ಹೊನ್ನಾವರ: ಯಕ್ಷಗಾನದ ಪ್ರಸಿದ್ಧ ಕಲಾವಿದ, ಮಣ್ಣಿನ ವಿಗ್ರಹ ತಯಾರಕರಾಗಿಯೂ ಪ್ರಸಿದ್ಧಿ ಪಡೆದಿದ್ದ 67 ವರ್ಷದ ಹಡಿನಬಾಳ ಶ್ರೀಪಾದ ಹೆಗಡೆ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ಅಪಘಾತವೊಂದರಲ್ಲಿ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಯುತರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶ್ರೀಯುತರು ಮೃತಪಟ್ಟಿದ್ದಾರೆ.
ಬಡ ಕುಟುಂಬದಿಂದ ಬಂದ ಶ್ರೀಪಾದ ಅವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಆ ಬಳಿಕ ಹೊಲಿಗೆ, ಛತ್ರಿ ಹೊಲೆಯುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಅದಾದ ಬಳಿಕ ಯಕ್ಷಗಾನ ಕಲಿತು ಗುಂಡಬಾಳ ಮೇಳದಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿದ್ದರು. ನಂತರದ ದಿನಗಳಲ್ಲಿ ದಕ್ಷಿಣ, ಉತ್ತರ ಕನ್ನಡದ ಅನೇಕ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು. ಜೊತೆಗೆ ಯಕ್ಷ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಮನೆಮಾತಾಗಿದ್ದವರು. ಕೆರೆಮನೆ ಮೇಹದ ಖಾಯಂ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು ದೊರೆತಿದ್ದವು. ಸರಳ ಜೀವನ ನಡೆಸುತ್ತಿದ್ದ ಇವರು ತಮ್ಮ ಜೀವನದ ಕೊನೆಯ ವರೆಗೂ ಯಕ್ಷಮಾತೆಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದವರು. ಮೃತರು ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಸೇರಿದಂತೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.