ಭಾರತದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ಅಸಂಖ್ಯಾತ ಭಾರತೀಯರು ಸವಿತ್ತುಗಳಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ತಾಯಿ ಭಾರತಿಯನ್ನು ದಾಸ್ಯ ಸಂಕೋಲೆಯಿಂದ ವಿಮುಕ್ತಿಗೊಳಿಸುವುದನ್ನೇ ಜೀವನದ ಪರಮ ಗುರಿಯನ್ನಾಗಿಸಿಕೊಂಡ ಹುತಾತ್ಮರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರು ಅಗ್ರಗಣ್ಯರೆನಿಸಿಕೊಂಡವರು.
ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ ಅಖಂಡ ರಾಷ್ಟ್ರವನ್ನಾಗಿಸಿ ಉಕ್ಕಿನ ಮನುಷ್ಯನೆನಿಸಿ ಕೊಂಡವರು ಸರ್ದಾರ್ ಜೀ. ಭಾರತದ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಸುಪ್ತವಾಗಿದ್ದ ರಾಷ್ಟ್ರೀಯತೆಯ ಭಾವವನ್ನು ಉದ್ದೀಪ್ತಗೊಳಿಸಿ ದೇಶದ ಒಳ ಹಾಗೂ ಹೊರಗಿನ ಭಾರತೀಯರೆಲ್ಲರನ್ನು ಒಗ್ಗೂಡಿಸಿ ಶಕ್ತಿಯನ್ನಾಗಿಸಿದರು. ವಿದೇಶಿ ರಾಷ್ಟ್ರಗಳೂ ಸಹ ಇವರ ಮುಖಂಡತ್ವದಲ್ಲಿ ಭಾರತೀಯರ ಸ್ವಾಯತ್ತತೆಯನ್ನು ಒಪ್ಪಿ ನೇತಾಜಿ ಎಂದು ಕರೆಸಿಕೊಂಡವರು ಸುಭಾಷರು.
ಎಣಿಸಲಸದಳ ಜನರು ತಮ್ಮ ಜೀವನ ಹಾಗು ಜೀವನವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗಮಾಡಿದ್ದು, ನವ ಪೀಳಿಗೆಗೆ ಅಂತಹ ಹುತಾತ್ಮರುಗಳ ಚರಿತ್ರೆಯನ್ನಾದರೂ ನೆನಪಿಸಬೇಕಾದದ್ದು ನಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಿಯವರ ನೇತೃತ್ವದಲ್ಲಿ 85 ಜನ ಗಣ್ಯರ ತಂಡ ರಚಿಸಿ ಆ ಮೂಲಕ ಸುಭಾಷ್ ಚಂದ್ರರ 125 ನೇ ಜಯಂತ್ಯೋತ್ಸವದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರಿಗೆ ಸಲ್ಲಬೇಕಾದ ಗೌರವ ಸಮರ್ಪಣೆಯನ್ನು ಮಾಡಲಿದ್ದಾರೆ.
1897, ಜನವರಿ 23 ನೇತಾಜಿಯವರ ಜನ್ಮದಿನವಾಗಿದ್ದು, ಆ ನೆನಪಿನಂಗವಾಗಿ ಅವರ ಜೀವನದ ಒಂದೆರಡು ಘಟನೆಗಳನ್ನು ಮೆಲುಕು ಹಾಕುತ್ತ ಈ ಕಿರುಬರಹ ತಮ್ಮ ಮುಂದೆ …
ಸುಭಾಷರು ಒರಿಸ್ಸಾದ ರಾಜಧಾನಿ ಕಟಕ್ನಲ್ಲಿ ಜಾನಕೀನಾಥ್ ಭೋಸ್ ಹಾಗೂ ಸಾದ್ವಿ ಪ್ರಭಾವತಿ ದೇವಿಯವರ ಹದಿನಾಲ್ಕನೇ ಮಗನಾಗಿ ಜನ್ಮಿಸಿದರು. ಕಡು ಬಡತನದ ಸಂಘರ್ಷಮಯ ಜೀವನದಲ್ಲಿ ಸೆಣಸಿ ಖ್ಯಾತ ವಕೀಲ ಪದವಿಗೇರಿದ್ದ ಜಾನಕೀನಾಥರ ಛಲ, ಹೋರಾಟದ ಸ್ವಭಾವವೂ ತಾಯಿಯ ಆಧ್ಯಾತ್ಮಿಕ ಆಸಕ್ತಿ ಚಿಂತನೆ, ವೈರಾಗ್ಯ ವಿರಕ್ತ ಭಾವಗಳೆಲ್ಲಾ ಸುಭಾಷರಿಗೆ ರಕ್ತಗತವಾಗಿಯೆ ಹರಿದು ಬಂದಿದ್ದವು. ಅವರ ಸಂಪೂರ್ಣ ಜೀವನ ಗಮನಿಸಿದರೆ ಈ ಎರಡೂ ಗುಣ-ಧರ್ಮಗಳ ಪ್ರಭಾವಳಿ ದಟ್ಟವಾಗಿ ಮೇಳೈಸಿದ್ದನ್ನು ಕಾಣಬಹುದು.
ಸುಭಾಷರ ಪ್ರಾರಂಭಿಕ ವಿದ್ಯಾಭ್ಯಾಸಗಳೆಲ್ಲ ಕೋಲ್ಕತ್ತೆಯ ಐರೋಪ್ಯ ಶಾಲೆಯಲ್ಲಿ ನಡೆದವು. ಬಾಲ್ಯದಲ್ಲಿ ಶಾಲೆಗೆ ಭೇಟಿ ನೀಡಿದ್ದ ಅರವಿಂದರ ನುಡಿಗಳು ಅವರ ಜೀವನಕ್ಕೆ ಮುಖ್ಯ ಧ್ಯೇಯವನ್ನೇ ಒದಗಿಸಿದ್ದು ಸುಳ್ಳಲ್ಲಾ. ನಿಮ್ಮಲ್ಲಿ ಹಲವರಾದರು ದೊಡ್ಡವರಾಗಿ ನಿಮ್ಮ ಸ್ವಂತಕ್ಕಾಗಿ ಅಲ್ಲಾ, ದೇಶವನ್ನ ದೊಡ್ಡದನ್ನಾಗಿ ಮಾಡಲು ದೊಡ್ಡವರಾಗಿ ಎಂಬ ಅರವಿಂದರ ನುಡಿಯೇ ಸುಭಾಷರ ಜೀವನದ ನಡೆಯಾಯ್ತು.
ಹೈಸ್ಕೂಲು ಶಿಕ್ಷಣ ಪೂರೈಸಿ ಕಾಲೇಜಿನ ವ್ಯಾಸಂಗಕ್ಕೆ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದ ಸುಭಾಷರಿಗೆ ಇಲ್ಲಿ ನಡೆದ ಘಟನಾವಳಿಗಳು ಮುಂದೆ ಸ್ವತಂತ್ರ್ಯ ಹೋರಾಟದ ಹಾದಿಯಲ್ಲಿ ನಡೆದಾಗ ಮಾರ್ಗಸೂಚಿಯಾದವು.
ಕಾಲೇಜಿನಲ್ಲಿ ತಮ್ಮ ಉತ್ತಮ ನಡವಳಿಕೆ ಹಾಗೂ ಮೇಧಾಶಕ್ತಿಯಿಂದ ವಿದ್ಯಾರ್ಥಿಗಳೆಲ್ಲರ ಪ್ರೀತಿಪಾತ್ರರಾಗಿ ಅವರ ಮುಖಂಡರು ಆದರು. ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಚರ್ಚಾಕೂಟಗಳನ್ನು ಏರ್ಪಡಿಸಿದರು. ವಿದ್ಯಾರ್ಥಿ ತಂಡ ಕಟ್ಟಿ ಸಮಾಜ ಸೇವಾ ಕೈಂಕರ್ಯ ಕೈಗೊಂಡರು. ಬಡವರಿಗೋಸ್ಕರ ಮನೆ-ಮನೆಗೂ ತೆರಳಿ ಅಕ್ಕಿ ಧಾನ್ಯ ಸಂಗ್ರಹಣೆ ಜೊತೆಗೆ ಆ ಕಾಲದಲ್ಲಿ ತೀವ್ರತರವಾಗಿ ಹರಡಿದ್ದ ಕಾಲರಾ ಜಾಡ್ಯದ ಕುರಿತಾಗಿ, ಮಾಹಿತಿ ಹಾಗೂ ಚಿಕಿತ್ಸೆ ಕುರಿತಾಗಿ ಜನರಲ್ಲಿ ಹರಡಿದ್ದ ಮೌಢ್ಯವನ್ನು ಪರಿಹರಿಸಲು ಹಳ್ಳಿ ಹಳ್ಳಿಗೂ ತೆರಳಿ ಜಾಗೃತಿ ಮೂಡಿಸತೊಡಗಿದರು. ಈ ಭೇಟಿಗಳಿಂದಲೇ ಭೋಸರಿಗೆ ಹಳ್ಳಿಗಳ, ದೇಶದ ಬಡವನ, ದಾರಿದ್ರ್ಯದ ಸ್ಪಷ್ಟ ಚಿತ್ರಣ ಸಿಕ್ಕಿತು. ಈ ಸಮಯದಲ್ಲಿ ಭಾರತದಲ್ಲೇ ಭಾರತೀಯರ ಮೇಲೆ ಅಪಮಾನ, ಅವಮಾನ ನಿರಂತರವಾಗಿದ್ದವು. ಬಸ್ಸು, ರೈಲು, ರಸ್ತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಗುಲಾಮಗಿರಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತು. ಎಲ್ಲ ಸ್ಥಳಗಳಲ್ಲಿ ಅಗ್ರಗಣ್ಯತೆ ಬ್ರಿಟೀಷರಿಗೆ ನೀಡಿ ಅವರು ಮಾಡುತ್ತಿದ್ದ ಅನಾಚಾರ, ಕ್ರೌರ್ಯತೆ, ದೌರ್ಜನ್ಯ, ಅಪಮಾನ ಸಹಿಸಿಕೊಂಡು ಜನ ನಡೆಯುತ್ತಿದ್ದರು. ಅಲ್ಲಿ-ಇಲ್ಲಿ ಕೆಲ ಜನರ ತಿರುಗಿ ಬೀಳತೊಡಗಿದಾಗ ಅಂತಹ ಕಡೆ ಅವರ ದೌರ್ಜನ್ಯ ಒಂದು ಮಟ್ಟದಲ್ಲಿ ಇಳಿಕೆಯಾಗುತ್ತಿತ್ತು. ಇದರಿಂದ ಸುಭಾಷರಿಗೆ ಅನಿಸಿದ್ದು ಏಟಿಗೆ ಪ್ರತಿಯೇಟು ಕೊಟ್ಟರೆ ಬ್ರಿಟೀಷರು ಬುದ್ದೀ ಕಲಿಯುವರು ಎಂದು.
ಇದಕ್ಕೆ ಇಂಬು ಕೊಡುವ ಘಟನೆಯೊಂದು ಕಾಲೇಜಿನಲ್ಲಿ ಘಟಿಸಿತು. ಸಿ.ಎಫ್. ಓರ್ಟ ಎಂಬ ಆಂಗ್ಲ ಶಿಕ್ಷಕ ಆಳರಸರ ದರ್ಪದಿಂದ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಅತ್ಯಂತ ಹೇಯವಾದ ನಡವಳಿಕೆಯನ್ನು ಪ್ರದರ್ಶಿಸುತ್ತಲೇ ಬರುತ್ತಿದ್ದ. ಮಿತಿಮೀರಿದ ಆತನ ದಬ್ಬಾಳಿಕೆ, ಧಾರ್ಷ್ಯ ನಡತೆಗೆ ವಿನಾಕಾರಣ ಚಾರಿತ್ಯ್ರವಧೆ ಮಾಡುತ್ತಿದ್ದುದರಿಂದ ನಲುಗಿದ ವಿದ್ಯಾರ್ಥಿಗಳು ಸಾಕಷ್ಟು ದೂರು ನೀಡಿದರೂ ಪರಿಗಣಿಸದ ಮೇಲಿನ ಶಿಕ್ಷಣಾಧಿಕಾರಿಗಳ ವಿರುದ್ಧ ಅಸಮಾಧಾನ ಹೊಂದಿ ಆ ಶಿಕ್ಷಕನಿಗೆ ತಕ್ಕ ಶಾಸ್ತಿಯನ್ನು ವಿದ್ಯಾರ್ಥಿಗಳೇ ಮಾಡಿ ಮುಗಿಸಿದರು. ಆ ನಂತರ ಭೋಸರು ವಿದ್ಯಾರ್ಥಿಗಳ ಏಕೈಕ ಪ್ರತಿನಿಧಿಯಾಗಿ ವಿಚಾರಣಾ ಸಮಿತಿಯನ್ನು ಎದುರಿಸಿ ಈ ರೀತಿ ತಮ್ಮ ವಾದ ಮಂಡಿಸಿದರು. ವಿದ್ಯಾರ್ಥಿಗಳಾದ ನಾವು ಶಿಕ್ಷಕನನ್ನು ದಂಡಿಸಿದ್ದು ನಿಜ. ಆದರೆ ಅವರು ಭಾರತೀಯರೆಂದು ತಿರಸ್ಕಾರ ಭಾವದಿಂದ ನೋಡುತ್ತಾ ಅಗೌರವದಿಂದ ನಡೆಸಿಕೊಂಡರು. ಇವರ ವಿರುದ್ಧ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಭಾರತೀಯರ ಗೌರವವನ್ನು ಕಾಪಾಡುವುದಕ್ಕಾಗಿ ಆತನಿಗೆ ಬುದ್ಧಿ ಕಲಿಸಿದೆವು. ಇದು ಕೇವಲ ಗುರು- ಶಿಷ್ಯರ ಪ್ರಕರಣವಲ್ಲಾ, ಭಾರತೀಯರ ಆತ್ಮಗೌರವಕ್ಕೆ ಕುಂದು ಬರುವ ಪ್ರಸಂಗ ಎಂದು ವಿದ್ಯಾರ್ಥಿಗಳ ಪರ ನ್ಯಾಯಯುತ ಧ್ವನಿ ಮೊಳಗಿಸಿದರು.
ಈ ಘಟನೆಯ ನಂತರ ಸುಭಾಷರು ಆ ಕಾಲೇಜಿನಿಂದ ಹೊರಹಾಕಲ್ಪಟ್ಟರು. ಭಾರತವನ್ನು ಸ್ವತಂತ್ರವಾಗಿಸಬೇಕಾದರೆ ಬಂಡಾಯ, ಹೋರಾಟದ ಮೂಲಕವೇ ಸಾಧ್ಯವೆಂದು ನಿಲುವು ತಾಳಿದರು. ಕ್ರಾಂತಿಕಾರಿ ಚಿತ್ತರಂಜನ್ ದಾಸರ ಚಿಂತನೆ, ವೀರ ಸಾವರ್ಕರರ ಮಾರ್ಗದರ್ಶನದಂತೆ ದೇಶದ ಹೊರ ಭಾರತೀಯರನ್ನೂ ಒಗ್ಗೂಡಿಸಿ, ಬ್ರಿಟೀಷರ ವೈರಿಗಳ ಸಹಕಾರ ಪಡೆದು ಅವರನ್ನು ಬಗ್ಗು ಬಡಿದು ಸ್ವಾತಂತ್ರ್ಯಗಳಿಸುವ ಯೋಜನೆಗೆ ಮುಂದೆ ತಯಾರಾದುದು ಹೀಗೆ- ಸುಭಾಷರ ಆದರ್ಶವಾಗಿ ಪರಿಗಣಿಸಿ ಪ್ರಭಾವಕ್ಕೊಳಗಾದ ವ್ಯಕ್ತಿಯೆಂದರೆ ಅದು ಸ್ವಾಮಿ ವಿವೇಕಾನಂದರು. ಸುಭಾಷರ ಜೀವನ ಅಕ್ಷರಷಃ ವಿವೇಕರ ಈ ವಾಣಿಯಂತೆ ಇರುವುದನ್ನು ಕಾಣಬಹುದು. ಪ್ರತಿ ಕೆಲಸ ಮೂರು ಅವಸ್ಥೆಗಳನ್ನು ಸಾಗಿ ಹೋಗಬೇಕು- ನಿಂದೆ, ಅಡಚಣೆ, ಆನಂತರ ಸ್ವೀಕಾರ ಯಾವ ಮನುಷ್ಯ ತನ್ನ ಕಾಲಕ್ಕಿಂತ ಬಹಳ ಮುಂದಾದ ಭಾವನೆಗಳನ್ನು ಹೊಂದಿರುವನೋ ಅವನನ್ನು ಜನರು ಅಪಾರ್ಥ ಮಾಡಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲಾ. ಆದ್ದರಿಂದ ವಿರೋಧ ಹಾಗೂ ಕಿರುಕುಳವನ್ನು ನಾನು ಸ್ವಾಗಿತಿಸುತ್ತೇನೆ. ಆದರೆ ನಾನು ಅಚಲನಾಗಿ ಪರಿಶುದ್ಧನಾಗಿ ಭಗವಂತನಲ್ಲಿ ತೀವ್ರವಾದ ಶ್ರದ್ಧೆಯನ್ನು ಹೊಂದಿರಬೇಕು ಆಗ ಇವೆಲ್ಲಾ ತಂತಾನೆ ಮಾಯವಾಗುತ್ತವೆ.
ವಿಶ್ವಮಹಾಯುದ್ಧದ ಹಲವಾರು ಘಟನಾವಳಿಗಳ ನಂತರ ಭೋಸರು ದೃಢವಾಗಿ ಪ್ರತಿಪಾದಿಸಿದ್ದು ಬ್ರಿಟೀಷರು ಯಾವುದೇ ಕಾರಣಕ್ಕೂ ಹೃದಯ ಪರಿವರ್ತನೆ ಹೊಂದಿ ತಾವಾಗಿಯೇ ಸ್ವಾತಂತ್ರ್ಯ ನೀಡರು. ಆದ್ದರಿಂದ ಎರಡನೇ ವಿಶ್ವಯುದ್ದದಲ್ಲಿ ಅವರಿಗೆ ಸಹಕಾರ ನೀಡಬೇಕೆಂಬ ಗಾಂಧೀಜಿಯವರ ಸಲಹೆಯನ್ನು ಕಟುವಾಗಿ ವಿರೋಧಿಸಿ ಕಪಟ ಬ್ರಿಟಿಷರ ಮುಳುಗುವ ಸಾಮ್ರಾಜ್ಯಕ್ಕೆ ಮತ್ತೆ ಅಮೃತಪಾನ ಮಾಡಿಸಿದಂತೆ. ಇದು ಅವರಿಂದ ಈ ನಿರೀಕ್ಷೆಯಿಡುವುದೇ ತಪ್ಪು. ಕೇವಲ ಶಸ್ರ್ತಾಸ್ತ್ರ ಹಿಡಿದು ಹೋರಾಟ ನಡೆಸಿದಲ್ಲಿ ಮಾತ್ರ ಇದು ಸಾಧ್ಯ. ಅದಕ್ಕಾಗಿ ಈ ಯುದ್ಧದಲ್ಲಿ ಬ್ರಿಟಿಷ್- ಅಮೇರಿಕಾ ಮಿತ್ರ ರಾಷ್ಟ್ರಗಳಿಗೆದುರಾಗಿ ನಿಲ್ಲುವ ದೇಶಗಳ ಸಹಯೋಗದೊಂದಿಗೆ ಆಯಾ ದೇಶಗಳಲ್ಲಿರುವ ಭಾರತೀಯರನ್ನೆಲ್ಲಾ ಒಗ್ಗೂಡಿಸಿ ಸೈನ್ಯ ಪಡೆ ರಚಿಸಿ ಬ್ರಿಟಿಷರನ್ನು ಎದುರಿಸುವುದೇ ದಾರಿ ಎಂಬುದನ್ನು ಬಲವಾಗಿ ನಂಬಿ ಎಲ್ಲೆಡೆ ಇದನ್ನೇ ಮೊಳಗಿಸತೊಡಗಿದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಯಿತು. ಏಕೆಂದರೆ ತಮ್ಮ ಕಳ್ಳಜಾಡಿನ ರಹಸ್ಯ ಕಂಡು ಹಿಡಿದುದಲ್ಲದೆ ತಮ್ಮ ಯಾವುದೇ ಬಲೆಗೆ ಸಿಕ್ಕಿ ಬೀಳದ ಈ ಸ್ವಾತಂತ್ರ್ಯದ ಹುಲಿಯನ್ನು ಕಟ್ಟಿ ಹಾಕುವುದಕ್ಕೋಸ್ಕರ ಷಡ್ಯಂತ್ರ ರಚಿಸಿತು. ಕಲ್ಕತ್ತೆಯ ಹಾಲ್ವೆಲ್ ಸ್ಮಾರಕ ಕಿತ್ತಸೆಯುವ ಚಳುವಳಿಯಲ್ಲಿ ಭಾಗವಹಿಸಿದ್ದರೆಂಬ ಸುಳ್ಳು ಆಪಾದನೆ ಮೇಲೆ ಯಾವುದೇ ವಿಚಾರಣೆ ನಡೆಸದೆ ಸುಭಾಷರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿತು. ಯುದ್ದ (2 ವಿಶ್ವಸಮರ) ಮುಗಿಯುವವರೆಗೂ ಬಂದ ಮುಕ್ತಿಗೊಳ್ಳದಂತೆ ಮಾಡಿ ತಮ್ಮ ಸಾಮ್ರಾಜ್ಯ ರಕ್ಷಣೆ ಮಾಡುವ ಹುನ್ನಾರ ಸರ್ಕಾರ ಮಾಡಿತು. ಸುಭಾಷರು ಇದನ್ನೆಲ್ಲಾ ಅರಿತು ಪಾರಾಗುವ ಯೋಜನೆ ಹೂಡಿದರು. ಬಂಗಾಳದ ಗವರ್ನರ್ಗೆ ಪತ್ರ ಬರೆದರು. ಉಪವಾಸ ಸತ್ಯಾಗ್ರಹ ಆರಂಭಿಸಿ ದೊಡ್ಡ ರಾದ್ಧಾಂತ ಸೃಷ್ಟಿಯಾಗುವಂತೆ ಮಾಡಿದರು. ಸರ್ಕಾರ ಭೋಸರನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿದಾಗ ವೈಸ್ರಾಯ್ರಿಗೆ ಪತ್ರ ಮುಖೇನ ಎಲ್ಲಾ ಬೆಳವಣಿಗೆಗಳಿಂದ ನೊಂದು ಬೇಸರವಾಗಿ ಸಂನ್ಯಾಸಿಯಾಗಿ ಹಿಮಾಲಯಕ್ಕೆ ತೆರಳುವ ವಿಚಾರ ಸರ್ಕಾರದ ಕಿವಿಗೆ ಮುಟ್ಟುವಂತೆ ಮಾಡಿದರು. ಮನೆಯಿಂದ ಹೊರಬರದೆ ಯಾರನ್ನೂ ಭೇಟಿಯಾಗದೆ ಅಂತರ್ಮುಖಿಯಾಗಿರುವರೆಂದು ಸುದ್ದಿ ಹಬ್ಬಿಸಿದರು. ಆ ಸಮಯದಲ್ಲಿ ಗಡ್ಡಬೆಳೆಸಿದರು. ಯಾರಿಗು ಸಂಶಯ ಬರದ ರೀತಿ ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಿದಂತಿದ್ದರು. 1941, ಜನವರಿ 26 ಅವರ ಮೇಲಿನ ಆಪಾದನೆಯ ಖಟ್ಲೆಗೆ ಹಾಜರಾಗಲು ಪೋಲಿಸರು ಕರೆದೊಯ್ಯಲು ಬಂದಾಗ ಬ್ರಿಟಿಷರಿಗೆ ವಾಸ್ತವದ ಅರಿವಾಗಿತ್ತು. ಜನವರಿ 17ರ ಮುಂಜಾನೆ ನಸುಗತ್ತಲಲ್ಲಿ ಮೌಲ್ವಿವೇಷ ಧರಿಸಿದ ಫಕೀರ ಭೋಸರ ಮನೆ ಮುಂದಿನ ಮೋಟರಿನಲ್ಲೇರಿ 210 ಕಿ.ಮಿ ದೂರದ ಗೋಮೋ ರೈಲ್ವೆ ನಿಲ್ದಾಣ ಸೇರಿ ರೈಲಿನಲ್ಲಿಯೇ ಮೌಲ್ವಿಜಿಯಾವುದ್ದೀನ್ ನಾಮಧೇಯದೊಂದಿಗೆ ಪೇಷಾವರ್ಗೆ ಪ್ರಯಾಣ ಮಾಡಿ, ಪುಶ್ತು ಭಾಷೆ ಬರದ ಕಾರಣ ಮೂಗನಂತೆ ನಟಿಸಿ ಕಾಬೂಲ್ ತಲುಪಿ, ತನ್ನ ಧ್ಯೇಯೋದ್ದೇಶದ ಕಡೆ ಹಿಂದೂ ಹುಲಿ ಹಾರಿತ್ತು. ಹೇಗೆ ಹಾರಿತ್ತು ಎನ್ನುವುದನ್ನು ಅರಿಯಲು ಬ್ರಿಟಿಷರಿಗೆ ಒಂದು ವರುಷದ ಸಮಯ ಬೇಕಾಯಿತು.
ಹೆಜ್ಜೆ-ಹೆಜ್ಜಗೂ ಅಪಾಯ, ಗುಪ್ತಚರರ ಜಾಲ, ವಿಶ್ವಾಸದ್ರೋಹಗಳ ಕೂಟ ಕುತ್ಸಿತ ಬ್ರಿಟಿಷರ ಯೋಜನೆ ತಲೆಕೆಳಗೆ ಮಾಡುತ್ತಾ ಸುಭಾಷರು, ಬರ್ಲಿನ್, ಮಾಸ್ಕೋ, ಇಟಲಿ, ಜಪಾನ್ ಎಲ್ಲ ರಾಷ್ಟ್ರಗಳತ್ತ ತೆರಳಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೈ ಜೋಡಿಸಲು ಹಾಗೂ ತಮ್ಮ ಸೈನ್ಯಕ್ಕೆ ದೇಶದ ಸ್ವಾಯತ್ತತೆಯನ್ನು ಒಪ್ಪುವಂತೆ ಮಾಡಿದ್ದು ಅಲ್ಪವೇ? ಯಾವ ರಾಷ್ಟ್ರದ ಕೈಗೊಂಬೆಯಾಗದೇ ಭಾರತದ ಗೌರವಕ್ಕೆ ಧಕ್ಕೆ ತರದಂತೆ ನಡೆದುಕೊಂಡ ಭೋಸರ ತಮ್ಮ ಕೊನೆಯ ಕ್ಷಣದಲ್ಲಿ ಹಬೀಬುರ್ ರೆಹಮಾನರನ್ನು ಕರೆದು ಹೇಳಿದ ಕಡೆಯ ಮಾತು “ನಾನು ಇನ್ನು ಉಳಿಯಲಾರೆ. ಕಡೆಯ ಉಸಿರಿನವರೆಗೂ ಭಾರತದ ಸ್ವಾತಂತ್ರ್ಯಕ್ಕಾಗಿ ನಾನು ಹೋರಾಟ ನಡೆಸಿದ್ದೇನೆ. ಭಾರತವು ಇಷ್ಟರಲ್ಲೇ ಸ್ವತಂತ್ರ್ಯವಾಗುವುದಾಗಿ ನನ್ನ ದೇಶ ಬಾಂಧವರಿಗೆ ತಿಳಿಸಿ. ಚಿರಕಾಲ ಬಾಳಲಿ ಸ್ವತಂತ್ರ ಭಾರತ”.
ಇದೊಂದೆ ಮಾತು ಸಾಕು ಮೇರು ವ್ಯಕ್ತಿತ್ವದ ಬೋಸರನ್ನು ಅರಿಯಲು.
ಜೈಹಿಂದ್
✍️ ಶ್ರೀಮತಿ ಸುನೀತ ಗಂಗಾಧರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.