ಜನವರಿ 16 ಭಾರತಕ್ಕೆ ಅತ್ಯಂತ ಮಹತ್ವದ ದಿನವಾಗಲಿದೆ. ಇಡೀ ವಿಶ್ವವನ್ನೇ ನಲುಗಾಡಿಸಿದ ಮಹಾಮಾರಿ ಕರೋನವೈರಸ್ ವಿರುದ್ಧ ಭಾರತದಲ್ಲಿ ನಾಳೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತ ನಡೆಸಲಿರುವುದು ಹೆಮ್ಮೆಯ ಸಂಗತಿಯೂ ಹೌದು, ಅತಿ ಹೆಚ್ಚು ಜವಾಬ್ದಾರಿಯ ಸಂಗತಿಯೂ ಹೌದು. ಪಲ್ಸ್ ಪೋಲಿಯೋ ಲಸಿಕೆ ಸೇರಿದಂತೆ ಅನೇಕ ಲಸಿಕೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಅನುಭವ ಇರುವ ಭಾರತ ಇದೀಗ ಕರೋನವೈರಸ್ ವಿರುದ್ಧ ಲಸಿಕೆ ಕಾರ್ಯಕ್ರಮವನ್ನು ಆರಂಭ ಮಾಡುತ್ತಿರುವುದನ್ನು ಇಡೀ ಜಗತ್ತು ಕಾತುರದಿಂದ ನೋಡುತ್ತಿದೆ. ಈ ಅಭಿಯಾನದಲ್ಲಿ ಭಾರತ ಸಾಧಿಸುವ ಸಫಲತೆ ಅದು ಇಡೀ ವಿಶ್ವದ ಸಫಲತೆಯಾಗಲಿದೆ.
ಭಾರತ ತನ್ನ ಬೃಹತ್ ಲಸಿಕೆ ಅಭಿಯಾನಕ್ಕೆ ತನ್ನ ದೇಶದಲ್ಲಿ ತಯಾರಾದ ಲಸಿಕೆಗಳನ್ನೇ ಬಳಸುತ್ತಿದೆ. ಭಾರತ್ ಬಯೋಟೆಕ್ ಸ್ವದೇಶಿಯಾಗಿ ತಯಾರಿಸಿದ ಕೊವ್ಯಾಕ್ಸಿನ್ ಮತ್ತು ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆ ಅಭಿಯಾನದಲ್ಲಿ ಬಳಕೆಯಾಗಲಿದೆ. ಎಲ್ಲರಿಗೂ ಗೊತ್ತಿರುವಂತೆ ದೇಶವನ್ನು ಮಹಾ ಸಾಂಕ್ರಾಮಿಕ ರೋಗದಿಂದ ಕಾಪಾಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಕೊರೋನಾ ಯೋಧರಿಗೆ ಮೊದಲ ಆದ್ಯತೆಯಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಲಸಿಕೆ ಅಭಿಯಾನದ ಮೊದಲ ದಿನ ಮೂರು ಲಕ್ಷ ಮಂದಿಗೆ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಹಂತದ ಲಸಿಕೆ ನೀಡುವಿಕೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಸರಕಾರ ಈಗಾಗಲೇ ಘೋಷಣೆ ಮಾಡಿದೆ.
ಪ್ರತಿಯೊಬ್ಬರಿಗೂ ತಲಾ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. 2 ಡೋಸ್ಗಳ ನಡುವೆ ಕನಿಷ್ಠ ಎರಡು ವಾರಗಳ ಅಂತರ ಇರುತ್ತದೆ. ಅಲ್ಲದೆ ಹಾಕಿಸಿಕೊಂಡ 2 ಡೋಸ್ ಲಸಿಕೆ ಕೂಡ ಒಂದೇ ಕಂಪನಿಯದ್ದಾಗಿರಬೇಕು. ಬೇರೆ ಬೇರೆ ಕಂಪನಿಯ ಲಸಿಕೆ ಹಾಕಿಸುವಂತಿಲ್ಲ. ಅಂದರೆ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಆಗಿದ್ದರೆ ಎರಡನೇಯದು ಕೂಡ ಅದೇ ಆಗಿರಬೇಕು.
18 ವರ್ಷ ಒಳಗಿನ ಮಕ್ಕಳು, ಗರ್ಭಿಣಿ ಸ್ತ್ರೀಯರು, ಗರ್ಭಧಾರಣೆಯ ನಿರೀಕ್ಷೆಯಲ್ಲಿ ಇರುವವರು ಮತ್ತು ಹಾಲುಣಿಸುವ ತಾಯಂದಿರು ಲಸಿಕೆ ಪಡೆಯುವಂತೆ ಇಲ್ಲ. ಯಾಕೆಂದರೆ ಇವರುಗಳನ್ನು ಇದುವರೆಗೆ ಲಸಿಕೆಯ ಪ್ರಯೋಗದಲ್ಲಿ ಒಳಪಡಿಸಲಾಗಿಲ್ಲ. ಹೀಗಾಗಿ ಅವರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿಲ್ಲ. ಹೀಗಾಗಿ ಅವರಿಗೆ ಲಸಿಕೆ ನೀಡಲಾಗುತ್ತಿಲ್ಲ.
ಪ್ರಯೋಗದ ಸಂದರ್ಭದಲ್ಲಿ ಅನಾಫಿಲ್ಯಾಕ್ಟಿವ್ ಅಥವಾ ಅಲರ್ಜಿಯನ್ನು ಅನುಭವಿಸಿದವರು ಕೂಡ ಲಸಿಕೆ ಪಡೆಯುವಂತಿಲ್ಲ. ಕರೋನವೈರಸ್ ಸಕ್ರಿಯ ಪ್ರಕರಣವನ್ನು ಹೊಂದಿರುವವರು ಗುಣಮುಖರಾದ 4-8 ವಾರಗಳ ಬಳಿಕವಷ್ಟೇ ಪಡೆಯಬಹುದು.
ಪ್ರಸ್ತುತ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಕೂಡ ಲಸಿಕೆ ಪಡೆಯುವಂತಿಲ್ಲ.
ಭಾರತದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಲವು ಲಸಿಕೆಗಳನ್ನು ನೀಡಲಾಗುತ್ತದೆ. ಇಂತಹ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತಿವೆ. ಈ ಲಸಿಕೆಗಳು ಭಾರತವನ್ನು ಎಷ್ಟೋ ಕಾಯಿಲೆಗಳಿಂದ ಮುಕ್ತವನ್ನಾಗಿ ಮಾಡಿದೆ. ಕರೋನವೈರಸ್ ಕೂಡ ಇದೇ ರೀತಿಯಾಗಿ ಭಾರತದಿಂದ ತೊಲಗುತ್ತದೆ ಎಂಬುದು ನಮ್ಮೆಲ್ಲರ ದೃಢವಾದ ನಂಬಿಕೆ. ಇದಕ್ಕಾಗಿ ನಮ್ಮ ವಿಜ್ಞಾನಿಗಳು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಲಸಿಕೆ ಪಡೆದ ಬಳಿಕ ತಲೆನೋವು, ಆಯಾಸ, ಜ್ವರ ಸಾಮಾನ್ಯ ಸಂಗತಿಯಾಗಿದೆ. ಇದನ್ನೇ ದೊಡ್ಡದಾಗಿ ಬಿಂಬಿಸಿ ಭಾರತೀಯ ಲಸಿಕೆಯ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬುವ ಕಾರ್ಯ ಒಳ್ಳೆಯದಲ್ಲ. ಈ ಬಗ್ಗೆ ಭಾರತೀಯರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿದೆ.
ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕ ಮಹಾಮಾರಿಯಿಂದ ನಾವು ಅನುಭವಿಸಿದ ನೋವು, ಸಂಕಷ್ಟಗಳಿಂದ ಮುಕ್ತಿ ಪಡೆಯಲು ನಮ್ಮ ವಿಜ್ಞಾನಿಗಳು ನಮಗೆ ದಾರಿಯನ್ನು ತೋರಿಸಿದ್ದಾರೆ. ಅವರ ಮೇಲೆ ನಾವು ನಂಬಿಕೆ ಇಡೋಣ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಲು ಸರ್ಕಾರದ ಜೊತೆ ಕೈಜೋಡಿಸೋಣ. ಈ ಮೂಲಕ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲುವಂತೆ ಮಾಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.