ಹದಿನಾಲ್ಕು ವರ್ಷ ವಯಸ್ಸನ್ನು ನಾವು ಹದಿಹರೆಯ ಎನ್ನುತ್ತೇವೆ. ಇಂದಿನ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳನ್ನು ನಾವು ಮುಗ್ಧರು ಎನ್ನುತ್ತೇವೆ. ಕೆಳಗಿಳಿಸಿದರೆ ಇರುವೆ ಕಚ್ಚಬಹುದು, ತಲೆಯ ಮೇಲೆ ಹೊರಿಸಿದರೆ ಕಾಗೆಯು ಕಚ್ಚಿ ಒಯ್ಯಬಹುದು ಎಂಬ ಭಯದಿಂದ ಇಂದಿನ ದಿನಗಳಲ್ಲಿ ಮಕ್ಕಳನ್ನು ಜತನದಿಂದಲೂ ಮುದ್ದಿನಿಂದಲೂ ಬೆಳೆಸುತ್ತೇವೆ. ಇಪ್ಪತ್ತೆರಡು ವಯಸ್ಸಿನ ಯುವತಿಯರು ತಪ್ಪು ಮಾಡುವಾಗಲೂ, ಅಪರಾಧಗಳನ್ನು ಮಾಡುವಾಗಲೂ ನಾವು “ಸಣ್ಣ ವಯಸ್ಸು, ಅರಿವಿಲ್ಲದೆ ಮಾಡಿರಬಹುದು ಸಣ್ಣ ಪ್ರಾಯವನ್ನು ಗಮನಿಸಿ ಕ್ಷಮಿಸೋಣ ” ಎನ್ನುತ್ತೇವೆ. ಅಪರಾಧ ಮಾಡಿದಾಗಲೂ ಶಿಕ್ಷಿಸುವ ಬದಲಾಗಿ “ಚಿಕ್ಕ ವಯಸ್ಸು, ಭವಿಷ್ಯ ಹಾಳಾಗುತ್ತದೆ” ಎನ್ನುವ ಕಾರಣಗಳನ್ನು ನೀಡಿ ಅನೇಕರು ಸಮರ್ಥನೆಗೆ ಇಳಿಯುವುದನ್ನೂ ನೋಡಿದ್ದೇವೆ. ಆದರೆ ಹಲವು ದಶಕಗಳಿಗೂ ಮುನ್ನ ಸಾಮಾಜಿಕ ಪರಿಸ್ಥಿತಿಯು ಭಿನ್ನವಾಗಿತ್ತು. ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಅತ್ಯಂತ ಹೆಚ್ಚಿನ ತಾರತಮ್ಯವಿತ್ತು. ಹದಿಹರೆಯದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ತವರಿನಿಂದ ಸಾಗಹಾಕಿ ಕೈ ತೊಳೆದುಕೊಳ್ಳುವ ಪರಿಸ್ಥಿತಿಯಿತ್ತು. ಆದರೆ ಅಂದೂ ಹದಿಹರೆಯದ ಹೆಣ್ಣುಮಕ್ಕಳು ಮುಗ್ಧರಾಗಿದ್ದರು. ಸಾಮಾಜಿಕ ಕಟ್ಟುಪಾಡುಗಳು ಹೆಚ್ಚಾಗಿದ್ದ ಆ ಸಂದರ್ಭದಲ್ಲೂ ಕಟ್ಟಳೆಗಳನ್ನು ಮುರಿದು, ಯಾರೂ ಊಹಿಸದ ರೀತಿಯಲ್ಲಿ ಸಾಹಸ ಮೆರೆದ ಸಾಮಾನ್ಯ ಮಾಧ್ಯಮ ವರ್ಗದ ಹದಿನಾಲ್ಕು ವರ್ಷದ ವೀರ ಬಾಲಿಕೆಯೊಬ್ಬಳ ನೈಜ ಕಥೆಯಿದು.
ಸ್ವಾತಂತ್ರ ಹೋರಾಟದಲ್ಲಿ ಯಾವ ಕೊಡುಗೆಯನ್ನು ನೀಡದಿದ್ದರೂ, ಹೋರಾಟದತ್ತ ಪ್ರಯತ್ನವನ್ನೇ ಮಾಡದಿದ್ದರೂ ಅದರ ಫಲವನ್ನು ಉಣ್ಣುವ ಮತ್ತು ಹೋರಾಟದ ಶ್ರೇಯಸ್ಸನ್ನು ತಾವೇ ಪಡೆದು ಮೆರೆಯುವ ಅನೇಕರನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಇಂದಿಗೂ ಇಂತಹಾ ಅನೇಕರನ್ನು ನಾವು ಪ್ರತ್ಯಕ್ಷವಾಗಿಯೂ ನೋಡುತ್ತಿದ್ದೇವೆ. ಆದರೆ ಸ್ವಾತಂತ್ರ ಹೋರಾಟದಲ್ಲಿ ಸ್ವತಃ ಪಾಲ್ಗೊಂಡು, ಚಿತ್ರ ಹಿಂಸೆಯನ್ನು ಅನುಭವಿಸುತ್ತಾ ತನ್ನ ಜೀವನದ ಅಮೂಲ್ಯ ವರ್ಷಗಳನ್ನು ಕಾರಾಗೃಹದ ಸರಳುಗಳ ಹಿಂದೆ ಕಳೆದ ಬಳಿಕವೂ ಸಾಮಾನ್ಯರಂತೆ ಜೀವಿಸಿದ್ದ ಆದರ್ಶ ಮಹಿಳೆಯೇ “ಸುನೀತಿ ಚೌಧರಿ”. ಸುನೀತಿ ಚೌಧರಿ ಪಶ್ಚಿಮ ಬಂಗಾಳದ ಕೋಮಿಲ್ಲಾ ಜಿಲ್ಲೆಯಲ್ಲಿ 1917 ರ ಮೇ 22 ರಂದು ಜನಿಸಿದರು. ಅಂದು ಪಶ್ಚಿಮ ಬಂಗಾಳ ರಾಜ್ಯದ ಭಾಗವಾಗಿದ್ದ ಈ ಪ್ರದೇಶವು ಇಂದು ಬಾಂಗ್ಲಾ ದೇಶದಲ್ಲಿದೆ. ಬಾಲ್ಯದಲ್ಲಿ ಇತರ ಸಾಮಾನ್ಯ ಮಕ್ಕಳಂತೆ ಕತ್ತಲನ್ನು ಕಂಡು ಭಯಪಡುತ್ತಿದ್ದ ಬಾಲಕಿಯು ಮುಂದೆ ದೇಶದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಇತಿಹಾಸವನ್ನು ರಚಿಸುತ್ತಾಳೆಂದು ಯಾರೂ ಭಾವಿಸಿರಲಿಲ್ಲ.
1930 ರ ಸಂದರ್ಭವದು, ಬ್ರೀಟೀಷ್ ಅಧಿಕಾರಿಗಳು ಮತ್ತು ಪೊಲೀಸರ ದೌರ್ಜನ್ಯ ಮತ್ತು ಕ್ರೌರ್ಯವು ಮಿತಿಮೀರಿತ್ತು. ಸ್ವಾತಂತ್ರ್ಯ ಪಡೆಯುವ ಭಾರತೀಯರ ತುಡಿತವೂ ಅಷ್ಟೇ ಹೆಚ್ಚಾಗಿತ್ತು ಮಾತ್ರವಲ್ಲದೆ ಪ್ರತಿಭಟನೆಗಳು ಮತ್ತು ಬ್ರಿಟೀಷರ ಆಡಳಿತದ ವಿರೋಧದ ಅಲೆಯೂ ಜೋರಾಗಿತ್ತು. ಹೋರಾಟವನ್ನು ನಡೆಸುತ್ತಿದ್ದ ಭಾರತೀಯರನ್ನು ಅತ್ಯಂತ ಕ್ರೂರವಾಗಿ ದಮನಿಸಲಾಗುತ್ತಿತ್ತು ಮಾತ್ರವಲ್ಲದೆ ಹೋರಾಟಕ್ಕೆ ಯಾವುದೇ ಸಂಬಂಧವಿಲ್ಲದ ಮುಗ್ಧ ನಾಗರೀಕರನ್ನೂ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿತ್ತು ಮತ್ತು ವಿನಾಕಾರಣ ಬಂಧಿಸಿ ಬಂಧೀಖಾನೆಗಳಿಗೆ ತಳ್ಳಲಾಗುತ್ತಿತ್ತು. ಈ ಎಲ್ಲಾ ಘಟನೆಗಳನ್ನು ಸಮೀಪದಿಂದ ಗಮನಿಸುತ್ತಿದ್ದ ಹೆದರುಪುಕ್ಕಲ ಸಾಮಾನ್ಯ ಬಾಲಕಿಯು ಅಸಾಧಾರಣ ಧೈರ್ಯವನ್ನು ಮೈಗೂಡಿಸಿಕೊಳ್ಳುತ್ತಾ ಬೆಳೆಯುತ್ತಿದ್ದಳು. ಫೇಜ್ಉನ್ನೀಸಾ ಬಾಲಕಿಯರ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ ಬಾಲಕಿ ಸುನೀತಿ ಚೌಧರಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ “ಉಲ್ಲಾಸ್ಕರ್ ದತ್ತರಿಂದ” ಬಹಳ ಪ್ರಭಾವಿತಳಾಗಿದ್ದಳು. ಶಾಲೆಯಲ್ಲಿ ಪ್ರಫುಲ್ಲಾ ನಳಿನಿ ಚಂದ್ರರು ಬಾಲಕಿ ಸುನೀತಿ ಚೌಧರಿಯ ಒಡನಾಡಿಯಾಗಿದ್ದರು, ಅವರು ಬ್ರಿಟೀಷರಿಂದ ನಿಷೇಧಿಸಲ್ಪಟ್ಟಿದ್ದ ಅನೇಕ ಕ್ರಾಂತಿಕಾರಿ ಪುಸ್ತಕಗಳನ್ನು ಸುನೀತಿ ನೀಡುತ್ತಾ ಅವಳಲ್ಲಿ ಕ್ರಾಂತಿಕಾರಿ ಮನೋಭಾವವು ಮೂಡಲು ಕಾರಣರಾದರು. ಈ ಅಸಾಮಾನ್ಯ ಬಾಲಕಿಯು ಸ್ವಾಮಿ ವಿವೇಕಾನಂದರ “ಜೀವನವು ಮಾತೃಭೂಮಿಗಾಗಿ ನೀಡಬೇಕಾದ ತ್ಯಾಗ” ಎಂಬ ಮಾತಿನಿಂದ ಬಹುವಾಗಿ ಪ್ರೇರಣೆಯನ್ನು ಪಡೆದಿದ್ದಳು.
ಬಾಲಕಿ ಸುನೀತಿ ಚೌಧರಿ ತ್ರಿಪುರ ಜಿಲ್ಲಾ ಸಂಘಟನೆಯ ಸಕ್ರಿಯ ಕಾರ್ಯಕರ್ತೆಯಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸರು ಅವರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಪಥಸಂಚಲವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಳು. ಆಕೆ ಸದಸ್ಯೆಯಾಗಿದ್ದ “ಛತ್ರಿ ಸಂಘ” ಸಂಘಟನೆಯು “ಯುಗಾಂತರ” ಸಂಸ್ಥೆಯ ಸಹ ಸಂಘಟನೆಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ತರಬೇತಿಗಳನ್ನು ನೀಡಲಾಗುತ್ತಿತ್ತು. ಇಲ್ಲಿನ ಧೈರ್ಯಶಾಲೀ ಬಾಲಕಿಯರು, ನಿಷೇಧಿಸಲ್ಪಟ್ಟ ಕ್ರಾಂತಿಕಾರಿ ಪತ್ರಿಕೆ, ಶಸ್ತ್ರಾಸ್ತ ಮತ್ತು ಹಣದ ಸಾಗಾಣಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಪ್ರಫುಲ್ಲ, ಸುನೀತಿ ಚೌಧರಿ ಮತ್ತು ಶಾಂತಿಸುಧಾ ಘೋಷ್ ಇನ್ನೂ ಹೆಚ್ಚಿನ ಮತ್ತು ಬಾಲಕರಿಗೆ ಸಮಾನವಾದ ಜವಾಬ್ದಾರಿಯನ್ನು ತಮಗೆ ನೀಡುವಂತೆ ಆಗ್ರಹಿಸುತ್ತಿದ್ದರು. ಕೊನೆಗೆ ಬೀರೇಂದ್ರ ಭಟ್ಟಾಚಾರ್ಯ ಎಂಬ ಪ್ರಮುಖ ಕ್ರಾಂತಿಕಾರಿಯೊಬ್ಬರು, ಈ ಮೂವರು ಬಾಲಕಿಯರನ್ನು ಪರಿಶೀಲಿಸಿ, ಅವರು ಅತ್ಯಂತ ಧೈರ್ಯವಂತರೆಂದು ನಿರ್ಧರಿಸಿದರು. ತ್ರಿಪುರಾ ವಿದ್ಯಾರ್ಥಿ ಸಂಘಟನೆಯ ನಾಯಕರಾದ ಅಖಿಲ್ ಚಂದ್ರ ನಂದಿಯು ಮಾನ್ಯವತಿ ಬೆಟ್ಟದಲ್ಲಿ ಈ ಮೂರು ವೀರ ಬಾಲಕಿಯರಿಗೆ ಬಂದೂಕು ಚಲಾಯಿಸುವ ತರಬೇತಿಯನ್ನು ನೀಡುತ್ತಿದ್ದರು. ಪುಟ್ಟ ಬಾಲಕಿಯ ತೋರು ಬೆರಳಿನಿಂದ ಟ್ರಿಗರ್ ಒತ್ತಲು ಸಾಧ್ಯವಾಗದಾಗ ಸುನೀತಿಯು ಮಧ್ಯದ ಬೆರಳನ್ನು ಬಳಸುವ ಮೂಲಕ ಬಂದೂಕು ಚಲಾಯಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಳು. ಸತ್ಯಾಗ್ರಹವನ್ನು ಮುರಿಯಲು ಯಾವ ಕ್ರೌರ್ಯವನ್ನೂ ಮೆರೆಯಬಲ್ಲ, ಅನೇಕ ನಾಯಕರನ್ನು ಬಂಧಿಸಿ ಜೈಲಿಗಟ್ಟಿದ್ದ ಜಿಲ್ಲಾ ನ್ಯಾಯಾಧೀಶ ಚಾರ್ಲ್ಸ್ ಜೆಫ್ರಿ ಬುಕ್ಲ್ಯಾಂಡ್ ಸ್ಟೆವೆನ್ಸ್ ಎಂಬ ಕ್ರೂರಿಗೆ ಪಾಠ ಕಲಿಸುವುದು ಸುನೀತಿ ಮತ್ತು ಶಾಂತಿ ಘೋಷರ ಗುರಿಯಾಗಿತ್ತು.
1931 ಡಿಸೆಂಬರ್ 14 ರಂದು ಪೂರ್ವಾಹ್ನ 10 ಗಂಟೆಯ ಸಮಯದಲ್ಲಿ ಚಳಿಯಿಂದ ರಕ್ಷಣೆಯನ್ನು ಪಡೆಯಲು ಸೀರೆಯ ಮೇಲೆ ರೇಷ್ಮೆಯ ವಸ್ತ್ರವನ್ನು ಹೊದ್ದಿದ್ದ ಇಬ್ಬರು ಬಾಲಕಿಯರು, ಸ್ವಲ್ಪ ಅಂಜಿಕೆ, ಸ್ವಲ್ಪ ನಾಚಿಗೆ ಮತ್ತು ಉತ್ಸಾಹದಿಂದ ಜಿಲ್ಲಾ ನ್ಯಾಯಾಧೀಶರ ಬಂಗಲೆಯ ಮುಂದೆ, ನ್ಯಾಯಾಧೀಶರ ಭೇಟಿಗಾಗಿ ಕಾದು ನಿಂತಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ಹೊರ ಬಂದ ಚಾರ್ಲ್ಸ್ನ ಕೈಯಲ್ಲಿ ಬಾಲಕಿಯರು ಮನವಿ ಪತ್ರವೊಂದನ್ನು ನೀಡಿದರು. ಇಲಾ ಸೆನ್ ಮತ್ತು ಮೀರಾ ದೇವಿ ಎಂಬ ಬಾಲಕಿಯರು “ಬಾಲಕಿಯರಿಗಾಗಿ ಈಜುಕೊಳವನ್ನು” ನಿರ್ಮಿಸುವಂತೆ ಮನವಿ ಪತ್ರವೊಂದನ್ನು ತಂದಿದ್ದರು. ಬಾಲಕಿಯರ ವಿನಮ್ರತೆ ಮತ್ತು ಹರಕು ಆಂಗ್ಲಭಾಷೆಯ ಬಳಕೆಯು ಅದೆಷ್ಟು ಉತ್ತಮವಾಗಿತ್ತೆಂದರೆ, ಯಾರೂ ಅವರ ಗುರುತಿನ ಬಗ್ಗೆ ಸಂದೇಹಿಸಲು ಸಾಧ್ಯವಿರಲಿಲ್ಲ. ಬಾಲಕಿಯರ ಮನವಿಯನ್ನು ಮನ್ನಿಸಿದ ಚಾರ್ಲ್ಸ್ ತನ್ನ ಕೊಠಡಿಗೆ ತೆರಳಿ ಮನವಿ ಪಾತ್ರಕ್ಕೆ ಸಹಿಯನ್ನು ಹಾಕಿ ಹೊರಬಂದ ತಕ್ಷಣ ಈ ಇಬ್ಬರು ಬಾಲಕಿಯರೂ ತಾವು ಹೊದ್ದಿದ್ದ ಮೇಲ್ವಸ್ತ್ರವನ್ನು ಕಿತ್ತೆಸೆದು ಅವನ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದರು. ತಕ್ಷಣವೇ ಅಲ್ಲಿದ್ದ ಕಾವಲುಗಾರರು ಈ ಬಾಲಕಿಯರನ್ನು ಬಂಧಿಸಲು ಧಾವಿಸಿ ಬಂದರು.
ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಬಾಲಕಿಯರು ಭಯಗೊಂಡು ತಪ್ಪಿಸಿ ಓಡಲು ಯಾವುದೇ ಪ್ರಯತ್ನವನ್ನು ನಡೆಸಲಿಲ್ಲ. ಬಂಧಿಸಲ್ಪಟ್ಟ ಬಳಿಕ ಅವರ ಮೇಲೆ ಯಾವ ರೀತಿಯಲ್ಲಿ ಕ್ರೌರ್ಯ ಮೆರೆಯಲಾಗುತ್ತದೆ ಎಂಬ ಅರಿವು ಇಬ್ಬರು ಬಾಲಕಿಯರಿಗೂ ಚೆನ್ನಾಗಿಯೇ ತಿಳಿದಿತ್ತು. ಅವರ ಸಂಘಟನೆಯ ಬಗ್ಗೆ ತಂತ್ರಗಾರಿಕೆಯ ಬಗ್ಗೆ ವಿವರ ನೀಡುವಂತೆ ಅವರನ್ನು ಪರಿ ಪರಿಯಾಗಿ ಹಿಂಸಿಸಲಾಯಿತು, ಬೆರಳುಗಳ ತುದಿಯಲ್ಲಿ ಸೂಜಿಗಳಿಂದ ಚುಚ್ಚಲಾಯಿತು. ಇಷ್ಟು ಮಾತ್ರವಲ್ಲದೆ ತಪಾಸಣೆಯ ಹೆಸರಿನಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಲಾಗಿತ್ತು. ಆದರೂ ವೀರ ಬಾಲಕಿಯರು ತಮ್ಮ ಕುರಿತಾಗಿ ಯಾವುದೇ ಗುಟ್ಟನ್ನು ಹೇಳಲಿಲ್ಲ. ನ್ಯಾಯಾಲಯದಲ್ಲೂ ತಮ್ಮ ದಿಟ್ಟ ನಡವಳಿಕೆಯಿಂದ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಬಾಲಕಿಯರು, ರಾಜಕೀಯ ಬಂಧಿಗಳನ್ನು ವಿಚಾರಣೆ ನಡೆಸುವಾಗ ಪಾಲಿಸಬೇಕಾದ ನಿಯಮದಂತೆ ತಮಗೆ ಕುಳಿತುಕೊಳ್ಳಲು ಆಸನವನ್ನು ನೀಡಲಿಲ್ಲ ಎಂಬ ಕಾರಣಕ್ಕಾಗಿ ಈ ಬಾಲಿಕೆಯರು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಬೆನ್ನು ತೋರಿ ನಿಂತಿದ್ದರು. ಬಾಲಕಿಯರು ತಮಗೆ ಮರಣ ದಂಡನೆ ವಿಧಿಸಲಾಗುತ್ತದೆ ಎಂದು ಭಾವಿಸಿದ್ದರು, ಆದರೆ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಕಾರಾಗೃಹದಲ್ಲಿ ಬಂಧಿಯಾಗಿದ್ದಾಗ ನೀಡಲಾಗುತ್ತಿದ್ದ ಕೆಟ್ಟ ಆಹಾರ ಮತ್ತು ಉಡುಪುಗಳಿಂದಲೂ ಬಾಲಕಿ ಸುನೀತಿ ವಿಚಲಿತಳಾಗಲಿಲ್ಲ. ಈಕೆಯು ಕ್ರಾಂತಿಕಾರಿಯಾಗಿದ್ದಳೆಂಬ ಏಕೈಕ ಕಾರಣಕ್ಕಾಗಿ ಅವಳ ತಂದೆಗೆ ನೀಡುತ್ತಿದ್ದ ಪಿಂಚಣಿಯನ್ನು ಬ್ರಿಟೀಷ್ ಸರಕಾರವು ತಡೆಹಿಡಿಯಿತು. ಹಿರಿಯ ಸಹೋದರನನ್ನು ವಿನಾಕಾರಣ ಬಂಧಿಸಿ ಜೈಲಿಗಟ್ಟಲಾಯಿತು, ಕಿರು ಸಹೋದರನು ಆಹಾರದ ಅಭಾವದಿಂದ ಅಪೌಷ್ಟಿಕತೆಗೆ ಬಲಿಯಾಗಿ ಮರಣ ಹೊಂದಿದನು. ಈ ಎಲ್ಲಾ ವಿಚಾರಗಳೂ ಬಂಧಿಯಾಗಿದ್ದ ಸುನೀತಿಗೆ ತಿಳಿದರೂ ಕೂಡ ಆಕೆಯೆಂದೂ ತನ್ನ ನಿಲುವುಗಳಿಂದ ಹಿಮ್ಮೆಟ್ಟಲಿಲ್ಲ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನಡೆದ ಮಾತುಕತೆಗಳ ಅನ್ವಯ 1939 ರ ಡಿಸೆಂಬರ್ 6 ರಂದು 22 ವರ್ಷ ವಯಸ್ಸಿನ ಯುವತಿ ಸುನೀತಿ ಚೌಧರಿಯನ್ನು ಬಂಧಮುಕ್ತಗೊಳಿಸಲಾಯಿತು. ಬಂಧನದಿಂದ ಹೊರಬಂದ ಸುನೀತಿ ಮುಂದೆ ತನ್ನ ವಿಧ್ಯಾಭ್ಯಾಸವನ್ನು ಮುಂದುವರೆಸಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನಿಂದ ವೈದ್ಯಪದವಿಯನ್ನು ಪಡೆದುಕೊಂಡರು. ಬಳಿಕ ತನ್ನ ಸಹ ಕ್ರಾಂತಿಕಾರಿಯಾಗಿದ್ದ ಪ್ರದ್ಯೋಡ್ ಕುಮಾರ್ ಘೋಷ್ರನ್ನು ವಿವಾಹವಾದರು.
ಭಾರತವು 1947 ರಲ್ಲಿ ಸ್ವಾತಂತ್ರವನ್ನು ಪಡೆದ ಬಳಿಕ 1951 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳೆರಡೂ ಕೇಳಿದರೂ ಸುನೀತಿ ಚೌಧರಿ ರಾಜಕೀಯವನ್ನು ನಿರಾಕರಿಸಿ ವೈದ್ಯ ವೃತ್ತಿಯನ್ನು ಮುಂದುವರೆಸಿ ತಮ್ಮ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಅಧಿಕಾರದ ಲಾಲಸೆಗಾಗಿ ಆತ್ಮಗೌರವವನ್ನೂ ಮಾರಿಕೊಳ್ಳಲು ತಯಾರಾಗಿದ್ದ ನಾಯಕರ ಮತ್ತು ಹೋರಾಟಗಾರರೆಂಬ ಕಾರಣಕ್ಕಾಗಿ ಅಧಿಕಾರ ಮತ್ತು ಸೌಲಭ್ಯಗಳನ್ನು ಪಡೆದು ಬೀಗಿದ ನಾಯಕರ ಮಧ್ಯೆ ಸುನೀತಿ ಚೌಧರಿ ಭಿನ್ನವಾಗಿ ನಿಲ್ಲುತ್ತಾರೆ. ಅನೇಕ ವರ್ಷಗಳ ಕಾಲ ಸಮಾಜಸೇವೆಯಲ್ಲಿ ತೊಡಗಿದ್ದ ಸುನೀತಿ ಚೌಧರಿ 1988 ರ ಜನವರಿ 12 ರಂದು ಕೊನೆಯುಸಿರೆಳೆಯುತ್ತಾರೆ. ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡಬೇಕಾಗಿದ್ದ ಹೆಸರು ಯಾವ ಪಠ್ಯಪುಸ್ತಕದಲ್ಲೂ ಕಾಣಿಸಿಕೊಳ್ಳದೆ ಅಜ್ಞಾತವಾಗಿ ಉಳಿದುಹೋಯಿತು. ಮರೆಯದಿರೋಣ ಅವರ ತ್ಯಾಗ ಶೌರ್ಯ ಮತ್ತು ಪರಾಕ್ರಮಗಳನ್ನು. ಏಕೆಂದರೆ ಅವರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಅಲ್ಲವೇ ??
✍️ ದೀಪಾ ಜಿ. ಭಟ್
ಮಾಹಿತಿ : ದಿ ಬೆಟರ್ ಇಂಡಿಯಾ, ದಿ ಫೆಮಿನಿಸಂ ಇಂಡಿಯಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.