ದೇಶದ ಆಡಳಿತ ಚುಕ್ಕಾಣಿಯನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಧೀಮಂತ ವ್ಯಕ್ತಿತ್ವ ವಹಿಸಿಕೊಂಡ ಬಳಿಕ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅಥವಾ ತಮ್ಮ ಸ್ವಾರ್ಥವೋ, ಇನ್ಯಾವುದೋ ದಾಹವನ್ನು ತಣಿಸಿಕೊಳ್ಳುವ ಸಲುವಾಗಿ ದೇಶದ ಶಾಂತಿ, ಗೌರವಗಳನ್ನೇ ಹರಾಜಿಗಿಡುವ ಕೆಲಸ ಮಾಡುತ್ತಾ ಹಾಯಾಗಿದ್ದ ʼಕಳ್ಳ ಇಲಿಗಳು ಬಿಲದಿಂದ ಬಲೆಗೆ ಬಿದ್ದು ವಿಲವಿಲನೆ ಒದ್ದಾಡುವʼ ಪರಿಸ್ಥಿತಿ ಬಂದೊದಗಿದೆ. ಕಳೆದ ಏಳು ವರ್ಷಗಳಿಂದ ಇಂತಹ ಘಟನೆಗಳು ದೇಶದಲ್ಲೇನೂ ಹೊಸತಲ್ಲ. ದೇಶದ ಆಂತರಿಕ ಭದ್ರತೆ, ಮಾನವನ್ನೇ ಹರಾಜಿಗಿಟ್ಟು ತಮ್ಮ ಬೇಳೆ ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ವಿಕೃತ ಸಂತೋಷ ಪಡೆಯುತ್ತಿದ್ದ ಕೆಲವರು ಒಬ್ಬೊಬ್ಬರಾಗಿಯೇ ಪೊಲೀಸರ ಅತಿಥಿಯಾಗಿ ಜೈಲಿನೊಳಗೆ ಮುದ್ದೆ ಮುರಿಯುವ ಸ್ಥಿತಿ ತಲುಪಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಸುಭದ್ರವಾಗಿದೆ ಎಂಬುದಕ್ಕೆ ʼಆಂತರಿಕ ಶತ್ರುʼಗಳು ಕಾನೂನಿನ ಕಣ್ಣಿಗೆ ಗೋಚರವಾಗುತ್ತಿರುವುದು, ಅವರಿಗೆ ಶಿಕ್ಷೆಯಾಗುತ್ತಿರುವುದೇ ಜ್ವಲಂತ ಉದಾಹರಣೆಯಾಗಿದೆ.
ಈ ಪೀಠಿಕೆ ಏಕೆ? ಎಂಬ ಪ್ರಶ್ನೆಗೆ ಉತ್ತರ ಹೇಳುವುದಾದರೆ, ದೇಶದ ರೈತರ ಏಳಿಗೆಗಾಗಿ ಕೆಲ ತಿಂಗಳುಗಳ ಹಿಂದಷ್ಟೇ ಕೇಂದ್ರ ಸರ್ಕಾರ ನೂತನ ಕೃಷಿ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದಿತು. ಕಾಯ್ದೆ ಜಾರಿಯಾದ ತಕ್ಷಣ ಇದಕ್ಕೆ ಬೆಂಬಲ ಸೂಚಿಸಿದ ಕೆಲವು ಹೈ-ಫೈ ಕೃಷಿಕರು (ತಮ್ಮನ್ನು ತಾವು ಬಡ ಕೃಷಿಕರು ಎಂದು ಘೋಷಿಸಿಕೊಂಡವರು, ಪೋಷಿಸಿಕೊಂಡವರು) ಎರಡು ತಿಂಗಳ ಬಳಿಕ ಅದೇ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲಾರಂಭಿಸಿದ್ದರು. ನಿಜವಾದ ರೈತ ಬೆನ್ನು ಬಗ್ಗಿಸಿ ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರೆ, ಹೈಫೈ ರೈತರು ದೇಶದ ರಾಜಧಾನಿಯಲ್ಲಿ ದೇಶದ ಬೊಕ್ಕಸಕ್ಕೆ ಕೋಟಿ ಕೋಟಿ ರೂ. ಗಳು ನಷ್ಟವಾಗುವಂತೆ ಮಾಡಿ ಪ್ರತಿಭಟನೆ ಕುಳಿತರು. ಸುಮಾರು ಮೂರು ತಿಂಗಳಿನಿಂದ ಈ ರೈತರ ಹೆಸರಿನ ಪ್ರತಿಭಟನೆ ನಡೆಯಿತು. ಕೊನೆಗೆ ದೇಶದ ಗಣರಾಜ್ಯ ದಿನದಂದು ಕೆಂಪು ಕೋಟೆಯಲ್ಲಿ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕಿತ್ತೆಸೆದು, ಅದರ ಬದಲು ಇನ್ಯಾವುದೋ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಕ್ಕೆ, ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಕೆಲಸವನ್ನು ರೈತರ ಹೆಸರಿನಲ್ಲಿ ನಕಲಿ ಪ್ರತಿಭಟನೆಕಾರರು ಮಾಡಿದರು. ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸುಮಾರು 11 ಸುತ್ತಿನ ಮಾತುಕತೆಗಳು ನಡೆದರೂ ಪ್ರತಿಭಟನಾಕಾರರು ಮಾತ್ರ ಯಾವುದಕ್ಕೂ ಜಪ್ಪಯ್ಯ ಎನ್ನಲಿಲ್ಲ. ಬದಲಾಗಿ ಪ್ರತಿಭಟನೆಯ ನೆಪದಲ್ಲಿ ದೇಶಕ್ಕೆ ಕೋಟಿಗಟ್ಟಲೆ ನಷ್ಟ ಮಾಡಿದರು. ಪ್ರತಿಭಟನೆಯ ಹೆಸರಲ್ಲಿ ಐಶಾರಾಮಿ ಜೀವನವನ್ನು ನಡೆಸಿದರು. ಇದು ಕಟು ವಾಸ್ತವ.
ಪ್ರತಿಭಟನೆಯ ಹೆಸರಲ್ಲಿ ದೇಶದ ಎಡಚರ ಅತೃಪ್ತರು ಶಾಂತಿ ಕದಡಿದ್ದಾಯಿತು. ಆ ಬಳಿಕ ವಿದೇಶೀ ನೆಲದಿಂದಲೂ ಪ್ರಧಾನಿ ಮೋದಿ ಸರ್ಕಾರ ತಂದ ಕೃಷಿ ಕಾಯ್ದೆಗಳ ವಿರುದ್ಧ ಟ್ವೀಟ್ ಗಳು ಬಂದವು. ದೇಶದ ಆಂತರಿಕ ವಿಚಾರಕ್ಕೆ ತಲೆ ಹಾಕಿದ ಪಾಪ್ ಗಾಯಕಿ ರಿಹಾನ್ನ, ಬಾಲಕಿ ಪರಿಸರವಾದಿ ಎಂಬ ಬಿರುದಾಂಕಿತೆ ಗ್ರೆಟಾ ಥನ್ಬರ್ಗ್ ರಂತಹ ಯಾರಿಗೂ ಪರಿಚಿತರಲ್ಲದ ಅತೃಪ್ತರು ಟ್ವೀಟ್ ಮೂಲಕ ಹವಾ ಸೃಷ್ಟಿಸಿ ಮಜಾ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ನಡೆಸಿದರು. ಅಲ್ಲೇ ತಪ್ಪಾಗಿದ್ದು. ಯಾವಾಗ ದೇಶದ ಸೋ ಕಾಲ್ಡ್ ರೈತರ ಹೋರಾಟದ ಟೂಲ್ಕಿಟ್ ಅಥವಾ ರೂಪುರೇಶೆಯನ್ನು ಪರಿಸರವಾದಿ ಎಂದು ಹೇಳಿಕೊಳ್ಳುವ ಥನ್ಬರ್ಗ್ ಹಂಚಿಕೊಂಡಳೋ, ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಳ್ಳತೊಡಗಿದರು. ಅವಳ ಒಂದು ಟ್ವೀಟ್ ಈ ದುರುದ್ದೇಶಪೂರಿತ ಹೋರಾಟದ ಸಂಪೂರ್ಣ ಚಿತ್ರಣವನ್ನು ಜಗತ್ತಿನೆದುರು ತೆರೆದಿಟ್ಟಿತು. ಜೊತೆಗೆ ಈ ಕಳ್ಳಾಟದಲ್ಲಿ ಪಾಲ್ಗೊಂಡವರ ಮಾಹಿತಿ, ಇದರ ಹಿಂದಿನ ರಹಸ್ಯಗಳೂ ಒಂದೊಂದಾಗಿಯೇ ಬಹಿರಂಗವಾಗತೊಡಗಿತು. ದೇಶದೊಳಗೇ ಇದ್ದುಕೊಂಡು, ದೇಶದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಒಂದೊಂದು ಕುತಂತ್ರಿಗಳೂ ಪೊಲೀಸರ ಅತಿಥಿಯಾಗತೊಡಗಿದರು. ಈ ಪಟ್ಟಿಯಲ್ಲಿ ಇನ್ನೆಷ್ಟು ಜನರು ಜೈಲು ಕಂಬಿ ಎಣಿಸಬೇಕಾಗಿ ಬರುತ್ತದೋ ದೇವರೊಬ್ಬನಿಗೇ ಗೊತ್ತು.
ಇನ್ನು ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿರುವ ಟೂಲ್ ಕಿಟ್ ಎಡಿಟರ್ ಎಲ್ಲೋ ವಿದೇಶದಲ್ಲಿದ್ದುಕೊಂಡು ಈ ಕೆಲಸ ಮಾಡಿಲ್ಲ. ಬದಲಾಗಿ ನಮ್ಮದೇ ದೇಶದ, ನಮ್ಮದೇ ರಾಜ್ಯದ ರಾಜಧಾನಿಯಲ್ಲಿ ಕುಳಿತು ಈ ಟೂಲ್ ಕಿಟ್ ಅನ್ನು ಎಡಿಟ್ ಮಾಡುವ, ಅದನ್ನು ದೇಶ ವಿರೋಧಿ ಕೃತ್ಯ ನಡೆಸುವವರಿಗೆ ನೀಡುವ ಕೆಲಸವನ್ನು ʼದಿಶಾ ರವಿʼ ಎಂಬ ಹೆಸರಿದ್ದರೂ, ಅದಕ್ಕೆ ಅನ್ವರ್ಥ ಎಂಬಂತೆ ಬದುಕುತ್ತಿರುವ ಯುವತಿಯೊಬ್ಬಳು ಮಾಡಿದ್ದಾಳೆ. ಈ ಆರೋಪದಡಿಯಲ್ಲಿ ನವದೆಹಲಿಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತಾನು ಈ ಟೂಲ್ ಕಿಟ್ ಅನ್ನು ಎಡಿಟ್ ಮಾಡಿರುವುದನ್ನು ಸಹ ಒಪ್ಪಿಕೊಂಡಿದ್ದಾಳೆ. ಅವಳಿಗೆ ʼಪರಿಸರವಾದಿʼ ಎಂದು ಬಿರುದು ಯಾವ ಕಾರಣಕ್ಕಾಗಿ ನೀಡಿದ್ದಾರೋ ದೇವರೇ ಬಲ್ಲ. ಆ ಹೆಸರಿಗೇ ಅವಮಾನ ಎಂಬಂತೆ ದೇಶಕ್ಕೆ ದ್ರೋಹ ಬಗೆಯುವ ಕೃತ್ಯದಲ್ಲಿ, ದೇಶದ ಶಾಂತಿ ಕದಡುವ ಕೆಲಸದಲ್ಲಿ ಆಕೆ ಪಾಲು ಪಡೆದಿದ್ದಾಳೆ. ಈಕೆ ದೊಡ್ಡ ತತ್ವಜ್ಞಾನಿಯಲ್ಲ. ಬದಲಾಗಿ ದೇಶವನ್ನೇ ಜಗತ್ತಿನೆದುರು ನಕಾರಾತ್ಮಕವಾಗಿ ಚಿತ್ರಿಸಲು ಹೊರಟ ಮಹಾ ಕುತಂತ್ರಿ. ಇವಳಿಗೆ ನಿಕಿತಾ ಮತ್ತು ಶಂತನು ಎಂಬವರೂ ಸಹಕಾರ ನೀಡಿದ್ದಾರೆ. ಈ ಬಗ್ಗೆ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿರುವ ಪೊಲೀಸರೇ ಈ ಅಂಶವನ್ನು ಬಯಲು ಮಾಡಿದ್ದಾರೆ. ಸದ್ಯ ಸಿಕ್ಕಿಬಿದ್ದಿರುವ ಈ ಮೂವರನ್ನೂ ಗಮನಿಸುವಾಗ ದೇಶದ ಹಿತ ಬಯಸುವ ಹೆಚ್ಚಿನವರಲ್ಲಿ ಉದ್ಭವಿಸುವ ಪ್ರಶ್ನೆ, ಯುವ ಜನತೆ (ಎಲ್ಲರೂ ಅಲ್ಲ, ದಿಶಾ ರಂತಹ ಕೆಲವರು) ದಾರಿ ತಪ್ಪುತ್ತಿದೆಯೇ?, ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವಲ್ಲಿ ಎಡವುತ್ತಿದ್ದೇವೆಯೇ? ಎಂದು.
ಸಿಎಎ ಹೋರಾಟದ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯ ಎಂಬ ಯುವತಿ, ಅದಕ್ಕೂ ಮೊದಲು ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದ ಕನ್ನಯ್ಯ ಕುಮಾರ್, ಈಗ ದಿಕ್ಕು ದೆಸೆ ತಪ್ಪಿದ ದಿಶಾ ರವಿ, ನಿಕಿತಾ, ಶಂತನು ಹಾಗೂ ಇಂತಹ ದೇಶ ವಿರೋಧಿ ಚಟುವಟಿಕೆಗಳ ಮೂಲಕವೇ ಬೇಳೆ ಬೇಯಿಸಿಕೊಳ್ಳುತ್ತಿರುವ ಹಲವರು ʼಯುವ ಜನರುʼ ಎಂಬುದನ್ನು ನಾವು ಗಮನಿಸಬೇಕಾದ ಅಂಶ. ದೇಶಕ್ಕೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ಇಂತಹ ಹೀನ ಮನಸ್ಥಿತಿ ಯುವಜನರಲ್ಲಿ ಸೃಜಿಸುತ್ತಿರುವುದು ಅಪಾಯಕಾರಿಯೇ ಹೌದು. ಏಕೆಂದರೆ ಹಲವು ಉತ್ತಮ ಹಣ್ಣುಗಳ ನಡುವೆ ಒಂದು ಕೊಳೆತ ಹಣ್ಣನ್ನು ಇರಿಸಿದರೆ ಇತರ ಹಣ್ಣುಗಳೂ ಕೆಡುವ ಅಪಾಯ ಹೆಚ್ಚಿರುತ್ತದೆ. ಹಾಗೆಯೇ ಇಂತಹ ಕೀಳು ಮನಸ್ಥಿತಿಯ ಕೆಲವೇ ಜನರಿದ್ದರೂ ಅದರಿಂದ ದೇಶ ಅನುಭವಿಸಬೇಕಾದ, ಸಜ್ಜನರು, ಬಡಪಾಯಿಗಳು ಅನುಭವಿಸಬೇಕಾದ ಕಷ್ಟ ಅದೆಷ್ಟೋ.
ಇಂತಹ ಬುದ್ಧಿಗೇಡಿಗಳನ್ನು ಪಕ್ಷಾತೀತವಾಗಿ, ಧರ್ಮಾತೀತವಾಗಿ ಖಂಡಿಸುವ ಕೆಲಸವನ್ನು, ಅವರ ನಿಲುವುಗಳನ್ನು ಬಹಿಷ್ಕರಿಸುವ ಕೆಲಸವನ್ನು ಇಡೀ ದೇಶವೇ ಮಾಡಬೇಕು. ಆದರೆ ನಮ್ಮಲ್ಲಿ ಹಾಗಿಲ್ಲ, ದೇಶಕ್ಕೆ ಅವಮಾನ ಮಾಡುವ ಕೃತ್ಯ ನಡೆದಾಗಲೂ ಅವರನ್ನು ಬೆಂಬಲಿಸುವ ʼಕೈʼ ಗಳು, ಕೆಲವು ರಾಜಕೀಯ ನಾಯಕರಿರುವುದು ದುರಂತ. ದೇಶದ ವಿಚಾರ ಬಂದಾಗ ಪಕ್ಷ, ವ್ಯಕ್ತಿ ವಿರೋಧ ಎಲ್ಲಾ ಬದಿಗಿಟ್ಟು ಒಗ್ಗಟ್ಟಾಗಿ ದೇಶ ವಿರೋಧಿಗಳ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ ಎಂಬುದು ಇಂತಹ ನಾಯಕರಿಗೆ ಅರಿವಾಗುವುದು ತಮ್ಮ ಬುಡಕ್ಕೆ ನೀರು ಬಂದಾಗಲೇ ಎಂದು ತೋರುತ್ತದೆ.
ಅವರಿಗೋ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದರೆ ಕೋಟಿ ಕೋಟಿ ದೊರೆಯಬಹುದು. ಆದರೆ ದೇಶದ ಬಡವರು ದುಡಿದೇ ತಿನ್ನಬೇಕು. ಅವರ ಮಾತುಗಳನ್ನು ಕೇಳಿ ಬೀದಿಗಿಳಿದು ಹೋರಾಟ ನಡೆಸಿದ ನಿಜವಾದ ರೈತರು ನಾಳೆ ಉತ್ತಮ ಕಾಯ್ದೆಗಳೂ ಇಲ್ಲದೆ, ʼತಮ್ಮ ಬೆಳೆ, ತಮ್ಮ ಹಕ್ಕುʼ ಎಂಬ ಸ್ವಾತಂತ್ರ್ಯವೂ ಇಲ್ಲದೇ ಕಣ್ಣೀರಿಡಬೇಕಾದ ದಿನ ಬಂದರೂ ಬರಬಹುದು. ಆಗ ಈ ದಿಶಾ ರವಿಯಂತಹ ದಂಡಪಿಂಡಗಳ ಮಾತು ಕೇಳಿ ʼಸೋತು ಹೋದ ಅನ್ನದಾತʼ ಎಂಬ ದೊಡ್ಡ ಶೀರ್ಷಿಕೆಯಡಿಯಲ್ಲಿ ನಮ್ಮದೇ ದೇಶದ ಬೆನ್ನೆಲುಬಿನ ಕಥೆ ಬಂದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇಂತಹ ಅತೃಪ್ತ ಆತ್ಮಗಳು ತಾವೂ ತೃಪ್ತಿ ಪಡುವುದಿಲ್ಲ. ಇನ್ನೊಬ್ಬರನ್ನೂ ನೆಮ್ಮದಿಯಾಗಲು ಬಿಡುವುದಿಲ್ಲ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.