ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ.
ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ತನಗೆ ಇಲ್ಲಿನ ಜನ ತೋರುವ ಆತ್ಮೀಯತೆ, ಪ್ರೀತಿ ಬಗ್ಗೆ ದೀಕ್ಷಿತರು ಒಮ್ಮೆ ಸಿದ್ದೇಶ್ವರ ಸ್ವಾಮೀಜಿಯವರಲ್ಲಿ ಹೇಳಿಕೊಂಡಿದ್ದರಂತೆ. ಆಗ ಸಿದ್ದೇಶ್ವರರು, ‘ನೀನು ಹಿಂದಿನ ಜನ್ಮದಲ್ಲಿ ಯಾವುದೋ ಮಹತ್ತರ ಕೆಲಸವನ್ನು ಶುರು ಮಾಡಿದ್ದೆ. ಅದು ಅಪೂರ್ಣವಾಗಿತ್ತು ಅಂತ ಕಾಣುತ್ತೆ. ಅದಕ್ಕೇ ಈ ಜನ್ಮದಲ್ಲಿ ಅದು ಈ ರೀತಿ ಮುಂದುವರಿದಿದೆ…’ ಎಂದು ಹೇಳಿದ್ದರಂತೆ. ಹೀಗೆ ಕರುನಾಡಿನ ನಂಟು ದೀಕ್ಷಿತರಿಗಿದ್ದದ್ದು.
ಮಧ್ಯಪ್ರದೇಶದ ಭೂಪಾಲ್ನಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಮೀಥೈಲ್ ಐಸೋಸಯನೈಡ್ ರಾಸಾಯನಿಕ ಸೋರಿಕೆಯಾಗಿ ನೂರಾರ ಜನ ಪ್ರಾಣತೆತ್ತಿದ್ದರು. ಈ ದುರಂತದಿಂದ ಸಾವಿರಾರು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಂದಿಗೂ ಲಕ್ಷಾಂತರ ಜನ ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ವರುಷಗಟ್ಟಲೆ ಈ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದ ರಾಜೀವ್ ಸಿಟ್ಟಿಗೆದ್ದು ಇವರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲೆಂದೇ 1992 ರಲ್ಲಿ ಡಾ. ಬನ್ವಾರಿಲಾಲ್ ಶರ್ಮಾ ಮತ್ತು ಪ್ರೊ. ಧರ್ಮಪಾಲ್ ಮಾರ್ಗದರ್ಶನದಲ್ಲಿ ಆಜಾದಿ ಬಚಾವೋ ಆಂದೋಲನ ಪ್ರಾರಂಭಿಸಿದರು. ಈ ಆಂದೋಲನದ ಮೂಲಕ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಭಾರತದಿಂದ ಒದ್ದೋಡಿಸಲಾಯಿತು.
ರಾಜೀವ್ ದೀಕ್ಷಿತರ ಈ ಆಂದೋಲನದ ಪರಿಣಾಮವಾಗಿ ಮಾರಿಷಸ್ ಮೂಲಕ ಭಾರತಕ್ಕೆ ಸರಕು ಸಾಗಿಸಿ ಸಾವಿರಾರು ಕೋಟಿ ತೆರಿಗೆ ವಂಚಿಸುತ್ತಿದ್ದ ಅಮೆರಿಕನ್ ಕಂಪನಿಗಳಿಂದ ತೆರಿಗೆ ಹಣವನ್ನು ಜಪ್ತಿ ಮಾಡಲಾಯಿತು. ಗುಜರಾತಿನ ಬಂದರಿನಲ್ಲಿ ಉಪ್ಪು ತಯಾರಿಸುವ ನೆಪದಲ್ಲಿ ಬಂದು, ಪಕ್ಕದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಹುನ್ನಾರ ನಡೆಸಿದ್ದ ಕಾರ್ಗಿಲ್ ಎಂಬ ಕಂಪನಿಯನ್ನು ಮುಚ್ಚಿಸಲಾಯಿತು.
ಅಮೆರಿಕದ ಇನ್ನೊಂದು ಕಂಪನಿ ವಿಲ್ಸನ್ ಕೆಡಿಯಾ ರೈತರಿಂದ ಸಾವಿರಾರು ಎಕರೆ ಬೆಲೆಬಾಳುವ ಕೃಷಿಭೂಮಿ ಕಿತ್ತುಕೊಂಡು, ಹೆಂಡದ ಕಾರ್ಖಾನೆ ಸ್ಥಾಪಿಸಲು ನಡೆಸಿದ್ದ ಹುನ್ನಾರವನ್ನು ಹತ್ತಿಕ್ಕಲಾಯಿತು.
ಈ ಆಂದೋಲನ ಪ್ರಾರಂಭವಾಗುವ ವೇಳೆಗೆ ನರಸಿಂಹರಾವ್ ಸರ್ಕಾರ ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಿತು. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ನೆಪದಲ್ಲಿ ಗ್ಯಾಟ್, ಡಂಕಲ್, ಡಬ್ಲ್ಯುಟಿಓ ಒಪ್ಪಂದಗಳ ಕಪಿಮುಷ್ಠಿಗೆ ಸಿಲುಕಿ ಭಾರತವೂ ನರಳುವಂತಾಯಿತು.
ಬಹುರಾಷ್ಟ್ರೀಯ ಬೀಜ ಕಂಪನಿಗಳು ನಮ್ಮ ರೈತರನ್ನು ಮೋಸ ಮಾಡಲು ಸಾಲುಗಟ್ಟಿ ನಿಂತವು. ಆ ಕಾಲಕ್ಕೇ 4500ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದವು. ಇದರಿಂದ ಭಾರತದ ಗುಡಿ ಕೈಗಾರಿಕೆ ಹಾಗೂ ಸಣ್ಣ ಪುಟ್ಟ ಕೈಗಾರಿಕೆಗಳು ಹೇಳ ಹೆಸರಿಲ್ಲದಂತೆ ಛಿದ್ರವಾದವು. ಇವುಗಳನ್ನೇ ನಂಬಿದ್ದ ಲಕ್ಷಾಂತರ ಜನರು ತಮ್ಮ ಕೌಶಲಗಳಿಗೆ ಬೆಲೆಯಿಲ್ಲದೆ ಪರದಾಡುವಂತಾಯಿತು. ಡೆನ್ಮಾರ್ಕಿನ ಹಂದಿಗಳ ಸಗಣಿಯನ್ನೂ ಅಮದು ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯದವರು ಬೌದ್ಧಿಕ ದೀವಾಳಿ ಎದ್ದಿದ್ದರು. ಸ್ವತಂತ್ರ ಭಾರತದ ಈ ಹೀನಾಯ ಸ್ಥಿತಿಯನ್ನು ಸಮಸ್ತ ಭಾರತೀಯರ ಮುಂದೆ ಕಂತೆ ಕಂತೆ ದಾಖಲೆಗಳ ಮೂಲಕ ತೆರೆದಿಟ್ಟವರೇ ರಾಜೀವ್ ದೀಕ್ಷಿತ್!
ಕೇವಲ ವ್ಯವಸ್ಥೆ ಹಾಗೂ ಸರ್ಕಾರಗಳನ್ನೇ ದೂಷಿಸಿ ಪ್ರಯೋಜನವಿಲ್ಲ ಎಂದು ಅರಿತ ರಾಜೀವ್, ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಕುಗ್ಗಿಸಬೇಕೆಂದರೆ ಸ್ವದೇಶೀ ಜೀವನ ಶೈಲಿಯ ಪುನರ್ ಪ್ರತಿಷ್ಠಾಪನೆ ಆಗಬೇಕು ಎಂಬುದನ್ನು ಮನಗಂಡರು. ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕರು ಈ ಹಿಂದೆ ಸ್ವದೇಶೀ ಚಿಂತನೆಯ ವಿಶ್ವರೂಪವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದರು.
ಅದನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲಿ ಮಲಗಿದ ಭಾರತವನ್ನು ಮತ್ತೆ ಸ್ವದೇಶೀ ಆಂದೋಲನದ ಮೂಲಕ ಎಚ್ಚರಿಸುವ ಪ್ರಯತ್ನ ಮಾಡಿದರು. ‘ಸ್ವದೇಶಿ ಎನ್ನುವುದು ಕೇವಲ ಕಲ್ಪನೆಯಲ್ಲ, ಅದು ಪ್ರಕೃತಿ ದತ್ತವಾದದ್ದು. ಅದೊಂದು ಜೀವನ ಶೈಲಿ, ಸ್ವದೇಶಿ ಇಲ್ಲದೆ ಭಾರತೀಯತೆಯೇ ಇಲ್ಲ, ಸ್ವಾತಂತ್ರದ ನಿಜವಾದ ಅರ್ಥ ಸಿಗುವುದೇ ಸ್ವದೇಶಿ ಚಿಂತನೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದಿಂದ. ನಮ್ಮ ಸ್ವದೇಶೀ ಪರಿಸರದಲ್ಲಿ ಉತ್ಪಾದನೆಯಾಗುವ ವಸ್ತುಗಳಲ್ಲಿ ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯ ಸೊಗಡಿದೆ. ಹಾಗಾಗಿ ಸ್ವದೇಶಿ ವಸ್ತುಗಳನ್ನೇ ಉತ್ಪಾದಿಸಬೇಕು ಮತ್ತು ದಿನಬಳಕೆಯಲ್ಲಿ ಅವನ್ನೇ ಉಪಯೋಗಿಸಬೇಕು, ಬಹುರಾಷ್ಟ್ರೀಯ ಉತ್ಪನ್ನಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕು’ ಎಂದು ರಾಜೀವ್ ದೇಶಾದ್ಯಂತ ತಮ್ಮ ಆಂದೋಲನದ ಮೂಲಕ ಕರೆ ನೀಡಿದರು.
ಹಾಗೆಂದು ರಾಜೀವ್ ದೀಕ್ಷಿತ್ ಆಧುನಿಕತೆಯ, ಕೈಗಾರಿಕೀಕರಣದ ಅಥವಾ ಅಭಿವೃದ್ಧಿಯ ವಿರೋಧಿಯಾಗಿದ್ದರು ಎಂದಲ್ಲ. ಅವರು ನಮ್ಮ ಪಾರಂಪರಿಕ ದೇಶೀ ಜ್ಞಾನ ಹಾಗೂ ಕೃಷಿ ಜ್ಞಾನದ ಸಂರಕ್ಷಣೆಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರು.
ಸಾಬೂನು, ಉಪ್ಪಿನಕಾಯಿ, ಟೊಮೊಟೋ ಗೊಜ್ಜು, ಗೊಜ್ಜವಲಕ್ಕಿ, ಹಲ್ಲುಜ್ಜುವ ಪೇಸ್ಟ್, ಹಾಲು, ಸಣ್ಣ ಪುಟ್ಟ ಔಷಧಗಳು, ಚಾಕಲೇಟ್, ಬಿಸ್ಕತ್ತು, ಚಟ್ನಿ, ಕಾಫಿ, ಜಾಮು, ಆಲೂಗಡ್ಡೆ ಚಿಪ್ಸ, ಆಟದ ಸಾಮಾನುಗಳು. ಸಣ್ಣ ಪುಟ್ಟ ಒಳ ಉಡುಪುಗಳು, ಇವನ್ನು ತಯಾರಿಸಲೂ ನಮಗೆ ಯೋಗ್ಯತೆ ಇಲ್ಲವಾ? ನಮ್ಮದೇ ಬಂಡವಾಳದಿಂದ ಯಾವುದೇ ತಾಂತ್ರಿಕತೆ ಇಲ್ಲದೆ ನಮ್ಮದೇ ಸಂಪನ್ಮೂಲ ಬಳಸಿ ಫ್ರಾಂಚೈಸಿ ಅಥವಾ ಉಪಗುತ್ತಿಗೆಯ ಆಧಾರದ ಮೇಲೆ ಇಲ್ಲಿ ಬಂದು ದೋಚುವ ಬಹುರಾಷ್ಟ್ರೀಯ ಕಂಪನಿಗಳಿಗೆ ನಾವೇಕೆ ಮಣೆ ಹಾಕಬೇಕು ಎಂದು ಅವರು ಪ್ರಶ್ನಿಸುತ್ತಿದ್ದರು.
ರಾಜೀವ್ ದೀಕ್ಷಿತ್ ಗತಿಸಿ ಇಂದಿಗೆ 10 ವರ್ಷಗಳಾದವು. ವಿಪರ್ಯಾಸವೆಂದರೆ ರಾಜೀವ್ ತಾವು ಹುಟ್ಟಿದ ದಿನವೇ ( 30-11-1967) ಛತ್ತೀಸ್ಘಡದ ಬಿಲಾಯ್ನಲ್ಲಿ ತಮ್ಮ 43 ನೇ ವಯಸ್ಸಿನಲ್ಲಿ ವಿಧಿವಶರಾದರು(30-11-2010). ಬಹು ರಾಷ್ಟ್ರೀಯ ಕಂಪನಿಗಳ ಹಾಗೂ ಅಂದಿನ ಯುಪಿಎ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಜೀವ್ ದೀಕ್ಷಿತ್ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆ ಸತ್ಯಗಳು ಅವರೊಂದಿಗೇ ಇತಿಹಾಸ ಸೇರಿಬಿಟ್ಟವು.
ನಾವೂ ಸಹ ಅವರೊಂದಿಗೆ ಸ್ವದೇಶಿ ಸಂಸ್ಕೃತಿ ಮತ್ತು ಚಿಂತನೆಗೆ ತಿಲಾಂಜಲಿ ಇಟ್ಟಿದ್ದೇವೆ. ಎರಡು ವರ್ಷದ ಹಿಂದೆ ಚೀನಾದೊಂದಿಗಿನ ಡೊಕ್ಲಾಮ್ ಸಂಘರ್ಷ, ಗಲ್ವಾನ ಸಂಘರ್ಷದ ನಂತರವೂ ನಾವು ನಿರಾಳವಾಗಿ, ಯಾವುದೇ ಮುಜಗರ, ನಾಚಿಕೆ ಇಲ್ಲದೆ ಚೀನಾ ವಸ್ತುಗಳನ್ನೇ ಕೊಳ್ಳುವುದನ್ನು ಮುಂದುವರೆಸಿದ್ದೇವೆ. ಚಪ್ಪಲಿಯಿಂದ ಹಿಡಿದು, ಧರಿಸುವ ಬಟ್ಟೆ, ಕೈ ಗಡಿಯಾರ, ಮೊಬೈಲ್, ಕಣ್ಣಿಗೆ ಹಾಕುವ ಕನ್ನಡದವರೆಗೆ ಎಲ್ಲಾ ನಮಗೆ ವಿದೇಶಿ ವಸ್ತುಗಳೇ ಬೇಕು. ನಾವು ತಿನ್ನಲು ವಿದೇಶಿ ಪಿಜ್ಜಾ, ಬರ್ಗರ್ರೆ ಬೇಕು, ಕುಡಿಯಲು ಕೋಕೋಕೋಲಾ ಬೇಕು. ಮನರಂಜನೆಗೆ ವಿ-ಚಾನಲ್, ಎಂ-ಚಾನಲ್ಗಳೇ ಬೇಕು. ಮೋಜು ಮಸ್ತಿಗೆ ಪಾಶ್ಚಾತ್ಯ ರ್ಯಾಪ್, ರಾಕ್ ಸಂಗೀತ ಬೇಕು. ರಾಜೀವರಂತಹ ದೇಶಭಕ್ತರ ಸೊಲ್ಲೂ ಎತ್ತದ ಮೆಕಾಲೆ ಸಿದ್ಧಾಂತಗಳ ಪ್ರಣೀತ ಶಿಕ್ಷಣವೇ ಬೇಕು, ಎಂಎನ್ಸಿಗಳಲ್ಲೇ ಉದ್ಯೋಗ ಬೇಕು, ಅವಕಾಶ ಸಿಕ್ಕಿದರೆ ಹೊರದೇಶಕ್ಕೆ ಹಾರಬೇಕು.
ಇದು ಸಾಲದೆಂಬಂತೆ ನಮ್ಮ ಪರಂಪರೆಯನ್ನೇ ಜರಿಯುವ ಪರಕೀಯ ಪ್ರೇತಗಳನ್ನೂ ಕೆಲವರು ಆಹ್ವಾನಿಸಿಕೊಳ್ಳುತ್ತಾರೆ. ಇದು ನಮ್ಮ ಮನಸ್ಥಿತಿ. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಎಂಬ ಸ್ವದೇಶಿ ಮಂತ್ರಗಳನ್ನು ಜಪಿಸುತ್ತ ದೀಕ್ಷಿತ್ ಅವರ ಹಲವು ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡೋಣ.
ಕಂಪ್ಯೂಟರ್ ಇಂಜನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತಮ್ಮ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ.
ಭಾರತ ಎಂದೆಂದಿಗೂ ಎದೆಯುಬ್ಬಿಸಿ, ತಲೆ ಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್ ದೀಕ್ಷಿತ್. ಅವರು ಪ್ರಾರಂಭಿಸಿದ ಆಂದೋಲನವೇ ‘ಆಜಾದಿ ಬಚಾವೋ’ ಆಂದೋಲನ.
ಅವರ ಹೆಸರು ಕೇಳಿದರೇ ಬಹುರಾಷ್ಟ್ರೀಯ ಕಂಪನಿಗಳ ಎದೆ ಬಡಿತ ಒಂದೇ ಸಮನೇ ಏರುತ್ತಾ ಹೋಗುತ್ತಿತ್ತು. ಸ್ವದೇಶಿ ಚಿಂತನೆಯ ಹುಡುಗರಿಗೆ ನೂರಾನೆ ಬಲ
ಬಂದಂತಾಗುತ್ತಿತ್ತು. ಆದರೆ ಅವರ ಸಾವು ಮಾತ್ರ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ!
ಅವರು ದೂರದ ಛತ್ತೀಸ್ಗಢದಲ್ಲಿ ನಿಧನರಾಗಿ ಒಂದು ರಾತ್ರಿ ಕಳೆದ ಮೇಲೆ ಅವರ ಸಾವಿನ ಸುದ್ದಿ ಸದ್ದಿಲ್ಲದೇ ಬಂದು ಸಂದಿಯಲ್ಲೆಲ್ಲೋ ಕಳೆದೇ ಹೋಯಿತು. ಸದಾ ಬ್ರೇಕಿಂಗ್ ನ್ಯೂಸ್ಗಾಗಿ ತಡಕಾಡುತ್ತಿರುವ ನಮ್ಮ ಮೀಡಿಯಾಗಳ ಪಾಲಿಗೆ ಅವರದು ಥ್ಯಾಂಕ್ ಲೆಸ್ ಜಾಬ್ ಅಷ್ಟೇ ಅಲ್ಲ, ಥ್ಯಾಂಕ್ಲೆಸ್ ಲೈಫ್ ಅನ್ನಿಸಿರಬೇಕು! ಅದಕ್ಕೇ ರಾಜೀವ್ ದೀಕ್ಷಿತ್ ಎಂಬ ಪ್ರಖರ ಚಿಂತಕ, ಸ್ವದೇಶಿ ನೇತಾರ, ಅಪ್ರತಿಮ ಹೋರಾಟಗಾರನ ಸಾವು ಬಹುತೇಕ ಭಾರತೀಯರಿಗೆ ತಕ್ಷಣಕ್ಕೆ ಗೊತ್ತಾಗಲೇ ಇಲ್ಲ.
‘ಶರಣರ ಹಿರಿಮೆಯನ್ನು ಮರಣದಲ್ಲಿ ನೋಡು’ ಅನ್ನೋದು ಸುಮ್ಮನೇ ಮಾತಲ್ಲ! ರಾಜೀವ್ ದೀಕ್ಷಿತ್ ಬರೀ ಮಾತಿನಲ್ಲಿ, ಬದುಕಿನಲ್ಲಿ ಮಾತ್ರ ಸ್ವದೇಶಿ ಚಿಂತಕನಾಗಿರಲಿಲ್ಲ. ಸಾವಿನ ಮನೆಗೂ ಅದನ್ನು ಜತೆಯಲ್ಲೇ ಕೊಂಡೊಯ್ದಿದ್ದರು!
ಛತ್ತೀಸ್ಗಢದಲ್ಲಿ ಬಾಬಾ ರಾಮ್ದೇವ್ ಜತೆ ಸಭೆಯಲ್ಲಿದ್ದಾಗಲೇ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಜೀವಕ್ಕೇ ಅಪಾಯ ಇದೇ ಅನ್ನೋದು ತಕ್ಷಣ ಗೊತ್ತಾಗಿದೆ. ಆದರೆ, ವೈದ್ಯರು ಎಮರ್ಜೆನ್ಸಿ ಇಂಜೆಕ್ಷನ್ ಕೊಡಲು ಬಂದಾಗ ಮಾತ್ರ ದೀಕ್ಷಿತರು ಅದನ್ನು ತೆಗೆದುಕೊಳ್ಳಲು ಬಿಲ್ಕುಲ್ ಒಪ್ಪಲಿಲ್ಲ! ಇಂಗ್ಲಿಷ್ ಔಷಧಿ ನನಗೆ ಬೇಡ ಎಂಬುದು ಅವರ ಅಚಲ ನಿಲುವು. ರಾಜೀವ್ ದೀಕ್ಷಿತರಿಗೆ ಹೋಮಿಯೋಪತಿ ತಿಳಿದಿತ್ತು. ಎಲ್ಲ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ಹೋಮಿಯೋಪತಿಯನ್ನೇ ಆವಲಂಬಿಸುತ್ತಿದ್ದರು ಕೂಡ.
ಕೊನೆಗೆ ‘ನೋಡೂ ಈ ದೇಹದ ಉಸ್ತುವಾರಿಯನ್ನು ನೀನು ನನಗೆ ವಹಿಸಿದ್ದೀಯಾ. ನಾನು ಹೇಳಿದ ಮಾತನ್ನು ಕೇಳಲೇ ಬೇಕು’ ಎಂದು ಗುರು ರಾಮ್ದೇವ್ ರು ಖಡಾಖಂಡಿತವಾಗಿ ಹೇಳಿದ ಮೇಲೆಯೇ ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಒಪ್ಪಿದ್ದು. ಬಿಡಿ, ಈಗ ಅವರು ತಾವು ನಂಬಿದ ತತ್ವದ ಜತೆ, ನೆಚ್ಚಿಕೊಂಡಿದ್ದ ನೈತಿಕ ಮೌಲ್ಯದ ಜತೆ ರಾಜಿ ಮಾಡಿಕೊಳ್ಳುವ ಅಗತ್ಯವೇ ಇಲ್ಲ!
ರಾಜೀವ್ ದೀಕ್ಷಿತ್ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಸ್ವದೇಶಿ ಬಚಾವೋ ಆಂದೋಲನ. ದೇಸೀ ಚಿಂತನೆಗೆ, ಜೀವನ ಶೈಲಿಗೆ ಆಂದೋಲನ ರೂಪ ಕೊಟ್ಟವರು ದೀಕ್ಷಿತರು.
ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅವು ಹೊತ್ತು ತರುತ್ತಿರುವ ವಿದೇಶಿ ಜೀವನ ಶೈಲಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಲಕ್ಷಾಂತರ ತರುಣರ ಪಡೆಯನ್ನೇ ಕಟ್ಟಿದವರು ಅವರು. ಸ್ವದೇಶಿ ಅಂದ ತಕ್ಷಣ ಈ ದೇಶದಲ್ಲೇ ತಯಾರಾದ ವಸ್ತುಗಳನ್ನು ಬಳಸುವುದು ಎನ್ನುವ ಸೀಮಿತ ಕಲ್ಪನೆ ಬಹಳಷ್ಟು ಮಂದಿಗಿದೆ.
ಸ್ವದೇಶಿ ಅಂದರೆ ಅದಷ್ಟೇ ಅಲ್ಲ, ಅದು ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟವರು, ಅಂತೆಯೇ ಬದುಕಿ ತೋರಿಸಿದವರು ದೀಕ್ಷಿತರು. ಸ್ವದೇಶಿ ಚಿಂತನೆಯ ಮೂಲ ತಳಹದಿ ಸರಳತೆ. ರಾಜೀವರಲ್ಲಿ ಎದ್ದು ಕಾಣುತ್ತಿದ್ದ ಗುಣವೂ ಅದೇ. ಅಹಂಕಾರ, ಆಡಂಬರ ಎಂಬುದು ಅವರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ ಎನ್ನಿಸಿಕೊಂಡಿದ್ದರೂ, ಬಾಬಾ ರಾಮದೇವರಾದಿಯಾಗಿ ಬಹುದೊಡ್ಡ ವ್ಯಕ್ತಿಗಳ ಆತ್ಮೀಯ ಒಡನಾಟವಿದ್ದರೂ ರಾಜೀವ್ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಓಡಾಡಿಕೊಂಡಿರುತ್ತಿದ್ದರು.
ಎಲ್ಲ ಕಾರ್ಯಕರ್ತರ ಜತೆ ”ಸ್ವದೇಶಿ ರಥ” ಎಂಬ ಮಾಮೂಲಿ ವ್ಯಾನ್ ನಲ್ಲೇ ಓಡಾಡುತ್ತಿದ್ದರು. ಕೆಲವೊಮ್ಮೆ ಕಾರ್ಯಕರ್ತರ ಜತೆ ಎಂ-80ಯಲ್ಲೇ ಊರೂರು ಸುತ್ತಾಡಿದ ಉದಾಹರಣೆಯೂ ಇದೆ. ರಾಜೀವರ ಆತ್ಮೀಯ ಒಡನಾಡಿಗಳ ಪೈಕಿ ಒಬ್ಬರಾದ ಮೈಸೂರಿನ ಸುಧೀಂದ್ರ ಅವರು ಹೇಳಿದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಲೇ ಬೇಕು.
ಅದು 2001 ರ ಡಿಸೆಂಬರ್, ಅವತ್ತು ಚನ್ನರಾಯಪಟ್ಟಣದಲ್ಲಿ ಸಂಜೆ 6 ಕ್ಕೆ ರಾಜೀವ್ ದೀಕ್ಷಿತರ ಕಾರ್ಯಕ್ರಮ ನಿಗದಿಯಾಗಿತ್ತು. ಅಲ್ಲಿ ದೀಕ್ಷಿತರನ್ನು ಕಂಡು ಅವರಿಗೆ ಸ್ವದೇಶಿ ಆಂದೋಲನಕ್ಕೆ ಸಂಬಂಧಿಸಿದ ಕೆಲವು ಪೋಸ್ಟರ್ಗ್ಗಳ ಸ್ಯಾಂಪಲ್ಗಳನ್ನು ತೋರಿಸುವ ಉದ್ದೇಶದಿಂದ ಸುಧೀಂದ್ರ ತಮ್ಮ ಕೆಲವು ಗೆಳೆಯರ ಜತೆ ಮೈಸೂರಿನಿಂದ ಅಲ್ಲಿಗೆ ಬಂದಿದ್ದರು. ಆದರೆ ಗಂಟೆ 8 ಮೀರಿದರೂ ರಾಜೀವರು ಬರಲೇ ಇಲ್ಲ. ಅವರ ಭಾಷಣ ಕೇಳಲು ಬಂದಿದ್ದ ಜನ ನಿಧಾನವಾಗಿ ಕರಗತೊಡಗಿದರು. ಕೊನೆಗೆ 9 ಗಂಟೆ ಹೊತ್ತಿಗೆ ರಾಜೀವರ ವಾಹನ ಅಲ್ಲಿಗೆ ಬಂತು. ಅನಿವಾರ್ಯ ಕಾರಣದಿಂದ ಅವರು ಅಲ್ಲಿಗೆ ಬರುವುದು ತಡವಾಗಿ ಹೋಗಿತ್ತು. ಸುಧೀಂದ್ರ ಸೇರಿದಂತೆ 30-35 ಜನ ಮಾತ್ರ ಅಲ್ಲಿ ಉಳಿದಿದ್ದರು. ಆದರೆ ಆ ಹುಡುಗರ ಉತ್ಸಾಹ, ಪ್ರೀತಿ ಕಂಡ ದೀಕ್ಷಿತರು, ಅಲ್ಲೇ ರಸ್ತೆ ಬದಿಯಲ್ಲೇ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವದೇಶಿ ಚಿಂತನೆಯ ಬಗ್ಗೆ ಮನೋಜ್ಞವಾಗಿ ಮಾತನಾಡಿದರು. 3-4 ಸಾವಿರ ಜನರಿದ್ದ ಸಭೆಯಲ್ಲಿ ಮಾತನಾಡುವಷ್ಟೇ ಉತ್ಸಾಹದಿಂದ, ಪ್ರಖರತೆಯಿಂದ ಮಾತನಾಡಿದರು. ಅಷ್ಟೇ ಅಲ್ಲ, ಕೊನೆಗೆ ಎಲ್ಲ ಹುಡುಗರನ್ನೂ ತಮ್ಮೊಂದಿಗೆ ಹಾಸನಕ್ಕೆ ಕರೆದೊಯ್ದು, ಅಲ್ಲಿ ತಮಗೆ ತಂಗಲು ವ್ಯವಸ್ಥೆಯಾಗಿದ್ದ ಮನೆಯಲ್ಲೇ ಉಳಿಸಿಕೊಂಡರು. ಎಲ್ಲರಿಗೂ ಸೂಕ್ತ ವ್ಯವಸ್ಥೆಯಾದ ನಂತರ, ಕಡಪ ಕಲ್ಲಿನ ಮೇಲೆ ಚಾಪೆಯೊಂದನ್ನು ಹಾಸಿ ಮಲಗಿಕೊಂಡರು!
ಅವರು ಇದ್ದಿದ್ದೇ ಹಾಗೆ. ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುತ್ತಿದ್ದರು. ಹಾಲಿನ ಕೆನೆಯನ್ನು ಶೇವಿಂಗ್ ಕ್ರೀಮ್ನಂತೆ ಬಳಸುತ್ತಿದ್ದರು. ಸದಾ ಖಾದಿ ಬಟ್ಟೆ ತೊಡುತ್ತಿದ್ದರು. ಎಲ್ಲರನ್ನೂ ಕೋಕ್-ಪೆಪ್ಸಿ ಬದಲು ತನ್ನಂತೆ ಎಳನೀರು ಮಜ್ಜಿಗೆ ಕುಡಿಯುಂವತೆ ಪ್ರೇರೇಪಿಸುತ್ತಿದ್ದರು. ಆದರೆ ಅವರು ಯಾವತ್ತಿಗೂ ಓಬೀರಾಯನ ಕಾಲದವರಂತೆ ಕಾಣುತ್ತಲೇ ಇರಲಿಲ್ಲ. ವೇಷ-ಭೂಷಣ, ನಡೆ-ನುಡಿ ಎಲ್ಲವೂ ಸರಳ ಮತ್ತು ಸುಂದರ.
ದೇಶೀಯತೆಯ ಸರಳ ಸೂತ್ರ ದೀಕ್ಷಿತರು:
ಕೇವಲ ಊರೂರು ಸುತ್ತುತ್ತ, ಸ್ವದೇಶಿ ಆಂದೋಲನ ಕುರಿತು ಭಾಷಣ ಮಾಡುತ್ತ ಸಾಗಲಿಲ್ಲ. ಬದಲಿಗೆ ತಾವು ಹೋದ ಕಡೆಯಲ್ಲೆಲ್ಲ ಹುಡುಗರ ಪಡೆಯನ್ನು ಕಟ್ಟಿದರು, ಹಳ್ಳಿ-ಹಳ್ಳಿ, ಮನೆಮನೆಗಳಲ್ಲಿ ಸ್ವದೇಶಿ ಚಿಂತನೆಯ ಕಿಡಿ ಹೊತ್ತಿಸಿದರು. ಅವರು ಎಂದಿಗೂ ಸುಮ್ಮನೆ ಎಂಎನ್ಸಿಗಳನ್ನು ಹಳಿಯುತ್ತ, ವಿದೇಶಿ ಸಂಸ್ಕೃತಿಯನ್ನು ಜರಿಯುತ್ತ ಸಾಗಲಿಲ್ಲ. ಬದಲಿಗೆ ಸ್ವದೇಶಿ ಜೀವನ ಶೈಲಿ ಹೇಗಿರಬೇಕೆಂದು ಹೇಳಿಕೊಟ್ಟರು.
ಸ್ವದೇಶಿ ವಸ್ತುಗಳನ್ನೇ ಬಳಸಿ, ಖಾದಿ ಬಟ್ಟೆಗಳನ್ನೇ ತೊಡಿ, ಮಾತೃ ಭಾಷೆಯಲ್ಲೇ ಮಾತನಾಡಿ, ದಿನದಲ್ಲಿ ಕನಿಷ್ಠ ಕೆಲವು ನಿಮಿಷಗಳನ್ನಾದರೂ ರಾಷ್ಟ್ರೀಯ ವಿಚಾರ ಧಾರೆಯ ಪ್ರಚಾರಕ್ಕಾಗಿ ಮೀಸಲಿಡಿ.. ಎಂಬಂತಹ ಎಲ್ಲರೂ ಅನುಸರಿಸಬಹುದಾದ, ಸರಳವಾಗಿ ಪಾಲಿಸಬಹುದಾದ ಸತ್ಯಗಳನ್ನು ಹೇಳಿಕೊಡುತ್ತಾ ಹೋದರು.
ಗ್ರಾಮ ಸ್ವರಾಜ್ಯ ಅವರ ಬಹುದೊಡ್ಡ ಕನಸು. ಸದೃಢ ಗ್ರಾಮ, ಬಲಿಷ್ಠ ಭಾರತ ಎಂಬುದು ಅವರ ಸರಳ ತತ್ವ ಹೀಗಾಗಿ ಸದಾಕಾಲ ಅವರು ವ್ಯವಸಾಯದ ಜಪ ಮಾಡುತ್ತಿದ್ದರು. ಸಾವಯವ ಕೃಷಿಯಲ್ಲಿ ಅವರೊಬ್ಬ ಪಕ್ಕಾ ಪರಿಣಿತರಾಗಿದ್ದರು. ಹುಟ್ಟೂರಿನಲ್ಲಿ ಸ್ವತಃ ವ್ಯವಸಾಯ ಮಾಡುತ್ತಿದ್ದರು. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿ ಮೂಲಕ ವರ್ಷಕ್ಕೆ 70-80 ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿಗೆ ಪೂರಕವಾದ ಗೋಸಂಪತ್ತಿನ ರಕ್ಷಣೆಯ ಪ್ರಾಮುಖ್ಯವನ್ನೂ ಅವರು ಒತ್ತಿ ಹೇಳುತ್ತಿದ್ದರು. ಅಂತೆಯೇ ಗೋರಕ್ಷಾ ಆಂದೋಲನದಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ‘ಸ್ವದೇಶಿ ಅಪನಾವೋ; ದೇಶ್ ಬಚಾವೋ’: 2005 ರ ನಂತರ ರಾಜೀವರ ಕಾರ್ಯಶೈಲಿ ಮತ್ತು ಹೋರಾಟದ ಸ್ವರೂಪ ತುಸು ಬೇರೆಯದೇ ತಿರುವು ಪಡೆದುಕೊಂಡಿತು.
ಗ್ಯಾಟ್ ಸಂಪೂರ್ಣ ಜಾರಿಯಾದ ನಂತರ, ಮೊದಲಿನ ಹಾಗೆ ಆಜಾದಿ ಬಚಾವೋ ಆಂದೋಲನದ ಮೂಲಕ ಹೋರಾಡುವುದು, ವಿದೇಶಿ ಆಕ್ರಮಣವನ್ನು ಎದುರಿಸಿ ನಿಲ್ಲುವುದು ಸ್ವಲ್ಪ ಕಷ್ಟ ಎಂಬ ಅರಿವು ಅವರಿಗಾಗಿತ್ತು.
ಹೀಗಾಗಿ ತಮ್ಮ ಸ್ವದೇಶೀ ಚಿಂತನೆಗೆ ಇನ್ನಷ್ಟು ವಿಸ್ತಾರವಾದ ಸಾಮಾಜಿಕ, ರಾಜಕೀಯ ತಳಹದಿ ನೀಡುವ ಉದ್ದೇಶದಿಂದ ಅವರು ಬಾಬಾ ರಾಮ್ದೇವ್ ಜತೆ ಕೈಜೋಡಿಸಿದರು. ಹಿಂದೂ ಸ್ವರಾಜ್ ಅಭಿಯಾನಕ್ಕೆ ಮುನ್ನುಡಿ ಬರೆದರು. ರಾಜೀವ್ ದೀಕ್ಷಿತರನ್ನು ಒಬ್ಬ ಮಹಾನ್ ನಾಯಕ, ಕ್ರಾಂತಿಕಾರಿ ಎಂದೆಲ್ಲ ನೋಡುವುದರ ಬದಲು ಅವರನ್ನೊಬ್ಬ ಹೋರಾಟಗಾರ, ಚಿಂತಕ, ತಪಸ್ವಿಯಂತೆ ನೋಡಿದರೆ ಹೆಚ್ಚು ಅರ್ಥವಾಗುತ್ತಾರೆ. ”ಇಂಡಿಯಾ”ದಲ್ಲಿ ಭಾರತೀಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಪಟ್ಟ ಪ್ರಯತ್ನಗಳು, ಮೂಡಿಸಿದ ಹೆಜ್ಜೆ ಗುರುತುಗಳು ನಿಚ್ಚಳವಾಗಿ ಕಾಣಿಸುತ್ತವೆ.
ಇವತ್ತು ಪೆಪ್ಸಿ-ಕೋಲಾಗಳ ಎದುರು ಕಬ್ಬಿನ ಹಾಲು, ಎಳನೀರು, ಮಜ್ಜಿಗೆಗಳಿಗೆ ಕಮರ್ಷಿಯಲ್ ವ್ಯಾಲ್ಯೂ ಬಂದಿದ್ದರೆ, ಬಿಟಿ, ರಸಗೊಬ್ಬರ, ರಾಸಾಯನಿಕಗಳ ಅಬ್ಬರದ ಮಧ್ಯೆ ಸಾವಯವ ಕೃಷಿ ನಿಧಾನವಾಗಿ ನಮ್ಮ ಹೊಲಗದ್ದೆಗಳನ್ನು ಆವರಿಸಿಕೊಳ್ಳುತ್ತಿದ್ದರೆ ಅದರ ಹಿಂದೆಲ್ಲೋ ರಾಜೀವ ದೀಕ್ಷಿತರ ”ಸ್ವದೇಶಿ ಅಪನಾವೋ;ಎ ದೇಶ್ ಬಚಾವೋ’ ಘೋಷಣೆ ಕೇಳಿಸುತ್ತದೆ. ಅವರಿಂದ ಪ್ರೇರಿತರಾದ ಸಾವಿರಾರು ಕಾರ್ಯಕರ್ತರ ಬೆವರು ಕಾಣಿಸುತ್ತದೆ.
ದೀಕ್ಷಿತರ ಸ್ವದೇಶಿ ಕೆಲಸ ಈ ಜನ್ಮದಲ್ಲೂ ಅಪೂರ್ಣವಾಗಿದೆ. ಅದನ್ನು ಪೂರ್ಣಗೊಳಿಸಲು ಅವರು ಆದಷ್ಟು ಬೇಗ ಮತ್ತೆ ಹುಟ್ಟಿ ಬರಲಿ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.