News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಹಬ್ಬಗಳು: ಭಾಗ 1-ಸಂಕ್ರಾಂತಿ ಹಬ್ಬ

ನಮ್ಮ ದೇಶವು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯನ್ನೂ ಆಚಾರವನ್ನೂ ಹೊಂದಿದೆ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಮುಖ ಆಧಾರವೇ ಸನಾತನ ಹಿಂದೂ ಧರ್ಮ. ಸನಾತನ ಧರ್ಮವು ಅತ್ಯಂತ ಸಹಿಷ್ಣು ಧರ್ಮ. ನಮ್ಮ ಆಚಾರ ವಿಚಾರಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಮತ್ತು ಯಾವುದೇ ಕಠಿಣ ನಿಯಮಗಳಿಲ್ಲ. ಇಲ್ಲಿ ವಿಮರ್ಶಿಸಲು, ಹೊಸತನವನ್ನು ಆವಿಷ್ಕರಿಸಲು ಮತ್ತು ಉತ್ತಮವಾದ ವಿಚಾರಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಇದೇ ಕಾರಣದಿಂದಾಗಿ ಹಿಂದೂ ಧರ್ಮ ಅನೇಕ ಪಂಥ ಮತ್ತು ಕವಲುಗಳನ್ನು ಹೊಂದಿವೆ.

ನಾವು ದೇವರನ್ನು ಯಾವ ರೂಪದಲ್ಲಾದರೂ, ಯಾವ ವಿಧಾನದಲ್ಲೂ ಪೂಜಿಸಬಹುದಾದ ಅವಕಾಶಗಳನ್ನು ಹೊಂದಿದ್ದೇವೆ. ಸನಾತನ ಧರ್ಮದಲ್ಲಿ ಅಂಧಾನುಕರಣೆಗೆ ಆಸ್ಪದವಿಲ್ಲ. ಇಲ್ಲಿ ಪ್ರತಿಯೊಂದನ್ನೂ ವಿಶ್ಲೇಷಣೆಗೆ, ವಿಚಾರಕ್ಕೆ ಒಳಪಡಿಸಲಾಗುತ್ತದೆ. ನಾವು ಆಚರಿಸುವ ಪ್ರತಿಯೊಂದು ಆಚರಣೆಗಳಿಗೂ ಅದರದ್ದೇ ಆದ ಹಿನ್ನಲೆಗಳು ಮತ್ತು ಕಾರಣಗಳು ಇರುತ್ತವೆ. ಇದೇ ಕಾರಣದಿಂದ ಒಂದೇ ಧರ್ಮವನ್ನು ಅನುಸರಿಸುವ ಜನರು ವಿವಿಧ ಪ್ರದೇಶಗಳಲ್ಲಿ  ಒಂದೇ ಆಚರಣೆಯನ್ನು ವಿಭಿನ್ನವಾಗಿ ಆಚರಿಸುವ ಕ್ರಮವನ್ನು ನಾವು ಗಮನಿಸುತ್ತೇವೆ. ಸಂಸ್ಕೃತಿ, ಸಂಸ್ಕಾರಗಳಿಗೂ ಮತ್ತು ಆಚರಣೆಗಳಿಗೂ ಇರುವ ಸಂಬಂಧ ಅವಿನಾಭಾವವಾದದ್ದು.

ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ನಾವು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದೇವೆ. ʼಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿʼ ಎಂದು ಸಂಕ್ರಾಂತಿಯಂದು ಶುಭಕೋರುತ್ತೇವೆ. ಸಂಕ್ರಾಂತಿಯಂದು ಎಳ್ಳು ಬೀರುವುದು ಎಂದರೆ ಎಳ್ಳನ್ನು ಹಂಚುವ ಸಂಪ್ರದಾಯ. ಸಂಕ್ರಾಂತಿಯಂದು ಸೂರ್ಯದೇವರ ರಥವು ಮಕರ ರಾಶಿಯನ್ನು ಪ್ರವೇಶಿಸುತ್ತದೆ. ರಾಶಿ ಚಕ್ರದ ಹೊಸ ಚಿನ್ಹೆಯನ್ನು ನಮೂದಿಸುವ ಪ್ರಕ್ರಿಯೆಯು ಪ್ರತೀ ತಿಂಗಳೂ ನಡೆಯುವ ಸಾಮಾನ್ಯ ಪ್ರಕ್ರಿಯೆ ಅದರಲ್ಲೇನು ವಿಶೇಷವಿದೆ ಅಂದುಕೊಳ್ಳಬೇಡಿ. ಈ ತಿಂಗಳಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಒಂದು ವಿಶಿಷ್ಟವಾದ ಶ್ರೇಷ್ಠ ಅವಧಿಯು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಸತ್ವಗುಣವನ್ನು ವಿಶೇಷವಾಗಿ ಸೂರ್ಯ ಕಿರಣಗಳು, ವರ್ಧಿಸುತ್ತವೆ ಮತ್ತು ರೋಗ ಪ್ರತಿರೋಧವನ್ನು ಹೆಚ್ಚಿಸುವ ಅಂಶಗಳನ್ನು ಪಡೆದುಕೊಳ್ಳುತ್ತವೆ.

ಅನೇಕ ಭಾರತೀಯರು ಮಾಘ ಮಾಸದಲ್ಲಿ ಗಂಗೆಯಲ್ಲಿ ಮೀಯುವ ಪ್ರತಿಜ್ಞೆಯನ್ನೂ ಕೈಗೊಳ್ಳುತ್ತಾರೆ. ಆದ್ದರಿಂದಲೇ ಈ ಸಂಪೂರ್ಣ ಮಾಸವನ್ನೇ ಹಬ್ಬದಂತೆ ಆಚರಿಸಲಾಗುತ್ತದೆ. ಮಾಘ ಮಾಸದಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲಿರುವ ಎಲ್ಲಾ ನೀರನ್ನು ಗಂಗೆಯಂತೆಯೇ ಶುದ್ಧ ಮತ್ತು ಪಾವನವನ್ನಾಗಿಸುತ್ತದೆ. ಪಾಶ್ಚಾತ್ಯರೂ ಇದೀಗ  ಸೂರ್ಯನ ಕಿರಣಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅದರ ಪ್ರಯೋಜನವನ್ನು ಅರಿತುಕೊಂಡು ಅದನ್ನು ವೈದ್ಯಕೀಯ ಕ್ಷೇತ್ರಗಳಲ್ಲೂ  ಬಳಸಲಾಗುತ್ತಿದ್ದಾರೆ. ಡಾ. ಹೆಜ್ ಹಿಕಿ ʼಸೂರ್ಯನ ಕಿರಣಗಳು ಔಷಧಗಳಿಗಿಂತ ಹೆಚ್ಚು ಪ್ರಯೋಜನಕಾರಿ. ಔಷಧಗಳು ಹಾನಿಕಾರಕ ಬ್ಯಾಕ್ಟೀರಿಯಾಗಳ ಜೊತೆಯಲ್ಲಿ ಶರೀರಕ್ಕೆ ಅವಶ್ಯವಾಗಿರುವ ಉಪಯುಕ್ತ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸುತ್ತದೆʼ ಎಂದು ಹೇಳುತ್ತಾರೆ.

ಡಾ.ಹೆಜ್ ಹ್ಯಾಂಡ್ರಿಕ್ ಅವರು, ಸೂರ್ಯನ ಕಿರಣಗಳು ವೇಗವಾಗಿ ದೇಹದೊಳಕ್ಕೆ ಪ್ರವೇಶಿಸುತ್ತವೆ ಮತ್ತು ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬಣ್ಣದ ಕೊರತೆಗಳಿಂದ ಉಂಟಾಗುವ ಹಲವು ಕಾಯಿಲೆಗಳಿಗೆ ಸೂರ್ಯ ಕಿರಣಗಳೇ ಔಷಧ ಎಂಬುದನ್ನು ತಜ್ಞ ಚರ್ಮ ವೈದ್ಯರೂ ಅಂಗೀಕರಿಸುತ್ತಾರೆ.

ಗಾರ್ಡನರ್ ರೋನಿ ಎಂಬ ವಿಜ್ಞಾನಿ ʼಸೂರ್ಯನ ಚಿಕಿತ್ಸೆಯಿಂದ ಎಷ್ಟು ಪ್ರಯೋಜನಗಳಿವೆ ಎಂದರೆ, ಇದರಿಂದ ದೇಹವು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಾನೇ ಹೊರಹಾಕಿ ತನ್ನ ರಕ್ಷಣೆಯನ್ನು ಮಾಡುವಷ್ಟು ಸಮರ್ಥವೂ, ಬಲಶಾಲಿಯೂ ಆಗುತ್ತದೆʼ ಎಂಬುದನ್ನು ಕಂಡುಕೊಂಡಿದ್ದಾರೆ.

ಮಹಾಭಾರತದಲ್ಲೂ ಭಗವಾನ್ ಶ್ರೀಕೃಷ್ಣ ಪುತ್ರನಾದ ಸಾಂಬನು ಚರ್ಮ ಮತ್ತು ಜೀರ್ಣಕ್ರಿಯೆಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾಗ ಶ್ರೀ ಕೃಷ್ಣನು ʼನಾನು ಸೂರ್ಯನನ್ನು ಆರಾಧಿಸುವ ಮೂಲಕ ಉತ್ತಮ ಆರೋಗ್ಯ ಮತ್ತು ಇತರ ಹಲವಾರು ಪ್ರಯೋಜನಗಳನ್ನು ಪಡೆದಿದ್ದೇನೆ. ನೀನು ಸಹಾ ಸೂರ್ಯ ಸ್ನಾನ, ಸೂರ್ಯ ನಮಸ್ಕಾರ ಮತ್ತು ಭಾರೀ ಕುಟಿಯಲ್ಲಿ ಸೂರ್ಯನನ್ನು ಧ್ಯಾನಿಸುʼ ಎಂದು ಹೇಳಿದನು. ಅದರಂತೆಯೇ ಸಾಂಬನು ನಡೆದುಕೊಂಡ ಪರಿಣಾಮ ಆರೋಗ್ಯವನ್ನು ಮರಳಿ ಪಡೆದನು. ನಮ್ಮ ಗುರು  ಹಿರಿಯರು, ತಪಸ್ವಿಗಳು ಸೂರ್ಯ ಕಿರಣಗಳು ನೀಡುವ ವಾರಗಳ ಬಗ್ಗೆ  ತಿಳುವಳಿಕೆಯನ್ನೂ ಜ್ಞಾನವನ್ನೂ ನೀಡಿದ್ದಾರೆ. ಆದ್ದರಿಂದಲೇ ಸಂಕ್ರಾಂತಿಯಂದು ಮತ್ತು ಉತ್ತರಾಯಣದಲ್ಲಿ ಸೂರ್ಯನನ್ನು ಪೂಜಿಸುತ್ತಾರೆ. ಸೂರ್ಯ ನಮಸ್ಕಾರವನ್ನು ಮುಂಜಾನೆ ಮಾಡುವುದರ ಉದ್ದೇಶವೂ ಕೂಡ ಸ್ಪಷ್ಟವಿದೆ. ವೈಜ್ಞಾನಿಕವಾಗಿ ನೋಡುವುದಾದರೂ ಸೂರ್ಯನು ಉತ್ತರಾಯಣದಲ್ಲಿ ಬಹು ಸಮಯ ಲಭ್ಯನಾಗುತ್ತಾನೆ. ಅಂದರೆ ದೀರ್ಘವಾದ ಹಗಲು ಮತ್ತು ಕಡಿಮೆ ರಾತ್ರಿಯು ಉತ್ತರಾಯಣದ ವಿಶೇಷ.

ಸಂಕ್ರಾಂತಿಗೆ ಮುಖ್ಯವಾಗಿ ಎಳ್ಳು,ಬೆಲ್ಲ ಮತ್ತು ನೆಲಗಡಲೆಯನ್ನು ಹಂಚಲಾಗುತ್ತದೆ. ಬೆಲ್ಲವು ಸಿಹಿಯೊಂದಿಗೆ ಕಾಲ್ಸಿಯಂ, ಕಬ್ಬಿಣ, ಪ್ರೊಟೀನ್, ಕೊಬ್ಬಿನ ಅಂಶವನ್ನೂ ಹೊಂದಿದ್ದು ಆರೋಗ್ಯಕರವಾಗಿದೆ. ನೆಲಗಡಲೆಯಲ್ಲಿ ಎಣ್ಣೆಯ ತೈಲಾಂಶವು ಅಧಿಕವಾಗಿದ್ದು  ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಗೊಳಿಸಿ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಎಳ್ಳಿನಲ್ಲಿ ಖನಿಜ ಮತ್ತು ಎಣ್ಣೆಯ ಅಂಶಗಳಿವೆ. ಎಳ್ಳು ಕ್ಯಾಲ್ಸಿಯಂ ಅಂಶವನ್ನು ಹೊಂದಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಶಾಲಿಯಾಗಿಸುತ್ತದೆ. ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಮಲಬದ್ದತೆಯನ್ನು ನಿವಾರಿಸುತ್ತದೆ. ಹೀಗೆ ಚಳಿಗಾಲದಲ್ಲಿ ದೇಹಕ್ಕೆ ಅವಶ್ಯವಿರುವ ಎಲ್ಲಾ ಅಂಶಗಳನ್ನೂ ಎಳ್ಳು ಬೆಲ್ಲ ಮತ್ತು ನೆಲಗಡಲೆಗಳು ನೀಡುತ್ತವೆ. ಉತ್ತರಾಯಣದ ಪುಣ್ಯ ಫಲಕ್ಕಾಗಿ ಪಿತಾಮಹ ಭೀಷ್ಮರು 58 ದಿನಗಳ ಕಾಲ ಶರಶಯ್ಯೆಯಲ್ಲಿ ಮಲಗಿದ್ದರು. ಉತ್ತರಾಯಣದಲ್ಲಿ ಶರೀರ ತ್ಯಜಿಸುವುದು ಭಾಗ್ಯ ಎಂಬುದು ಹಿರಿಯರ ನಂಬಿಕೆ.

ಪಂಜಾಬ್‌ನಲ್ಲಿ ಲೋಹರಿ, ರಾಜಸ್ಥಾನದಲ್ಲಿ ಸಂಕ್ರಾಂತಿ, ಗುಜರಾತ್ ನಲ್ಲಿ ಉತ್ತರಾಯಣ್, ಉತ್ತರ ಪ್ರದೇಶದಲ್ಲಿ ಕಿಚೆರಿ, ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿ, ಪಶ್ಚಿಮ ಬಂಗಾಳದಲ್ಲಿ ಪಾಶ್ ಪೊರ್ಬೊನ್, ಅಸ್ಸಾಮ್ ನಲ್ಲಿ  ಮಾಘ ಬಿಹು, ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಈ ಹಬ್ಬ ಪ್ರತಿಯೊಬ್ಬ ಹಿಂದೂವಿಗೂ ಮಹತ್ವವಾಗಿದೆ. ಪಂಜಾಬ್ ನಲ್ಲಿ ಚಳಿಗಾಲದ ಫಸಲನ್ನು ಕೊಯ್ಯುವ ಹಬ್ಬವಾಗಿ ಆಚರಿಸಿದರೆ, ಇದೆ ಹಬ್ಬವನ್ನು ರಾಜಸ್ಥಾನದಲ್ಲಿ  ಮುತ್ತೈದೆಯರು ಇತರ 13 ಮುತ್ತೈದೆಯರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಮತ್ತು ವಿವಾಹಿತಳಾದ ಮಗಳನ್ನು ತವರಿಗೆ ಆಹ್ವಾನಿಸುವ ಮೂಲಕ ಆಚರಿಸುತ್ತಾರೆ. ಗುಜರಾತಿನಲ್ಲಿ ಗಾಳಿಪಟವನ್ನು ಹಾರಿಸುತ್ತಾರಾದರೆ, ಉತ್ತರ ಪದೇಶದಲ್ಲಿ ಗಂಗೆಯಲ್ಲಿ ಮೀಯುವ ಮೂಲಕ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಎಳ್ಳು ಬೆಲ್ಲದ ಲಡ್ಡುಗಳನ್ನು ಹಂಚುವುದರ ಮೂಲಕ ಆಚರಿಸುತ್ತಾರಾದರೆ, ಬಂಗಾಳದಲ್ಲಿ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ.

ಸಂಕ್ರಾಂತಿ ಹಬ್ಬವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಪಕ್ಷಿಗಳಿಗೆ ಗೌರವ ಮತ್ತು ಪ್ರೀತಿಯನ್ನು ತೋರುವ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಸಿಹಿ ತಿಂಡಿಗಳನ್ನು ಮತ್ತು ಧಾನ್ಯಗಳನ್ನು ಕಾಗೆ ಮಾತ್ತು ಇತರ ಪಕ್ಷಿಗಳಿಗೆ ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಆದರೂ ಹಬ್ಬದ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವ ಮೂಲಕ ಪಕ್ಷಿ ಸಂಕುಲಗಳಿಗೆ ಹಾನಿಯನ್ನುಂಟು ಮಾಡಲಾಗುತ್ತದೆ, ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನೇಕ  ಪಕ್ಷಿಗಳು ಸಾವಿಗೀಡಾಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಇದೆ ವಿಚಾರಗಳನ್ನು ದೂರದರ್ಶನ, ವಾರ್ತಾಪತ್ರಿಕೆಗಳ ಮೂಲಕ ಜನರ ಮನದಲ್ಲಿ ತಾವು ಮಾಡುತ್ತಿರುವುದು ತಪ್ಪು ಎಂಬ ತಪ್ಪಿತಸ್ಥ ಭಾವನೆ ಮೂಡುವಂತೆ ಮಾಡಲಾಗುತ್ತದೆ. ಇನ್ನೊಂದೆಡೆಯಲ್ಲಿ ಅದೇ ಹಬ್ಬದಲ್ಲಿ ಪಕ್ಷಿಗಳನ್ನು ಪೂಜಿಸುವುದನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತದೆ. ಚೈನಾ ನಿರ್ಮಿತ ಗಾಳಿಪಟದ ದಾರಗಳು ಹಾನಿಕಾರಕ. ಈ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಈ ಬಾರಿ ಭಾರತೀಯ ಉತ್ಪನ್ನಗಳನ್ನೇ ಬಳಸುವ ಮೂಲಕ ಜಾಗೃತಿಯಿಂದಲೂ ಪ್ರಬುದ್ದತೆಯಿಂದಲೂ ಹಬ್ಬಗಳನ್ನು ಆಚರಿಸಲಾಗಿತ್ತು.

ಸಂಕ್ರಾಂತಿ ಹಬ್ಬದಲ್ಲಿ ತಾವು ಬೆಳೆದ ಬೆಳೆಯನ್ನು ಬಡವರಿಗೆ ಒಂದು ಭಾಗವನ್ನು ಹಂಚುವ ಮೂಲಕವೂ ಆಚರಿಸಲಾಗುತ್ತದೆ. ಹಬ್ಬದ ಆಚರಣೆಯು ಮುಂದಿನ ಜನಾಂಗಕ್ಕೆ ಅನೇಕ ಪಾಠಗಳನ್ನು ಕಲಿಸುತ್ತವೆ. ಸಂಕ್ರಾಂತಿ ಹಬ್ಬದ ಆಹಾರವು, ಆರೋಗ್ಯಕರ ಆಹಾರ ಸೇವನೆ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತವನ್ನು ಚಾಚುವುದು, ಪ್ರಾಣಿಗಳು ಪಕ್ಷಿಗಳು ಸೇರಿದಂತೆ ಇತರ ಜೀವಿಗಳನ್ನು ಗೌರವಿಸಿ ಪ್ರಕೃತಿಯೊಂದಿಗೆ ಬೆರೆತು ಜೀವಿಸುವ ಪಾಠಗಳನ್ನು ಕಲಿಸುತ್ತದೆ. ಯಾವುದೇ ಭಾರವಿಲ್ಲದೆ, ಎತ್ತರಕ್ಕೇರುವ ಸ್ಫೂರ್ತಿಯನ್ನೂ ಅದೇ ಸಂದರ್ಭದಲ್ಲಿ ಎಷ್ಟೇ ಎತ್ತರಕ್ಕೇರಿದರೂ ನೆಲದೊಂದಿಗೆ ಹೇಗೆ ಬೆಸೆದಿರಬೇಕೆಂಬ ಪಾಠವನ್ನೂ ಕಲಿಸುತ್ತದೆ. ಸಮಾಜದೊಂದಿಗೆ ಜೊತೆಗೂಡಿ ಸೌಹಾರ್ದತೆಯಿಂದ ಜೀವನ ನಡೆಸುವ ಮತ್ತು ತಮ್ಮಲ್ಲಿರುವುದನ್ನು ಹಂಚಿ ತಿನ್ನುವ ಮೂಲಕ ಸಂತೋಷವನ್ನು ಪಡೆಯುವ ಅನುಭೂತಿಯನ್ನೂ ಸಂಕ್ರಾಂತಿ ಹಬ್ಬ ಕಲಿಸುತ್ತದೆ. ಹಬ್ಬದ ಆಚರಣೆಯು ಕೇವಲ ಆಚರಣೆ ಅಥವಾ ಕಂದಾಚಾರವಲ್ಲ. ಅದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಪಾಠವನ್ನು ತಿಳಿಹೇಳುವ ಪಾಠಶಾಲೆ ಎಂಬುದನ್ನು ಮರೆಯದಿರೋಣ ಅಲ್ಲವೇ?

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top