ಗೋವು ಕೇವಲ ಹಾಲು ನೀಡುವ ಪ್ರಾಣಿಯಲ್ಲ, ರೈತನ ಒಡನಾಡಿ. ರೈತನ ಕಷ್ಟ ಸುಖಗಳಲ್ಲಿ ಒಂದಾಗುವ ಮಿತ್ರಳೂ ಹೌದು. ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಗೋ ಪರ ಕಾನೂನಿನ ಮೂಲಕ ಹಲವು ಪ್ರಗತಿಪರ ಬದಲಾವಣೆ ಆಗಿದೆ. ಮಾತ್ರವಲ್ಲ ಇತ್ತೀಚೆಗೆ ಕೆ.ಎಂ.ಎಫ್. ಮೂಲಕ ಬಂದ ಹೇಳಿಕೆಯ ಆಧಾರದಲ್ಲಿ ಕರ್ನಾಟಕದ ಹಾಲು ಮತ್ತು ಹಾಲಿನ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗಲಿದೆ ಎಂಬುದು ಅಭೂತಪೂರ್ವ ಬದಲಾವಣೆ. ರೈತ ಕೃಷಿ ಕಾರ್ಮಿಕರ ಜೀವನದಲ್ಲೂ ಜಾನುವಾರು ಹತ್ಯೆ ತಡೆ ಕಾನೂನಿನ ಮೂಲಕ ಧನಾತ್ಮಕ ಬದಲಾವಣೆಯಾಗಿದ್ದು, ಹಲವು ಮಂದಿ ಯುವಕರು ಪಶುಸಂಗೋಪನೆಯಲ್ಲಿ ತೊಡಗುವಂತಾಗಿದೆ. ಕೃಷಿ ಕ್ಷೇತ್ರದ ಸುಸ್ಥಿರ ಪ್ರಗತಿಗೆ ಪೂರಕವಾಗಿರುವ ಜಾನುವಾರುಗಳು ರೈತನ ಮಿತ್ರ ಎಂಬುದು ನಿಜವಾಗುತ್ತಿದೆ. ರಾಜ್ಯದಲ್ಲಿನ ಒಟ್ಟು ಜಾನುವಾರುಗಳ ಅಂಕಿ-ಅಂಶದ ಆಧಾರದಲ್ಲಿ ಹೇಳುವುದಾದರೆ, ಕರ್ನಾಟಕ ದಕ್ಷಿಣ ಭಾರತದ ಅತಿ ಹೆಚ್ಚು ಹಾಲುತ್ಪಾದಕ ಗೋವುಗಳನ್ನು ಹೊಂದಿದ್ದು, ಉತ್ತಮ ತಳಿ ಎಮ್ಮೆಗಳ ಮೂಲಕ ಹೆಚ್ಚಿನ ಪೋಷಕಾಂಶಭರಿತ ಹಾಲನ್ನು ನೀಡುತ್ತದೆ.
ರಾಜ್ಯದಲ್ಲಿ ಜಾನುವಾರು ಹತ್ಯಾ ತಡೆ ವಿಧೇಯಕವನ್ನು ಮಂಡಿಸಿ ಈ ನಿಟ್ಟಿನ ಕಾನೂನು ಜಾರಿಗೆ ಬಂದ ನಂತರ ಅಕ್ರಮ ಗೋ ಸಾಗಾಟಕ್ಕೆ ಸಂಪೂರ್ಣ ಅಂಕುಶ ಬಿದ್ದಿದೆ. ಕಾನೂನು ಜಾರಿಗೂ ಹಿಂದೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಜಾನುವಾರುಗಳನ್ನು ಯಥೇಚ್ಛವಾಗಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಅದರಲ್ಲೂ ಎಳೆ ರಾಸುಗಳು, ಕೋಣಗಳ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಸಾಕಾಣೆಯ ಹೆಸರಿನಲ್ಲಿ ಕೇರಳದ ಕುಗ್ರಾಮಗಳಲ್ಲಿರುವ ವಧಾಸ್ಥಳಗಳನ್ನು ತಲುಪುತ್ತಿದ್ದ ಹೆಚ್ಚಿನ ಜಾನುವಾರುಗಳು ಕಟುಕನ ಕತ್ತಿಗೆ ಬಲಿಯಾಗುತ್ತಿದ್ದವು. ಇಂದು ಅಂತಹ ಅನಿಯಮಿತ ಸಾಗಾಟಕ್ಕೆ ಅಂಕುಶ ಬಿದ್ದಿದೆ. ಜಾನುವಾರು ಹತ್ಯೆ ತಡೆ ಕಾನೂನು ಈ ಹಿಂದಿನ ಕಾನೂನಿಗಿಂತಲೂ ಕಠಿಣವಾಗಿದ್ದು ಅಕ್ರಮ ಗೋಸಾಗಾಟವನ್ನು ಪೂರ್ಣ ಪ್ರಮಾಣದಲ್ಲಿ ತಡೆಯುವುದು ಮಾತ್ರವಲ್ಲ, ಗೋ ತಳಿ ರಕ್ಷಣೆಗೂ ಸಹಾಯಕವಾಗಿದೆ.
ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ರಾಜ್ಯದಲ್ಲಿ ಪಶು ವೈದ್ಯರ ಅಗತ್ಯತೆಯನ್ನು ಮನಗಂಡು ಗುತ್ತಿಗೆಯ ಆಧಾರದಲ್ಲಿ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿಕೊಂಡು ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುವ ಗೋ ವಧೆಯನ್ನು ತಡೆಯಲಾಗುವುದು ಎಂದಿರುವುದು ಪ್ರಶಂಸನೀಯ. ಕರಾವಳಿ ಜಿಲ್ಲೆಗಳಲ್ಲಿ ಗೋವುಗಳ ಕಳ್ಳತನ, ಕಳ್ಳ ಸಾಗಾಟವೇ ಮತೀಯ ಗಲಭೆಗೆ ಕಾರಣವಾಗುತ್ತಿತ್ತು. ಇನ್ನು ಮುಂದೆ ಇಂತಹ ತೊಂದರೆಗಳು ಮರುಕಳಿಸದು ಎಂಬ ವಿಶ್ವಾಸವಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಶಾಸನಸಭೆಯಲ್ಲಿ ಹೇಳಿದ್ದರು.
ಕರ್ನಾಟಕ ರಾಜ್ಯದ ಮೇಲ್ಮನೆಯಲ್ಲಿ ಸ್ಥಳೀಯ ಪಕ್ಷವೂ ವಿಧೇಯಕಕ್ಕೆ ಬೆಂಬಲ ಸೂಚಿಸಿ ತಾನು ಕೃಷಿ ಪಶುಸಂಗೋಪನೆಗೆ ಆಧಾರವಾಗಿರುವ ಕಾನೂನನ್ನು ಬೆಂಬಲಿಸುವುದಾಗಿ ಮುಕ್ತಕಂಠದಿಂದ ಹೇಳಿದೆ. ದಶಕಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಅಕ್ರಮ ಜಾನುವಾರು ಸಾಗಾಟವು ಕಮ್ಮಿಯಾಗಿದ್ದು, ಜಾನುವಾರುಗಳಿಗೆ ಕಾನೂನಿನ ಮೂಲಕ ರಕ್ಷೆ ಸಿಕ್ಕಿದಂತಾಗಿದೆ. ಕರ್ನಾಟಕದಲ್ಲಿ ಜಾರಿಗೆ ಬಂದ ಜಾನುವಾರು ಹತ್ಯೆ ತಡೆ ಕಾನೂನು ದೇಶದ ಮಹತ್ವದ ಕಾನೂನಾಗಿದ್ದು, ದಕ್ಷಿಣ ಭಾರತದ ಉಳಿದ ರಾಜ್ಯಗಳು ಜಾನುವಾರು ತಳಿ ರಕ್ಷಣೆಯ ನಿಟ್ಟಿನಲ್ಲೂ ಕರ್ನಾಟಕ ರಾಜ್ಯವನ್ನು ಮಾದರಿಯಾಗಿ ಸ್ವೀಕರಿಸಬಹುದಾಗಿದೆ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.