ಅದೇ ಹಳೆಯ ಕರಾಳ ನೆನಪುಗಳ ಹೊತ್ತ ನವೆಂಬರ್ 26 ಮತ್ತೆ ಬಂದಿದೆ. 2008ನೇ ಇಸವಿಯ ಬಳಿಕ ನಾವು ನವೆಂಬರ್ 26ನ್ನು ಕರಾಳ ದಿನವೆಂದು ಆಚರಿಸುತ್ತೇವೆ. ಸ್ವರ್ಗೀಯ ತುಕಾರಾಮ್ ಓಂಬಳೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಂತಾದ ವೀರರ ಸಾಹಸ ಮತ್ತು ಸ್ಥೈರ್ಯ ಇಂದಿಗೂ ನಮ್ಮ ಕಣ್ಣಂಚನ್ನು ತೇವಗೊಳಿಸುತ್ತದೆ. ಅಪಘಾತ ಯಾವತ್ತೂ ಎಚ್ಚರಿಕೆಯನ್ನು ನೀಡಿ ಬರುವುದಿಲ್ಲ, ಆದರೆ ಅಂದು ಮುಂಬೈಯ ತಾಜ್ ಹೋಟೆಲ್ನಲ್ಲಿ ನಡೆದದ್ದು ಅಪಘಾತವಲ್ಲ, ಅದೊಂದು ವ್ಯವಸ್ಥಿತ ಸಂಚು. ಆ ಸಂಚು ನಡೆಸಿದವರ್ಯಾರು, ಅದಕ್ಕೆ ಪ್ರೇರಣೆ ಏನೆಂಬುದು ಜಗತ್ತಿಗೆ ತಿಳಿದಿರುವ ಸತ್ಯ. ಸಂಚು ನಡೆಸಿದವರ ಪರವಾಗಿ ಹಾಗೂ ತಮಗಾಗದವರ ವಿರುದ್ಧ ಈ ಸಂದರ್ಭವನ್ನೇ ಬಳಸಿಕೊಂಡು ಕೆಲ ದೇಶ ವಿರೋಧೀ ಶಕ್ತಿಗಳು ಸುಳ್ಳು ಕಥೆಗಳನ್ನು ಹೆಣೆದ ಪ್ರಕರಣಗಳೂ ನಡೆದವು.
ಭಾರತ ಒಂದು ಒಕ್ಕೂಟ ವ್ಯವಸ್ಥೆಗಳ ಸಧೃಢ ರಾಷ್ಟ್ರ. ಭಾರತೀಯ ಸೈನ್ಯ ವಿಶ್ವದ ಬಲಿಷ್ಠ ಸೈನ್ಯಗಳಲ್ಲಿ ಒಂದು. ಅದೆಷ್ಟು ಪ್ರತಿಕೂಲ ಪರಿಣಾಮಗಳಿದ್ದರೂ ನಮ್ಮ ಯೋಧರು ದೇಶಕ್ಕಾಗಿ ಶಕ್ತಿ ಮೀರಿ ಹೋರಾಡುತ್ತಾರೆ. ಪೊಲೀಸರು ಪ್ರಜೆಗಳ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಇಷ್ಟೆಲ್ಲಾ ಧನಾತ್ಮಕ ವಿಚಾರಗಳಿದ್ದೂ ನವೆಂಬರ್ 26ರ ಕರಾಳ ರಕ್ತ ಸಿಕ್ತ ಘಟನೆ ಹೇಗೆ ನಡೆಯಿತು ಎಂಬ ಪ್ರಶ್ನೆ ನಮ್ಮನ್ನು ಇಂದಿಗೂ ಕಾಡುತ್ತಿರಬಹುದು. ರಾಜ್ಯವೊಂದರ ಸೈನ್ಯ ಎಷ್ಟೇ ಬಲಿಶಾಲಿಯಾಗಿದ್ದರೂ, ಸೈನ್ಯಾಧಿಕಾರಿ ರಾಜನ ಅಪ್ಪಣೆಯಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲವಷ್ಟೇ. 2008ರಲ್ಲಿ ಮುಂಬೈಯಲ್ಲಿ ನಡೆದದ್ದೂ ಅಷ್ಟೇ. ದೇಶದ ಭದ್ರತೆಯ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳುವ ನಾಯಕರು ರಾಷ್ಟ್ರವನ್ನೂ ರಾಜ್ಯವನ್ನೂ ಆಳುತ್ತಿದ್ದಾಗ, ಪೊಲೀಸರಾದರೂ ಏನು ಮಾಡಬಹುದು. ಲಷ್ಕರ್ ತೋಯ್ಬಾದ 12 ಜನ ಉಗ್ರರು ಮುಂಬೈ ನಗರವನ್ನು ಅಕ್ಷರಶಃ ರಣಾಂಗಣವನ್ನಾಗಿಸಿದ್ದರು. ಪರಿಸ್ಥಿತಿ ಕೈ ಮೀರುವ ಮುನ್ನ ಸೇನೆಯು ದಾಳಿಯನ್ನು ಸಮರ್ಥವಾಗಿ ಎದುರಿಸಿತಾದರೂ, ದೇಶದ ಪ್ರತಿಷ್ಠಿತ ತಾಜ್ ಹೋಟೆಲ್, ನಾರಿಮನ್ ಹೌಸ್ ಇತ್ಯಾದಿಗಳಲ್ಲಿದ್ದ ಅಧಿಕಾರಿಗಳೂ, ವಿದೇಶೀ ಗಣ್ಯರೂ, ರಕ್ಷಕರೂ ಭಯೋತ್ಪಾದಕರ ದಾಳಿಗೆ ಬಲಿಯಾದರು.
ಭಾರತದ ರಾಜಧಾನಿ ದೆಹಲಿಯಾದರೂ ಮುಂಬೈ ಅನ್ನು ಭಾರತದ ಆರ್ಥಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಹೀಗಿದ್ದ ಮುಂಬೈ ಅನೇಕ ಭಯೋತ್ಪಾದನಾ ಕೃತ್ಯಗಳಿಗೆ ಈ ಮೊದಲು ಸಾಕ್ಷಿಯಾದ ಇತಿಹಾಸವಿದ್ದರೂ , 2008ರಲ್ಲಿ ನಡೆದ ದಾಳಿ ಅತ್ಯಂತ ವ್ಯವಸ್ಥಿತ ಮತ್ತು ಕ್ರೂರ ದಾಳಿಯಾಗಿತ್ತು. ಪ್ರತಿಯೊಂದು ದೇಶವು ಹೊಂದಿರುವಂತೆಯೇ ಭಾರತವೂ ಗೂಢಚಾರ ವಿಭಾಗವನ್ನು ಹೊಂದಿದೆ, ಆದರೆ ಆ ವಿಭಾಗವನ್ನು ಸರಕಾರವು ಅಸಮರ್ಪಕವಾಗಿ ಬಳಸಿಕೊಂಡ ಪರಿಣಾಮವನ್ನು ಮುಂಬೈ ನಗರ ಮಾತ್ರವಲ್ಲ, ದೇಶವೇ ಎದುರಿಸಬೇಕಾದದ್ದು ದುರದೃಷ್ಟಕರ ವಿಚಾರ. ಈ ಸಂಪೂರ್ಣ ಘಟನೆಯಲ್ಲಿ ಕೆಲವು ಸುದ್ದಿ ವಾಹಿನಿಗಳೂ ಕೂಡಾ ಅಪ್ರಬುದ್ಧ ನಡತೆಯನ್ನು ಪ್ರದರ್ಶಿಸಿ, ಸೈನ್ಯದ ಪ್ರತಿಯೊಂದು ಚಲನವಲನಗಳನ್ನು ನೇರ ಪ್ರಸಾರ ಮಾಡುವ ಕೆಲಸ ಮಾಡಿತ್ತು, ಪರಿಣಾಮವಾಗಿ ತಾಜ್ ನಲ್ಲಿ ಅಡಗಿದ್ದ ಉಗ್ರರು ಇದೆ ಸುದ್ದಿ ವಾಹಿನಿಗಳ ನೇರ ಪ್ರಸಾರವನ್ನು ಗಮನಿಸಿ ಭಾರತೀಯ ಸೇನೆಯ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ಹೂಡಲು ಸಿದ್ಧರಾಗಿದ್ದರು.
ಈ ಘಟನೆಯ ಬಳಿಕ ಆಡಳಿತದಲ್ಲಿದ್ದ ನಾಯಕರು ನಡೆಸಿದ ಷಡ್ಯಂತ್ರಗಳು ಹೊರಬಂತು ಮಾತ್ರವಲ್ಲದೆ ನಿದ್ರಿಸುತ್ತಿದ್ದ ಜನರನ್ನು ಬಡಿದೆಬ್ಬಿಸಿತು. ಮುಂದೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕತ್ವ ಮಹತ್ವದ ಬದಲಾವಣೆಯನ್ನು ಕಂಡಿತು. ಈ ಬಾರಿ ದೇಶವು ದೇಶ ರಕ್ಷಣೆಯ ವಿಚಾರದಲ್ಲಿ ಅತೀ ಹೆಚ್ಚು ಗಾಂಭೀರ್ಯ ಹೊಂದಿರುವ ನಾಯಕರನ್ನು ಕಂಡಿತು. ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಇರಬಹುದು ಅಥವಾ ಗೃಹ ಮಂತ್ರಿ ರಾಜನಾಥ್ ಸಿಂಗ್ ಮತ್ತು ಖುದ್ದು ಪ್ರಧಾನಿಗಳು ಕೂಡಾ ದೇಶ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಧೈರ್ಯದಿಂದ ಹೇಳಿದರು ಮಾತ್ರವಲ್ಲದೆ ಕೃತಿಯಲ್ಲೂ ತೋರಿದರು. ಯೋಧರ ಮೇಲೆ ದಾಳಿ ನಡೆಸಿದ ಉಗ್ರರನ್ನು ಅವರದ್ದೇ ಆಶ್ರಯ ತಾಣಕ್ಕೆ ನುಗ್ಗಿ ಮಟ್ಟಹಾಕಲು ಸೇನೆಗೆ ಅವಕಾಶ ನೀಡಿದರು. ಮಾತ್ರವಲ್ಲದೆ ಎಲ್ಲಕ್ಕೂ ಮುಖ್ಯವಾಗಿ “ಅಜಿತ್ ದೋವಲ್” ಎಂಬ ಅತ್ಯದ್ಭುತ , ಚಾಣಾಕ್ಷ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿಕೊಂಡರು.
ಬದಲಾವಣೆಗೊಂಡ ಸರಕಾರ ದೇಶದ ರಕ್ಷಣಾ ವ್ಯವಸ್ಥೆಯಲ್ಲೂ ಅನೇಕ ಹೊಸ ಬದಲಾವಣೆಗಳಿಗೆ ನಾಂದಿ ಹಾಡಿತು. ರಕ್ಷಣಾ ಕ್ಷೇತ್ರ ಕೇವಲ ಯುದ್ಧ ಸಾಮಗ್ರಿಗಳಿಗೆ ಸೀಮಿತವಾಗಿಲ್ಲ ಎಂದು ಅರಿತುಕೊಂಡ ಸರಕಾರ ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಗೆ ಉತ್ತೇಜನ ನೀಡಲು ಪ್ರಾರಂಭಿಸಿತು, ಇಸ್ರೋ ಹೊಸ ಶಕೆಯನ್ನು ಆರಂಭಿಸುವತ್ತ ಹೆಜ್ಜೆಯಿಡಲು ಪ್ರಾರಂಭಿಸಿತು. ಇಷ್ಟು ಮಾತ್ರವಲ್ಲದೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶೀ ನಿರ್ಮಿತ ಯುದ್ದೋಪಕರಣಗಳ ಅನ್ವೇಷಣೆ ಮತ್ತು ತಯಾರಿಕೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿತು, ಇದರ ಪರಿಣಾಮವಾಗಿ ಕಳೆದ 2 ತಂಗಳುಗಳಲ್ಲಿ ಭಾರತ 12 ಮಿಸೈಲ್ ಗಳನ್ನೂ ಯಶಸ್ವಿಯಾಗಿ ಪರೀಕ್ಷಿಸಿದೆ. ಶೌರ್ಯ , ರುದ್ರಂ 1,ಸ್ಮಾರ್ಟ್ , ಪೃಥ್ವಿ 2,ಅಭ್ಯಾಸ ಇತ್ಯಾದಿಗಳು ಅವುಗಳಲ್ಲಿ ಪ್ರಮುಖವಾದವುಗಳು. ವಾಯುಸೇನೆಯು ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಚೆನ್ನಾಗಿ ಅರಿತಿರುವ ಸರಕಾರವು ಅತ್ಯಂತ ಶಕ್ತಿಶಾಲೀ “ರಫೆಲ್” ಯುದ್ಧ ವಿಮಾನವನ್ನು ಖರೀದಿಸಿದೆ ಮಾತ್ರವಲ್ಲದೆ ಅತ್ಯಂತ ಕ್ಲಪ್ತ ಸಮಯದಲ್ಲಿ ಅದನ್ನು ವಾಯುಸೇನೆಗೆ ಹಸ್ತಾಂತರಿಸಿದೆ.
ದೇಶದ ಸರಕಾರದಲ್ಲಿ ಮಾತ್ರವಲ್ಲ ಭಾರತೀಯರ ಮನೋಭಾವಗಳಲ್ಲೂ ಅನೇಕ ಧನಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರನ್ನು ಖಂಡಿಸುವ, ಉಗ್ರರ ಕೃತ್ಯಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸುವವರನ್ನು ಖಂಡಿಸುವ ಯುವ ಮನಸ್ಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಪ್ರಚೋದನಾತ್ಮಕ ಭಾಷಣಗಳು ಮತ್ತು ಬರಹಗಳಿಂದ ತಪ್ಪು ಹಾದಿಗೆ ಸೆಳೆಯುವ ನಾಯಕರನ್ನು ದೂರವಿರಿಸಲೂ ಇಂದಿನ ಯುವಕರು ಅರಿತಿದ್ದಾರೆ. ತಮ್ಮ ಸಾಮರ್ಥವನ್ನು ಗುರುತಿಸಿ, ತಮ್ಮ ಕೆಲಸವನ್ನು ಶ್ರದ್ಧೆಯಿಂದಲೂ ನಿಷ್ಠೆಯಿಂದಲೂ ನಿರ್ವಹಿಸಲು ಪ್ರೋತ್ಸಾಹಿಸುವ ನಾಯಕರಿಂದ ರಕ್ಷಣಾ ಪಡೆಗಳೂ, ಇನ್ನೂ ಹೆಚ್ಚಿನ ಉತ್ಸಾಹದಿಂದ ಕಾರ್ಯಪ್ರವೃತ್ತವಾಗಿದೆ. ದೇಶ ಮತ್ತು ದೇಶವಾಸಿಗಳಲ್ಲಿ ಬಹಳಷ್ಟು ಧನಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ನಮ್ಮಲ್ಲಿ ಇನ್ನಷ್ಟು ಬದಲಾವಣೆಗಳ ಅಗತ್ಯವಿದೆ. ಯಾರು ಶತ್ರು ಯಾರು ಮಿತ್ರ ಎಂದು ಗುರುತಿಸಲು ಸಾಧ್ಯವಾಗದ ಸಮಾಜವಿದು. ರಕ್ಷಕರು ನಮ್ಮೆಲ್ಲರ ಸುರಕ್ಷೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಾರೆ. ನಾವೂ ಅವರೊಂದಿಗೆ ಕೈಜೋಡಿಸಿದಾಗ ಮಾತ್ರ ಸುಭದ್ರ ಸಮಾಜ , ಸಧೃಢ ದೇಶ ನಿರ್ಮಾಣವಾಗಲು ಸಾಧ್ಯ. ಸಾರ್ವಜನಿಕ ಸ್ಥಳಗಳಲ್ಲಿ ಸಂದೇಹಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡು ಬಂದಲ್ಲಿ ರಕ್ಷಕರಿಗೆ ತಿಳಿಸುವುದು ಅತ್ಯಂತ ಮುಖ್ಯ. ನಮಗೇಕೆ ಈ ಅನಗತ್ಯ ಕೆಲಸ ಎಂದು ನಾವು ತೋರುವ ಸಣ್ಣ ಉಢಾಫೆಯು ದೊಡ್ಡ ಅನಾಹುತಕ್ಕೂ ಕಾರಣವಾಗಬಹುದು. ರಕ್ಷಕರು ನಮ್ಮನ್ನು ಪರಿಶೀಲನೆಗೆ ಒಳಪಡಿಸುವಾಗ ಅಥವಾ ಪ್ರಶ್ನಿಸುವಾಗ ಸಹನೆಯಿಂದ ಹಾಗೂ ಪ್ರಬುದ್ಧತೆಯಿಂದ ಸಹಕಾರ ನೀಡುವುದರಿಂದ ಮುಂದಾಗಬಲ್ಲ ಅನಾಹುತವನ್ನು ತಪ್ಪಿಸಬಹುದು, ಯಾಕೆಂದರೆ ನಮಗೆ ಸಾಮಾನ್ಯವಾಗಿ ಕಂಡು ಬಂದ ವಿಚಾರವು ಯಾವುದೊ ಮಹತ್ವಪೂರ್ಣ ಸುಳಿವಾಗಿರಬಹುದು. ದೇಶ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿಗೂ ಸಿದ್ಧವಿರದ ದೃಢ ನಾಯಕರು ನಮ್ಮನ್ನು ಆಳುವಾಗ , ನಾವೂ ಕೈಜೋಡಿಸಬೇಕಾದದ್ದು ನಮ್ಮ ಕರ್ತವ್ಯವಲ್ಲವೇ?
✍️ದೀಪ ಜಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.