ಚಾರಿತ್ರಿಕವಾಗಿ ಕ್ರಿ.ಶ. ೧೮೫೭ ರ ಸಿಪಾಯಿ ದಂಗೆಯನ್ನು ನಾವು ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಚರಿತ್ರೆಯಲ್ಲಿ ಕಾಣುತ್ತೇವೆ. ವಾಸ್ತವವಾಗಿ ಇದಲ್ಲ. ಇದಕ್ಕಿಂತ ೨೦ ವರ್ಷಗಳ ಪೂರ್ವದಲ್ಲಿಯೇ ಈ ಹಿಂದಕ್ಕೆ ಕೊಡಗಿನ ಅವಿಭಾಜ್ಯ ಅಂಗವಾಗಿದ್ದ ಸುಳ್ಯದ ಪಕ್ಕದ ಕುಗ್ರಾಮವಾಗಿದ್ದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಆರಂಭವಾಗಿ ಪೂರ್ತಿ ಮೇಲಿನ ಹಾಗೂ ಕೆಳಗಿನ ಕೊಡಗು ಮತ್ತು ಪೂರ್ತಿ ದಕ್ಷಿಣ ಕನ್ನಡಕ್ಕೆ ಹರಡಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರೈತಾಪಿ ಸಮೂಹದ ಹೋರಾಟವು ಇಂದು ಅಮರ ಸುಳ್ಯ ದಂಗೆ ಎಂದು ದಾಖಲಾಗಿರುತ್ತದೆ. (ಕೊಡಗು-ಕೆನರಾ ಬಂಡಾಯ). ಆದರೆ ಬ್ರಿಟಿಷರು ಬರೆದ ಚರಿತ್ರೆಯಲ್ಲಿ ಅದು ದಂಗೆ ಎಂದು ದಾಖಲಾಗದೆ; ಇಲ್ಲ ದಾಖಲಾದರೂ ಅದು ದರೋಡೆ, ಸುಲಿಗೆ (ಕಾಟಕಾಯಿ) ಎಂದು ಬ್ರಿಟಿಷ್ ದಾಖಲೆಗಳಲ್ಲಿರುವುದು ವಿದ್ರೋಹದ ಸಂಗತಿ. ಇದಕ್ಕಿಂತಲೂ ದುರಂತದ ಸಂಗತಿಯೆಂದರೆ ಈ ಹೋರಾಟದಲ್ಲಿ ಭಾಗಿಯಾದವರು ಆಯಾಯ ಕುಟುಂಬಸ್ಥರಲ್ಲಿಯೇ ವಿಸ್ಮೃತಿಗೆ ಸರಿದುದಾಗಿದೆ. ಈ ದಂಗೆಯ ನೇತೃತ್ವವನ್ನು ವಹಿಸಿದ ಕೆದಂಬಾಡಿ ರಾಮಗೌಡ, ಗುಡ್ಡೆಮನೆ ಅಪ್ಪಯ್ಯಗೌಡರಂತಹವರ ಕವಲು ಇಲ್ಲವೇ ವಾರೀಸುದಾರರು ಯಾರೆಂದು ಕೇಳಿದರೆ ನಕಾರವೇ ಉತ್ತರವಾಗುತ್ತದೆ. ಆ ಸಂದರ್ಭದಲ್ಲಿ ದಂಗೆಯಲ್ಲಿ ಸೋತು ಮರಣ ದಂಡನೆಗೆ ಗುರಿಯಾದವರ ಮಕ್ಕಳು ಯಾ ಕುಟುಂಬಸ್ಥರು ಎಂದು ಗುರುತಿಸಿಕೊಂಡಲ್ಲಿ ಬ್ರಿಟಿಷ್ ಮತ್ತು ಅವರ ಅನುಯಾಯಿ ವರ್ಗದವರಿಂದ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತಿತ್ತು. ಕೆದಂಬಾಡಿ ರಾಮಗೌಡರ ಭೂಮಿ ಮದುವೆ ಗದ್ದೆ ಸೇರಿ ಬ್ರಿಟಿಷರು ದರೋಡೆಕೋರನ ಬದುಕೆಂದು ಹರಾಜು ಹಾಕಿದ್ದರು. ಈ ಹೋರಾಟದಲ್ಲಿ ಭಾಗಿಯಾದವರು ಆಯಾಯ ಕುಟುಂಬಸ್ಥರಲ್ಲಿಯೇ ವಿಸ್ಮೃತಿಗೆ ಸರಿದಿರುವುದಾಗಿದೆ. ಇದೆ ಕಾರಣಕ್ಕಾಗಿ ರಾಷ್ಟ್ರೀಯತೆ, ದೇಶಪ್ರೇಮ, ಸ್ವದೇಶಿ ಇತ್ಯಾದಿ ಮೂಲವಾಗಿರುವ ರಾಜಕೀಯ ನಾಯಕರಿಗೂ ಸ್ಥಳೀಯತೆಯನ್ನು ನಿರಾಕರಿಸುವುದಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನಿಗಳಾಗಿ ಬದುಕು ಸವೆಸಿ ಗತಿಸಿದವರನ್ನು ಮತ್ತೆ ಮತ್ತೆ ಸ್ಮೃತಿಗೆ ತಂದು ಕೊಳ್ಳುವ ಪ್ರಯತ್ನಗಳ ಅಗತ್ಯವಿದೆ.
ಕ್ರಿ.ಶ.೧೭೮೮ ರಲ್ಲಿ ಕೊಡಗಿನ ದೊಡ್ಡ ವೀರರಾಜ ತನ್ನ ಹೆಂಡತಿ ಮತ್ತು ತಮ್ಮಂದಿರಾದ ಲಿಂಗರಾಜ ಮತ್ತು ಅಪ್ಪಾಜಿಯೊಂದಿಗೆ ಟಿಪ್ಪುಸುಲ್ತಾನನ ಬಂದಿಖಾನೆಯಿಂದ ತಪ್ಪಿಸಿಕೊಂಡು ಬಂದು ಬ್ರಿಟಿಷ್ರೊಂದಿಗೆ ಒಪ್ಪಂದದ ಪ್ರಯುಕ್ತ ಟಿಪ್ಪುನ ಪಡೆಯನ್ನು ಕೊಡಗಿನಿಂದ ಓಡಿಸುವಲ್ಲಿ ಸಫಲನಾಗುತ್ತಾನೆ. ಕ್ರಿ.ಶ.೧೭೯೯ ರ ಆಂಗ್ಲ-ಮೈಸೂರು ಯುದ್ದದಲ್ಲಿ ದೊಡ್ಡವೀರ ರಾಜ ಬ್ರಿಟಿಷರ ಪರವಾಗಿ ಹೋರಾಡಿದ್ದರಿಂದ ಅವರ ವಶದಲ್ಲಿದ್ದ ಪುತ್ತೂರು ಮತ್ತು ಅಮರಸುಳ್ಯ ಮಾಗಣೆಗಳನ್ನು ದೊಡ್ಡ ವೀರರಾಜನಿಗೆ ಬಿಟ್ಟುಕೊಟ್ಟರು. ಈ ಸಂದರ್ಭದಲ್ಲಿ ಕ್ರಿ.ಶ. ೧೭೯೫ರಿಂದ ೧೭೯೯ ರಲ್ಲಿ ಕೇರಳದ ರಾಜನಿಗೂ ಟಿಪ್ಪುವಿಗು ಯುದ್ಧ ನಡೆದಾಗ ಹಾಸನ, ಮೈಸೂರು, ಮಂಡ್ಯದ ಗೌಡ ರೈತರನ್ನು ಟಿಪ್ಪು ಯುದ್ಧಕ್ಕೆ ಕೊಡಗಿನ ಮೂಲಕ ರವಾನಿಸಿದ್ದ. ೧೭೯೯ ರಲ್ಲಿ ಟಿಪ್ಪು ನಂತರ ಕೊಡಗಿನ ಮೂಲ ಗೌಡರ ಜೊತೆಗೆ ವಲಸೆ ಗೌಡರು ಯುದ್ಧಕ್ಕೆ ವಿದಾಯ ಹೇಳಿ ಕುಲ ಕಸುಬಾದ ಕೃಷಿ ಅವಲಂಬಿಸಿದರು; ಅರೆಭಾಷೆ ಗೌಡರಾದರು. ಟಿಪ್ಪುವಿನ ದಂಡು ಉತ್ತರ ಕೊಡಗಿನ ಕೊಡವ ರೈತಾಪಿ ಜನರನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿದುದರಿಂದ ಹೆಚ್ಚಿನ ಕೃಷಿಭೂಮಿಗಳು ಪಾಳುಬಿದ್ದ ಪ್ರಯುಕ್ತ ವೀರರಾಜನು ತನ್ನ ಕೆಳಗಿನ ಕೊಡಗಿನ ಪುತ್ತೂರು, ಸುಳ್ಯ ಮಾಗಣೆಗಳಿಂದ ತನ್ನ ರಕ್ತಸಂಬಂಧಿಗಳಾದ ಗೌಡ ಜನಾಂಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಕೊಡಗಿಗೆ ಬರ ಮಾಡಿಸಿ ಉತ್ತರ ಕೊಡಗಿನಲ್ಲಿ (ಈಗಿನ ಮಡಿಕೇರಿ-ಸೋಮವಾರಪೇಟೆ) ಸರಹದ್ದಿನಲ್ಲಿ ಭೂಮಿ ಜಹಗೀರುಗಳನ್ನು ಕೊಟ್ಟು ನೆಲೆಸುವಂತೆ ಮಾಡಿದನು. ಈ ಗೌಡ ಜನಾಂಗವು ಈ ಪ್ರದೇಶದಲ್ಲಿ ಮೊದಲೇ ವಿರಳವಾಗಿ ಗಂಗರಾಜರ ಕಾಲದಿಂದಲೂ ನೆಲೆಸಿದ್ದ ಒಕ್ಕಲಿಗ ಗೌಡರ ಜೊತೆ ಬೆರೆತು ಮಿಲನವಾದರು. ಈ ರೀತಿಯಾಗಿ ಕ್ರಿ.ಶ.೧೮೩೪ ರ ತನಕ ಮೇಲಿನ ಕೊಡಗು ಮತ್ತು ಕೆಳಗಿನ ಕೊಡಗಿನಲ್ಲಿ ಗೌಡ ಜನಾಂಗವು ಉತ್ತಮ ಬಾಳ್ವೆಯನ್ನು ಹಾಲೇರಿ ರಾಜರ ಆಶ್ರಯದಲ್ಲಿ ನಡೆಸಿದರು.
ಆಂಗ್ಲರು ೧೫.೦೩.೧೮೩೪ ರಲ್ಲಿ ಚಿಕ್ಕವೀರರಾಜನನ್ನು ಪದಚ್ಯುತಿ ಗೊಳಿಸಿ ಕೊಡಗನ್ನು ವಶಪಡಿಸಿಕೊಂಡ ಮೇಲೆ, ಕೊಡಗು ರಾಜ್ಯಕ್ಕೆ ಸೇರಿದ್ದ ಅಮರ ಸುಳ್ಯ, ಬೆಳ್ಳಾರೆ, ಪುತ್ತೂರು ಸೀಮೆಗಳನ್ನು (ಅಂದಿನ ಬಂಟ್ವಾಳ ತಾಲೂಕಿನ ವಿಭಾಗಗಳು) ದಕ್ಷಿಣ ಕನ್ನಡ-ಮಂಗಳೂರಿಗೆ ಸೇರಿಸಿದರು. ಈ ವಿಭಜನೆಯು ಕೆಳಗಿನ ಕೊಡಗು ಜನರಿಗೆ ಅಸಮಾಧಾನವಾಯಿತು. ಕಾರಣ ಪುತ್ತೂರು, ಸುಳ್ಯ ಮಾಗಣೆಗಳು ಕ್ರಿ.ಶ.೧೭೦೦ ರಿಂದ ೧೮೩೪ ರ ತನಕ ಕೊಡಗಿನ ಅವಿಭಾಜ್ಯ ಅಂಗವಾಗಿತ್ತು ಮತ್ತು ಇವರ ಮಧ್ಯೆ ಸಾಂಸ್ಕೃತಿಕ ಹಾಗೂ ರಕ್ತ ಸಂಬಂಧವೂ ಇತ್ತು. ಕೊಡಗು ರಾಜರ ಕಾಲಕ್ಕೆ ಭೂಕಂದಾಯವನ್ನು ಧಾನ್ಯ ರೂಪದಲ್ಲಿ ನೀಡುತ್ತಿದ್ದರು. ಈ ಪದ್ದತಿಯ ಬದಲಿಗೆ ಮಂಗಳೂರಿನ ಆಂಗ್ಲ ಕಲೆಕ್ಟರನು ಈ ಸೀಮೆಯ ಜನರು ಭೂಕಂದಾಯವನ್ನು ಹಣದ ರೂಪದಲ್ಲಿ ಕೊಡಬೇಕೆಂದು ಹುಕುಂ ಜಾರಿ ಮಾಡಿದ. ಇದರಿಂದ ಮಧ್ಯವರ್ತಿ ದಳ್ಳಾಳಿಗಳಿಗೆ ಬೆಳೆ ಕೊಯ್ಲಾದ ಕೂಡಲೇ ಬಹುಭಾಗ ಧಾನ್ಯವನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಹೋಗಿ ಬದುಕಿನ ನಿರ್ವಹಣೆ ಕಷ್ಟವಾಯಿತು. ಅತ್ತ ಕೊಡಗಿನಲ್ಲಿ ಆಂಗ್ಲರ ಆಳ್ವಿಕೆಯಿದ್ದರೂ ಹಳೆ ಪದ್ದತಿಯೇ ಮುಂದುವರಿಯಿತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಈ ಸೀಮೆ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಆಂಗ್ಲರು ಇತ್ತ ಕೊಡವ (Coorgi) ಭೂಮಾಲೀಕರೂ, ದಿವಾನರೂ ಆಗಿದ್ದ ಚೆಪ್ಪುಡಿರ ಪೊನ್ನಪ್ಪ, ಅಪ್ಪಾರಂಡ ಬೋಪು ಇನ್ನಿತರ ಕೊಡವ ಜನಾಂಗಕ್ಕೆ ಹೆಚ್ಚು ಬಡ್ತಿ, ಆದ್ಯತೆ ನೀಡಿ ಸಮಾಲೋಚನೆ ನೀಡುತ್ತಿದ್ದರು. ಅದಲ್ಲದೆ ಕೊಡವರಿಗೆ ಹಿಂದಿನ ರಾಜವಂಶವು ಹೊರಗಿನವರೆಂದು ಕಂಡು ರಾಜವಂಶದ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ ಉಳಿದಿರಲಿಲ್ಲ. ಆದರೆ ಕೊಡಗಿನ ಗೌಡ ಸಮುದಾಯದವರಿಗೆ ಹಾಲೇರಿ ರಾಜವಂಶವು ಇಕ್ಕೇರಿ ರಾಜವಂಶದವರ ಮೂಲದವರಾಗಿದ್ದು, ತಮ್ಮ ಜಾತಿ ಮೂಲದವರೆಂದು ತಿಳಿದಿದ್ದು ಎರಡು ರಾಜವಂಶಗಳ ಮೇಲೆ ಅವರಿಗೆ ರಾಜಭಕ್ತಿಯಿತ್ತು. ಅವರ ಹಳೆಯ ದಿನಗಳು ಬ್ರಿಟಿಷ್ ಆಳ್ವಿಕೆಗಿಂತ ಉತ್ತಮವಾಗಿತ್ತೆ ಅಂದುಕೊಂಡರು. ರೈತರು ತಾವು ಬೆಳೆದಿರುವ ಧಾನ್ಯಗಳ ಮೇಲೆ ವ್ಯಾಪಾರ ತೆರಿಗೆಯನ್ನು, ಉಪ್ಪು, ತಂಬಾಕು ಇತ್ಯಾದಿ ಉತ್ಪಾದಿಸುವ ಜವಾಬ್ದಾರಿಯು ಸರಕಾರದೆಂದೂ, ಬ್ರಿಟಿಷರ ನ್ಯಾಯಾಲಯ, ವಕೀಲತ್ವ ಸಾಮಾನ್ಯವಾಗಿ ಮಧ್ಯವರ್ತಿ ದಲ್ಲಾಳಿಗಳ ಪರವಾಗಿತ್ತು.
ಇದು ಮಾತ್ರವಲ್ಲದೆ ಬ್ರಿಟಿಷರು ಜನರನ್ನು ಮತಾಂತರಿಸುವ ಪ್ರಯತ್ನ ನಡೆದಿದ್ದು ಕೂಡಾ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕರ್ನಲ್ ಫ್ರೇಜರನು ತಾ.೧೦ನೇ ಜೂನ್ ೧೮೩೪ ರ ಪತ್ರವೊಂದರಲ್ಲಿ ಮೆಕನಾಮಕ್ಟನ್ಗೆ ಬರೆದು ಕೊಡವರನ್ನು (Coorgs) ಮತಾಂತರಿಸುವ ಸಾಧ್ಯತೆಯನ್ನು ಈ ತರವಾಗಿ ವಿವರಿಸಿರುತ್ತಾನೆ.
“…. The people appear to have little or no attachment to the debasing supersitition of the country and their minds seem to me to be more open than those of any other Indians. I have seen to be prepared for receiving the light of the cristian religion while their intellect may be expected rapidly to expand under the influence of that education they are soliciting”
ಆ ಕಾಲದಲ್ಲಿ ರೈತರ ಮನಸ್ಥಿತಿಯನ್ನು ಮಾರ್ಕ್ ಕಬ್ಬನ್ ನು ಈ ರೀತಿಯಾಗಿ ವರ್ಣಿಸಿರುತ್ತಾನೆ.
“To lose his patrimonial estate is one of the greatest misfortunes an Indian Farmer can be made to suffer, and if the inhabitants of ‘lower Coorg’ are so ready to bring forward to the Government the grievances they now apprehend, it is not likely that they will be more quite, when they see those apprehensions realised – they already complain of foreign native servants being sent to rule them, they would complain more of foreign-landlords”
ಕ್ರಿ. ಶ. ೧೮೫೭ ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ. ಆಂಗ್ಲರ ಸತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾ ಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು ’ದಂಗೆ’ ಎಂದರೂ ಅದರು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್ ಪಾಂಡೆ, ತಾಂತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ ’ಸಿಪಾಯಿ ದಂಗೆ’ ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅನ್ನುವುದಾದರೆ ೧೮೫೭ ಕ್ಕೂ ಮೊದಲು ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ?
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ೧೮೩೭ ರಲ್ಲೇ ನಡೆದಿತ್ತು… ಹೌದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ ಇಲ್ಲದೆಯೋ ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು-ಸುಳ್ಯದ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಆಂಗ್ಲರು ಹೀಗಳೆದ ದರೋಡೆ, ಕಲ್ಯಾಣಪ್ಪನ ಕಾಟಕಾಯಿ ಇದು ಅಮರ ಸುಳ್ಯ ದಂಗೆ.
ಬಿದರೂರಿನ ಧೋಂಡಿಯ ವಾಘ, ಐಗೂರಿನ ವೆಂಕಟಾದ್ರಿ ನಾಯಕ (೧೮೦೨), ಕಿತ್ತೂರಿನ ಚೆನ್ನಮ್ಮಾಜಿ (೧೮೨೪), ಸಂಗೊಳ್ಳಿ ರಾಯಣ್ಣ, ಕೊಡಗಿನ ಅಪರಂಪಾರ (೧೮೩೫), ಕಲ್ಯಾಣಸ್ವಾಮಿ (೧೮೩೭), ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ ರಾಮಗೌಡ, ಕುಡಿಯ ಸಹೋದರರು…. ಹೀಗೆ ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ ಅನೇಕ ವೀರರು ೧೮೫೭ಕ್ಕೂ ಹಿಂದೆಯೇ ರಕ್ತತರ್ಪಣ ಗೈದಿದ್ದರು. ಆದರೆ ಅವರ ಬಗೆಗೆ ಅವರದೇ ನೆಲದ ನಮಗೆ ಅರಿವಿಲ್ಲದೇ ಇರುವುದು ದುರಂತ ಸತ್ಯ!
೧೮೩೪ ರವರೆಗೆ ಅಮರಸುಳ್ಯ ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕ್ಕವೀರರಾಜೇಂದ್ರನು ಸ್ತ್ರಿಸುಖ ಲೋಲುಪನೆಂದು ಆಂಗ್ಲ ಚರಿತ್ರೆಕಾರರು ಪ್ರತಿಬಿಂಬಿಸಿ ಕೊಡಗಿನ ಜನ ಅವನನ್ನು ದ್ವೇಷಿಸುವಂತೆ ಮಾಡಿ ಆಂಗ್ಲರು ೧೮೩೪ ರ ಏಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರ್ನ ನೇತೃತ್ವದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಏಪ್ರಿಲ್ ೬ಕ್ಕೆ ಕೋಟೆ ಪ್ರೇಸರನ ವಶವಾಗುತ್ತದೆ. ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ. ದಿವಾನ್ ಲಕ್ಷ್ಮೀನಾರಾಯಣ, ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ. ಎ.೧೦ಕ್ಕೆ ಮಡಿಕೇರಿಯಲ್ಲಿ ಶರಣಾದ ದೊರೆಯನ್ನು ಪ್ರೇಸರ್ ಎ.೨೪ಕ್ಕೆ ಬೆಂಗಳೂರಿಗೆ ಕಳುಹಿಸಿದ. ಮುಂದೆ ಮಗಳ ಸಹಿತ ವಾರಣಾಸಿ ಅಲ್ಲಿಂದ ಲಂಡನ್ಗೆ ಕಳಿಸಲಾಗುತ್ತದೆ. ೧೮೫೯, ಸೆ.೨೪ ರಂದು ಖಾಯಿಲೆಯಿಂದಾಗಿ ಲಂಡನ್ ನಲ್ಲೇ ಮರಣ ಹೊಂದುತ್ತಾನೆ.
೧೮೩೩ ರಲ್ಲಿ ಮಂಜರಾಬಾದ್ ಬಾಗಗಳಲ್ಲಿ ಸ್ವಾಮಿ ಅಪರಂಪಾರ ಓರ್ವ ಜಂಗಮ ಕಾಣಿಸಿಕೊಳ್ಳುತ್ತಾನೆ. ಕೊಡಗಿನ ಜನ ಇವನನ್ನು ಹಿಂದಿನ ಅರಸ ಲಿಂಗರಾಜೇಂದ್ರನ ಅಣ್ಣ ಅಪ್ಪಾಜಿಯ ಹಿರಿಮಗ ವೀರಪ್ಪನೆಂದು ಭಾವಿಸುತ್ತಾರೆ. ಆದರೆ ಇವನು ತುಮಕೂರಿನ ಮಾಯಸಂದ್ರದ ಕಡಗನೂರಿನವ ಎನ್ನಲಾಗಿದೆ. ನಿರಂಜನರ ಕಾದಂಬರಿ ’ಸ್ವಾಮಿ ಅಪರಂಪಾರ’ ಇವನ ಬಗ್ಗೆಯೇ.
ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತು ರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗರಿಗೆ ಅಸಮಾಧಾನ ಉಂಟಾಗುತ್ತದೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾರನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಇವನು ಸೋಮವಾರಪೇಟೆ, ಹಾರಂಗಿ, ಹಾಲೇರಿ, ಹೊಸಕೋಟೆ ಮೊದಲಾದೆಡೆ ಆಂಗ್ಲರ ವಿರುದ್ಧ ಜನ ಸಂಘಟನೆ ನಡೆಸಿ ಸುಬ್ರಹ್ಮಣ್ಯಕ್ಕೆ ಬರುತ್ತಾನೆ. ಇವನನ್ನು ರಾಜವಂಶಸ್ಥನೆಂದು ಕೂಜುಗೋಡಿನ ಅಪ್ಪಯ್ಯಗೌಡ ಹಾಗೂ ಮಲ್ಲಪ್ಪ ಗೌಡರು ಸತ್ಕರಿಸಿ ಕೊಡಗಿನಿಂದ ಬ್ರಿಟಿಷರನ್ನು ಓಡಿಸುವ ಯೋಜನೆ ಹಾಕಿಕೊಳ್ಳುತ್ತಾರೆ. ಸುಮಾರು ಸಾವಿರ ಮಂದಿ ಸೇನೆಯೊಡನೆ ಮಡಿಕೇರಿ ಕಡೆಗೆ ನಡೆಯುತ್ತದೆ. ಆದರೆ ಅಪರಂಪಾರ ಗೌಡಳ್ಳಿ ತಲುಪುವ ಮುನ್ನವೇ ಮೋಸದಿಂದ ಸೆರೆಯಾಗುತ್ತಾನೆ. ಕೂಜುಗೋಡು ಸಹೋದರರು ಪಾರಾಗುತ್ತಾರೆ. ಅಪರಂಪಾರನನ್ನು ತಿರುಚಿನಾಪಳ್ಳಿಯ ಜೈಲಿಗೆ ಕಳುಹಿಸಲಾಯಿತು. ೧೮೬೯ ರಲ್ಲಿ ಬಿಡುಗಡೆಯಾಗಿ ೧೮೭೦ ರಲ್ಲಿ ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ.
ಅಪರಂಪಾರನ ಆಪ್ತರಲ್ಲಿ ಓರ್ವನಾದ ಕಲ್ಯಾಣ ಬಸವ- ಕಲ್ಯಾಣಪ್ಪ ತನ್ನನ್ನು ಅಪ್ಪಾಜಿಯ ದ್ವಿತೀಯ ಪುತ್ರನೆಂದು ಕರೆಸಿಕೊಂಡು ಕಲ್ಯಾಣಸ್ವಾಮಿ ಎಂದು ಕರೆಸಿಕೊಂಡು ಹಾಲೇರಿಯ ಗದ್ದುಗೆ ಏರಲು ಜನ ಬೆಂಬಲ ಪಡೆಯುತ್ತಾನೆ. ಆದರೆ ದಿವಾನ ಚೆಪ್ಪುಡಿರ ಪೊನ್ನಪ್ಪ ಮಡಿಕೇರಿಯಲ್ಲಿ ಆಂಗ್ಲ ಅಧಿಕಾರಿ ಕ್ಯಾಪ್ಟನ್ ಲೀಹಾರ್ಡಿಯ ಮುಂದೆ ಕಲ್ಯಾಣಪ್ಪನನ್ನು ಹಾಲೇರಿ ರಾಜವಂಶಸ್ಥನಲ್ಲ ಎಂದು ಸಾಬೀತುಪಡಿಸಿದ. ಆದರೂ ಜನ ಬೆಂಬಲ ಕಲ್ಯಾಣಪ್ಪನಿಗೆ ಕಡಿಮೆಯಾಗಲಿಲ್ಲ. ಏಳು ಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ ಇವನಿಗೆ ಬೆಂಗಾವಲಿಗೆ ನಿಂತರು. ಸುಳ್ಯ ಕೆದಂಬಾಡಿ ರಾಮಗೌಡ, ಕೂಜುಗೋಡು ಸಹೋದರರು, ಪೆರಾಜೆ ಊಕಣ್ಣ ಬಂಟ, ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ, ಧರ್ಮಸ್ಥಳದ ಮಂಜಯ್ಯ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.
ತನ್ನ ಕಾರ್ಯವನ್ನು ಕಲ್ಯಾಣಸ್ವಾಮಿ ದಕ್ಷಿಣ ಕನ್ನಡಕ್ಕೆ ವಿಸ್ತರಿಸಲು ತೀರ್ಮಾನಿಸಿದರೂ ಅವನನ್ನು ಸೆರೆ ಹಿಡಿಯುವ ಆಂಗ್ಲರ ಯೋಜನೆಯನ್ನು ಅರಿತು ಕೊಡ್ಲಿಪೇಟೆಯ ಮೂಲಕ ವೈನಾಡಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಆದರೆ ಲೀಹಾರ್ಡಿ ಮಲಬಾರಿನ ಸೈನಿಕರ ನೆರವಿನಿಂದ ಇವನನ್ನು ೧೮೩೭ ರಲ್ಲಿ ಸೆರೆ ಹಿಡಿದು ಮೈಸೂರಿನ ಸೆರೆಮನೆಗೆ ತಳ್ಳುತ್ತಾನೆ. ಕ್ರಾಂತಿಯ ಕಿಡಿಯೊಂದು ಆರುತ್ತದೆ.
ಬಂಧನದ ವಿಚಾರ ಹುಲಿ ಕಡಿದ ನಂಜಯ್ಯನಿಗೆ ಮಾತ್ರ ಗೊತ್ತಿತ್ತು. ಸಂಘಟನೆ ಉಳಿಸಿಕೊಳ್ಳುವುದಕ್ಕಾಗಿ ಇದನ್ನು ಗುಪ್ತವಾಗಿಡಲಾಗುತ್ತದೆ. ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಅಪರಂಪಾರನ ಸಹಾಯಕ ಹಾಗೂ ಕಲ್ಯಾಣ ಸ್ವಾಮಿಯ ಆಪ್ತ ಪುಟ್ಟ ಬಸವನನ್ನು ಕಲ್ಯಾಣಪ್ಪನೆಂದು ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಹಂಬಲಿಸಿದ್ದರು. ಆನರು ಬಸವನನ್ನೇ ಕಲ್ಯಾಣಪ್ಪ ಎಂದು ನಂಬಿದ್ದರು!
ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು ಹೇರಿದ್ದರಿಂದ ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ ನಂಜಯ್ಯ ಹಾಗೂ ಕೆದಂಬಾಡಿ ರಾಮಗೌಡ ೧೮೩೭ ಎ.೬ ರಂದು ಇಲ್ಲಿಂದಲೇ ಧಂಗೆ ಆರಂಭಿಸಲು ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಆರಂಭಿಸಲಾಯ್ತು. ಇವನು ಅಮರಸುಳ್ಯದ ಅಮಲ್ದಾರನಾಗಿದ್ದು, ಆಂಗ್ಲರ ಪರವಾಗಿ ಅನಾಚಾರಗಳನ್ನು ನಡೆಸುತ್ತಿದ್ದ. ಒಂದು ಬಾರಿ ಕೆದಂಬಾಡಿ ರಾಮಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲದಲ್ಲಿ ಅಡ್ಡಗಟ್ಟಿ ಕತ್ತಿಯಿಂದ ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು ಉಳಿಸಿತ್ತು. ಆದರೆ ಮದುವೆಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವುದರೊಂದಿಗೆ ಕ್ರಾಂತಿಯ ಕಹಳೆ ಊದಲಾಯಿತು.
ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ, ಕೆದಂಬಾಡಿ ರಾಮಗೌಡ, ಚೆಟ್ಟಿ-ಕುರ್ತು ಕುಡಿಯರು, ಕರಡಿಮಲೆ ಅಣ್ಣೆಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಸೈನ್ಯ ೧೮೩೭ ರ ಮಾರ್ಚ್ನಲ್ಲಿ ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ (ಪುಟ್ಟ ಬಸವ) ಮಾರ್ಚ್ ೩೦ ರಂದು ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ. ಇಲ್ಲೇ ಪ್ರಸಿದ್ಧ ಇಸ್ತಿಹಾರ್ ಪ್ರಕಟಿಸಿದ. ಅಮರಸುಳ್ಯ ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವುದು; ಕಂದಾಯ ಮನ್ನಾ; ತಂಬಾಕು, ಉಪ್ಪಿನ ಮೇಲಿನ ತೆರಿಗೆ ರದ್ದು. ಇದರಿಂದ ಪಂಜ, ಪುತ್ತೂರು, ಕಡಬ, ವಿಟ್ಲ ಸುಲಭದಲ್ಲಿ ಕೈ ವಶವಾದರೆ ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಮಂಜಯ್ಯ ಹೆಗ್ಡೆ ಫಿರಂಗಿಗಳನ್ನು ಕಳುಹಿಸಿದರು. ಪಡೆ ಯಾವುದೇ ಸಮಸ್ಯೆ ಇಲ್ಲದೇ ಮಂಗಳೂರು ಸೇರಿ ಬಾವುಟ ಗುಡ್ಡೆಯನ್ನು ಖಜಾನೆ, ಜೈಲು, ಶಸ್ತ್ರಗಳನ್ನು ವಶಮಾಡಿಕೊಂಡು ಕ್ರಾಂತಿಯ ಬಾವುಟವನ್ನು ಹಾರಿಸಿದರು. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ, ಬ್ರಿಟಿಷರ ಧ್ವಜವನ್ನು ಕಿತ್ತೊಗೆದು ಕ್ರಾಂತಿ ಬಾವುಟವನ್ನು ಏರಿಸಿ, ೧೩ ದಿನಗಳ ರಾಜ್ಯಭಾರವನ್ನು ಮಾಡಿದರು.
ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟಿಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ ಸುಬ್ರಾಯ ಹೆಗ್ಗಡೆ ಹಾಗೂ ಕ್ರಾಂತಿಕಾರರ ಎರಡನೇ ಪಡೆಯನ್ನು ನೇತ್ರಾವತಿ ನದಿಯಲ್ಲಿ ಪಿರಂಗಿ ಹಾರಿಸಿ ಸಾಯಿಸಲಾಯಿತು.
ಕಣ್ಣಾನೂರಿನಿಂದ ಆಂಗ್ಲರ ಪಿರಂಗಿ ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರೆ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ ಬಂಗರಸ, ರಾಮಗೌಡ, ಕುಕ್ಕನೂರು ಚೆನ್ನಯ್ಯ, ಕಲ್ಯಾಣಪ್ಪ, ಕುಡಿಯರು, ನಾಲ್ಕುನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ಕಲ್ಯಾಣಪ್ಪನಾಗಿದ್ದ ಪುಟ್ಟಬಸವನ ತಲೆಗೆ ಆಗಲೇ ಹತ್ತು ಸಾವಿರ ರೂಪಾಯಿಗಳ ಬೆಲೆ ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿಬಸವಯ್ಯ ದುಡ್ಡಿನ ಆಸೆಗೆ ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ. ೧೮೩೭ ಮೇ ೧೫ ರಂದು ಕ್ಯಾ. ಲೀಹಾರ್ಡಿ ಮಡಿಕೇರಿಯಲ್ಲಿ ಬಸವನನ್ನು ವಿಚಾರಿಸಿ ಗಲ್ಲಿಗೇರಿಸಿದ!
ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಕುಡಿಯರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ನಾಯಕ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡನನ್ನು ೧೮೩೭ ಅಕ್ಟೋಬರ್ ೩೧ ರಂದು ಮಡಿಕೇರಿ ಕೋಟೆಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.
ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಫಲವಾಗಲಿಲ್ಲ! ಅನೇಕ ಮಂದಿ ಆಂಗ್ಲರ ಪರವಾಗಿ ನಿಂತು ರಾಜದ್ರೋಹಿ ಕಾರ್ಯವೆಸಗಿದ್ದರು. ಬೋಪು ದಿವಾನ, ಅಟ್ಲೂರು ರಾಮಪ್ಪಯ್ಯನಂತಹ ಅನೇಕ ದ್ರೋಹಿಗಳು ದಂಗೆ ವ್ಯವಸ್ಥೆಯನ್ನು ಕೆಡಿಸಿದ್ದರು. ಕೊಡವರೂ ದಂಗೆಯ ಸಂದರ್ಭಧಲ್ಲಿ ಸುಮ್ಮನೆ ಕುಳಿತರು. ಆಂಗ್ಲರಿಗೆ ದಂಗೆಯನ್ನು ಅಡಗಿಸುವಲ್ಲಿ ನೆರವಾದರು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ ಕಾಟಕಾಯಿ ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು (ಕುಳ್ಕುಂದ ಶಿವರಾಯ) ರು ಸಕಾರಣವಾಗಿಯೇ ನಿರಾಕರಿಸಿದರು.
ಉಳುವಾರು ರಾಮಯ್ಯ ಗೌಡ, ಕುಡೆಕಲ್ಲು ಪುಟ್ಟ, ತಿಮ್ಮಯ್ಯ, ಸುಳ್ಯಕೋಡಿ ಕೃಷ್ಣಪ್ಪ, ಕಳಗಿ ಅಣ್ಣು, ಕುಕ್ಕೆಟ್ಟಿ ಚೆನ್ನ ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್ ಎಂ. ಲೆವಿನ್, ಮೇಜರ್ ಜನರಲ್ ವಿಗೋರ್ ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ. ರಿಕ್ಟರ್ ಕೊಡಗು ಗೆಜೆಟಿಯರ್ ನಲ್ಲಿ ಕೊಡಗು ಬಂಡಾಯವೆಂದು ಕರೆಯಲ್ಪಡುವುದು, ನಿಜವಾಗಿಯೂ ಹೇಳುವುದಾದರೆ ಗೌಡರ ಮೇಲ್ಬೀಳುವಿಕೆ ಎಂದಿದೆ. (ಎನ್.ಎಸ್. ದೇವಿಪ್ರಸಾದ್ ಸಂಪಾಜೆ; ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ, ಮುಳ್ಯ ಈಶ್ವರ ಸೋಮಾಯಾಜಿ, ಚೆಟ್ಟಿ-ಕುರ್ತು ಕುಡಿಯರಂತಹ ಅನೇಕ ಭಿನ್ನ ಸಮುದಾಯದವರು ಹೋರಾಡಿದ್ದಾರೆ.
ದಂಗೆಯಲ್ಲಿ ಆಂಗ್ಲರಿಗೆ ನೆರವಾದವರಿಗೆ ಕೋವಿ, ಕುದುರೆ, ಬಂಗಾರದ ಪದಕಗಳನ್ನು ನೀಡಲಾಗಿತ್ತು. ಈ ಪದಕದ ಒಂದು ಬದಿಯಲ್ಲಿ FOR DISTINGUISHED CONDUCT AND LOYALTY OF THE BRITISH GOVERNMENT, ಇನ್ನೊಂದು ಬದಿಯಲ್ಲಿ ಸಂನ್ ೧೮೩೭ನೇ ಯಪ್ರಿಲ್ ಮೇ ತಿಂಗಳಲ್ಲಿ (ಶರಾರದ್ರುವ!?!?) ಬಯಸುವ ವಿಚಾರದಲ್ಲು ಕುಂಪಣಿ ಸರಕಾರಕ್ಕೆ ನಂಮ (ತಪೂಲಾಲ್?!?!) ಮಾಡಿದ ಯಾದುಗಾಗಿ ನಿಶಾನಿಗೋಸ್ಕರ ಎಂದಿದೆ. ಇದು ಹೋರಾಟ ಹೇಗೆ ಆಂಗ್ಲರ ಬೆವರಿಳಿಸಿತ್ತು ಎಂಬುದನ್ನು ಸಾರುತ್ತದೆ.
ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ ಇವರು ಕಾಣದಾಗುವುದು ನಮ್ಮ ದುರ್ದೈವ.
ಉಪಸಂಹಾರ: ವಿಶಾಲ ಕೊಡಗಿನ ರೈತಾಪಿ ಕುಟುಂಬಗಳು ನಡೆಸಿದ ದಂಗೆ ಬ್ರಿಟಿಷರ ಮೈ ನಡುಗಿಸಿದ್ದು ನಾವು ತಿಳಿಯಬೇಕಿದೆ. ಸುಳ್ಯ, ಬೆಳ್ಳಾರೆ, ಪುತ್ತೂರು ಹಾಗೂ ಮಂಗಳೂರಿನಿಂದ ಬ್ರಿಟಿಷರನ್ನು ಓಡಿಸಿ, ಮಂಗಳೂರಿನ ಬಾವುಟ ಗುಡ್ಡೆಯಲ್ಲಿ, ಬ್ರಿಟಿಷರ ಧ್ವಜವನ್ನು ಕಿತ್ತೊಗೆದು ಕ್ರಾಂತಿ ಬಾವುಟವನ್ನು ಏರಿಸಿ, ೧೩ ದಿನಗಳ ರಾಜ್ಯಭಾರವನ್ನು ಮಾಡಿದ್ದು ಸುಳ್ಯ ಸೀಮೆಯ ಕೆದಂಬಾಡಿ ರಾಮೇಗೌಡರ ತಂಡವಾಗಿತ್ತು.
ಇತ್ತ, ಮೇಲಿನ ಕೊಡಗಿನ ಮಡಿಕೇರಿಯ ಕೋಟೆಗೆ ಮುತ್ತಿಗೆ ಇಡಲು, ಗ್ರಾಮ ಗ್ರಾಮಸ್ಥರನ್ನು ಹುರಿದುಂಬಿಸಿ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಮುಂದುವರೆಯುತ್ತಾರೆ. ಆಗಿನ ಕಾಲದಲ್ಲೇ ೨೦೦೦ ಕ್ಕೂ ಹೆಚ್ಚು ರೈತಾಪಿ ಯೋಧರು ೧೮೩೭ ರ ಅಮರ ಸುಳ್ಯ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿರುವುದಾಗಿ ಆಗಿನ Mysore Gazetteer ನಲ್ಲಿ ಪ್ರಕಟಿಸಲಾಗಿತ್ತು.
ಆದರೆ ರೈತಾಪಿ ಜನರಿಗೆ ದೊರಕಿದ ಈ ಜಯವು ಅತೀ ಕಡಿಮೆ ಬದುಕಿನದಾಗಿತ್ತು. ಬ್ರಿಟಿಷ್ ಪಡೆಗಳು ಕಲ್ಲಿಕೋಟೆ, ಬೆಂಗಳೂರು ಮತ್ತು ಬೊಂಬಾಯಿಯಿಂದ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಂದು ಅಮರ ಸುಳ್ಯ ಸ್ವಾತಂತ್ರ ಸಮರವನ್ನು ಸದೆಬಡೆಯಲು ಸಫಲರಾಗುತ್ತಾರೆ. ಸಾವಿರಾರು ರೈತಾಪಿ ಹೋರಾಟಗಾರರು ಮಂಗಳೂರಿನಲ್ಲಿ ನಡೆದ ಕದನದಲ್ಲಿ ವೀರ ಮರಣವನ್ನಪ್ಪುತ್ತಾರೆ. ಕೆದಂಬಾಡಿ ರಾಮೇಗೌಡ ಇತ್ಯಾದಿ ನಾಯಕರು ಹುತಾತ್ಮರಾಗುತ್ತಾರೆ.
ಕೊಡಗಿನ ಧೀರ ಸುಬೇಧಾರ್ ಗುಡ್ದೆಮನೆ ಅಪ್ಪಯ್ಯ ಗೌಡ
ಇತ್ತ ಬಿಸಿಲೇ ಘಾಟಿಗಾಗಿ ಹೊರಟಿದ್ದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು, ನಾಲ್ಕುನಾಡು ಉತ್ತು, ಶಾಂತಳ್ಳಿ ಮಲ್ಲಯ್ಯ, ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಮಲ್ಲಯ್ಯ ಗೌಡನವರ ನೇತೃತ್ವದಲ್ಲಿ ಬಂಡಾಯಗಾರರ ಸೈನ್ಯವು ಮೇಲಿನ ಕೊಡಗಿನ ಜನರನ್ನು ಹುರಿದುಂಬಿಸುತ್ತಾ ಮಡಿಕೇರಿಯ ಕೋಟೆಯನ್ನು ತಆ.೧೬ನೇ ಏಪ್ರಿಲ ೧೮೩೭ ರಂದು ಮುತ್ತಿಗೆ ಹಾಕುವುದೆಂದು ನಿರ್ಧರಿಸಲಾಗಿತ್ತು. ಆದರೆ ಬ್ರಿಟಿಷರ ವಿಧೇಯರಾದ ಸುಬೇದಾರ್ ಮಾದಯ್ಯ, ಅಪ್ಪಾರಂಡ ಬೋಪು ದಿವಾನ ಮುಂತಾದವರು, ಬ್ರಿಟಿಷರ ಆಮೀಷಗಳಿಂದಾಗಿ, ಕುಟಿಲ ತಂತ್ರವನ್ನು ಹೆಣೆದು, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಹಾಗೂ ಅವರ ಸಹಚರರನ್ನು ಬಂಧಿಸಲು ನೆರವಾಗಿದ್ದು, ಬಂಧಿತ ಮುಖಂಡರನ್ನು ಮಡಿಕೇರಿ ಕೋಟೆಯ ಪೂರ್ವಭಾಗದಲ್ಲಿ ತ.೩೧.೧೦.೧೮೩೭ ರಲ್ಲಿ ಕುಟುಂಬ ಮತ್ತು ಊರಿನ ಹಿರಿಯರ ಎದುರು ಗಲ್ಲಿಗೇರಿಸಲಾಯಿತು. ಕೇವಲ ಭಯ ಹುಟ್ಟಿಸುವ ಹಾಗೂ ಬಂಡಾಯ ಏಳುವ ಸಾರ್ವಜನಿಕರನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಸಾರ್ವಜನಿಕವಾಗಿ ನೇಣಿಗೆ ಹಾಕುವ ಸಾಹಸಕ್ಕೆ ಬ್ರಿಟಿಷರು ಕೈ ಹಾಕದಿರುವುದು ಬ್ರಿಟಿಷ್ ಇತಿಹಾಸಲದಲಿ ಇದು ಎರಡನೆಯದು ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇ ಗೌಡರ ಅಭಿಪ್ರಾಯ.
ಈ ೧೮೩೭ ರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷ್ ದಾಖಲೆಗಳಲ್ಲಿ ಬಂಡಾಯ, ಕಾಟಕಾಯಿ ಎಂಬುದಾಗಿ ನಮೂದಿಸಿದ್ದು, ಹೆಚ್ಚಿನ ಪ್ರಚಾರ ಸಿಗದಂತಾಯಿತು.
ಸುಳ್ಯ ಸೀಮೆಯ ಕೆದಂಬಾಡಿ ರಾಮೇಗೌಡರ ಬಳಿ ಬಲ್ಲಾಳ್ತಿ ಪಾಳೇಗಾರರು ಕೊಡ ಮಾಡಿಸಿದ ತಲೆತಲಾಂತರವರೆಗೆ ಅನುಭವಿಸುವ ಜಮ್ಮ ಹಕ್ಕಿನ ಆಸ್ತಿಯಿದ್ದರೂ, ಕೊಡಗಿನ ಮಧ್ಯಮ ರೈತ ಸಮುದಾಯಕ್ಕೆ ಬ್ರಿಟಿಷರ ಕ್ರೂರ ತೆರಿಗೆ ಪದ್ಧತಿ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದರೆ ಫಲ, ಸಾವಿರಾರು ಎಕರೆ ಆಸ್ತಿ ಪಾಸ್ತಿಗಳು ಬ್ರಿಟಿಷರ ಪಾಲಾಗಿ ಹರಾಜಾಗಿದ್ದಲ್ಲದೆ, ಹುತಾತ್ಮರಾಗಬೇಕಾಯಿತು.
೧೮೩೭ರ ನಂತರದ ದಿನಗಳಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೌಡ ಸಮುಧಾಯದ ಜನರು ಬ್ರಿಟಿಷರು ಮತ್ತು ಅವರ ಅನುಯಾಯಿಗಳಿಂದ ಶೋಷಣೆಗೆ ಒಳಗಾಗಲು ತಪ್ಪಿಸಿಕೊಳ್ಳಲು ತಮ್ಮನ್ನು ಗೌಡರೆಂಬುದಾಗಿ ಹೊರ ಪ್ರಪಂಚದಲ್ಲಿ ಪ್ರತಿಬಿಂಬಿಸುವದನ್ನು ನಿಲ್ಲಿಸಿ “ಗೌಡ” ಎಂಬ ನಾಮಧೇಯವನ್ನು ಕೈಬಿಟ್ಟಿರುತ್ತಾರೆ. ಅದರಲ್ಲೂ ಕೊಡಗಿನಲ್ಲಿ “ಗೌಡ “ ಎಂಬ ಪದನಾಮ ಇರುವವರು ಯಾರೂ ಇಲ್ಲ.
ಕ್ರಿ.ಶ.೧೮೩೭ ರಲ್ಲಿ ಹುತಾತ್ಮರಾದ ಕೆದಂಬಾಡಿ ರಾಮೇಗೌಡ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರಂತಹ ಧೀರರನ್ನು ಕೂಡಾ ತಡವಾಗಿ ನೆನಪಿಸಿಕೊಳ್ಳುತ್ತಿದ್ದರೂ ಅವರ ತ್ಯಾಗ ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಪರಾಮರ್ಶಿತ ಗ್ರಂಥಗಳು:
1. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ; ಗಣಪತಿ ರಾವ್ ಐಗಳ್, ೨೦೦೪
2. A History of South Kanara; Ramesh K.V.
3. In pursuit of our roots; Puttur Anantharaja Gowda 2015
4. Sri D. N. Krishnaiah; “Kodagina Itihasa” 1974.
5. Sham Bhat, South Kanara(1799-1860), A study in Colonial Administration & Regional Response.
6. Article by Sri Vidyadhara Kudekallu
7. Mysore & Coorg Gazetteer by BENJAMIN LUISE RICE , 1878.
8. Gazetteer of Coorg by G. Richter.-1870
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.