ಬೆಳ್ತಂಗಡಿ : ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲು ತಳಮಟ್ಟದ ರಾಜಕೀಯ ಜೀವನವನ್ನು ಪ್ರಾಮಾಣಿಕತೆಯಿಂದ ಹಾಗೂ ಪಾರದರ್ಶಕವಾಗಿ ನಡೆಸಬೇಕು. ನಂತರ ಜನರೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೋಯ್ಯುತ್ತಾರೆ ಎಂದು ಶಾಸಕ ವಸಂತ ಬಂಗೇರ ಹೇಳಿದರು. ಅವರು ಭಾನುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಯುವವಾಹಿನಿ ರಿ. ಬೆಳ್ತಂಗಡಿ ಘಟಕ, ಯುವವಾಹಿನಿ ಕೇಂದ್ರ ಸಮಿತಿ ರಿ. ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನೂತನವಾಗಿ ಆಯ್ಕೆಯಾದ ಬಿಲ್ಲವ ಸಮಾಜದ ಗ್ರಾ.ಪಂ.ಸದಸ್ಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ.ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಯುವವಾಹಿನಿ ತರಬೇತಿ ಹಮ್ಮಿಕೊಂಡಿದ್ದು ಈ ತರಬೇತಿಯಿಂದ ಮುಂದೆ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಮುಂದಿನ ರಾಜಕಿಯ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಿ ಎಂದರು.
ಯುವ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ಹರೀಶ್ಕುಮಾರ್ ಮಾತನಾಡಿ ತಾಲೂಕಿನಲ್ಲಿ ಬಿಲ್ಲವ ಸಮುದಾಯದ ಹಲವಾರು ಸಂಘಟನೆಗಳಿದ್ದು ಈ ಎಲ್ಲಾ ಸಂಘಟನೆಗಳು ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸುತ್ತಿರುವುದು ಸಂತೋಷದ ವಿಷಯ. ಈ ಸಂಘಟನೆಗಳಲ್ಲಿ ಇರುವಂತಹ ಉತ್ತಮ ಚಿಂತನೆಗಳು ತಾಲೂಕಿನ ಪ್ರತೀ ಬಿಲ್ಲವ ಸಮಾಜದ ಕುಟುಂಬಗಳಿಗೆ ತಲುಪಬೇಕು ಎಂದರು.
ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪಿತಾಂಬರ ಹೆರಾಜೆ ಮಾತನಾಡಿ ಸಮಾಜದ ಕುಟುಂಬಗಳ ಅಭಿವೃದ್ಧಿಗೆ ಸಮಾಜದ ಸಂಘ ಸಂಸ್ಥೆಗಳು ನಿರಂತರ ಪ್ರೋತ್ಸಾಹ ನೀಡುತ್ತಿದ್ದು ಇದರಿಂದ ಪ್ರಯೋಜನ ಪಡೆಯುವ ಸಮಾಜದ ಬಂಧುಗಳು ತಾನುಅಭಿವೃದ್ಧಿ ಹೊಂದಿ ಇತರ ಬಡತನದ ಕುಟುಂಬಗಳನ್ನು ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೆದು, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಪಿ ಧರಣೇಂದ್ರ ಕುಮಾರ್, ಬೆಳ್ತಂಗಡಿ ತಾಲೂಕು ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ವಿನೋದಿನಿ ರಾಮಪ್ಪ, ತಾಲೂಕು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೊಷ್ ಕುಮಾರ್ ಕಾಪಿನಡ್ಕ, ಜಿ. ಪಂ.ಸದಸ್ಯ ಶೈಲೇಶ್ ಕುಮಾರ್, ತಾ.ಪಂ. ಸದಸ್ಯ ಸುಧೀರ್ ಸುವರ್ಣ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಶಂಕರ್ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಪಂಚಾಯತ್ರಾಜ್ ಸಬಲೀಕರಣದ ಬಗ್ಗೆ ಮೇಘ ಪಾಲ್ತಾಡಿ, ಪಂಚಾಯತ್ ಪ್ರತಿನಿಧಿಗಳಲ್ಲಿ ನಾಯಕತ್ವ ಕೌಶಲ್ಯದ ಬಗ್ಗೆ ಪದ್ಮನಾಭ ಬಂಗೇರ ಆಳ್ವಾಸ್ ಕಾಲೇಜು ಮೂಡಬಿದ್ರೆ, ಸರಕಾರಿ ಸೌಲಭ್ಯಗಳ ಬಗ್ಗೆ ಜಯಾನಂದ ಲಾಲ, ಗ್ರಾ.ಪಂ.ಸ್ಥಾಯಿ ಸಮಿತಿಗಳ ಬಗ್ಗೆ ಪುರುಷೋತ್ತಮ ಜಿ, ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಬಗ್ಗೆ ಸುದಾಮಣಿ ಆರ್ ತರಬೇತಿ ನೀಡಿದರು. ರಾಕೇಶ್ಕುಮಾರ್ ವಂದಿಸಿದರು. ಅಶ್ವಥ್ ಕುಮಾರ್ ಕೆಲ್ಲಕೆರೆ. ಸ್ಮಿತೇಶ್ ಎಸ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯುವವಾಹಿನಿ ವಿದ್ಯಾರ್ಥಿ ನಿಧಿಯನ್ವಯ ಇಂಜಿನಿಯರಿಂಗ್ ವಿದ್ಯಾರ್ಥಿ ರಮೇಶ್ ಪಡ್ಪು ಉಜಿರೆ ಇವರಿಗೆ 10 ಸಾವಿರರೂ. ಸಹಾಯಧನವನ್ನು ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.