
ಅದು 2019 ರ ಫೆಬ್ರುವರಿ 15 ರ ಬೆಳಗ್ಗೆ, ಪುಲ್ವಾಮಾ ದಾಳಿಯ ನಂತರದ ದಿನ, ದಕ್ಷಿಣ ಕಾಶ್ಮೀರದ ಗಾಳಿಯು ಚಳಿಗಾಲದ ಮಂಜಿನಷ್ಟೇ ಮಬ್ಬಾಗಿತ್ತು. ನಲವತ್ತು ಧೈರ್ಯಶಾಲಿ ಸಿಆರ್ಪಿಎಫ್ ಸೈನಿಕರು ಹುತಾತ್ಮರಾಗಿದ್ದರು. ಅವರಿದ್ದ ಬಸ್ ಲೋಹದ ಪುಡಿಯಾಗಿ ಪರಿವರ್ತನೆಗೊಂಡಿತ್ತು. ಹೆದ್ದಾರಿಯು ರಕ್ತದಿಂದ ಕಲುಷಿತಗೊಂಡಿತ್ತು. ಅಲ್ಲಿಯೇ ನಿಂತಿದ್ದರು ರಾಕೇಶ್ ಬಲ್ವಾಲ್, ಮಣಿಪುರ ಕೇಡರ್ನ ಐಪಿಎಸ್ ಅಧಿಕಾರಿ. ಜುಲೈ 2018 ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.
ಅವರು ಕೂಗಲಿಲ್ಲ. ಕ್ಯಾಮೆರಾಗಳೊಂದಿಗೆ ಮಾತನಾಡಲಿಲ್ಲ. ಅವರು ನಿಶ್ಶಬ್ದವಾಗಿ ನಿಂತು, ಸಂಭವಿಸಿದ ಘಟನೆಯ ತೀವ್ರತೆಯನ್ನು ತಮ್ಮೊಳಗೆ ಅವಲೋಕಿಸುತ್ತಿದ್ದರು.
ಅವರ ಮುಂದೆ ಛಿದ್ರಗೊಂಡ ಬಸ್ನ ಅವಶೇಷಗಳಿದ್ದವು. ಸುತ್ತಲೂ ಫಾರೆನ್ಸಿಕ್ ಮತ್ತು ಸ್ಫೋಟಕ ತಜ್ಞರು ಎಚ್ಚರಿಕೆಯಿಂದ ಭಗ್ನಾವಶೇಷಗಳನ್ನು ಪರಿಶೀಲಿಸುತ್ತಿದ್ದರು, ಉಕ್ಕಿನ ತುಣುಕುಗಳ ನಡುವೆ ಸಾಕ್ಷ್ಯಗಳ ತುಣುಕುಗಳನ್ನು ಹುಡುಕುತ್ತಿದ್ದರು.
ಬದುಕುಳಿದ ಸಿಆರ್ಪಿಎಫ್ ಸಿಬ್ಬಂದಿ ಹತ್ತಿರದಲ್ಲೇ ಆಘಾತದಿಂದ ನಿಂತಿದ್ದರು, ಅನೇಕರು ತಮ್ಮ ಹುತಾತ್ಮ ಸಹೋದ್ಯೋಗಿಗಳನ್ನು ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಿದ್ದರು. ಆಘಾತವು ಎಷ್ಟು ಆಳವಾಗಿತ್ತೆಂದರೆ, ಅದು ಕೇವಲ ಅಪರಾಧ ಸ್ಥಳವಾಗಿರಲಿಲ್ಲ. ಅದು ಯುದ್ಧದ ನಂತರದ ಸ್ಮಶಾನ ಮೌನದ ಭೂಮಿಯಾಗಿತ್ತು.
ಭೀಕರ ಸ್ಫೋಟದ ಹದಿನೈದು ನಿಮಿಷಗಳೊಳಗೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ಬಾಂಬರ್ನ ವೀಡಿಯೊ ಬಿಡುಗಡೆಯಾಗಿತ್ತು. ಆತ ಪುಲ್ವಾಮಾದ ಕಾಕಪೋರಾ ನಿವಾಸಿ ಅದಿಲ್ ಅಹ್ಮದ್ ದಾರ್. ಒಂದು ಕೈಯಲ್ಲಿ ಎಂ4 ಕಾರ್ಬೈನ್ ಮತ್ತು ಮತ್ತೊಂದು ಕೈಯಲ್ಲಿ ಬ್ರೌನಿಂಗ್ ಪಿಸ್ತೂಲ್ ಹಿಡಿದುಕೊಂಡು, ಗ್ರೆನೇಡ್ಗಳಿಂದ ಸುತ್ತುವರೆದು ಜೈಷ್ ಧ್ವಜದೊಂದಿಗೆ ವಿಡಿಯೋದಲ್ಲಿ ಆತ ಕಾಣಿಸಿಕೊಂಡಿದ್ದ. ಅವನು ಯುವ ಕಾಶ್ಮೀರಿಗಳನ್ನು ಪಾಶ್ಚಾತ್ಯ ಪ್ರಭಾವಗಳಿಂದ ದೂರವಿರಲು ಪ್ರೇರೇಪಿಸಿದ್ದ ಮತ್ತು ಭಾರತವನ್ನು ಗೋಮೂತ್ರ ಕುಡಿಯುವ ರಾಷ್ಟ್ರ ಎಂದು ಕರೆದು, ನಿಯಂತ್ರಿಸಲಾಗದಂತಹ ಕ್ರೂರ ಭಯೋತ್ಪಾದನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ. ಐಸಿ-814 ಹೈಜಾಕ್ ಮತ್ತು ಸಂಸತ್ತು ದಾಳಿಯಂತಹ ಘಟನೆಗಳನ್ನು ಉಲ್ಲೇಖಿಸಿ ಇಂತಹ ಮತ್ತಷ್ಟು ದಾಳಿಗಳನ್ನು ಭಾರತ ಕಾಣಲಿದೆ ಎಂದು ಬೆದರಿಕೆ ಹಾಕಿದ್ದ.
ಆದರೆ ವಿಡಿಯೋ ಏನೋ ವಿಚಿತ್ರವಾಗಿತ್ತು. ತನಿಖಾಧಿಕಾರಿಗಳು ಅವನ ತುಟಿ ಮತ್ತು ಮಾತುಗಳ ನಡುವೆ ಹೋಲಿಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಿದರು. ಧ್ವನಿಯನ್ನು ನಕಲಿ ಮಾಡಲಾಗಿತ್ತು. ಅಂದರೆ ಮರಣದಲ್ಲೂ ಮೋಸ ಮುಂದುವರೆದಿತ್ತು.
ಬಲ್ವಾಲ್ ಅವರಿಗೆ, ಈ ತನಿಖೆ ಕೇವಲ ಭಯೋತ್ಪಾದಕನನ್ನು ಗುರುತಿಸುವುದಷ್ಟೇ ಅಲ್ಲ. ಭಾರತದ ಸತ್ಯವನ್ನು ರಕ್ಷಿಸುವುದು, ಹರಿದಾಡುತ್ತಿದ್ದ ಸುಳ್ಳುಗಳಿಗೆ ಸತ್ಯದ ಮೂಲಕ ಉತ್ತರ ನೀಡುವುದಾಗಿತ್ತು.
ತನಿಖೆ ತೀವ್ರತೆ ಪಡೆದಂತೆ ಸ್ಫೋಟಗೊಂಡ ಕಾರಿನ ಎಂಜಿನ್ ಮತ್ತು ಚಾಸಿಸ್ ಸಿಕ್ಕಿತು, ಆದರೆ ಗುರುತುಗಳನ್ನು ಅಳಿಸಲಾಗಿತ್ತು.
ಸ್ಫೋಟ ಸ್ಥಳದಿಂದ ಪಡೆದ ಕ್ರ್ಯಾಂಕ್ಶಾಫ್ಟ್ ಅನ್ನು ಪರಿಶೀಲಿಸಲು ಫೆಬ್ರುವರಿ 18 ರಂದು ಬಂದ ಮಾರುತಿ ತಂಡವು ಕಾನ್ಸೀಲ್ಡ್ ಬ್ಯಾಚ್ ಸಂಖ್ಯೆಯನ್ನು ಕಂಡುಹಿಡಿಯಿತು. ಆ ಸಂಖ್ಯೆಯು 25 ಜನವರಿ 2011ರಂದು ತಯಾರಿಸಿದ ಕಾರು Eeco ಮಾಡೆಲ್ನತ್ತ ತನಿಖೆಯನ್ನು ಕೊಂಡೊಯ್ಯಿತು. ದಾಖಲೆಗಳ ಪ್ರಕಾರ, ಆ ದಿನ ಏಳು ಅಂತಹ ಕಾರುಗಳನ್ನು ಉತ್ಪಾದಿಸಲಾಗಿತ್ತು, ಆದರೆ ಒಂದು ಮಾತ್ರ ಕಾಶ್ಮೀರಕ್ಕೆ ಸಾಗಿಸಲಾಗಿತ್ತು. ಅಲ್ಲಿಂದ ಬಳಿಕ ತನಿಖೆಯು ಒಂದು ಸರಣಿಯಾಗಿ ಪರಿವರ್ತನೆಗೊಂಡಿತು.
ಪ್ರತಿ ಕೊಂಡಿಯನ್ನು ಎಚ್ಚರಿಕೆಯಿಂದ ಅನುಸರಿಸಬೇಕಿತ್ತು. ಸಮಯ ಓಡುತ್ತಿತ್ತು. ಒತ್ತಡ ಹೆಚ್ಚುತ್ತಿತ್ತು. ರಾಷ್ಟ್ರವು ಉತ್ತರಗಳನ್ನು ಬಯಸಿತ್ತು. ಅಂತಿಮವಾಗಿ, ತನಿಖೆ ಡ್ಯಾನಿಶ್ ಅಹ್ಮದ್ ಲೋನ್ ಎಂಬ ವ್ಯಕ್ತಿಯತ್ತ ಕೊಂಡೊಯ್ಯಿತು, ಅವನು ಕಾರನ್ನು ತನ್ನ ಸೋದರ ಸಂಬಂಧಿ ಸಜ್ಜಾದ್ ಭಟ್ಗೆ ಮಾರಿದ್ದಾಗಿ ಬಹಿರಂಗಪಡಿಸಿದ, ಆದರೆ ಅವನು ಅದೃಶ್ಯನಾಗಿದ್ದ. ತಕ್ಷಣದ ಯಶಸ್ಸಿಲ್ಲದೆ, ಬಲ್ವಾಲ್ ಅವರು ಸ್ಫೋಟ ಸ್ಥಳದ ಸುತ್ತಮುತ್ತ ಹುಡುಕಾಟ ಪ್ರದೇಶವನ್ನು ಇನ್ನಷ್ಟು ವಿಸ್ತರಿಸಲು ದೆಹಲಿಯ ಎನ್ಐಎ ಪ್ರಧಾನ ಕಚೇರಿಯಿಂದ ಅನುಮತಿ ಕೋರಿದರು. ಅದು ಅಪಾಯಕಾರಿ ಹೆಜ್ಜೆಯಾಗಿತ್ತು. ಹಜಿಬಲ್ನಂತಹ ಪ್ರದೇಶಗಳು ಉಗ್ರಗಾಮಿ ಹಾಟ್ಸ್ಪಾಟ್ಗಳಾಗಿದ್ದವು. ಹಿಂದೆ, ಕಾರ್ಯಾಚರಣೆಗಳ ಸಮಯದಲ್ಲಿ ಜನಸಮೂಹಗಳು ಒಟ್ಟುಗೂಡಿ, ಕೆಲವೊಮ್ಮೆ ಭದ್ರತಾ ಪಡೆಗಳನ್ನು ತಡೆಯಲು ಪ್ರಯತ್ನಿಸಿದ್ದವು.
ಆದರೆ ಬಲ್ವಾಲ್ ಅವರು ಸತ್ಯವು ಅಲ್ಲಿಯೇ ಇದೆ ಎಂದು ದೃಢವಾಗಿ ನಂಬಿದ್ದರು.
ಫೆಬ್ರುವರಿ 20 ರಂದು, 100 ಎನ್ಐಎ ಅಧಿಕಾರಿಗಳು ಮತ್ತು 400 ಸಿಆರ್ಪಿಎಫ್ ಸಿಬ್ಬಂದಿಯೊಂದಿಗೆ, ವಿಸ್ತೃತ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಬಲ್ವಾಲ್ ಹೆಪ್ಪಾದ ನೆಲವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾ ಜೆಹಲಮ್ ನದಿಯ ದಂಡೆಯ ಕಡೆಗೆ ನಡೆದರು. ನದಿಯಾಚೆಗೆ, ಹಜಿಬಲ್ ಪ್ರದೇಶದಲ್ಲಿ ನೋಡುಗರ ಗುಂಪು ಸೇರಲಾರಂಭಿಸಿತು. “ಸರ್, ನಾವು ತನಿಖೆಯನ್ನು ಬೇಗ ಬೇಗ ಮಾಡಿ ಮುಗಿಸೋಣ. ಈ ಪ್ರದೇಶ ತುಂಬಾ ಅಪಾಯಕಾರಿಯಾಗಿದೆ” ಎಂದು ಯಾರೋ ಎಚ್ಚರಿಸಿದರು. ಆದರೆ ಅವರು ನಡೆಯುತ್ತಲೇ ಇದ್ದರು. ಸ್ಫೋಟ ಸ್ಥಳದಿಂದ 250 ಮೀಟರ್ ದೂರದಲ್ಲಿ, ಏನೋ ಅವರ ಕಣ್ಣಿಗೆ ಬಿದ್ದಿತು – ಹೆಪ್ಪಾದ ಹಿಮದಲ್ಲಿ ಅರ್ಧದಷ್ಟು ಹೂತುಹೋಗಿದ್ದ ಚಿಕ್ಕ ಲೋಹೀಯ ವಸ್ತು ಅದಾಗಿತ್ತು. ಅವರು ಕೆಳಗೆ ಬಗ್ಗಿದರು. ಅದು ಒಂದು ಕೀಲಿ. ಅದರ ಮೇಲೆ ʼ1026ʼ ಎಂದು ಕೆತ್ತಲಾಗಿತ್ತು. ಆ ಕೀಲಿಯು ನಂತರ ದಾಳಿಯಲ್ಲಿ ಬಳಸಿದ Eeco ಕಾರಿನದ್ದು ಎಂದು ನಂತರ ದೃಢವಾಯಿತು.
ಸ್ವಲ್ಪ ಮುಂದೆ, ಅವರು ಒಂದು ಚಿಕ್ಕ ಮೂಳೆಯ ತುಂಡನ್ನು ಗಮನಿಸಿದರು. ಮೂಳೆಯ ತುಂಡನ್ನು ಡಿಎನ್ಎ ವಿಶ್ಲೇಷಣೆಗೆ ಕಳುಹಿಸಲಾಯಿತು. ಅದನ್ನು ಅದಿಲ್ ಅಹ್ಮದ್ ದಾರ್ನ ತಂದೆ ಘುಲಾಮ್ ಹಸನ್ ದಾರ್ ಅವರ ರಕ್ತದ ಮಾದರಿಗೆ ಹೋಲಿಸಿ ನೋಡಲಾಯಿತು ಮತ್ತು ಅದು ಹೊಂದಾಣಿಕೆಯಾದವು. ಅಲ್ಲಿಗೆ ಆತ್ಮಹತ್ಯಾ ಬಾಂಬರ್ ದಾರ್ ಎಂಬುದು ಸ್ಪಷ್ಟವಾಯಿತು.
ಮಾರ್ಚ್ 2018 ರಲ್ಲಿ ಆತ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಆತ ಸೇರಿದ್ದ ಎಂಬ ಅಂಶ ಬಹಿರಂಗವಾಯಿತು, ಅಂದರೆ ದಾಳಿಗೆ ಸುಮಾರು ಒಂದು ವರ್ಷ ಮುಂಚೆ. ಅವನನ್ನು 2016 ಮತ್ತು 2018 ರ ನಡುವೆ ಹಲವು ಬಾರಿ ಬಂಧಿಸಲಾಗಿತ್ತು ಮತ್ತು ಆ ಅನುಭವಗಳಿಂದಲೇ ಅವಮಾನಗೊಂಡು ಆತ ಉಗ್ರಗಾಮಿಯಾದ ಎಂದು ಹೇಳಲಾಗಿತ್ತು. ಡಿಎನ್ಎ ಹೊಂದಾಣಿಕೆಯಾದ ಕಾರಣ ದಾಳಿಯನ್ನು ಯಾರು ನಡೆಸಿದರು ಎಂಬುದರ ಬಗ್ಗೆ ಸಂದೇಹ ಮರೆಯಾಯಿತು. ಅಂದರೆ ದಾಳಿಯ ಬಳಿಕ ಬಿಡುಗಡೆ ಮಾಡಲಾಗಿದ್ದ ವೀಡಿಯೊದಲ್ಲಿ ದಾರ್ ಇದ್ದ ಆದರೆ ಮಾತು ಅವನದ್ದಾಗಿರಲಿಲ್ಲ ಎಂಬ ಊಹೆ ನಿಜವಾಗಿತ್ತು. ವಿಡಿಯೋದಲ್ಲಿ ಅದಿಲ್ ಅಹ್ಮದ್ ದಾರ್ನ ಭಾಷಣವನ್ನು ಬದಲಾಯಿಸಲಾಗಿತ್ತು. ಧ್ವನಿಯನ್ನು ನಂತರ ಸೇರಿಸಲಾಗಿತ್ತು, ಸಂದೇಶವನ್ನು ಭಯ ಮತ್ತು ಪ್ರಚಾರವನ್ನು ಹರಡಲು ಎಚ್ಚರಿಕೆಯಿಂದ ಸಿದ್ಧಪಡಿಸಲಾಗಿತ್ತು. ಇದನ್ನು ಉಗ್ರ ಸಂಘಟನೆಯೇ ಮಾಡಿತ್ತು.
ಉಗ್ರ ಕಾರ್ಯಾಚರಣೆಯನ್ನು ಹೇಗೆ ಹಂತಹಂತವಾಗಿ ಯೋಜಿಸಲಾಗಿತ್ತು ಎಂಬುದನ್ನು ಬೂದಿಯಾದ ಕಾರಿನ ಸಾಕ್ಷಿ ಬಹಿರಂಗಪಡಿಸಿತು. ಮೊದಲು ಅಸ್ತವ್ಯಸ್ತವಾಗಿದ್ದ ಸಾಗಿದ್ದ ತನಿಖೆ ವಾಸ್ತವವಾಗಿ ಸಂಯೋಜಿತವಾಗಿ ಹೊರಹೊಮ್ಮಿತು. ಗದ್ದಲ, ಆಕ್ರೋಶ ಅಥವಾ ಊಹೆಗಳಿಂದ ಪುಲ್ವಾಮ ದಾಳಿಯ ಹಿಂದಿನ ಪಿತೂರಿ ಬಹಿರಂಗವಾಗಿದ್ದಲ್ಲ, ಅದು ತಾಳ್ಮೆ, ಸಾಕ್ಷ್ಯ ಮತ್ತು ತನಿಖೆಯಿಂದ ಬಹಿರಂಗವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


