ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯೂ ಹೊರಬಂದಿದೆ. ಈ ಪಟ್ಟಿಯಲ್ಲಿ ನಮಗೆ ಪರಿಚಿತರ ಹೆಸರಿಗಿಂತ ಅಪರಿಚಿತ ಹೆಸರುಗಳೇ ಹೆಚ್ಚಾಗಿವೆ. ಬಹಳಷ್ಟು ಜನರ ಹೆಸರುಗಳನ್ನು ಅಂತರ್ಜಾಲದಲ್ಲಿ ಹುಡುಕಿದರೂ ಹೆಚ್ಚಿನ ಮಾಹಿತಿಗಳು ಲಭ್ಯವಾಗದು. ಈ ಬಾರಿಯ ಪುರಸ್ಕೃತರ ಪಟ್ಟಿಯಲ್ಲಿ ಇನ್ನೂ ಒಂದು ವಿಶೇಷತೆಯಿದೆ, ಈ ಬಾರಿ ಪ್ರಸಿದ್ಧ ಬಾಲಿವುಡ್ ತಾರೆಗಳಾಗಲಿ, ನಿರ್ದೇಶಕರಾಗಲೀ ಅಥವಾ ಪ್ರಸಿದ್ಧ ಕ್ರಿಕೆಟ್ ಆಟಗಾರರಾಗಲೀ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಇವರನ್ನು ಹೊರತಾಗಿಯೂ ಪದ್ಮ ಪ್ರಶಸ್ತಿಗೆ ಪುರಸ್ಕೃತರ ಪಟ್ಟಿಯನ್ನು ತಯಾರಿಸಲು ಸಾಧ್ಯವಿದೆ ಎಂಬುದು ಈ ಬಾರಿ ತಿಳಿದು ಬಂದಿದೆ.
ಈ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿ, ಬಿ. ಎಂ ಹೆಗ್ಡೆ, ಕವಿತಾ ಕೃಷ್ಣಮೂರ್ತಿ, ಎಸ್. ಪಿ. ಬಾಲ ಸುಬ್ರಮಣ್ಯಮ್, ಶಿಂಝೋ ಅಬೆ, ಕೆ. ಎಸ್ ಚಿತ್ರಾ ಹೀಗೇ ಬೆರಳೆಣಿಕೆಯ ಜನರ ಹೊರತಾಗಿ ಉಳಿದೆಲ್ಲ ಹೆಸರುಗಳು ನಮಗೆ ಅಪರಿಚಿತ. ನಮ್ಮದೇ ರಾಜ್ಯದ ಐವರು ಸಾಧಕರು ಪುರಸ್ಕೃತರಾಗಿದ್ದಾರೆ. ಆದರೆ ಹೆಸರು ಕೇಳಿದಾಕ್ಷಣ ಡಾ. ಬಿ. ಎಂ ಹೆಗ್ಡೆ ಮತ್ತು ಚಂದ್ರ ಶೇಖರ ಕಂಬಾರರ ಹೊರತು ಇತರ ಮೂವರ ಬಗ್ಗೆ ಅರಿಯಲು ಅಂತರ್ಜಾಲದ ಮೊರೆ ಹೊಕ್ಕವರ ಸಂಖ್ಯೆಯೇ ಹೆಚ್ಚಿದೆ.
ಈ ಬಾರಿ ಭಾರತದ ಹೆಮ್ಮೆಯ ಓಟಗಾರ್ತಿ ಪಿ. ಟಿ ಉಷಾ ಅವರ ಗುರುಗಳಾದ ಓ. ಆರ್ ನಂಬೂದಿರಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತಮ್ಮ ಇಳಿ ವಯಸ್ಸಿನಲ್ಲೂ ಅಯೋಧ್ಯೆಯಲ್ಲಿ ರಾಮ ಮಂದಿರವು ಅಸ್ಥಿತ್ವದಲ್ಲಿತ್ತು ಎಂದು ಸಾಕ್ಷ್ಯ ಸಮೇತವಾಗಿ ನಿರೂಪಿಸಿದ ಆರ್ಕಿಯಾಲಾಜಿಸ್ಟ್ ಬಿ.ಬಿ ಲಾಲ್ ಅವರನ್ನೂ ಪದ್ಮ ವಿಭೂಷಣ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಡಾ. ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವ ವೇದಗಳ ಸಂಹಿತಾ ಭಾಗಗಳಿಗೆ ಆಂಗ್ಲ ಭಾಷೆಯಲ್ಲಿ ಭಾಷ್ಯಾ ಮತ್ತು ವಿವರಣೆ ಬರೆದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿರುವ ಇವರು ಚತುರವೇದಗಳಿಗೂ ಆಂಗ್ಲಭಾಷೆಯಲ್ಲಿ ಭಾಷ್ಯ ರಚಿಸಿರುವ ಏಕೈಕ ವ್ಯಕ್ತಿ.
ತೃತೀಯ ಲಿಂಗಿಯಾಗಿ ಗುರುತಿಸಿಕೊಂಡ ಬಳಿಕ ಕೌಟುಂಬಿಕ ಬಹಿಷ್ಕಾರದ ನಡುವೆಯೂ ಬದುಕು ಕಟ್ಟಿಕೊಂಡ ಸಾಹಸಿ ಮಂಜಮ್ಮ ಜೋಗತಿ. ‘ನಡುವೆ ಸುಳಿವ ಹೆಣ್ಣು’ ಎಂಬ ಆತ್ಮಕಥನದ ಮೂಲಕ ಎಂತವರ ಹೃದಯವಂನ್ನೂ ಕರಗಿಸಬಲ್ಲ ಸಂಕಷ್ಟದ ನಡುವೆಯೂ ಇವರು ತಮ್ಮ 18ನೇ ವಯಸ್ಸಿನಿಂದಲೋ ಜೋಗತಿ ನೃತ್ಯದ ಮೂಲಕ ಜಾನಪದ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿದ ಕೇಂದ್ರ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
2005ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗಳಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಳಿಸಿರುವ ಕೆ ವೈ. ವೆಂಕಟೇಶ್ ನಮ್ಮದೇ ರಾಜ್ಯದ ಪ್ಯಾರಾ ಕ್ರೀಡಾಪಟು. ಪ್ರಸ್ತುತ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿರುವ ವೆಂಕಟೇಶ್ ಅವರ ಸಾಧನೆಯನ್ನು ಗುರುತಿಸಿರುವ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರತೀ ಬಾರಿಯಂತೆ ಈ ಬಾರಿಯೂ ಪದ್ಮ ಪ್ರಶಸ್ತಿಯು ಕುತೂಹಲವನ್ನು ಮೂಡಿಸಿತ್ತು. ಜನ ಸಾಮಾನ್ಯರ ನಿರೀಕ್ಷೆಯಂತೆಯೇ ಈ ಬಾರಿಯೂ ಎಲೆ ಮರೆಯ ಕಾಯಿಗಳಂತೆ, ಪ್ರಸಿದ್ದಿ, ಹಣ ಹೆಸರಿನ ಯಾವುದೇ ಆಶಯಗಳಿಲ್ಲದೆ ನಿಸ್ವಾರ್ಥರಾಗಿ ತಮ್ಮ ಕರ್ತವ್ಯವನ್ನೂ ಸೇವೆಯನ್ನೂ ನಿರಂತರವಾಗಿ ನಡೆಸುತ್ತಿದ್ದ ಸಾಧಕರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಈ ಮೂಲಕ ಪ್ರಶಸ್ತಿಯ ಗೌರವವನ್ನೂ ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗಲಾರದು. ಅರ್ಹರನ್ನು ಗುರುತಿಸಿ ಆದರಿಸಿ ಗೌರವಿಸುತ್ತಿರುವ ಕೇಂದ್ರ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ, ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ಅಭಿನಂದನೆಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.