ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ ಮಾತ್ರವಲ್ಲದೆ ಅತ್ಯಂತ ಸುಸಂಸ್ಕೃತ ಮತ್ತು ಶಾಂತ ಧರ್ಮ. ನಾವೆಲ್ಲರೂ ಇತ್ತೀಚೆಗಷ್ಟೇ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ ಹಾಗೂ ಗಲಭೆಯ ಕುರಿತು ಅರಿತಿದ್ದೇವೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಾಮೆಂಟ್ ಒಂದು ಈ ವಿಕೃತ ವಿಷಾದಕರ ಘಟನೆಗೆ ಕಾರಣವಾಯಿತು. ಇತರ ಧರ್ಮಗಳ ಕುರಿತಾಗಿ ಅವಹೇಳನಕಾರಿ ಮಾತುಗಳನ್ನಾಡುವುದು ಖಂಡಿತವಾಗಿಯೂ ಖಂಡಿಸಬೇಕಾದ ವಿಚಾರ, ಆದರೆ ಈ ವಿಚಾರಕ್ಕಾಗಿ ಅಮಾಯಕರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಷ್ಟಪಡಿಸುವುದನ್ನು ಒಪ್ಪುವುದು ಸಾಧ್ಯವೇ? ಏಕೆಂದರೆ ಈ ರೀತಿಯಲ್ಲಿ ಹಿಂದೂ ಧರ್ಮದ ಮೇಲೆ ಅನೇಕ ರೀತಿಯ ದಾಳಿಗಳು ನಡೆದಿವೆಯಲ್ಲವೇ?
ಮೊನ್ನೆಯಷ್ಟೇ ಸಾಮಾಜಿಕ ಕಾರ್ಯಕರ್ತೆ ಎಂಬ ಹಣೆಪಟ್ಟಿ ಹೊತ್ತಿರುವ “ತೃಪ್ತಿ ದೇಸಾಯಿ” ಶಿರಡಿ ಸಾಯಿಬಾಬಾ ಮಂದಿರದ ವಿರುದ್ಧ ಹೇಳಿಕೆಯೊಂದನ್ನು ನೀಡಿ ಮತ್ತೆ ಪ್ರಚಾರಕ್ಕೆ ಬಂದಿದ್ದಾರೆ. ಹಾಗೇ ಶಿರಡಿ ದೇವಾಲಯದಲ್ಲಿ ಭಾರತೀಯ ಸಂಸ್ಕೃತಿಯಂತೆ, ಸಂಪ್ರದಾಯ ಬದ್ಧವಾಗಿ ಉಡುಪು ಧರಿಸಿ ಪ್ರವೇಶಿಸಬೇಕು ಎಂಬ ಬೋರ್ಡ್ ಇದೀಗ ಈಕೆಯ ಕೆಂಗಣ್ಣಿಗೆ ಗುರಿಯಾಗಿದೆ. ದೇವಾಲಯದಲ್ಲಿ ಅರ್ಚಕರು ಅರೆಬೆತ್ತಲೆಯಾಗಿ ಇರುತ್ತಾರೆ ಮತ್ತೆ ಭಕ್ತರೇಕೆ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂಬುದು ಈಕೆಯ ಪ್ರಶ್ನೆ. ಈ ಪ್ರಶ್ನೆ ಇದೀಗ ವಿವಾದವೊಂದಕ್ಕೆ ನಾಂದಿ ಹಾಡಿದೆ. ಇಷ್ಟಕ್ಕೂ ಈಕೆ ವಿವಾದವನ್ನೇಬ್ಬಿಸುವುದು ಇದು ಮೊದಲನೇ ಬಾರಿಯೇನಲ್ಲ. ಸರಿಯಾಗಿ ಗಮನಿಸಿದರೆ ಇದೊಂದು ವ್ಯವಸ್ಥಿತ ತಂತ್ರ. ಪ್ರತೀ ವರ್ಷ ಈಕೆ ಇದೆ ರೀತಿಯಲ್ಲಿ ಹಿಂದೂ ವಿರೋಧಿ ಹೇಳಿಕೆ ಅಥವಾ ನಡೆಯಿಂದ ಪುಕ್ಕಟೆ ಪ್ರಚಾರ ಗಿಟ್ಟಿಸುವುದು ನಡೆಯುತ್ತಾ ಬಂದಿದೆ. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಈಕೆ ಮಹಿಳೆಯರ ಪ್ರವೇಶ ನಿಷೇಧಿಸಲ್ಪಟ್ಟ ಶನಿ ಶಿಂಗ್ನಾಪುರ ದೇವಾಲಯ ಪ್ರವೇಶದ ನಾಟಕವನ್ನು ನಡೆಸಿ ಸುಮಾರು ಒಂದು ತಿಂಗಳುಗಳ ಕಾಲ ದೂರದರ್ಶನ ಹಾಗೂ ವಾರ್ತಾ ಪತ್ರಿಕೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದರು. ಮತ್ತೆ ದುರ್ಬಿನ್ ಹಾಕಿ ಹುಡುಕಿದರೂ ಸಿಗದಂತೆ ಕಾಣೆಯಾಗಿದ್ದ ಈ ಸಾಮಾಜಿಕ ಕಾರ್ಯಕರ್ತೆ ಕಂಡು ಬಂದದ್ದು ಶಬರಿಮಲೆ ಪ್ರವೇಶಿಸುವ ನಾಟಕದಲ್ಲಿ. ಇದೀಗ ಮತ್ತೆ ಶಿರಡಿ ದೇವಾಲಯದ ವಿಚಾರ. ಹೀಗೇ ಪ್ರತೀ ವರ್ಷ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿ ಚಾಲನೆಯಲ್ಲಿರುವುದು ಸೊ ಕಾಲ್ಡ್ ಸಾಮಾಜಿಕ ಕಾರ್ಯಕರ್ತರ ಹವ್ಯಾಸ.
ಇವರ ಇಂತಹ ಕಾರ್ಯಗಳಿಂದ ಸಮಾಜದಲ್ಲಿ ಯಾವುದಾದರೂ ಬದಲಾವಣೆ ಉಂಟಾಗಿದೆಯೇ ಎಂದು ಹುಡುಕಿದರೆ ಒಂದೇ ಒಂದು ಉದಾಹರಣೆ ಕಾಣಸಿಗದು. ಯಾವುದಾದರೂ ಪ್ರದೇಶದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ಅನಾಚಾರ ನಡೆದ ವಿಚಾರವನ್ನು ಖಂಡಿಸಿ ಅಥವಾ ಸಾಧನೆ ಮಾಡಿದ ಮಹಿಳೆಯ ಪರವಾಗಿ ಈಕೆಯು ಒಂದು ಬಾರಿಯೂ ಮುಂದೆ ಬಂದಿಲ್ಲ. ದೇವಾಲಯಗಳಲ್ಲಿ ಸಮಾನತೆ ತರುವುದೂ ಇವರ ಉದ್ದೇಶ ಖಂಡಿತ ಅಲ್ಲಾ. ಇವರ ಉದ್ದೇಶ ಅಗ್ಗದ ಪ್ರಚಾರ ಮಾತ್ರ. ಇಂತಹ ವಿವಾದಗಳಿಂದ ಮಾತ್ರವೇ ಇವರು ಚಾಲ್ತಿಯಲ್ಲಿ ಉಳಿಯುತ್ತಾರೆ ಎಂಬ ಸತ್ಯ ಇವರಿಗೂ ಗೊತ್ತಿದೆ. ಇಂತಹವರ ಗುಂಪಲ್ಲಿ ಇನ್ನೂ ಸಾಕಷ್ಟು ಜನರಿದ್ದಾರೆ, ಪ್ರಕಾಶ್ ರೈ ಎಂಬ ನಟ, ಅತ್ತ ತಮಿಳುನಾಡು ಇತ್ತ ಕರ್ನಾಟಕ ಎಂದು ಅಲೆದಾಡುತ್ತಾ ರಾಜಕೀಯ ನೆಲೆ ಕಂಡುಕೊಳ್ಳಲು ಕಂಡುಕೊಂಡಿದ್ದು ಕೂಡಾ ಇದೇ ಹಿಂದೂ ಧರ್ಮದ ಅವಹೇಳನೆಯ ಮಾರ್ಗ. ಯಾವತ್ತಾದರೂ ಒಂದು ದಿನ ಅತ್ಯಂತ ಅಗ್ಗದ ಪ್ರಚಾರಕ್ಕಾಗಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನ್ನು ಹೇಳಿ, ಪರ ವಿರೋಧ ವರ್ಗಗಳನ್ನು ಸೃಷ್ಟಿಸಿ ಪ್ರಚಾರದಲ್ಲಿರುವ ವ್ಯಕ್ತಿ ಮತ್ತೆ ಕಳೆದು ಹೋಗುತ್ತಾರೆ. ಈ ಪಟ್ಟಿಯಲ್ಲಿ ಬರುವ ಮತ್ತೊಬ್ಬ ಪ್ರಮುಖ ವ್ಯಕ್ತಿ ಭಗವಾನ್ ಎಂಬ ಬರಹಗಾರ! ರಾಮ ಮಾಂಸ ತಿನ್ನುತ್ತಿದ್ದ, ರಾಮ ಹಾಗೂ ಸೀತೆ ಮದಿರೆ ಸೇವಿಸುತ್ತಿದ್ದರು ಎಂಬಿತ್ಯಾದಿ ಹೇಳಿಕೆಗಳನ್ನು ಇವರು ಯಾವುದೇ ಭಯ ಮತ್ತು ಅಳುಕಿಲ್ಲದೆ ನೀಡುತ್ತಾರೆ ಮತ್ತು ತಿಂಗಳುಗಳ ಕಾಲ ಪ್ರಚಾರದಲ್ಲಿರುತ್ತಾರೆ.
ಪರ ವಿರೋಧಗಳು ನಂತರದ ವಿಚಾರ, ಇವರು ಹೇಳಿಕೆಗಳನ್ನು ನೀಡುವ ವಿಷಯದಲ್ಲಿ ಇವರ ಪಾಂಡಿತ್ಯ ಏನು ಎಂಬುದನ್ನು ಗಮನಿಸದೆ ಮಾಧ್ಯಮಗಳು ಇವರಿಗೆಲ್ಲ ಪ್ರಚಾರವನ್ನು ನೀಡುತ್ತದೆ, ಈ ಹೇಳಿಕೆಯ ಪರ ಮತ್ತು ವಿರೋಧಿಗಳನ್ನು ಕರೆಸಿ ಸುದ್ದಿ ವಾಹಿನಿಗಳು ಗಂಟೆಗಟ್ಟಲೆ ಚರ್ಚೆ ನಡೆಸಿದರೆ, ವಾರ್ತಾ ಪತ್ರಿಕೆಗಳು ಮುಖಪುಟದಲ್ಲಿ ಈ ವಿಚಾರದಲ್ಲಿ ಲೇಖನಗಳನ್ನು ಪ್ರಕಟಿಸುತ್ತವೆ. ಇಲ್ಲಿಗೆ ಇವರು ಉದ್ದೇಶಿಸಿದ ಕಾರ್ಯ ಸಂಪನ್ನ..
ತಮ್ಮನ್ನು ಯಾರೂ ಕೇಳುವುದಿಲ್ಲ, ತಾವು ಜನರ ಗಮನದಿಂದ ಹೊರ ಹೋಗುತ್ತಿದ್ದೇವೆ ಎಂಬುದು ಅರಿವಾದ ತಕ್ಷಣ ಇಂತಹ ವಿವಾದಕ್ಕೆ ಕಿಡಿ ಹಚ್ಚಿ ಪ್ರಚಾರ ಪಡೆಯುವುದೇ ಇವರ ಉದ್ದೇಶ..
ಅಹಂಕಾರಕ್ಕೆ ಉದಾಸೀನ ಮದ್ದು ಎಂಬುದು ಹಿರಿಯರ ಮಾತು. ಇಂತಹಾ ಅಪ್ರಬುದ್ಧ ಮಾತುಗಳಿಗೆ ಅನಗತ್ಯ ಪ್ರಚಾರ ನೀಡುವ ಅಗತ್ಯತೆಯ ಕುರಿತಾಗಿ ಮಾಧ್ಯಮಗಳು ಕೂಡಾ ಆಲೋಚಿಸಬೇಕಲ್ಲವೇ? ಇಂತಹ ಅನಗತ್ಯ ವಿವಾದಗಳನ್ನು ಒಂದೆರಡು ಬಾರಿ ಕಡೆಗಣಿಸಿದ ತಕ್ಷಣ ಅವರ ಉದ್ದೇಶ ಕೈಗೊಂಡುವುದಿಲ್ಲ. ನಿಧಾನವಾಗಿ ಅವರೂ ಅವರ ನಿಲುವುಗಳೂ ಮರೆಯಾಗುತ್ತಾ ಹೋಗುತ್ತವೆ. ಸಾಮಾನ್ಯವಾಗಿ ಹಿಂದೂ ಸಮಾಜದ ವ್ಯಕ್ತಿಗಳು ದಿನಾ ಸಾಯುವವರಿಗೆ ಅಳುವವರ್ಯಾರು ಎಂದು ಇಂತಹಾ ಅಪ್ರಬುದ್ಧ ಮಾತುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ, ಮತ್ತು ಇನ್ನು ಹಲವರು ಕಾನೂನಿನ ಮುಖಾಂತರ ಅವರಿಗೆ ಬುದ್ದಿ ಕಲಿಸುವತ್ತ ಚಿಂತಿಸುತ್ತಾರೆ, ಆದರೆ ನಮ್ಮ ಇತಿಹಾಸ ಅರಿಯದವರು ಅವರ ಮಾತುಗಳಲ್ಲಿ ಸತ್ಯವಿರಬಹುದೇ ಎಂದು ಚಿಂತಿಸುತ್ತಾರೆ..
ನಮ್ಮ ಸಮಾಜ ಎಡವುತ್ತಿರುವುದೇ ಇಲ್ಲಿ. ಯಾವಾಗ ನಮ್ಮ ಇತಿಹಾಸದ ಬಗ್ಗೆ ನಾವು ಸಂಪೂರ್ಣವಾಗಿ ಅರಿಯುತ್ತೆವೆಯೋ ಆಗ ಸಂದೇಹಗಳಿಗೆ ಯಾವುದೇ ಆಸ್ಪದ ಇರುವುದಿಲ್ಲ. ಈ ಪ್ರಚಾರದ ಹಪಾಹಪಿ ಎಂಬ ರೋಗಕ್ಕೆ ಉದಾಸೀನ ತೋರುವುದರ ಮೂಲಕ ಅವರನ್ನು ಮೂಲೆಗುಂಪು ಮಾಡಬಹುದು, ಈ ಕಾರ್ಯದಲ್ಲಿ ಮಾಧ್ಯಮಗಳು ಪ್ರಬುದ್ಧತೆ ತೋರುವುದು ತುಂಬಾ ಅಗತ್ಯವಿದೆ. ಇನ್ನೊಂದು ನಮ್ಮ ಇತಿಹಾಸದ ಕುರಿತಾಗಿ ನಮ್ಮ ಜ್ಞಾನವನ್ನು ವರ್ಧಿಸುವ ಮೂಲಕ ಸಂಶಯಕ್ಕೆ ಯಾವುದೇ ಸ್ಥಳವಿಲ್ಲದಂತೆ ಮಾಡುವುದು. ಮಾತ್ರವಲ್ಲದೆ ಅವರ ಮಾತುಗಳನ್ನು ಸಿದ್ಧಾಂತ ಮತ್ತು ಜ್ಞಾನದಿಂದ ಒಂದು ಬಾರಿ ಮಣಿಸಿದಲ್ಲಿ ಅವರು ಬಹಳ ಬೇಗ ಹಿಂತಿರುಗಿ ಬರಲಾರರು.
ಪ್ರಚಾರ ಪ್ರಿಯರ ಅಗ್ಗದ ಪ್ರಚಾರದ ಹಂಬಲಕ್ಕೆ ನಾವು ಏಣಿ ಆಗದಂತೆ ಜಾಗ್ರತೆ ವಹಿಸಬಹುದಲ್ಲವೇ? ಅವರ ಹೆಸರನ್ನು ಬಳಸಿದಷ್ಟೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿರುತ್ತಾರೆ. ಅವರ ಉದ್ದೇಶವೂ ಅಷ್ಟೇ.. ಅಷ್ಟಕ್ಕೂ ನಾವೇಕೆ ಅವರ ಪ್ರಚಾರದ ದಾಹಕ್ಕೆ, ದಾಹ ಶಮನದ ನೀರಾಗಬೇಕು?? ಅಲ್ಲವೇ??
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.