ಕಾಸರಗೋಡು: ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗ ಆಡಳಿತವು ರಾಜ್ಯವನ್ನು ಸಂಪೂರ್ಣವಾಗಿ ಭ್ರಷ್ಠಾಚಾರದ ಕೂಪಕ್ಕೆ ದೂಡಿದೆ. ರಾಜ್ಯದಲ್ಲಿ ಇನ್ನಿಲ್ಲದ ಅಸ್ತಿರತೆ ಮೂಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಕಾಸರಗೋಡಿನ ತಾಳಿಪಡ್ಪು ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರಾರ್ಥ ಆರಂಭಗೊಂಡ ವಿಜಯಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿರುವ ಹಲವು ರಾಜ್ಯಗಳು ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದರ ಪ್ರಯೋಜನವನ್ನು ಪಡೆಯುತ್ತಿವೆ. ಆದರೆ ಕೇರಳ ರಾಜ್ಯ ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಬಹಳ ಹಿಂದೆ ಉಳಿದಿದೆ. ಕೇಂದ್ರದ ಸರ್ಕಾರದ ಯಾವುದೇ ಯೋಜನೆಗಳನ್ನು ಕ್ರಮಬದ್ಧವಾಗಿ ಅಳವಡಿಸುವಲ್ಲಿ ವಿಫಲತೆ ತೋರಿರುವ ಕೇರಳ ರಾಜ್ಯ ಸರ್ಕಾರ ಜನ ಸಾಮಾನ್ಯನನ್ನು ವಂಚಿಸುತ್ತಿದೆ. ಕೇಂದ್ರದಿಂದ ದಕ್ಕಬಹುದಾದ ಹಣವನ್ನು ಮಾತ್ರವೇ ಅಪೇಕ್ಷಿಸುವ ಎಡರಂಗದಿಂದ ಕೇರಳಿಗರಿಗೆ ಯಾವುದೇ ಗುರುತರ ಪ್ರಯೋಜನವಾಗಿಲ್ಲ ಎಂದರು.
ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆಯ ಜಲಜೀವನ್ ಮಿಶನ್ ಯೋಜನೆಯನ್ನು ಸಮಯ ಪರಿಮಿತಿಯೊಳಗೆ ರಾಜ್ಯದಲ್ಲಿ ಅಳವಡಿಸಲು ಪಿಣರಾಯಿ ನೇತೃತ್ವದ ಎಡರಂಗ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಕೊರೊನಾ ಹತೋಟಿಯಲ್ಲೂ ಕೇರಳ ರಾಜ್ಯ ಹಳಿ ತಪ್ಪಿದೆ. ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 24 ಕೋಟಿ ಜನಸಂಖ್ಯೆಯಿದ್ದರೂ ಕೊರೊನಾ ಸಾಂಕ್ರಾಮಿಕವನ್ನು ಹತೋಟಿಗೆ ತರಲಾಗಿದೆ. ಸಾಂಕ್ರಾಮಿಕ ಹಾವಳಿಯನ್ನು ತಡೆಗಟ್ಟಿದ ಉ.ಪ್ರ.ದ ಕಾರ್ಯವೈಖರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು. ಪ್ರಸ್ತುತ ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ರೋಗ ಹಬ್ಬುವಿಕೆ ಹೆಚ್ಚಿದೆ ಎಂದು ಟೀಕಿಸಿದರು. ಶಬರಿಮಲೆ ವಿಚಾರವನ್ನು ಪ್ರಸ್ತಾಪಿಸಿದ ಯೋಗೀಜಿ, ಎಡರಂಗ ಸರ್ಕಾರವು ಧಾರ್ಮಿಕ ವಿಚಾರವನ್ನು ಸುಖಾಸುಮ್ಮನೆ ತೆಗೆದುಕೊಂಡು ಜನಸಾಮಾನ್ಯರ ಭಾವನೆಯ ಜೊತೆ ಚೆಲ್ಲಾಟವಾಡುತ್ತಿದೆ. ಇನ್ನೊಂದೆಡೆ ಅಕ್ರಮಿಗಳ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನ ಚರ್ಚುಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದರು. ಆದರೆ ಇನ್ನೊಂದೆಡೆ ಬಿಜೆಪಿ ಸರ್ಕಾರ ರಾಮಮಂದಿರ ಸ್ಥಾಪನೆಗೆ ಮುಂದಡಿಯಿಟ್ಟಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.