಸುವ ತವಕದಲ್ಲಿದ್ದಾರೆ.
ಈ ಹಿಂದೆ ನಡೆದ 2016 ರ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಕೇವಲ 89 ಮತಗಳ ಅಂತರದಿಂದ ಸೋತಿದ್ದ ಸುರೇಂದ್ರನ್ ಈ ಬಾರಿ ಗೆಲುವನ್ನು ಅಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಈ ಬಾರಿಯ ಬಿಜೆಪಿ ಗೆಲುವು ಸಾಧಿಸಬಹುದಾದ ಕೆಲ ಕ್ಷೇತ್ರಗಳ ಬಗ್ಗೆ ಇಣುಕು ನೋಟ ಇಲ್ಲಿದೆ.
ಮಂಜೇಶ್ವರ- ಕಾಸರಗೋಡು ಜಿಲ್ಲೆಯ ಬಹಳ ಮಹತ್ವದ ವಿಧಾನಸಭಾ ಕ್ಷೇತ್ರವಾಗಿರುವ ಇಲ್ಲಿ ಹಲವು ದಶಕಗಳಿಂದ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದೆ. ಐಕ್ಯರಂಗದ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಏಣಿ ಚಿಹ್ನೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಎರಡು ದಶಕಗಳಿಂದ ತನ್ನ ಪ್ರಾಬಲ್ಯ ಮರೆದಿದೆ. ಕಳೆದ ಬಾರಿ ಲೀಗ್ ನೇತಾರ ಪಿ. ಬಿ. ಅಬ್ದುಲ್ ರಜಾಕ್ ವಿರುದ್ಧ ಕೇವಲ 89 ಮತಗಳ ಅಂತರದಿಂದ ಸೋತಿದ್ದ ಬಿ.ಜೆ.ಪಿ. ನಾಯಕ ಕೆ. ಸುರೇಂದ್ರನ್, ಶಾಸಕ ನಿಧನದ ನಂತರ ಏರ್ಪಟ್ಟ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ನಂತರದ ಉಪ ಚುನಾವಣೆಯಲ್ಲಿ ಐಕ್ಯರಂಗದ ಕಮರುದ್ದೀನ್ ಜಯಭೇರಿ ಬಾರಿಸಿದ್ದರು. ಜಯಗಳಿಸಿದ ಕೆಲವೇ ಕೆಲವು ದಿನಗಳಲ್ಲಿ ಫ್ಯಾಶನ್ ಗೋಲ್ಡ್ಹಣ ಅವ್ಯವಹಾರದಲ್ಲಿ ಮುಳುಗಿದ ಇವರ ಮೇಲೆ ಹಲವು ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಸ್ಥಳೀಯ ಅಭ್ಯರ್ಥಿಗೆ ವರದಾನವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಐಕ್ಯರಂಗ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಮಾಜಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಎ.ಕೆ.ಎಂ. ಅವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಇನ್ನೊಂದೆಡೆ ಕಾಞಂಗಾಡ್ ಮೂಲದ ವಿ.ವಿ. ರಮೇಶನ್ ಅವರನ್ನು ಎಡರಂಗ ತನ್ನ ಅಭ್ಯರ್ಥಿಯನ್ನಾಗಿಸಿ ಮಂಜೇಶ್ವರದಲ್ಲಿ ಕಣಕ್ಕಿಳಿಸಿದೆ. ಹಲವು ವರ್ಷಗಳಿಂದ ಮೂರನೇ ಸ್ಥಾನದಲ್ಲಿರುವ ಎಡರಂಗದ ಛಾಯೆ ವರ್ಷದಿಂದ ವರ್ಷಕ್ಕೆ ಕ್ಷೇತ್ರದಲ್ಲಿ ಕಡಿಮೆಯಾಗುತ್ತಿದೆ. ಯುವ ನಾಯಕರನ್ನು ಬೆಳೆಸದೆ ಇರುವುದು, ಪಕ್ಷದೊಳಗಿನ ಆಂತರಿಕ ಸಂಘರ್ಷ ಎಡ ಹಾಗೂ ಐಕ್ಯರಂಗದಲ್ಲಿನ ನಾಯಕರ ಕೊರತೆಗೂ ಹಲವು ಬಾರಿ ಕಾರಣವಾಗಿದೆ.
ಮಂಜೇಶ್ವರದಲ್ಲಿ ಸುರೇಂದ್ರನ್ ಹವಾ!
ಭಾನುವಾರದಂದು ದೆಹಲಿಯಿಂದ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮಂಗಳೂರಿನಿಂದ ಮಂಜೇಶ್ವರದ ಪೈವಳಿಕೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಸುರೇಂದ್ರನ್ ಆಗಮನದ ಬಗ್ಗೆ ಹೆಚ್ಚೇನು ಪ್ರಚಾರವಿಲ್ಲದಿದ್ದರೂ ಹೆಚ್ಚಿನ ಸಂಖ್ಯೆಯ ಯುವಕರು ಸ್ವಯಂಪ್ರೇರಿತರಾಗಿ ಆಗಮಿಸಿ ನಾಯಕನನ್ನು ಸ್ವಾಗತಿಸಿದರು. ನಂತರ ಜೋಡುಕಲ್ಲುವಿನಲ್ಲಿ ಸಜ್ಜಾದ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಶಾಸಕ ಸುನಿಲ್ ಕುಮಾರ್ ಕೇರಳ ರಾಜ್ಯದ ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತಿದ್ದು, ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಿಸಿಕೊಡುವ ಉತ್ಸಾಹದಲ್ಲಿದ್ದಾರೆ.
ಕಾಸರಗೋಡು- ಕ್ಷೇತ್ರದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಅಡ್ವ.ಕೆ ಶ್ರೀಕಾಂತ್ ಐಕ್ಯರಂಗಕ್ಕೆ ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ. ಎರಡು ಬಾರಿ ಕ್ಷೇತ್ರದ ಶಾಸಕರಾಗಿರುವ ಎನ್.ಎ. ನೆಲ್ಲಿಕುನ್ನು ಈ ಬಾರಿಯೂ ಮುಸ್ಲಿಂ ಲೀಗ್ ಪಕ್ಷದ ಏಣಿ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ. ಹಲವು ದಶಕಗಳಿಂದ ಯಾವುದೇ ಪ್ರಗತಿಪರ ಅಭಿವೃದ್ಧಿ ಲಕ್ಷ್ಯವನ್ನು ತಲುಪದೇ ಇರುವ ಕಾಸರಗೋಡು ಕ್ಷೇತ್ರಕ್ಕೆ ಬದಲಾವಣೆಯ ಅಗತ್ಯತೆಯಿದೆ. ಏಮ್ಸ್ ಆಸ್ಪತ್ರೆ, ಕೇಂದ್ರೀಯ ವಿ.ವಿ. ಸಮುಚ್ಚಯ, ಕಾಸರಗೋಡು ಮೆಡಿಕಲ್ ಕಾಲೇಜು ಸಂಕೀರ್ಣ, ಎಂಡೋಸಲ್ಫಾನ್ ಪೀಡಿತರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅಡ್ವ.ಕೆ ಶ್ರೀಕಾಂತ್ ಕ್ಷೇತ್ರದ ಬಿಜೆಪಿಯ ಭರವಸೆಯ ಬೆಳಕು. ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಶ್ರೀಕಾಂತ್ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನೀಡಿದ ಸ್ಪರ್ಧೆಯ ಹೊರತಾದ ಹೊಸ ಸಾಧನೆಯನ್ನು ಮಾಡಿ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಮತದಾರರದ್ದಾಗಿದೆ. ಕಾಸರಗೋಡು ಜಿಲ್ಲೆಯ ಒಟ್ಟು ಐದು ಕ್ಷೇತ್ರಗಳಾದ ಕಾಞಂಗಾಡು, ಉದುಮ, ತ್ರಿಕರಿಪುರ, ಮಂಜೇಶ್ವರ, ಕಾಸರಗೋಡುಗಳಲ್ಲಿ – ಭಾಜಪಾಗೆ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳು ಸಿಗುವ ಸಾಧ್ಯತೆಯಿದ್ದು, ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆಯಿದೆ. ಉಳಿದಂತೆ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ, ಮೆಟ್ರೊ ಮ್ಯಾನ್ ಸ್ಪರ್ಧಿಸುತ್ತಿರುವ ಪಾಲಕ್ಕಾಡ್, ನಟ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಸ್ಪರ್ಧಿಸುತ್ತಿರುವ ತ್ರಿಶೂರ್, ಆಲ್ಫೋನ್ಸ್ ಕಣ್ಣಂತ್ತಾನಂ ಸ್ಪರ್ಧಿಸುತ್ತಿರುವ ಕಾಂಜಿರಾಪಳ್ಳಿ, ಕಲ್ಲಿಕೋಟೆ ಉತ್ತರದಲ್ಲಿ ಸ್ಪರ್ಧೆಯಲ್ಲಿರುವ ಎಂ.ಟಿ. ರಮೇಶ್, ಶೋರ್ನೂರಿನಲ್ಲಿ ಸ್ಪರ್ಧೆಯಲ್ಲಿರುವ ಯುವ ಭಾಜಪ ನೇತಾರ ಸಂದೀಪ್ ವಾರ್ಯರ್ ಭರವಸೆ ಹುಟ್ಟಿಸಿರುವ ನಾಯಕರು ಸಹಿತ ಕ್ಷೇತ್ರಗಳಾಗಿವೆ. ಕಣ್ಣೂರಿನ ಧರ್ಮಡಂನಲ್ಲಿ ಪಿಣರಾಯಿ ವಿಜಯನ್ ವಿರುದ್ಧ ತೊಡೆತಟ್ಟಿ ನಿಂತಿರುವ ಭಾಜಪದ ಸಿ.ಕೆ. ಪದ್ಮನಾಭನ್ ಗೆಲುವನ್ನು ಸಹ ಅಲ್ಲೆಗೆಳೆಯುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.