ಫ್ಯಾಶನ್ ಶೋಗೆ ಅಂತಾನೆ ಸಿದ್ದಪಡಿಸಿರೋ ರೇಂಪ್ ಮಾಡೆಲ್ಗಳ ಬೆಕ್ಕಿನ ನಡಿಗೆಯನ್ನ ಕಣ್ತುಂಬಿಕೊಳ್ಳೋಕೆ ಅಂತಾನೆ ಕುತೂಹಲದಿಂದ ಕಾಯ್ತಾ ಇರೋ ಜನ ಈ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದ ಕದ್ರಿ ಪಾರ್ಕಿನಲ್ಲಿ. ಹೀಗೆ ನವವಧುವಿನಂತೆ ವೇದಿಕೆಯೇನೋ ಸಿದ್ದಗೊಂಡಿದೆ. ಫ್ಯಾಶನ್ ಶೋ ವೀಕ್ಷಿಸೋಕೆ ಅಂತಾನೆ ಜನ ಕೂಡ ಕಾದು ಕುಳಿತಿದಾರೆ. ಹೀಗಿರೂವಾಗಲೇ ಪುಟ್ಟ ಪುಟ್ಟ ಮಾಡೆಲ್ ಗಳು ವೇದಿಕೆಗೆ ಎಂಟ್ರಿ ಕೊಟ್ಟು ಬಿಡ್ತಾರೆ. ತಮ್ಮ ವಿನೂತನ ಶೈಲಿಯ ಮೂಲಕ ರೇಂಪ್ ಮೇಲೆ ಬೆಕ್ಕಿನ ನಡಿಗೆಯಿಡ್ತಾರೆ. ಇವಿಷ್ಟೇ ಅಲ್ಲದೇ ಪ್ರೇಕ್ಷಕರತ್ತ ಒಂದು ಕ್ಷಣ ಕೈ ಬೀಸಿ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ಆದ್ರೆ ಇದು ಮಾತ್ರ ಅಂತಿಂಥ ಫ್ಯಾಶನ್ ಶೋ ಅಲ್ಲ. ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕನ ಕಣ್ಣುಂಚುಗಳನ್ನ ಒದ್ದೆಯಾಗಿಸಿದ ಫ್ಯಾಶನ್ ಶೋ. ಅಷ್ಟಕ್ಕೂ ಈ ರೀತಿ ರೇಂಪ್ ಮೇಲೆ ಬಂದು ನಿರ್ಭಯವಾಗಿ ಬೆಕ್ಕಿನ ನಡಿಗೆಯಿಡ್ತಿರೋ ಇವ್ರೆಲ್ಲಾ ಮಂಗಳೂರಿನ ಸಾನಿಧ್ಯ ಭಿನ್ನ ಸಾಮರ್ಥ್ಯದ ಶಾಲೆ ಮತ್ತು ರೆವರೆಂಡ್ ಅಂಧ ಮಕ್ಕಳ ಶಾಲೆಯ ಮಕ್ಕಳು. ಇಂಥ ಮಕ್ಕಳನ್ನ ದೈರ್ಯವಾಗಿ ವೇದಿಕೆಗೆ ತರೋ ಮೂಲಕ ಇವ್ರಲ್ಲಿ ಅಡಗಿರೋ ಸುಪ್ತ ಪ್ರತಿಭೆಯನ್ನ ಹೊರತರೋ ಕೆಲಸ ಮಾಡಿದ್ದು ಮಂಗಳೂರಿನ ಮಿಫ್ಟ್ ಫ್ಯಾಶನ್ ಡಿಸೈನಿಂಗ್ ಕಾಲೇಜು. ತಮ್ಮ ಸಂಸ್ಥೆಯಲ್ಲಿ ತಯಾರಾಗೋ ಫ್ಯಾಶನ್ ವಸ್ತ್ರಗಳನ್ನ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಮತ್ತು ಅಂಧ ಮಕ್ಕಳಿಗೆ ತೊಡಿಸೋ ಮೂಲಕ ವೇದಿಕೆಯಲ್ಲಿ ರೆಂಪ್ ವಾಕ್ ಮಾಡಿಸೋ ಸಾಹಸದ ಕೆಲಸಕ್ಕೆ ಈ ಸಂಸ್ಥೆ ಕೈ ಹಾಕಿತ್ತು.
ಕಣ್ಣು ಕಾಣಿಸಲ್ಲ, ಆದ್ರೆ ಕನಸಿಗೆ ಕೊನೆಯಿಲ್ಲ. ತಮ್ಮದೇ ಕಲ್ಪನೆಯಲ್ಲಿ ಕುಣೀತಾರೆ..ರ್ಯಾಂಪ್ ಮೇಲೆ ಹೆಜ್ಜೆ ಹಾಕ್ತಾರೆ. ಅಸಲಿಗೆ ಈ ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದ ಪ್ರತೀ ಮಗುವಿಗೂ ಒಂದಲ್ಲ ಒಂದು ಸಮಸ್ಯೆಯಿದೆ. ಕೆಲವ್ರು ಬುದ್ದಿಮಾಂಧ್ಯರಾದ್ರೆ ಇನ್ನು ಕೆಲವ್ರು ಅಂಗವಿಕಲರು. ಅದ್ರಲ್ಲೂ ಜಗತ್ತನ್ನೇ ನೋಡದ ಅದೆಷ್ಟೋ ಮಕ್ಕಳು ಈ ವೇದಿಕೆಯಲ್ಲಿದ್ರು. ವಿಚಿತ್ರ ಅಂದ್ರೆ ಮಿಫ್ಟ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ ಫ್ಯಾಶನ್ ವಸ್ರ್ತಗಳನ್ನ ತೊಟ್ಟುಕೊಂಡು ಅಂಧಮಕ್ಕಳು ಕೂಡ ವೇದಿಕೆ ಮೇಲೆ ಬೆಕ್ಕಿನ ನಡಿಗೆಯಿಟ್ರು. ತಮಗೆ ಈ ಜಗತ್ತು ಕಾಣದೇ ಇದ್ರೆ ಏನಂತೆ, ನಮ್ಮ ಪ್ರತಿಭೆ ಈ ಜಗತ್ತಿಗೆ ಕಂಡ್ರೆ ಸಾಕು ಅನ್ನೋ ಹಾಗೆ ಛಲದ ಮತ್ತೊಂದು ಪ್ರತೀಕವಾಗಿ ಆ ಮಕ್ಕಳು ಕಂಡು ಬಂದ್ರು. ಕಲರ್ ಕಲರ್ ಉಡುಗೆ ತೊಟ್ಟು, ವೇದಿಕೆ ಮೇಲೆ ಬರೋ ಆ ಅಂಧ ಪುಟಾಣಿಗಳಿಗೆ ಈ ಮೊದಲೇ ರ್ಯಾಂಪ್ ವಾಕ್ ನ ಬಗ್ಗೆ ತರಬೇತಿ ನೀಡಲಾಗಿತ್ತು. ಕಣ್ಣು ಕಾಣದೇ ಇರೋ ಕಾರಣದಿಂದ ರ್ಯಾಂಪ್ ಮೇಲೆ ಇಂತಿಷ್ಟೇ ಹೆಜ್ಜೆಗಳನ್ನ ಇಡಬೇಕು ಅಂತ ಅವ್ರಿಗೆ ಚೆನ್ನಾಗಿ ತಿಳಿಸಿಕೊಡಲಾಗಿತ್ತು. ಹೀಗಾಗಿ ಅಂಧ ಮಕ್ಕಳು ಸಖತ್ ಬ್ರಿಲಿಯೆಂಟ್ ಅನ್ನೋದನ್ನ ವೇದಿಕೆಯ ಮೇಲೆ ಆ ಮಕ್ಕಳು ಸಾಬೀತು ಪಡಿಸಿದರು. ಬಾಯಲ್ಲಿ ತಮ್ಮ ಹೆಜ್ಜೆಗಳನ್ನ ಗುನುಗುತ್ತಲೇ ರೇಂಪ್ ಮೇಲೆ ಬೆಕ್ಕಿನ ನಡಿಗಯಿಟ್ರು. ಇದ್ರ ಜೊತೆಗೆ ಯಾವ ಮಾಡೆಲ್ ಗಳಿಗೂ ಕಮ್ಮಿಯಿಲ್ಲ ಅನ್ನೋವಂತೆ ಮೈ ಬಳುಕಿಸುತ್ತಾ ರೇಂಪ್ ವಾಕ್ ಮಾಡಿ ನೆರೆದಿದ್ದಿದವರ ಬಳಿ ಕೈ ಬೀಸಿದ್ರು. ಇವಿಷ್ಟೇ ಅಲ್ಲದೇ ಫ್ಯಾಶನ್ ಶೋನ ರೀತಿ-ರಿವಾಜುಗಳು ಈ ಅಂಧ ಮಕ್ಕಳ ವಿಭಿನ್ನ ಪ್ರದರ್ಶನದಲ್ಲಿ ಚಾಚೂ ತಪ್ಪದೇ ಪಾಲನೆಯಾಗಿದ್ದು ವಿಶೇಷವಾಗಿತ್ತು.
ಇನ್ನು ಅಂಧ ಮಕ್ಕಳದ್ದು ಈ ಥರದ ಸಾಧನೆಯಾದರೆ ಭಿನ್ನ ಸಾಮರ್ಥ್ಯದ ಮಕ್ಕಳದ್ದು ಇನ್ನೊಂಥರ ಸಾಧನೆ. ಅಂಧರಿಗೆ ಕಣ್ಣು ಕಾಣಿಸೋದಿಲ್ಲ ಅನ್ನೋದನ್ನ ಬಿಟ್ರೆ ಬುದ್ದಿವಂತಿಯಲ್ಲಿ ಸಾಕಷ್ಟು ಚುರುಕಾಗಿರುತ್ತಾರೆ. ಆದ್ರೆ ಭಿನ್ನ ಸಾಮರ್ಥ್ಯದ ಮಕ್ಕಳು ಬುದ್ದಿ ಮಾಂಧ್ಯರಾಗಿರೋ ಕಾರಣಕ್ಕೆ ಅವ್ರಿಗೆ ಹೇಳಿಕೊಟ್ಟದ್ದನ್ನ ಕಲಿಯೋ ಶಕ್ತಿ ಕೊಂಚ ಕಡಿಮೆ. ಹೀಗಿದ್ರೂ ಸಿಕ್ಕ ವೇದಿಕೆಯಲ್ಲಿ ಹೇಳಿಕೊಟ್ಟ ಅಷ್ಟೂ ಪಾಠಗಳನ್ನ ಅವರೆಲ್ಲಾ ಚಾಚೂ ತಪ್ಪದೇ ಪಾಲಿಸಿದರು. ವೇದಿಕೆಯ ಮೂಲೆಮೂಲೆಗಳಲ್ಲೂ ತಮ್ಮ ತಮ್ಮ ಸ್ಟೆಪ್ಗಳನ್ನ ನೆನಪಿನಲ್ಲಿಟ್ಟುಕೊಂಡು ಹೆಜ್ಜೆ ಹಾಕೋ ಮೂಲಕ ಭಿನ್ನ ಸಾಮರ್ಥ್ಯದ ಮಕ್ಕಳು ಕೂಡ ಫ್ಯಾಶನ್ ಶೋನ ರಂಗು ಹೆಜ್ಜಿಸಿದ್ರು. ಹೆಸ್ರಿಗೆ ಇವರೆಲ್ಲಾ ಭಿನ್ನ ಸಾಮರ್ಥ್ಯದ ಮಕ್ಕಳೇ ಆದರೂ ವೇದಿಕೆಯ ಮೇಲೆ ಇವರನ್ನ ನೋಡಿದರೆ ಇವರ ಸಾಮರ್ಥ್ಯದ ಬಗ್ಗೆಯೇ ಅಚ್ಚರಿ ಪಟ್ಟುಕೊಳ್ಳೋ ಹಾಗಿತ್ತು. ಹೆಣ್ಮಕ್ಕಳು, ಗಂಡಮಕ್ಕಳು.ಹೀಗೆ ಎಲ್ಲರೂ ತಮಗೆ ಕೊಟ್ಟ ಸಮಯದಲ್ಲಿ ಕೊಂಚವೂ ಎಡವದೇ ಪ್ರೇಕ್ಷಕ ವರ್ಗದ ಚಪ್ಪಾಳೆ ಗಿಟ್ಟಿಸಿಕೊಂಡುರು.
ಇನ್ನು ಫ್ಯಾಶನ್ ಶೋ ಅಂದರೆ ಅರೆಬರೆ ಡ್ರೆಸ್, ನೋಡೋಕೆ ಅಸಹ್ಯ ಪಡೋ ಪ್ರದರ್ಶನ ಅಂತಾನೆ ಎಲ್ಲರೂ ಅಂದುಕೊಂಡಿರುತ್ತಾರೆ. ಆದ್ರೆ ಮಿಫ್ಟ್ ಕಾಲೇಜು ಆಯೋಜಿಸಿದ್ದ ಈ ಶೋ ಮಾತ್ರ ಇವೆಲ್ಲದಕ್ಕೂ ಅಪವಾದ ಎನ್ನುವಂತಿತ್ತು. ಮಿಫ್ಟ್ ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಮತ್ತು ಕರಾವಳಿಯ ಸಂಸ್ಕೃತಿಗಳು ಮೇಳೈಸೋ ಉಡುಗೆಗಳನ್ನ ತಯಾರಿಸಿದ್ರು. ಹೀಗಾಗಿ ತುಳುನಾಡಿನ ಸಂಸ್ಕೃತಿಗಳಾದ ಕೋಟಿ ಚೆನ್ನಯ್ಯ, ಅಗೋಲಿ ಮಂಜಣ್ಣ, ಸಿರಿ ಜಾತ್ರೆ, ಆಟಿ ಕಳೆಂಜ ಮತ್ತು ತುಳುನಾಡಿನ ಮಹಿಳೆ ಮತ್ತು ಪುರುಷನ ಕಲ್ಪನೆಯನ್ನ ವೇದಿಕೆ ಮೇಲೆ ತರೋ ಪ್ರಯತ್ನವನ್ನ ಮಾಡಲಾಯ್ತು. ಇದ್ರ ಜೊತೆಗೆ ಭಾರತೀಯ ಹೆಣ್ಣಿನ ವಸ್ತ್ರ ವಿನ್ಯಾಸವನ್ನ ಮುಂದಿಡೋ ಕಾರ್ಯಕ್ಕೂ ಈ ಫ್ಯಾಶನ್ ಶೋ ವೇದಿಕೆಯಾಯ್ತು. ಇದಕ್ಕೂ ಅಚ್ಚರಿಯೆಂದ್ರೆ ಈ ಎಲ್ಲಾ ಸಂಸ್ಕೃತಿಗಳನ್ನ ಬಿಂಬಿಸೋ ವೇಷ ತೊಟ್ಟ ಭಿನ್ನ ಸಾಮರ್ಥ್ಯದ ಮತ್ತು ಅಂಧ ಮಕ್ಕಳ ಛಲದ ಪ್ರದರ್ಶನ. ಎಲ್ಲಾ ಇದ್ದವರೂ ನಾಚಿಕೊಳ್ಳುವಂತೆ ಆ ಮಕ್ಕಳು ವೇದಿಕೆ ಮೇಲೆ ತುಳು ಮತ್ತು ಭಾರತೀಯ ಸಂಸ್ಕೃತಿಯ ಪ್ರದರ್ಶಕರಾಗಿ ಮೇಳೈಸಿದ್ರು. ಇಷ್ಟು ದಿನ ಫ್ಯಾಶನ್ ಶೋ ಅಂಧ್ರೆ ಕೇವಲ ಅರೆಬರೆ ವಸ್ರ್ತ ವಿನ್ಯಾಸ ಅಂದುಕೊಂಡಿದ್ದವ್ರಿಗೆ ಆ ಮಕ್ಕಳ ಪ್ರದರ್ಶನ ನಿಜವಾದ ಸಂಸ್ಕೃತಿಯ ದರ್ಶನ ಮಾಡಿಸಿತ್ತು.
ಇನ್ನು ಈ ಮಕ್ಕಳ ಅಷ್ಟೂ ಸಾಧನೆಗಳ ಹಿಂದೆ ಬೆನ್ನೆಲುಬಾಗಿ ನಿಂತಿದ್ದು ಮಿಫ್ಟ್ ಕಾಲೇಜು. ಈ ಶಿಕ್ಷಣ ಸಂಸ್ಥೆ ಪ್ರತೀ ವರ್ಷ ಇಲ್ಲಿನ ವಿದ್ಯಾರ್ಥಿಗಳು ತಯಾರಿಸೋ ವಸ್ತ್ರು ವಿನ್ಯಾಸಗಳನ್ನ ಮಾಡೆಲ್ ಗಳ ಮೂಲಕ ಇಲ್ಲವೇ ಇದೇ ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಪ್ರದರ್ಶನಕ್ಕೆ ಇಡ್ತಾ ಇತ್ತು. ಆದ್ರೆ ಈ ಬಾರಿ ತಮ್ಮ ಪ್ರದರ್ಶನಕ್ಕೆ ವಿಭಿನ್ನ ಟಚ್ ನೀಡೋ ಉದ್ದೇಶದಿಂದ ಭಿನ್ನ ಸಾಮರ್ಥ್ಯದ ಮತ್ತು ಅಂಧ ಮಕ್ಕಳನ್ನ ಈ ವಿಭಿನ್ನ ಕೆಲಸಕ್ಕೆ ಬಳಸಿಕೊಂಡಿತ್ತು. ಇನ್ನು ಈ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಅನ್ನಲೇ ಬೇಕು.
ಫಿಸಿಕಲಿ ಚಾಲೆಂಜ್ಡ್ ಮಕ್ಕಳನ್ನ ಯಾವ ಮಾಡೆಲ್ ಗಳಿಗೂ ಕಮ್ಮಿಯಿಲ್ಲ ಅನ್ನೋವಂತೆ ಒಂದೇ ವಾರದಲ್ಲಿ ತಯಾರಿಸಲಾಗಿತ್ತು. ಇದ್ರ ಜೊತೆಗೆ ವೇದಿಕೆ ಮೇಲೆ ಅಂಧ ಮಕ್ಕಳು ರೇಂಪ್ ವಾಕ್ ಮಾಡ್ತಾ ಇದ್ರೆ ಅವರನ್ನ ಎಚ್ಚರಿಕೆಯಿಂದ ವೇದಿಕೆಯ ಕೆಳಗೆ ನಿಂತು ನೋಡಿಕೊಳ್ಳೋ ಕೆಲಸವನ್ನ ಕೂಡ ಮಿಫ್ಟ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿದರು. ಹೀಗಾಗಿ ಮಕ್ಕಳು ಕೂಡ ಬೆನ್ನೆಲುಬಾಗಿ ನಿಂತಿರೋ ಸಂಸ್ಥೆಯ ಸಹಕಾರದಿಂದ ಆ ಸಂಜೆ ಯಾರ ಭಯವೂ ಇಲ್ಲದೇ, ತಮ್ಮ ಅಂಗವೈಕಲ್ಯವನ್ನ ಶಾಪ ಅಂದುಕೊಳ್ಳದೇ ವೇದಿಕೆಯಲ್ಲಿ ಸಖತ್ತಾಗಿಯೇ ಹೆಜ್ಜೆ ಹಾಕಿದ್ದು ವಿಶೇಷ.
ಇನ್ನು ಈ ಮಕ್ಕಳ ಸಾಧನೆಗೆ ಇವರ ಸಾನಿಧ್ಯ ಭಿನ್ನ ಸಾಮರ್ಥ್ಯದ ಶಾಲೆ ಮತ್ತು ರೆವರೆಂಡ್ ಅಂಧ ಮಕ್ಕಳ ಶಾಲೆ ಕೂಡ ನೆರವಾಗಿ ನಿಂತಿದೆ. ಇವೆಲ್ಲಕ್ಕೂ ಹೆಚ್ಚಾಗಿ ತಮ್ಮಲ್ಲಿರೋ ವಿಕಲಾಂಗತೆಗೆ ಭಯ ಪಡದೇ ಛಲದಿಂದ ವೇದಿಕೆ ಹತ್ತಿದ ಮಕ್ಕಳ ಸಾಮರ್ಥ್ಯ ಕೂಡ ನಿಜಕ್ಕೂ ಗ್ರೇಟ್ ಅನಿಸುವಂತಿತ್ತು. ಇನ್ನು ಫ್ಯಾಶನ್ ಶೋಗಳು ಅಂದ್ರೆ ಕೇವಲ ಮನೋರಂಜನೆ ಅಂತ ಅಂದುಕೊಂಡಿದ್ದ ಪ್ರೇಕ್ಷಕ ವರ್ಗಕ್ಕೂ ಈ ಕಾರ್ಯಕ್ರಮ ಒಂದು ರೀತಿ ವಿಭಿನ್ನವಾಗಿತ್ತು. ಇದ್ರ ಜೊತೆಗೆ ಈ ಮಕ್ಕಳು ವೇದಿಕೆ ಮೇಲೆ ಹೆಜ್ಜೆ ಹಾಕೋದನ್ನ ನೋಡಿದ್ರೆ ಕಣ್ಣಂಚುಗಳು ಒದ್ದೆಯಾಗುತ್ತೆ. ಏನೇ ಆಗಲೀ ಇವ್ರ ಈ ಸಾಧನೆಗೆ ಹ್ಯಾಟ್ಸ್ ಆಫ್ ಅನ್ನಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.