ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಮ್ಮ ಖಾಸಗಿ ವಾಹನದಲ್ಲಿ ಹೋಗುತ್ತಿರುವಾಗ ಒಮ್ಮೆಯಾದರೂ ಟೋಲ್ ಗೇಟ್ನ ಬಳಿ ನಿಂತು ಮೂವತ್ತೊ, ನಾಲ್ವತ್ತೊ ರೂಪಾಯಿ ಕೊಟ್ಟು ಒಂದು ರಸೀದಿ ಪಡೆದು ಮುಂದೆ ಹೋಗಿರುತ್ತೀರಿ. ಅದು ಹಣ ಯಾರಿಗೆ, ಯಾಕೆ ಎಂದು ನಿಮ್ಮ ಎಷ್ಟು ಮಂದಿ ಯೋಚಿಸಿದ್ದಿರೋ, ಗೊತ್ತಿಲ್ಲ. ಆದರೆ ಅಲ್ಲಿ ಹಣ ಕೊಡದೇ ನೀವು ಮುಂದೆ ಹೋಗಲು ಸಾಧ್ಯವೇ ಇಲ್ಲ. ನಿಮ್ಮಂತಹ ಸಾವಿರಾರು ವಾಹನಗಳ ಮಾಲೀಕರೊ, ಚಾಲಕರೋ ಹೀಗೆ ಪ್ರತಿನಿತ್ಯ ಅಲ್ಲಿ ಟೋಲ್ ಗೇಟ್ನಿಂದ ಹಾದು ಹೋಗುವಾಗ ಹಣವನ್ನು ನೀಡಿರುತ್ತೀರಿ. ಅಲ್ಲಿ ದಿನಕ್ಕೆಷ್ಟು ಹಣ ಸಂಗ್ರಹವಾಗುತ್ತದೆ ಎನ್ನುವ ಲೆಕ್ಕವನ್ನು ನೀವು ಹಾಕಿರುವುದಿಲ್ಲ. ಆದರೆ ಒಂದು ಸಿಂಪಲ್ ಲೆಕ್ಕದ ಪ್ರಕಾರ ಒಂದು ಟೋಲ್ಗೇಟ್ನಿಂದ ಅಂದಾಜು 20 ಸಾವಿರ ವಾಹನಗಳು ಹಾದು ಹೋದರೆ ಒಂದು ವಾಹನದಿಂದ ಕನಿಷ್ಟ 30 ರೂಪಾಯಿ ತೆಗೆದುಕೊಂಡರೂ ದಿನಕ್ಕೆ ಸರಾಸರಿ ಸಂಗ್ರಹ ಆರು ಲಕ್ಷ ಆಗುತ್ತದೆ. ಅಷ್ಟು ಹಣ ಸರ್ಕಾರಕ್ಕೆ ಹೋಗುತ್ತದಾ?
ಅದಕ್ಕಿಂತ ಮೊದಲು ಟೋಲ್ಫೀ ತೆಗೆದುಕೊಳ್ಳುವ ಉದ್ದೇಶ ಎನು? ಎಂಬುದನ್ನು ತಿಳಿಯಲೇಬೇಕು. ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಯೋಜನೆ ಹಾಕಿಕೊಂಡಾಗ ಅದಕ್ಕೆ ಬಜೆಟ್ನಲ್ಲಿ ಇಂತಿಷ್ಟು ಎಂದು ಹಣ ಇಟ್ಟಿರುತ್ತದೆ. ಆದರೆ ಭಾರತದ ಸಾವಿರಾರು ಕಿಲೋ ಮೀಟರ್ ಉದ್ದ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತಮ ಸ್ಥಿತಿಗೆ ತರಬೇಕಾದರೆ ಅದಕ್ಕೆ ಹಲವು ಬಾರಿ ಬಜೆಟ್ನಲ್ಲಿ ಅಷ್ಟು ಫಂಡ್ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರ ಏನು ಮಾಡುತ್ತದೆ? ಯಾವುದಾದರೂ ಖಾಸಗಿ ಗುತ್ತಿಗೆದಾರರಿಗೆ ಬಿಓಟಿ ಆಧಾರದಲ್ಲಿ ಹಸ್ತಾಂತರಿಸುತ್ತದೆ. ಬಿಓಟಿ ಎಂದರೆ ಬಿಲ್ಡ್ ಓಪರೇಟ್ ಎಂಡ್ ಟ್ರಾನ್ಸ್ಫರ್. ಅದನ್ನು ಗುತ್ತಿಗೆಯ ಮೂಲಕ ಪಡೆದುಕೊಂಡ ಗುತ್ತಿಗೆದಾರ ರಸ್ತೆಯನ್ನು ನಿರ್ಮಿಸಿ ನಂತರ ಅಲ್ಲಿ ಟೋಲ್ ಸಂಗ್ರಹ ಮಾಡಿ ನಂತರ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಆದರೆ ಎಲ್ಲಿಯ ತನಕ ಒಬ್ಬ ಗುತ್ತಿಗೆದಾರನಿಗೆ ಟೋಲ್ ಫೀ ಸಂಗ್ರಹಿಸಬಹುದು ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಸಾರ್ವಜನಿಕರಿಗೆ ಇರುವುದಿಲ್ಲ. ಉದಾಹರಣೆಗೆ ತಲಪಾಡಿಯಿಂದ ಬೈಂದೂರಿನ ತನಕ ರಸ್ತೆ ನಿರ್ಮಾಣ ಮಾಡಲು ಒಬ್ಬ ಗುತ್ತಿಗೆದಾರನಿಗೆ ೬೦೦ ಕೋಟಿ ರೂಪಾಯಿಗೆ ಗುತ್ತಿಗೆ ಸಿಕ್ಕಿತು ಎಂದು ಅಂದುಕೊಳ್ಳೋಣ. ಆ ಗುತ್ತಿಗೆದಾರ ತಲಪಾಡಿಯಲ್ಲಿ, ಹೆಜಮಾಡಿಯಲ್ಲಿ ಮತ್ತು ಬ್ರಹ್ಮಾವರದಲ್ಲಿ ತಲಾ ಒಂದೊಂದು ಟೋಲ್ ಗೇಟ್ ತೆರೆದರು ಎಂದು ಇಟ್ಟುಕೊಳ್ಳೋಣ. ಅವನಿಗೆ ತಾನು ಹಾಕಿದ ಹಣ 7 ರಿಂದ 8 ವರ್ಷಗಳಲ್ಲಿ ಹಿಂದಕ್ಕೆ ಬಂತು ಎಂದೇ ಲೆಕ್ಕ ಹಾಕಿದರೆ ಆ ಗುತ್ತಿಗೆದಾರ ಅದರ ಬಳಿಕ ಟೋಲ್ಫೀ ಸಂಗ್ರಹಿಸುವಂತಿಲ್ಲ. ಆದರೆ ಕರಾವಳಿಯಲ್ಲಿ ಗುತ್ತಿಗೆದಾರರ ಟೋಲ್ ಸಂಗ್ರಹ ಅಲ್ಲಿಗೆ ನಿಲ್ಲುವುದಿಲ್ಲ. ಅವರು ಹದಿನೈದು, ಇಪ್ಪತ್ತು, ಇಪ್ಪತೈದು ವರ್ಷಗಳ ತನಕವೂ ನಿರಾಂತಕವಾಗಿ ಟೋಲ್ ಸಂಗ್ರಹಿಸುತ್ತಲೇ ಇರುತ್ತಾರೆ. ಅದು ತಪ್ಪಲ್ಲವೇ?
ಅದನ್ನು ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಗಡಿ ಭಾಗವಾದ ಹೆಜಮಾಡಿಯಲ್ಲಿ ಜನ ಪ್ರತಿಭಟನೆಗೆ ಸಿದ್ಧರಾಗುತ್ತಿದ್ದಾರೆ. ನಾಗರಿಕರ ಪ್ರಕಾರ ನಾವು ವಾಹನ ಖರೀದಿಸುವಾಗ ಸಹಜವಾಗಿ ರೋಡ್ ಟ್ಯಾಕ್ಸ್ ಎಂದು ದೊಡ್ಡ ಪ್ರಮಾಣದಲ್ಲಿ ಹಣ ಸರ್ಕಾರಕ್ಕೆ ಕಟ್ಟುತ್ತೇವೆ. ಅದು ರಸ್ತೆ ನಿರ್ಮಾಣ, ರಿಪೇರಿಗೆ ಎಂದು ಖರ್ಚು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ರೋಡ್ ಟ್ಯಾಕ್ಸ್ ಎಂದು ಹಣ ಸಂಗ್ರಹಿಸುವ ಸರ್ಕಾರಗಳು ಮತ್ತೆ ಟೋಲ್ ಫೀ ಸಂಗ್ರಹಿಸುವುದು ಎಷ್ಟರ ಮಟ್ಟಿಗೆ ಸರಿ. ಆದರೆ ರಸ್ತೆಯೊಂದು ಅತ್ಯಾಧುನಿಕ ತಂತ್ರಜ್ಙಾನದಲ್ಲಿ ತಯಾರಾದರೆ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸರಾಸರಿ ಡಿಸೇಲ್ ಮತ್ತು ಪೆಟ್ರೋಲ್ ಉಳಿಸುವುದರಲ್ಲಿ ಸಂಶಯವಿಲ್ಲ. ಅದು ವಾಹನದ ಮಾಲೀಕನಿಗೆ ವೈಯಕ್ತಿಕವಾಗಿ ಮತ್ತು ರಾಷ್ಟ್ರಕ್ಕೆ ಇಂಧನ ಉಳಿತಾಯದಲ್ಲಿ ಸಮಗ್ರವಾಗಿ ನೆರವಾಗುತ್ತದೆ. ಅದೇ ಪ್ರಕಾರ ವಾಹನ ಚಲಾಯಿಸುವವರಿಗೆ ತಮ್ಮ ಗುರಿ ಮುಟ್ಟುವಲ್ಲಿ ವಿಳಂಬವಾಗುವುದಿಲ್ಲ ಮತ್ತು ಸಂಚಾರ ಸುಖ ಕೂಡ ಚೆನ್ನಾಗಿರುತ್ತದೆ. ಅಷ್ಟು ಲಾಭ ಇರುವಾಗ ಯಾರೂ ಕೂಡ ಸ್ವಲ್ಪ ಹಣವನ್ನು ಟೋಲ್ ಫೀ ರೂಪದಲ್ಲಿ ಕೊಡಲು ಹಿಂದೇಟು ಹಾಕಬಾರದು ಎನ್ನುವ ವಾದ ಕೂಡ ಒಂದಿಷ್ಟು ನಾಗರಿಕರಿಂದ ಇದೆ. ಇಲ್ಲಿ ಪ್ರಶ್ನೆ ಇರುವುದು ಒಂದೋ ಟೋಲ್ ಗೇಟ್ ಅನ್ನು ರಾಷ್ಟ್ರದಲ್ಲಿ ಶಾಶ್ವತವಾಗಿ ತೆಗೆದುಹಾಕಬೇಕು ಅಥವಾ ರಸ್ತೆಯ ಖರ್ಚು ಮತ್ತು ವೆಚ್ಚ ಬಂದ ತಕ್ಷಣ ಟೋಲ್ ಗೇಟ್ ಆ ಪ್ರದೇಶದಿಂದ ಹಿಂದಕ್ಕೆ ಪಡೆದುಕೊಳ್ಳಬೇಕು.
ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ನಾವು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು: ಈ ಟೋಲ್ ಗೇಟ್ ತೆಗೆದುಕೊಳ್ಳುವ ಪಾಲಿಸಿಯನ್ನು ಪ್ರಾರಂಭಿಸಿದ್ದು ಹಿಂದಿನ ಯುಪಿಎ ಸರ್ಕಾರ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಸಡಕ್ ಯೋಜನೆಯ ಮೂಲಕ ಭಾರತದ ಅನೇಕ ರಾಷ್ಟ್ರೀಯ ಹೆದ್ದಾರಿಗಳನ್ನು ಮೇರ್ಲ್ದಜೆಗೆ ತೆಗೆದುಕೊಂಡು ಹೋಗಿದ್ದರು. ಅಂತಹ ರಸ್ತೆಗಳಿಗೆ ಟೋಲ್ ಸಂಗ್ರಹಿಸುವ ಮೂಲಕ ಸಂಪ್ರದಾಯ ಪ್ರಾರಂಭಿಸಿದ್ದು ಯುಪಿಎ. ಈಗ ಏಕಾಏಕಿ ಒಮ್ಮೆಲ್ಲೇ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಈ ಬಗ್ಗೆ ಏನಾದರೂ ಬದಲಾವಣೆ ತರುವ ತನಕ ಅದು ಹಾಗೇ ಮುಂದುವರೆಯುತ್ತದೆ. ಆದರೆ ಯಾವುದೇ ರಸ್ತೆ 95% ಮುಕ್ತಾಯವಾಗುವ ತನಕ ಅಲ್ಲಿ ಟೋಲ್ ಸಂಗ್ರಹ ಮಾಡಲು ಯಾವುದೇ ಗುತ್ತಿಗೆದಾರರಿಗೂ ಅವಕಾಶವಿಲ್ಲ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.