ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನ ಕಾರಾಯ ನಮಃ ಶಿವಾಯ ||
ಇದು ಶಿವ ಪಂಚಾಕ್ಷರಿ ಸ್ತೋತ್ರದ ಮೊದಲ ಶ್ಲೋಕ …. ಶಿವನನ್ನು ಆದಿಯೋಗಿ ಎಂದೂ ಕರೆಯಲಾಗುತ್ತದೆ, ಅಂದರೆ ಯೋಗದ ಮೊದಲ ಗುರು. ಶಿವನ ಕೊರಳಲ್ಲಿ ಸುರುಳಿಯಾಕಾರದಲ್ಲಿರುವ ನಾಗರಾಜನು ಶಿವನ ಅತೀಂದ್ರಿಯ ಶಕ್ತಿಯ ಸಂಕೇತವಾಗಿದೆ. ಶಿವನ ಹಣೆಯ ಮಧ್ಯದಲ್ಲಿರುವ ಮೂರನೆಯ ಕಣ್ಣಿನಿಂದಾಗಿ ಶಿವನಿಗೆ ತ್ರಿಲೋಚನ ಎಂಬುದಾಗಿ ಹೆಸರು ಬಂದಿದೆ. ಭಸ್ಮದಿಂದ ಅಲಂಕೃತಗೊಂಡ ಶಿವನನ್ನು ಭಸ್ಮಾಂಗರಾಗ ಎಂದು ಕರೆಯಲಾಗುತ್ತದೆ. ಶಿವನು ಶಿಖೆಯಲ್ಲಿ ಹೊಂದಿರುವ ಅರ್ಧ ಚಂದ್ರವು ಜ್ಞಾನದ ಸಂಕೇತವಾಗಿದೆ. ಹರಿಯುವ ಗಂಗೆಯು ಪರಿಶುದ್ಧತೆಯ ಸಂಕೇತವಾಗಿದ್ದು, ತ್ರಿಶೂಲವು ಪ್ರಕೃತಿಯ ೩ ಗುಣಗಳಾದ ತಾಮಸ, ರಾಜಸ ಮತ್ತು ಸತ್ವ ಗುಣಗಳನ್ನು ಪ್ರತಿನಿಧಿಸುತ್ತದೆ. ಶಿವನನ್ನು ಯೋಗೇಶ್ವರ-ಯೋಗದ ಅಧಿಪತಿ, ಮಹೇಶ್ವರ- ಭೂತಗಣಗಳ ಅಧಿಪತಿ ಮತ್ತು ಬ್ರಹ್ಮಾಂಡದ ಪಂಚಭೂತಗಳಿಗೂ ಅಧಿಪತಿಯೆಂದು ಭಾವಿಸಲಾಗುತ್ತದೆ.
ಶಿವನು ತನ್ನ ಜ್ಞಾನವನ್ನು ಮೊತ್ತ ಮೊದಲಾಗಿ ತನ್ನ ಸಂಗಾತಿಯಾದ ಪಾರ್ವತಿ ದೇವಿಗೆ ನೀಡಿದ್ದಾನೆಂದು ಹೇಳಲಾಗುತ್ತದೆ. ನಂತರ ಮನುಕುಲದ ಒಳಿತಿಗಾಗಿ, ಮಹರ್ಷಿ ಮತ್ತು ಮುನಿಗಳ ಮುಖಾಂತರ ಮಾನವ ಕುಲಕ್ಕೂ ನೀಡಿದರು. ಯೋಗದ ಪ್ರತಿಯೊಂದು ತಾಂತ್ರಿಕತೆಯನ್ನು ಗಮನಿಸಿದರೆ ಶಿವನನ್ನೇ ಯೋಗದ ಮೊದಲ ಗುರು ಎಂದು ಪರಿಗಣಿಸಲಾಗುತ್ತದೆ. ಈ ಬೋಧನೆಗಳನ್ನು ಆಗಮ ಶಾಸ್ತ್ರ ಎಂದು ಕರೆಯಲಾಗುತ್ತದೆ. ಶಿವನು ಬೋಧಿಸಿದ ತತ್ವಗಳು ಹಲವು ಪಂಥಗಳ ಮೂಲಕ ಇಂದಿಗೂ ಅಸ್ತಿತ್ವದಲ್ಲಿದೆ. ಮಹೇಂದ್ರನಾಥ್, ಗೋರಕ್ಷನಾಥ್ ಕೂಡ ಶಿವನಿಂದ ಸಿದ್ಧಿಯನ್ನು ಪಡೆದ ಪಂಥಗಳಾಗಿವೆ. ಇವುಗಳು ನವನಾಥ್ ಎಂಬ ಸಂಪ್ರದಾಯದ ಭಾಗವಾಗಿದ್ದು, ಈ ಪಂಥಗಳು ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿದೆ. ದಕ್ಷಿಣದಲ್ಲಿ ಸಿದ್ದಿ ಅಗಸ್ಥಿಯಾರ್ [ಅಗಸ್ತ್ಯ ಮುನಿಗಳು] ಈ ಜ್ಞಾನವನ್ನು ಪಸರಿಸಿದರು. ಯೋಗ, ತಂತ್ರ, ಮಂತ್ರ ಮತ್ತು ಜ್ಯೋತಿಷ್ಯ ವಿಜ್ಞಾನಗಳಲ್ಲಿ ಪರಿಣತಿ ಹೊಂದಿದ ಸಿದ್ದರ ವಂಶಾವಳಿಯನ್ನು ರಚಿಸಿದ್ದರು. ಮುನಿಗಳು ರಚಿಸಿದ ಈ 18 ಸಿದ್ಧರ ಸಂಪ್ರದಾಯವು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ.
ಶಿವನು ಯಾವುದೇ ತತ್ವಗಳನ್ನು ಬೋಧನೆಯ ಮೂಲಕ ವಿವರಿಸಲಿಲ್ಲ, ಬದಲಾಗಿ ವಿಮೋಚನೆಯ ವಿಧಾನಗಳ ಬಗ್ಗೆ ನೇರವಾದ ಸೂಚನೆಗಳನ್ನು ನೀಡಿದ್ದರು. ಶಿವ ಸೂತ್ರಗಳು ಮತ್ತು ಭಾರವ ತಂತ್ರಗಳು ಆತ್ಮವನ್ನು ದೇಹ ಮತ್ತು ಮನಸ್ಸಿನ ಮಿತಿಗಳಿಂದ ಮುಕ್ತಗೊಳಿಸಲು ಸಹಾಯವನ್ನು ನೀಡುತ್ತದೆ. ನಿಜವಾದ ಆನಂದವನ್ನು ಹೊಂದಲು ಬಯಸುವವರಿಗೆ ಈ ತಂತ್ರಗಳು ದಾರಿದೀಪವಾಗಿದೆ. ಯಾವುದೇ ಗ್ರಂಥಗಳ ಸಹಾಯವಿಲ್ಲದೆ ಈ ಕಲೆಯನ್ನು ಗುರು ಶಿಷ್ಯ ಪರಂಪರೆಯ ಮೂಲಕ ಅಭಿವೃದ್ಧಿ ಪಡಿಸಲಾಯಿತು.
ಶಿವನನ್ನು ರೂಪದೊಂದಿಗೆ ಮತ್ತು ನಿರಾಕಾರನನ್ನಾಗಿ ಪೂಜಿಸಲಾಗುತ್ತದೆ. ರೂಪದಿಂದ ಪೂಜಿಸಲ್ಪಡುವ ಶಿವನನ್ನು ಪ್ರಬಲ ದೇವತೆ ಎಂದು ಪೂಜಿಸಲಾಗುತ್ತದೆ. ಶಿವನನ್ನು ತ್ರಿಮೂರ್ತಿಗಳಲ್ಲಿ ಒಬ್ಬರಾಗಿ ಪೂಜಿಸಲಾಗುತ್ತದೆ. ಶಿವನನ್ನು ಲಯ ಅಧಿಪತಿಯೆಂದು ಹೇಳಲಾಗುತ್ತದೆ. ನಿರಾಕಾರಿಯಾದ ಶಿವನನ್ನು ಶಿವಲಿಂಗದ ರೊಪದಲ್ಲಿ ಪೂಜಿಸಲಾಗುತ್ತದೆ ಮತ್ತು ಶಿವನು ಜೀವನದ ಅಂತಿಮ ಸತ್ಯ ಎಂದು ಹೇಳಲಾಗುತ್ತದೆ. ಶಿವನ ಶಿವಲಿಂಗವನ್ನು ಸೃಷ್ಟಿಯ ಸಮಯದಲ್ಲಿ ಸೃಷ್ಟಿಸಿದ ಮೊದಲ ರೂಪ ಎಂದು ಹೇಳಲಾಗುತ್ತದೆ. ಶಿವನನ್ನು ಶಕ್ತಿಯ ರೂಪದಲ್ಲಿಯೂ ಪೂಜಿಸಲಾಗುತ್ತದೆ. ಅರ್ಧನಾರೀಶ್ವರ ಎಂದು ಕರೆಯಲ್ಪಡುವ ಶಿವನನ್ನು ಶಕ್ತಿಯಿಂದ ಬೇರ್ಪಡಿಸಲಾಗದಂತೆಯೇ ಸೃಷ್ಟಿಯನ್ನು ಸೃಷ್ಟಿಕರ್ತನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ನಡೆಯುವ ಸೃಷ್ಟಿಯ ಪರಿಚಲನೆಯು ಶಿವ ತಾಂಡವ ಎಂದು ಕರೆಯಲ್ಪಡುತ್ತದೆ.
ಯೋಗ ಸಂಸ್ಕೃತಿಯಲ್ಲಿ ಶಿವನನ್ನು ದೇವರನ್ನಾಗಿ ಪೂಜಿಸಲಾಗುವುದಿಲ್ಲ. ಬದಲಾಗಿ ಶಿವನನ್ನು ಆದಿಯೋಗಿ ಎಂದು ಹೇಳಲಾಗುತ್ತದೆ, ಅಂದರೆ ಮಾನವನ ಜೀವನದಲ್ಲಿ ಯೋಗದ ಬೀಜವನ್ನು ಸೃಷ್ಟಿಸಿದವನು ಎಂದು. ಯೋಗದ ಇತಿಹಾಸವು ಪುರಾಣಗಳ ಪ್ರಕಾರ 15 ಸಾವಿರ ವರ್ಷಗಳ ಹಿಂದೆ ಹಿಮಾಲಯದಲ್ಲಿ ಮೈ ಮರೆತು ತಾಂಡವ ನೃತ್ಯವನ್ನು ಪ್ರದರ್ಶಿಸುತ್ತಿದ್ದಾಗ ಸಂಪೂರ್ಣ ಜ್ಞಾನೋದಯವನ್ನು ಪಡೆದನು. ಜ್ಞಾನೋದಯವನ್ನು ಪಡೆದ ಶಿವನು ಭಾವಪರವಶತೆಯನ್ನು ಹೊಂದಿ ಹಿಂದೆಂದಿಗಿಂತಲೂ ತೀವ್ರವಾಗಿ ನರ್ತಿಸಲು ಪ್ರಾರಂಭಿಸಿದನು ಮತ್ತು ಹಲವು ಸಮಯದ ನೃತ್ಯದ ಬಳಿಕ ಸ್ಥಿರವಾಗಿ ಧ್ಯಾನಸ್ಥನಾದನು. ಮೊದಲೆಂದೂ ನೋಡಿರದ ಈ ವಿಶೇಷ ಸಂದರ್ಭವನ್ನು ನೋಡಲು ಹಲವಾರು ಜನ ಒಟ್ಟು ಸೇರಿದರು ಮತ್ತು ಜನರಿಗೂ ಅದನ್ನು ಕಲಿಯುವ ಕುತೂಹಲವಿತ್ತು. ಆದರೆ ಧ್ಯಾನಸ್ಥನಾಗಿದ್ದ ಶಿವನಿಗೆ ಸುತ್ತಮುತ್ತಲಿನಲ್ಲಿ ಏನಾಗುತ್ತಿರುವುದೆಂಬ ಪರಿವೆಯೇ ಇರಲಿಲ್ಲ. ಶಿವನು ಬಾಹ್ಯ ಪ್ರಜ್ಞೆಗೆ ಮರಳುವುದನ್ನು ಕಾಯುತ್ತಿದ್ದ ಹಲವಾರು ಜನರು ಸಮಯ ಕಳೆದಂತೆ ಕರಗಿ ಹೋದರು ಹಾಗು ಕೊನೆಯಲ್ಲಿ ಕೇವಲ 7 ಜನರು ಉಳಿದುಕೊಂಡರು. ಬಾಹ್ಯ ಪ್ರಜ್ಞೆಗೆ ಮರಳಿದ ಶಿವನನ್ನು ಈ 7 ಜನರು ನೀವು ತಿಳಿದುಕೊಂಡ ಜ್ಞಾನವನ್ನು ನಾವೂ ತಿಳಿದುಕೊಳ್ಳಬೇಕು ಎಂದು ಕೇಳಿಕೊಂಡರು, ಆದರೆ ಶಿವನು ಅವರ ಕೋರಿಕೆಯನ್ನು ತಳ್ಳಿಹಾಕಿದನು.
ಶಿವನ ಕೃಪೆಯನ್ನು ಪಡೆದು ಜ್ಞಾನವನ್ನು ಪಡೆದ ಈ 7 ಜನರೇ ಮುಂದೆ ಸಪ್ತರ್ಷಿಗಳು ಎಂದು ಖ್ಯಾತರಾದರು. ಮಾನವನು ತನ್ನ ಇತಿಮಿತಿಗಳನ್ನು ಮೀರಿ ವಿಕಸನಗೊಳ್ಳುವ ಈ ಜ್ಞಾನವನ್ನು ಜಗತ್ತಿನಲ್ಲಿ ಪಸರಿಸಲು ಸಪ್ತರ್ಷಿಗಳನ್ನು ವಿಶ್ವದ 7 ಮೂಲೆಗಳಿಗೆ ಕಳುಹಿಸಲಾಯಿತು. ಜೀವನದ ಉನ್ನತಿಗೇರಲು ಜಾತಿಗಳ ತರ್ಕವು ಅನುಪಯುಕ್ತವಾದದ್ದು, ಭೌತಿಕವಲ್ಲದ ಬೇರೆ ಸಂತೋಷವನ್ನು ಹೊಂದಲು ಇರುವ ಮಾರ್ಗಗಳನ್ನು ಯೋಗದಲ್ಲಿ ವಿವರಿಸಲಾಗುತ್ತದೆ. ಅಸ್ಥಿತ್ವದ ಯಾವುದೇ ಮಿತಿಗಳನ್ನು ತೊಡೆದು ಹಾಕಿ ಉನ್ನತಿಯನ್ನು ಹೇಗೆ ಸಾಧಿಸಬೇಕು ಎಂಬುದನ್ನು ಕೂಡ ಯೋಗವಿದ್ಯೆಯು ನಿದರ್ಶಿಸುತ್ತದೆ. ಮಾನವನು ತನ್ನ ಮಿತಿಗಳನ್ನು ಮೀರಿ ಅಂತಿಮ ಸಾಮರ್ಥ್ಯವನ್ನು ತಲುಪುವ 112 ಮಾರ್ಗಗಳನ್ನು ಯೋಗ ವಿದ್ಯೆಯು ತೋರಿಸುತ್ತದೆ. ಯೋಗವು ಮಾನವನ ವಿಮೋಚನೆ ಮತ್ತು ಯೋಗಕ್ಷೇಮಕ್ಕಿರುವ ಏಕೈಕ ಮಾರ್ಗವಾಗಿದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.