ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪಡಿತರದಲ್ಲಿ ನೀಡಲಾಗುವ ಅಕ್ಕಿಯ ಗುಣಮಟ್ಟದ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸದ್ಯ ನೀಡುತ್ತಿರುವ ಕುಚ್ಚಲು ಅಕ್ಕಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸಲಾರದೆ ಪಡಿತರವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ, ಹೆಚ್ಚು ದರದ ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೆಲವು ಕಡೆ ಪಡಿತರವನ್ನೇ ಪಡೆಯದೆ ಹಾಗೆ ಬಿಡುತ್ತಾರೆ. ಪಡಿತರದ ಮೂಲಕ ಪಡೆದುಕೊಂಡ ಕಳಪೆ ಗುಣಮಟ್ಟದ ಅಕ್ಕಿಯನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗುತ್ತಿವೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಬೇಕಾಗುವ ಅಕ್ಕಿಯನ್ನು, ಈ ಜಿಲ್ಲೆಯಲ್ಲಿಯೇ ಬೆಳೆಯುವ ರೈತರಿಂದ ತೆಗೆದುಕೊಂಡು ಪಡಿತರ ವಿತರಿಸಬೇಕೆಂದು ಮನವಿ ಮಾಡಲಾಯಿತು.
ಇಲ್ಲವಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕುಚ್ಚಲಕ್ಕಿ ಸರಬರಾಜು ಮಾಡುವ ತನಕ ಪಡಿತರದ ಮೂಲಕ ನೀಡುವ ಅಕ್ಕಿಯ ಮೌಲ್ಯವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮೆ ಮಾಡಿ, ಅವರಿಗೆ ಬೇಕಾದ ಅಕ್ಕಿಯನ್ನು ಅವರೇ ಖರೀದಿಸುವ ಸಲುವಾಗಿ ರಾಜ್ಯದಲ್ಲಿಯೇ ಮೊದಲು ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲೆಟ್ ಯೋಜನೆ ಕೈಗೆತ್ತಿಕೊಳ್ಳಬೇಕಾಗಿ ಕೋರಲಾಯಿತು.
ಈ ಸಂದರ್ಭದಲ್ಲಿ ಸಚಿವ ಅಂಗಾರ, ಶಾಸಕ ಉಮಾನಾಥ್ ಕೋಟ್ಯಾನ್, ಶಾಸಕ ಸಂಜೀವ ಮಠಂದೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಡಿತರದ ಮೂಲಕ ನೀಡುತ್ತಿರುವ ಅಕ್ಕಿಯ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಯಿತು.ಈ ಭಾಗದ ಜನತೆ ಉಪಯೋಗಿಸುವ ಕುಚ್ಚಲಕ್ಕಿಯನ್ನು ಪಡಿತರದಲ್ಲಿ ನೀಡುವಂತೆ ಮನವಿ ಸಲ್ಲಿಸಲಾಯಿತು.@AngaraSBJP @KotianUmanath @s_matandoor pic.twitter.com/dpeUJIvh4S
— Kota Shrinivas Poojari (@KotasBJP) February 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.