ಪಾಕಿಸ್ಥಾನದ ಹೇಡಿತನ ಹಾಗೂ ಹಿಂಬಾಗಿಲ ಮೋಸದ ಯುದ್ಧವನ್ನು ನಾವು ಇಂದು ನಿನ್ನೆಯಿಂದಲ್ಲ, ಅನೇಕ ವರ್ಷಗಳಿಂದ ನೋಡುತ್ತಾ, ಅದರೊಂದಿಗೆ ಹೋರಾಡುತ್ತಾ ಬಂದಿದ್ದೇವೆ. ಕಾಶ್ಮೀರದ ಯುವಕರ ಮೆದುಳಲ್ಲಿ ಮತೀಯವಾದದ ಅಫೀಮನ್ನು ತುಂಬಿ, ಹಣ ಇತ್ಯಾದಿಗಳನ್ನು ನೀಡಿ ಓದುವ ಹುಡುಗರ ಹಾದಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಣೆ ನೀಡುವುದು ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವುದು ಅವರ ನಿತ್ಯದ ಕಾರ್ಯಗಳು. ಹೀಗೆ ಧರ್ಮದ ಅಫೀಮನ್ನೇ ತಲೆಯಲ್ಲಿ ತುಂಬಿಕೊಂಡಿರುವ ಯುವಕರನ್ನು ತನ್ನ ದೇಶಕ್ಕೆ ಕರೆಸಿಕೊಂಡು, ಭಯೋತ್ಪಾದನಾ ಕೃತ್ಯಗಳ ಹಾಗೂ ವಿಧ್ವಂಸಕಾರೀ ಕೃತ್ಯಗಳನ್ನು ನಡೆಸುವ ಬಗೆಗಾಗಿ ತರಬೇತು ನೀಡಿ, ಪುನಃ ಭಾರತಕ್ಕೆ ಕಳುಹಿಸುತ್ತಾರೆ. ಹಿಂತಿರುಗಿ ಬಂದ ಭಯೋತ್ಪಾದಕರು ನಡೆಸುವ ಹಾನಿಗಳ ಬಗ್ಗೆ ನಮ್ಮೆಲ್ಲರಿಗೂ ಅರಿವಿದೆ.
ಹೀಗೆ ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಅಕ್ರಮವಾಗಿ ಸಾಗಲು ಸುಲಭಸಾಧ್ಯವಲ್ಲ. ಗಡಿಯುದ್ದಕ್ಕೂ ಬೇಲಿಗಳನ್ನು ನಿರ್ಮಿಸಲಾಗಿದೆ, ಯೋಧರು, ಗಡಿ ರಕ್ಷಣಾ ಪಡೆಯ ಯೋಧರು ಹಗಲೂ ರಾತ್ರಿಯೂ ಚಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಹೀಗೆ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರ ಲಕ್ಷ್ಯವನ್ನು ಬೇರೆಡೆಗೆ ತಿರುಗಿಸಿ, ಅಕ್ರಮವಾಗಿ ಉಗ್ರರ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಸುಖಾ ಸುಮ್ಮನೆ ತೊಂದರೆ ನೀಡಲೂ ಪಾಕಿಸ್ಥಾನದ ಸೇನೆಯು ಶೆಲ್ಲಿಂಗ್ ನಡೆಸುವುದೂ ಹೊಸತೇನಲ್ಲ. ಈ ಬಾರಿಯೂ ಪಾಕಿಸ್ಥಾನ ತನ್ನ ಅದೇ ನರಿ ಬುದ್ದಿಯನ್ನು ತೋರಿದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ.
ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಯೋಧರು ಬಹುತೇಕ ಬರಿ ಹಬ್ಬಗಳನ್ನು ಗಡಿಗಳಲ್ಲೇ ಆಚರಿಸುತ್ತಾರೆ. ಯೋಧರ ಕುಟುಂಬಗಳೂ ಅಷ್ಟೇ ಹಬ್ಬವನ್ನು ತಮ್ಮವರ ಯೋಗಕ್ಷೇಮ ಹಾಗೂ ಸುರಕ್ಷತೆಗಾಗಿ ಪ್ರಾರ್ಥಿಸುತ್ತಾ ಕಳೆಯುತ್ತಾರೆ. ಒಂದೆಡೆಯಲ್ಲಿ ನಾವೆಲ್ಲಾ ನಮ್ಮ ಪ್ರತಿಷ್ಠೆ, ಆಡಂಬರಗಳ ಪ್ರದರ್ಶನಗಳನ್ನೇ ಆಚರಣೆಯನ್ನಾಗಿಸಿಕೊಂಡರೆ, ಅನೇಕ ಕುಟುಂಬಗಳು ಪ್ರಾರ್ಥನೆ ಮತ್ತು ಪ್ರತೀಕ್ಷೆಯನ್ನೇ ಆಚರಿಸುತ್ತಾರೆ. ಮೊನ್ನೆ ದೀಪಾವಳಿಯ ದಿನದಂದು ಪಾಕಿಸ್ಥಾನ ನಡೆಸಿದ ದಾಳಿಯಲ್ಲಿ ನಮ್ಮ ಐವರು ವೀರ ಯೋಧರು ಹುತಾತ್ಮರಾದರು. ದೇಶವೆಲ್ಲಾ ದೀಪಾವಳಿಯ ಸಂಭ್ರಮದಲ್ಲಿದ್ದರೆ ಐದು ಕುಟುಂಬಗಳ ಬೆಳಕು ದೇಶದ ರಕ್ಷಣೆಗಾಗಿ ಅಮರವಾಯಿತು. ಆದರೆ ನಾವೆಲ್ಲಾ ಮೋದಿ ಜೀ ಯೋಧರಿಗಾಗಿ ದೀಪಾವಳಿ ಆಚರಿಸಿ ಎಂದಿದ್ದಾರೆ ಎಂದು ಚರ್ಚಿಸುವುದರಲ್ಲೇ ವ್ಯಸ್ತರಾಗಿದ್ದೆವು ಹೊರತಾಗಿ ಕೆಲವರಷ್ಟೇ ಈ ವಿಚಾರದ ಗಂಭೀರತೆಯನ್ನು ಅರಿತಿದ್ದರು. ಒಂದು ಕ್ಷಣ ಕಣ್ಣು ಮುಚ್ಚಿ ಇನ್ನೂ ಸರಿಯಾಗಿ ಮೀಸೆ ಮೂಡದ ಮಗನನ್ನು ಹಬ್ಬದ ದಿನದಲ್ಲಿ ಕಳೆದುಕೊಂಡ ತಂದೆ ತಾಯಿಯ ಸಂಕಟವನ್ನು, ಮೊನ್ನೆಯಷ್ಟೇ ಕರ್ವಾ ಚೌತ್ನಲ್ಲಿ ಪತಿಯ ಹೆಸರಿನಲ್ಲಿ ಹಾಕಿಸಿಕೊಂಡ ಮದರಂಗಿಯ ರಂಗು ಮಾಸುವ ಮುನ್ನವೇ ಅದೇ ಕೈಗಳಲ್ಲಿ ಪತಿಯು ಹೊದ್ದು ಬಂದ ಧ್ವಜವನ್ನು ಸ್ವೀಕರಿಸುವ ಪತ್ನಿಯನ್ನು, ಹಬ್ಬಕ್ಕೆ ತಂದೆ ಕಳಿಸಬಹುದಾದ ಉಡುಗೊರೆಗಾಗಿ ಕಾದು ಕುಳಿತಿದ್ದ ಮುಗ್ಧ ಮಕ್ಕಳ ಮುಖವನ್ನು ಆಲೋಚಿಸಿ ನೋಡಿ, ಪ್ರಧಾನಿ ಏನು ಹೇಳಿದ್ದರು ಮತ್ತು ಏಕಾಗಿ ಎಂದು ನಿಮಗೆ ಅರ್ಥವಾಗಬಹುದು.
ಇವೆಲ್ಲದರ ಮಧ್ಯೆ ಪ್ರಮುಖವಾದ ವಿಚಾರ ಇನ್ನೊಂದಿದೆ. ಮೊನ್ನೆ ಹುತಾತ್ಮರಾದ ಗಡಿ ಭದ್ರತಾ ಪಡೆಯ ವೀರ ಯೋಧ ರಾಕೇಶ್ ದೋವಲ್ ಅವರ ಪಾರ್ಥಿವ ಶರೀರ ನಿನ್ನೆ ಹುಟ್ಟೂರು ತಲುಪಿದೆ. ಹಬ್ಬದ ಸಂಭ್ರಮದ ಮಧ್ಯದಲ್ಲೇ ತಂದೆಯನ್ನು ಕಳೆದುಕೊಂಡ ಮಗುವೊಂದು ಹೇಗೆ ವರ್ತಿಸಬಹುದು? ಪುಟ್ಟ ಬಾಲಕಿ ಮೌಲಿ ದೋವಲ್ ತಂದೆಯ ಪಾರ್ಥಿವ ಶರೀರವನ್ನು ಹೊತ್ತು ಬಂದಿದ್ದ ಯೋಧರೊಂದಿಗೆ ನಿಂತು ಅತ್ಯಂತ ಪ್ರಬುದ್ಧವಾಗಿ ನಡೆದುಕೊಂಡ ರೀತಿ ದೇಶಕ್ಕೆ ಮಾದರಿಯಾಗಿತ್ತು. ಹಿಂದೆ ನಿಂತ ಯೋಧರ ಎದೆಯನ್ನು ತಟ್ಟಿ ಆಕೆ “ಇವರು ನಮ್ಮೆಲ್ಲರ ರಕ್ಷಣೆಗಾಗಿ ಅವರ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಾರೆ, ದೇಶದ ಸಮಸ್ತ ಜನರೂ ಅವರ ಬೆನ್ನ ಹಿಂದೆ ನಿಂತು ಅವರನ್ನು ಬೆಂಬಲಿಸಬೇಕು” ಎಂದು ಹೇಳಿ, ದೇಶಭಕ್ತಿಯ ಘೋಷಣೆಗಳನ್ನು ಕೂಗಿದಳು. ಆಕೆಯ ಧ್ವನಿಯಲ್ಲಿ ಯಾವ ಕಂಪನವೂ ಇರಲಿಲ್ಲ, ಬದಲಾಗಿ ದೇಶಭಕ್ತಿ ಮತ್ತು ಆತ್ಮವಿಶ್ವಾಸ ತುಳುಕಾಡುತ್ತಿತ್ತು. ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲೂ ಆಕೆ ಇತರ ಯೋಧರ ಬಗ್ಗೆ ಯೋಚಿಸುತ್ತಾಳೆ. ಆದರೆ ನಾವು? ಮನೆಯ ಎಸಿ ಕೊಠಡಿಗಳಲ್ಲಿ ಕುಳಿತು, ಹಬ್ಬದ ಭೋಜನವನ್ನು ಸವಿಯುತ್ತಾ, ಕಾಶ್ಮೀರದಲ್ಲಿ ಯೋಧರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಾರೋ ಇಲ್ಲವೋ ಎಂದು ಚರ್ಚಿಸುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರನ್ನು ಹೇಗೆ ನಿಗ್ರಹಿಸಬೇಕು ಎಂದು ಉದ್ದುದ್ದಕ್ಕೆ ಬರೆಯುತ್ತೇವೆ.
No tears in eyes, only Josh High- #Pakistan shall must Listen the voice of this daughter of #India. Her father #BSF sub-Inspector #RakeshDoval, sustained serious injuries during the #ceasefire violation, succumbed to his injuries. We #Salute You. pic.twitter.com/7u3DfIRsND
— #Stay_Home #Stay_Safe 🇮🇳 (@imAnkeshanand) November 16, 2020
ಕಳೆದ ತಿಂಗಳು ಲಡಾಖ್ನ ಪುಟ್ಟ ಬಾಲಕನೊಬ್ಬ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ ಯೋಧರಿಗೆ ಸಲ್ಯೂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ನವಾಂಗ್ ನಮಗ್ಯಾಲ್ ಎಂಬ ಬಾಲವಾಡಿಯಲ್ಲಿ ವಿದ್ಯಾಭ್ಯಾಸ ನಡೆಸುವ 5 ವರ್ಷದ ಪುಟ್ಟ ಬಾಲಕ ಸೆಲ್ಯೂಟ್ ಮಾಡುತ್ತಿದ್ದ ರೀತಿಯು ದೇಶದ ಎಲ್ಲರ ಗಮನ ಸೆಳೆದಿತ್ತು. ಅಕ್ಟೋಬರ್ 8 ನೇ ತಾರೀಕಿನಂದು ಇಂಡೋ ಟಿಬೆಟಿಯನ್ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಈ ಬಾಲಕನ ವಿಡಿಯೋವನ್ನು ಚಿತ್ರೀಕರಿಸಿದ್ದರು. ಇದೀಗ ಭದ್ರತಾ ಪಡೆಯು ಈ ಪುಟ್ಟ ಯೋಧನಿಗೆ ಸಮವಸ್ತ್ರವನ್ನು ಹೋಲಿಸಿ ನೀಡಿರುವುದಲ್ಲದೆ, ಸೆಲ್ಯೂಟ್ ಮಾಡುವ ಸರಿಯಾದ ವಿಧಾನವನ್ನೂ ಕಲಿಸಿದ್ದಾರೆ.
Salute!
Happy and inspiring again…
Nawang Namgyal, the 5 years old student of LKG salutes Indo-Tibetan Border Police (ITBP) jawans near a border village in Ladakh. #Himveers pic.twitter.com/aoA30ifbnU
— ITBP (@ITBP_official) November 15, 2020
ನಾವೆಲ್ಲರೂ ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. ಈ ಪುಟ್ಟ ಮಕ್ಕಳಲ್ಲಿರುವ ಪ್ರಬುದ್ಧತೆ ನಮ್ಮಲ್ಲೇಕಿಲ್ಲ? ಏನೂ ಅರಿಯದ ಮುಗ್ಧ ಮಕ್ಕಳು ಯೋಧರ ಬಗ್ಗೆ ಅವರು ನಮಗಾಗಿ ಮಾಡುವ ತ್ಯಾಗಗಳ ಬಗ್ಗೆ ಅತೀವ ಗೌರವವನ್ನು ಹೊಂದುತ್ತಾರೆ ಎಂದಾದರೆ, ಅವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಪ್ರತಿ ದಿನವೂ ಅರಿಯುವ ನಾವೇಕೆ ಇಷ್ಟು ಸಂವೇದನಾಹೀನರಾಗುತ್ತೇವೆ? ದೇಶಭಕ್ತಿಯನ್ನು, ಯೋಧರ ಪ್ರತಿ ಗೌರವವನ್ನು ನೀಡುವ ರೀತಿಯನ್ನು ನಾವು ಈ ಪುಟ್ಟ ಮಕ್ಕಳಿಂದ ಪ್ರೇರಣೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬಹುದಲ್ಲವೇ? ಒಮ್ಮೆ ಗಂಭೀರವಾಗಿ ಆಲೋಚಿಸಿ ನೋಡಿ. ಪುಟ್ಟ ಮಕ್ಕಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ನಿಮಗೆ ಇನ್ನೂ ಅನ್ನಿಸುವುದಿಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.