
ಬೆಂಗಳೂರು: ಈ ದೇಶದ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಬದುಕು ಕಟ್ಟಿಕೊಡುವ ಕೆಲಸವನ್ನು ಮೋದಿ ಅವರು ಮಾಡುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಒಬ್ಬ ಅನುಭವಿ ಮುಖ್ಯಮಂತ್ರಿಗಳು 16 ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರ ಯೋಜನೆಗಳು ಹೇಗಿವೆ ಎಂದರೆ, ರಾಜ್ಯದ ಜನರಿಗೆ ಕಾಯುವುದೇ ಕೈಲಾಸ ಎಂಬಂತೆ ಸತಾಯಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 1000 ದಿನ ಪೂರೈಸಿ ಹಾವೇರಿಯಲ್ಲಿ ಬೃಹತ್ ಸಮಾವೇಶ, ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಒಂದು ಕಡೆ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಕಾಯಕವೇ ಕೈಲಾಸ ಎಂದು ಭಾವಿಸಿ, ದೇಶವನ್ನು ಸರಿದಾರಿಯಲ್ಲಿ ಒಯ್ಯುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.
ಮಹಾತ್ಮ ಗಾಂಧೀಜಿ ಅವರ ಬಗ್ಗೆ ಸಾಕಷ್ಟು ಗೌರವವನ್ನು ಕಾಂಗ್ರೆಸ್ಸಿನವರು ಇಟ್ಟುಕೊಂಡಿದ್ದಾರೆ. ಇನ್ನೊಂದೆಡೆ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹಾಗೂ ಕುಡುಕರನ್ನು ಸೃಷ್ಟಿ ಮಾಡಲು ಹೊರಟ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಸರಕಾರವು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗದು ಎಂಬಂತೆ ಕೇಂದ್ರ ಸರಕಾರಕ್ಕೆ ದ್ರೋಹ ಬಗೆಯುತ್ತಿದೆ ಎಂದು ಟೀಕಿಸಿದರು. ಇದರ ದಾಖಲಾತಿಗಳನ್ನೂ ಅವರು ಬಿಡುಗಡೆ ಮಾಡಿದರು. ನೂರು ಸುಳ್ಳು ಹೇಳಿ ಮದುವೆ ಮಾಡಿ ಎಂಬ ಗಾದೆಯನ್ನು ಪ್ರಸ್ತಾಪಿಸಿದ ಅವರು, 1000 ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿ ಮುಳುಗಿದ ಮುಖ್ಯಮಂತ್ರಿಗಳು, ಸಚಿವರು ಸಾವಿರ ಸುಳ್ಳು ಹೇಳಿ ರಾಜ್ಯದ ಜನರಿಗೆ, ನಾಡಿನ ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಅನ್ಯಾಯವೆಸಗಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ನಡೆಸುವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗಷ್ಟೇ ನ್ಯಾಯ ಕೊಟ್ಟು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ, ಒಕ್ಕಲಿಗರು, ವೀರಶೈವ ಲಿಂಗಾಯತ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಜನತೆ ಚರ್ಚಿಸುತ್ತಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಿಂದೆ 170 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಮಾಡಿಸಿ ರಾಹುಲ್ ಗಾಂಧಿಯವರು ಆದೇಶ ಮಾಡಿದರೆಂಬ ಕಾರಣಕ್ಕೆ ಜಾತಿಗಣತಿ ವರದಿಯನ್ನು ತಿಪ್ಪೆಗೆಸೆದಿದ್ದರು. ಈಗ ಎರಡನೇ ಬಾರಿ 450 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಮಾಡಿಸಿ, ತಮ್ಮ ಸ್ವಕ್ಷೇತ್ರದ ಪಕ್ಕದಲ್ಲಿರುವ ಕೆಆರ್ಎಸ್ ಡ್ಯಾಮಿಗೆ ಬಿಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗಳು, ಕಾಂಗ್ರೆಸ್ ಸರಕಾರಕ್ಕೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದವರನ್ನು ಕೇವಲ ಮತಬ್ಯಾಂಕಾಗಿ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ವಿನಾ, ಈ ಸಮುದಾಯಗಳಿಗೆ, ಕಾಯಕ ಸಮುದಾಯಗಳಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಮಾಡಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಅನೇಕ ಜನಪರ ಯೋಜನೆಗಳನ್ನು ನೀಡಿದ್ದರು. ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಯ ಆಸೆಯನ್ನು ಜನರ ಮುಂದೆ ಬಿಚ್ಚಿಟ್ಟಿತ್ತು. ಮತ್ತೊಂದು ಕಡೆ ಅಂದಿನ ಬಿಜೆಪಿ ಸರಕಾರದ ಮೇಲೆ ಶೇ 40 ಭ್ರಷ್ಟಾಚಾರದ ಆರೋಪ ಮಾಡಿ, ಕರ್ನಾಟಕದಲ್ಲಿ ರಾಮರಾಜ್ಯ, ಭ್ರಷ್ಟಾಚಾರರಹಿತ ಆಡಳಿತ ಕೊಟ್ಟು, ಅಭಿವೃದ್ಧಿಯ ಪರ್ವ ಪ್ರಾರಂಭಿಸುವುದಾಗಿ ಜನರ ಮುಂದೆ ಅವರ ಕನಸುಗಳನ್ನು ಬಿಚ್ಚಿಟ್ಟರು. ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನರಿಗೆ ಕಿವಿಗೆ ಹೂವು ಮುಡಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಮುಡಾ ಮತ್ತಿತರ ಭ್ರಷ್ಟಾಚಾರದ ಹಗರಣಗಳನ್ನು ಪ್ರಸ್ತಾಪಿಸಿದ ಅವರು, ಭ್ರಷ್ಟಾಚಾರವನ್ನು ಯಾವ ರೀತಿ ಮಾಡಬಹುದು ಎಂಬುದಕ್ಕೆ ದೇಶಕ್ಕೇ ಇವರು ಮಾದರಿ ಆಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ಕಳೆದ ಎರಡೂಮುಕ್ಕಾಲು ವರ್ಷದಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿಕೊಂಡು ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಅಲ್ಲದೇ ಯುವಜನತೆಗೂ ಅನ್ಯಾಯ ಮಾಡುತ್ತ ಬರುತ್ತಿದೆ ಎಂದು ಆಕ್ಷೇಪಿಸಿದರು.
ಇವರ ಆಡಳಿತದ ವೈಖರಿಯು ಅಭಿವೃದ್ಧಿ ಇಲ್ಲದೇ ಕರ್ನಾಟಕ ರಾಜ್ಯ ಎಲ್ಲ ವಿಚಾರದಲ್ಲಿ 20-25 ವರ್ಷ ಹಿಂದಕ್ಕೆ ಹೋಗುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ರಾಜ್ಯವನ್ನು ದಿವಾಳಿ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಪೂರೈಸಿದ್ದಾರೆ ಎಂದು ತಿಳಿಸಿದರು. ಸರಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಅತಿ ಶೀಘ್ರವೇ ನೇಮಕಾತಿ ಮಾಡುವುದಾಗಿ ಹೇಳಿದ್ದರು. ಸುಮಾರು 2.85 ಲಕ್ಷ ನೇಮಕಾತಿ ಪ್ರಕ್ರಿಯೆ ನೇಮಕಾತಿ ಮಾಡದೇ ಯುವಜನತೆಗೆ ದೋಖಾ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟಿನಲ್ಲಿ ಸಮರ್ಪಕ ವಾದ ಮಂಡಿಸದೇ, ಮೀಸಲಾತಿ ಮ್ಯಾಟ್ರಿಕ್ಸ್ ನೆಪ ಮಾಡಿಕೊಂಡು ಖಾಲಿ ಹುದ್ದೆ ಭರ್ತಿ ಮಾಡಿಲ್ಲ. ಯುವಜನತೆಗೆ ಅನ್ಯಾಯ ಮಾಡಿದ್ದಾರೆ. ಬೆಳಗಾವಿಯಲ್ಲಿ ಯುವಜನರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾದರೆ ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಸೃಷ್ಟಿಯಾದುದು ನಿಜವಾದ ದುರಂತ ಎಂದು ಟೀಕಿಸಿದರು.
2006ರಿಂದ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಸ್ಕೀಂ (ಒಪಿಎಸ್) ವಿಸ್ತರಿಸುವುದಾಗಿ ಹೇಳಿದ್ದರು. ಅದನ್ನೂ ತುದಿ ಮುಟ್ಟಿಸಿಲ್ಲ ಎಂದು ದೂರಿದರು. ಅಂಗನವಾಡಿ ಕಾರ್ಯಕರ್ತರ ಗೌರವಧನ 15 ಸಾವಿರಕ್ಕೆ ಏರಿಸುವುದಾಗಿ ಹೇಳಿದ್ದರು. ಆ ವಿಷಯದಲ್ಲೂ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು. ಆಶಾ ಕಾರ್ಯಕರ್ತರ ಗೌರವಧನವನ್ನೂ ಹೆಚ್ಚಿಸಿಲ್ಲ ಎಂದು ಆಕ್ಷೇಪಿಸಿದರು. ಬಿಸಿಯೂಟ ತಯಾರಕರ ಗೌರವಧನದ ಕುರಿತು ಚಕಾರ ಎತ್ತಿಲ್ಲ ಎಂದು ದೂರಿದರು.
5 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗಾಗಿ 1.50 ಲಕ್ಷ ಕೋಟಿ ಕೊಡುವುದಾಗಿ ಭರವಸೆ ನೀಡಿ ಎಷ್ಟೋ ವರ್ಷವಾಗಿದೆ. ಇವತ್ತಿಗೂ ಅದರ ಕುರಿತು ಚಕಾರ ಎತ್ತುತ್ತಿಲ್ಲ. ಮೈಸೂರು- ಮಂಗಳೂರು- ಹುಬ್ಬಳ್ಳಿಗಳಲ್ಲಿ ಟೆಕ್ ಪಾರ್ಕ್ ನಿರ್ಮಿಸಿ 1 ಲಕ್ಷಕ್ಕೂ ಹೆಚ್ಚು ಯುವಜನತೆಗೆ ಉದ್ಯೋಗ ಸೃಷ್ಟಿಸುವ ಹೇಳಿಕೆ ಹಾಗೇ ಉಳಿದಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಜಾಹೀರಾತು ಕೊಟ್ಟಿದ್ದರು. ಆದರೆ, ಇವರು ಕೇಂದ್ರ ಸರಕಾರದ 5 ಕೆಜಿ ಕೊಡುತ್ತಿದ್ದು, ಇವರ 5 ಕೆಜಿ ಸರಿಯಾಗಿ ಕೊಡುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದ ಜನರಿಗೆ ಸುಳ್ಳು ಹೇಳಿಕೊಂಡು, ಅಹಿಂದ ನಾಯಕರೆಂದು ಹೇಳಿಕೊಂಡು 1.41 ಲಕ್ಷ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಪ್ರಾದೇಶಿಕ ಅಸಮಾನತೆ ನಿವಾರಣೆ ವರದಿ ಗಮನಿಸಿದರೆ ಈ ಕಾಂಗ್ರೆಸ್ ಸರಕಾರ ಕೇವಲ ಬೆಂಗಳೂರು, ಮೈಸೂರಿಗೆ ಸೀಮಿತ ಆಗಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


