ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ|
ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ
ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್||
ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ ನಂಬಿಕೆ ಇದೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ.
ಭಗವದ್ಗೀತೆ ಎಂದರೆ ವೇದ, ಉಪನಿಷತ್ತುಗಳ ಸಾರವೇ ಸರಿ, ಭಗವಾನ್ ಶ್ರೀ ಕೃಷ್ಣನ ವಾಕ್ಯಗಳವು. 18 ಅಧ್ಯಾಯಗಳಲ್ಲಿನ 700 ಶ್ಲೋಕಗಳು ಅಷ್ಟು ಮಹತ್ವಪೂರ್ಣವಾದದ್ದು, ಪ್ರತಿ ಶ್ಲೋಕವೂ ಕೂಡ ಸತ್ ಮಾರ್ಗದರ್ಶನ ಹಾಗೂ ಜೀವನದಲ್ಲಿ ಹೊಸ ದಾರಿಯನ್ನು ಕೊಡುವಂಥಹದ್ದು.
ನಾವು ಹಿಂದೂಗಳಾಗಿ ರಾಮಾಯಣ ಮತ್ತು ಮಹಾಭಾರತಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ಉಪನಿಷತ್ತುಗಳು ಜೀವ, ಜಗತರು ಮತ್ತು ಈಶ್ವರ ಎಂಬೀ ಮೂರರ ಕುರಿತು ಚರ್ಚಿಸುವ ವೇದ ಗ್ರಂಥಗಳಾದರೆ ಗೀತೆಯು ಈ ವೇದಾಂತ ತತ್ವಗಳನ್ನು ಪ್ರತಿಯೋರ್ವ ಮನುಷ್ಯನೂ ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಂಡು ಬದುಕಬಹುದು ಎಂಬುದನ್ನು ಸ್ಪಷ್ಟವಾಗಿ ಉಪದೇಶಿಸುವ ಜೀವನಧರ್ಮಶಾಸ್ತ್ರವಾಗಿದೆ.
ಮಾನಸಿಕವಾಗಿ ಕುಗ್ಗಿದ್ದ ಅರ್ಜುನನಿಗೆ ಈ ಶ್ರೀ ಕೃಷ್ಣ ರಾಸಾಯನವು ಸಿದ್ಧೌಷಧವಾಗಿ ಪರಿಣಮಿಸಿತ್ತು. ಕೊನೆಯ ಅಧ್ಯಾಯದಲ್ಲಿ ಅರ್ಜುನನು ಶ್ರೀ ಕೃಷ್ಣನಿಗೆ ‘ನನ್ನ ಮೋಹವೆಲ್ಲಾ ಮುಗಿಯಿತು’ ಎಂದು ಘೋಷಿಸಿರುವುದನ್ನು ನಾವು ಕಾಣಬಹುದಾಗಿದೆ.
ಜೀವನದಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಈ ಅರ್ಜುನನ ಮನಸ್ಥಿತಿಗೆ ಹೋಗುವುದು ಸಹಜ ಅಂಥಹಾ ಸಮಯದಲ್ಲಿ ಕೃಷ್ಣನ ರಾಸಾಯಣವೇ ದಿವ್ಯಔಷಧವಾಗಿದೆ. ಓರ್ವ ವ್ಯಕ್ತಿಯು ತನ್ನ ಮನಸ್ಸನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿರಬೇಕೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರತಿನಿತ್ಯ ಧ್ಯಾನ, ಯೋಗ, ಮೌನವನ್ನು ಅನುಸರಿಸಬೇಕು. ತನ್ನ ಮನಸ್ಸನ್ನು ತಾನೇ ನಿಯಂತ್ರಿಸಿಕೊಳ್ಳುವ ವ್ಯಕ್ತಿಯು ಅನೇಕ ತೊಂದರೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಮನಸ್ಸನ್ನು ನಿಯಂತ್ರಿಸುವುದೆಂದರೆ ಅದೇನು ಸುಲಭದ ಕೆಲಸವಲ್ಲವೆಂದೂ ಕೂಡ ಭಗವದ್ಗೀತೆಯಲ್ಲಿ ಹೇಳಲಾದರೂ ಪರಿಶ್ರಮದಿಂದ ಕಷ್ಟಪಟ್ಟು ಕೆಲಸ ಮಾಡಿದರೆ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಆಲೋಚನೆಗಳಿಂದ ನಾವು ದೂರವಿರಬೇಕು. ಮನಸ್ಸನ್ನು ಕೆಟ್ಟ ಆಲೋಚನೆಗಳತ್ತ ಯೋಚಿಸಲು ಅನುವು ಮಾಡಿಕೊಡಬಾರದು. ಒಳ್ಳೆಯ ಆಲೋಚನೆಗಾಗಿ ಸಜ್ಜನರ ಸಹವಾಸವನ್ನು ಹಾಗೂ ಒಡನಾಟವನ್ನು ಬೆಳೆಸಿಕೊಳ್ಳಬೇಕು. ಸಜ್ಜನರ ಸಾಂಗತ್ಯದ ಕುರಿತು ಒಂದು ಮಾತಿದೆ. ಸಜ್ಜನರ ಸಂಘ ಹೆಜ್ಜೇನು ಸವಿದಂತೆ, ದುರ್ಜನರ ಸಂಘ ಹೆಜ್ಜೇನು ಕಡಿದಂತೆ. ಇದನ್ನೇ ಬುದ್ಧನು ಸಂಘಂ ಶರಣಂ ಗಚ್ಛಾಮಿ ಎಂದು ಹೇಳಿದ್ದು. ಸಜ್ಜನರ ಸಹವಾಸ ನಮ್ಮನ್ನು ಅಭಿವೃದ್ಧಿಗೊಳಿಸಿದರೆ, ದುರ್ಜನರ ಸಹವಾಸ ನಮ್ಮನ್ನು, ನಮ್ಮಲ್ಲಿದ್ದ ಉತ್ತಮ ಗುಣವನ್ನು ನಾಶಮಾಡುತ್ತದೆ
ಭಗವದ್ಗೀತೆಯ ಶ್ಲೋಕಗಳ ಪಾರಾಯಣ ಇಂದು ಮನೆ ಮಾತಾಗಿದೆ, ಶಾಲಾ ಕಾಲೇಜುಗಳ ಸ್ಪರ್ಧಾತ್ಮಕ ದೃಷ್ಟಿಯಿಂದ ವಿದ್ಯಾರ್ಥಿಗಳು ಶ್ಲೋಕಗಳನ್ನು ಕಂಠಪಾಠ ಮಾಡುತ್ತಿದ್ದಾರೆ. ಭಗವದ್ಗೀತೆಯ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ನಮ್ಮ ಜನತೆಗೆ ಅರಿವಾಗುತ್ತಾ ಬರುತ್ತಿದೆ. ಆದುದರಿಂದಲೇ ಶ್ರೀಮದ್ಭಗವದ್ಗೀತೆಗೆ ಅನಾದಿ ಕಾಲದಿಂದಲೂ, ಉಪನಿಷತ್ತುಗಳಿಗಿಂತಲೂ ಆದ್ಯತೆ.
ಪ್ರತಿಯೊಂದು ಮನೆಯಲ್ಲೂ ‘ ಫ್ರೀಡ್ಜ್ ‘ ಇದೆ. ಹಾಲು, ತರಕಾರಿ, ಹಣ್ಣುಗಳನ್ನು ಹಾಳಾಗದಂತೆ ಇಡುತ್ತೇವೆ. ಇದರಿಂದಾಗಿ ಒಂದು ವಾರ ಅಥವಾ ಹತ್ತು ದಿವಸದ ತನಕ ‘ ಫ್ರಿಡ್ಜ್’ನಲ್ಲಿ ಇಟ್ಟ ಯಾವ ವಸ್ತುಗಳ ಸುರಕ್ಷಿತವಾಗಿರುತ್ತವೆ .
ಇದೇ ರೀತಿ ಮನಸ್ಸನ್ನು ಪ್ರಕೃತಿಯ ವಿಕೋಪಗಳಿಂದ , ಉದಾ : ಸುಖ , ದುಃಖ , ಲಾಭ – ನಷ್ಟ , ನಿಂದಾ – ಸ್ತುತಿ , ಜಯ – ಅಪಜಯ ಮತ್ತು ಚಿಂತ – ತುಮುಲ ಇತ್ಯಾದಿಗಳಿಂದ ಕಾಪಾಡಿಕೊಳ್ಳಲು ಗೀತಾಪಾರಾಯಣ ಅತ್ಯವಶ್ಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.