ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶ ನೋಡಿರುವ ಅಪ್ರತಿಮ ವೀರ ಸೇನಾನಿ, ಸಮರ ವೀರ ಕೊಡಗಿನ ಜನರಲ್ ಕೆ ಎಸ್ ತಿಮ್ಮಯ್ಯ. ಭಾರತದ ರಕ್ಷಣಾ ವ್ಯವಸ್ಥೆ, ಸೇನೆಯ ಹಲವು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ, ಅದನ್ನು ಸಮರ್ಥವಾಗಿ ಮುನ್ನಡೆಸಿದವರು ತಿಮ್ಮಯ್ಯ. ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿದ್ದವರು ಇವರು. ಇವರ ದೇಶ ಸೇವೆಯನ್ನು ಸ್ಮರಿಸಿ ಅವರ ಕೊಡಗಿನ ಸನ್ನಿ ಸೈಡ್ ನಿವಾಸವನ್ನು ಸೇನೆಗೆ ಸಂಬಂಧಪಟ್ಟ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. ಫೆ. 6-2021 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲಿದ್ದಾರೆ.
ಜನರಲ್ ತಿಮ್ಮಯ್ಯ ಅವರ ಪೂರ್ತಿ ಹೆಸರು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ. ಜನಿಸಿದ್ದು ದೇಶ ಸೇವೆಗೆ ಅನೇಕ ಯೋಧರನ್ನು ಒದಗಿಸಿದ ಕರ್ನಾಟಕದ ಕೊಡಗು. ಕಲಿಗಳ ನಾಡಿನಲ್ಲಿ 1906 ರ ಮಾರ್ಚ್ 30 ರಂದು ಸುಬ್ಬಯ್ಯ-ಸೀತಮ್ಮ ದಂಪತಿಗಳ ಪುತ್ರನಾಗಿ ಜನನ. 1926 ರಲ್ಲಿ ಬ್ರಿಟಿಷ್ ಇಂಡಿಯಾ ಆರ್ಮಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದವರು. 1947 ರ ಸೆಪ್ಟೆಂಬರ್ ತಿಂಗಳಲ್ಲಿ ಮೇಜರ್ ಜನರಲ್ ಆಗಿ ಭಡ್ತಿ ಹೊಂದುತ್ತಾರೆ. 1957 ರ ಮೇ 7 ರಂದು ಭಾರತೀಯ ಭೂಸೇನೆಯ 6ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. 1961 ರ ಮೇ 7 ರಂದು ತಿಮ್ಮಯ್ಯನವರು ಸೇನೆಯಿಂದ ನಿವೃತ್ತರಾಗುತ್ತಾರೆ. 1965 ರ ಡಿಸೆಂಬರ್ 17 ರಂದು ನಿಧನ ಹೊಂದುತ್ತಾರೆ.
ಜನರಲ್ ತಿಮ್ಮಯ್ಯ ಅವರು ಸೇನೆಗೆ, ದೇಶಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಡಿಕೇರಿಯ ಜಿ ಟಿ ರಸ್ತೆಯಲ್ಲಿನ ಅವರ ನಿವಾಸವನ್ನು ಯೋಧರ ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಅವರ ನಿವಾಸ ಸನ್ನಿ ಸೈಡ್ ಈಗ ಭಾರತದ ಸೇನೆಯ ಶಕ್ತಿ, ಸಾಮರ್ಥ್ಯ, ಶೌರ್ಯ, ತ್ಯಾಗ ಗಳನ್ನು ಸಾರುವ, ಮಿಲಿಟರಿ ವಸ್ತುಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಮಾಡಲಾಗಿದೆ. ದೇಶದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಬಳಕೆ ಮಾಡಿದ ಯುದ್ಧ ಶಸ್ತ್ರಾಸ್ತ್ರಗಳಾದ ಗನ್, ಯುದ್ಧ ಡೈರಿಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇದು 4 ಕೋಟಿ ರೂ. ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಿದೆ. ಮಹಾದ್ವಾರದ ಬಲ ಬದಿಗಿರುವ ಯೋಧರ ಸ್ಮಾರಕ ವೀಕ್ಷಕರನ್ನು ಕೈಬೀಸಿ ಕರೆಯುತ್ತದೆ.
ಸನ್ನಿ ಸೈಡ್ ಸೇನಾ ವಸ್ತುಸಂಗ್ರಹಾಲಯವಾಗುತ್ತಿರುವುದರ ಹಿಂದೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮತ್ತು ಜನರಲ್ ಕೆ ಎಸ್ ತಿಮ್ಮಯ್ಯ ಫೋರಂ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗಿನ ಜನಪ್ರತಿನಿಧಿಗಳು ಪಟ್ಟಿರುವ ಶ್ರಮವನ್ನು ಮರೆಯುವಂತಿಲ್ಲ. ಅದರ ಫಲವಾಗಿ ಜನರಲ್ ತಿಮ್ಮಯ್ಯ ಅವರು ಆಡಿ ಬೆಳೆದ ಅವರ ನಿವಾಸ ಸನ್ನಿ ಸೈಡ್ ಇಂದು ರಾಷ್ಟ್ರೀಯ ಸ್ಮಾರಕವಾಗಿ ಬದಲಾಗಿದೆ. ಸೇನೆಯ ಇಂಚಿಂಚು ಮಾಹಿತಿಯನ್ನು ಪ್ರವಾಸಿಗರಿಗೆ ನೀಡಲು ಸಜ್ಜಾಗಿದೆ.
ಈ ಮ್ಯೂಸಿಯಂ ನಲ್ಲಿ ಏನೇನಿರಲಿವೆ ಎಂಬುದರ ಬಗ್ಗೆ ನೋಡುವುದಾದರೆ, ಜನರಲ್ ತಿಮ್ಮಯ್ಯ ಅವರ ಸೇನಾ ಸಮವಸ್ತ್ರ, ಯುದ್ಧ ಟ್ಯಾಂಕರ್, ಸುಖೋಯ್ ಯುದ್ಧ ವಿಮಾನಗಳು, ತಿಮ್ಮಯ್ಯ ಅವರು ಸೇನೆಯಲ್ಲಿದ್ದ ಸಂದರ್ಭದಲ್ಲಿ ಅವರು ಮೆರೆದ ಸಾಧನೆಗಳ ಅನಾವರಣ, ತಿಮ್ಮಯ್ಯ ಅವರ ಜೀವನದ ಕುರಿತ ಸಾಕ್ಷ್ಯಚಿತ್ರಗಳನ್ನು ನಾವು ಈ ಮ್ಯೂಸಿಯಂನಲ್ಲಿ ಗಮನಿಸಬಹುದಾಗಿದೆ. ಟಿ. 50 ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಮತ್ತು ಸ್ಮಾರಕಗಳು ಗಮನ ಸೆಳೆಯುತ್ತವೆ. ಮಿಗ್-21 ಯುದ್ಧ ವಿಮಾನವೂ ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.
ಹಾಗೆಯೇ ಇಲ್ಲಿ ಭಾರತೀಯ ಸೇನೆ, ಸೈನಿಕ ಶಕ್ತಿಯನ್ನು ಪ್ರದರ್ಶಿಸುವ ಕಲಾಕೃತಿಗಳು, ತಿಮ್ಮಯ್ಯ ಅವರ ಬಾಲ್ಯದ ಫೋಟೋಗಳು ಅವರು ಬಳಕೆ ಮಾಡಿದ ಲೇಖನಿಗಳು, ಮಿಲಿಟರಿ ಸಮವಸ್ತ್ರಗಳು, ಪುಸ್ತಕಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಹಾಗೆಯೇ ಸೈನ್ಯದಲ್ಲಿ ಬಳಸುವ 24 ಕ್ಕೂ ಅಧಿಕ ಶಸ್ತ್ರಾಸ್ತ್ರಗಳು, 60 ವರ್ಷಗಳ ಇತಿಹಾಸದ ಲಘು ಮಷಿನ್ ಗನ್, ಮಧ್ಯಮ ಮಷಿನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್ಸ್, ರಾಕೆಟ್ ಲಾಂಚರ್ ಗಳು ಸೇರಿದಂತೆ ಇನ್ನಿತರ ಮಹತ್ವದ ವಸ್ತುಗಳನ್ನು ನಾವು ಸನ್ನಿ ಸೈಡ್ನಲ್ಲಿ ಕಾಣಬಹುದಾಗಿದೆ.
ಒಟ್ಟಿನಲ್ಲಿ ಕೊಡಗು ದೇಶಕ್ಕೆ ಅನೇಕ ಯೋಧರನ್ನು ಕೊಟ್ಟ ಪುಣ್ಯ ಭೂಮಿ. ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಹಿಡಿದು ಇಂದಿಗೂ ಹಲವು ವೀರರನ್ನು ದೇಶಸೇವೆಗಾಗಿ ಕಳುಹಿಸಿಕೊಟ್ಟಿದೆ. ಇಂತಹ ಪುಣ್ಯಭೂಮಿಯ ಗೌರವವನ್ನು, ಜನರಲ್ ತಿಮ್ಮಯ್ಯ ಅವರ ಗೌರವವನ್ನು ಈ ವಸ್ತು ಸಂಗ್ರಹಾಲಯ ಮತ್ತಷ್ಟು ಎತ್ತರಕ್ಕೇರಿಸಿದೆ ಎಂದರೆ ಅತಿಶಯವಾಗಲಾರದು. ಹಾಗೆಯೇ ಯುವ ಪೀಳಿಗೆಯನ್ನು ದೇಶ ಸೇವೆಯತ್ತ ಕೊಡಗಿನ ಸಮರ ಕಲಿ ಜನರಲ್ ತಿಮ್ಮಯ್ಯ ಸ್ಮಾರಕ ಕೇಂದ್ರ ಪ್ರೇರೇಪಿಸಲಿದೆ ಎಂದರೂ ತಪ್ಪಾಗಲಾರದು.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.