ಭಾರತದಲ್ಲಿ ಭಾರತವನ್ನು ವಿರೋಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಗೌರವವನ್ನು ಹರಾಜು ಹಾಕುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಪರಮಶತ್ರು ಪಾಕಿಸ್ಥಾನದ ಎದುರು ಭಾರತವನ್ನು ಅವಮಾನ ಮಾಡುವಂತಹ ಕೃತ್ಯಗಳನ್ನು ನಡೆಸುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳು ಸರ್ವೇಸಾಮಾನ್ಯ. ಇದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ. ಆದರೆ ಸರ್ಕಾರವನ್ನು ಟೀಕಿಸಲು ದೇಶದ ಮಾನವನ್ನು ಹರಾಜು ಹಾಕಬೇಕಾಗಿಲ್ಲ.
ಪಾಕಿಸ್ಥಾನ ಭಾರತದ ಬದ್ಧವೈರಿ. ಶತ್ರು ದೇಶದೊಂದಿಗೆ ಭಾರತವನ್ನು ಹೋಲಿಕೆ ಮಾಡುವುದನ್ನು ಯಾವ ಭಾರತೀಯನೂ ಕೂಡ ಸಹಿಸಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಮುಂತಾದವರು ಪಾಕಿಸ್ಥಾನದೊಂದಿಗೆ ಭಾರತವನ್ನು ತುಲನೆ ಮಾಡಿ ಭಾರತೀಯತೆಯನ್ನು ಅವಮಾನಿಸುತ್ತಿದ್ದಾರೆ.
ಇತ್ತೀಚಿಗಷ್ಟೇ ಕರೋನವೈರಸ್ ವಿಷಯದಲ್ಲಿ ಭಾರತಕ್ಕಿಂತ ಪಾಕಿಸ್ಥಾನ ಉತ್ತಮ ಕಾರ್ಯ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಮೊನ್ನೆಯಷ್ಟೇ ಲಾಹೋರ್ ಲಿಟರೇಚರ್ ಫೆಸ್ಟ್ ಅನ್ನು ಉದ್ದೇಶಿಸಿ ಮಾತನಾಡಿದ್ದ ತರೂರ್ ಅವರು, ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉಲ್ಬಣಗೊಳ್ಳುತ್ತಿರುವ ಧರ್ಮಾಂಧತೆ ಮತ್ತು ಪೂರ್ವಗ್ರಹ ಪೀಡನೆಯನ್ನು ಭಾರತ ನೋಡುತ್ತಿದೆ ಎಂದಿದ್ದಾರೆ. ಮಾತ್ರವಲ್ಲ ಸಾಂಕ್ರಾಮಿಕ ರೋಗ ಹೆಚ್ಚಾಗಲು ಕಾರಣವಾಗಿದ್ದ ತಬ್ಲೀಘಿ ಜಮಾತ್ ಅನ್ನು ಸಮರ್ಥಿಸಿದ ಅವರು, ಮುಸ್ಲಿಮರ ವಿರುದ್ಧ ಭಾರತದಲ್ಲಿ ಹೆಚ್ಚುತ್ತಿರುವ ತಾರತಮ್ಯಕ್ಕೆ ತಬ್ಲೀಘಿಗಳ ವಿರುದ್ಧ ನಡೆದ ಅಪಪ್ರಚಾರ ಉದಾಹರಣೆ ಎಂದಿದ್ದಾರೆ.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾನೂನಿನಲ್ಲಿ ಅಲ್ಪಸಂಖ್ಯಾತರಿಗೆ ಎಲ್ಲಾ ತರನಾದ ಸಮಾನತೆಗಳನ್ನು ಒದಗಿಸಲಾಗಿದೆ. ಸಂವಿಧಾನದ ರಕ್ಷಣೆ ಅವರಿಗೆ ಇರುವಾಗ ಅವರನ್ನು ನಿರ್ಲಕ್ಷ್ಯ ಭಾವದಿಂದ ನೋಡುವ ಮಾತೇ ಉದ್ಭವಿಸುವುದಿಲ್ಲ. ಭಾರತೀಯ ಮುಸ್ಲಿಮರು ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ, ಹೆಚ್ಚು ಶಿಕ್ಷಿತರಾಗಿದ್ದಾರೆ. ಬೇರೆ ಯಾವ ದೇಶವು ತನ್ನ ಅಲ್ಪಸಂಖ್ಯಾತರಿಗೆ ನೀಡದಷ್ಟು ಸವಲತ್ತುಗಳನ್ನು ಈ ದೇಶ ತನ್ನ ಅಲ್ಪಸಂಖ್ಯಾತರಿಗೆ ನೀಡಿದೆ. ಆದರೆ ಕಾಂಗ್ರೆಸ್ ಮುಖಂಡರುಗಳು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ಥಾನದಲ್ಲಿ ಭಾರತದ ಮುಸ್ಲಿಮರ ವಿರುದ್ಧ ತಾರತಮ್ಯ ನಡೆಯುತ್ತಿದೆ ಎನ್ನುತ್ತಿದ್ದಾರೆ. ಯಾವ ರಾಷ್ಟ್ರ ತನ್ನ ಅಲ್ಪಸಂಖ್ಯಾತರನ್ನು ತುಚ್ಚವಾಗಿ ಕಾಣುತ್ತದೆಯೋ, ಯಾವ ರಾಷ್ಟ್ರ ತನ್ನ ಅಲ್ಪಸಂಖ್ಯಾತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಹಿಂಸಾ ಮಾರ್ಗವನ್ನು ಅನುಸರಿಸುತ್ತದೆಯೋ ಆ ದೇಶದ ಮುಂದೆ ಭಾರತವನ್ನು ಅವಮಾನಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಪಾಕಿಸ್ಥಾನದಲ್ಲಿ ಸ್ಪರ್ಧಿಸುತ್ತಾರೋ ಎಂಬ ಅನುಮಾನಗಳು ಭಾರತೀಯರಿಗೆ ಕಾಡತೊಡಗಿದೆ. ಭಾರತ ಪಾಕಿಸ್ಥಾನದ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದಾಗ ಇದೇ ಜನರು ಭಾರತದ ಸರ್ಕಾರದ ಬಳಿ ಸಾಕ್ಷಿಯನ್ನು ಕೇಳಿದ್ದರು. ಆತ್ಮಸಾಕ್ಷಿ ಇಲ್ಲದವರು ಭಾರತೀಯ ಸೇನೆಯ ದಿಟ್ಟತನಕ್ಕೆ ಸಾಕ್ಷಿ ಕೇಳುವ ಮೂಲಕ ಭಾರತೀಯರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಸರ್ಕಾರದ ಕಾರ್ಯಕ್ಕೆ ಸಾಕ್ಷಿ ಕೇಳುವುದು ತಪ್ಪಲ್ಲ, ಆದರೆ ಸೇನೆ ಹೇಳಿದ್ದೆಲ್ಲ ಸುಳ್ಳು ಎಂಬುದನ್ನು ಬಿಂಬಿಸಲು ಕಾಂಗ್ರೆಸ್ಸಿಗರು ಪ್ರಯತ್ನ ಪಟ್ಟಿದ್ದು ನಿಜಕ್ಕೂ ದುರದೃಷ್ಟಕರವಾದ ಸಂಗತಿಯಾಗಿದೆ.
ಭಾರತಕ್ಕಿಂತ ಪಾಕಿಸ್ಥಾನ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ನಿಭಾಯಿಸಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅಂದರೆ ಆ ದೇಶದಲ್ಲಿ ಎಷ್ಟು ಮಂದಿ ಕೊರೋನಾ ಕಾರಣದಿಂದ ಸತ್ತಿದ್ದಾರೆ, ಎಷ್ಟು ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ, ಅಲ್ಲಿನ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕವನ್ನು ನಿಭಾಯಿಸುವ ಸವಲತ್ತುಗಳು ಎಷ್ಟರಮಟ್ಟಿಗೆ ಇದೆ ಎಂಬ ಅಂಕಿ ಅಂಶಗಳು ಕಾಂಗ್ರೆಸ್ಸಿಗರ ಬಳಿ ಇದೆಯೇ?.
ಭಾರತ ವಿಶ್ವದ ಏಳನೇ ಅತಿ ದೊಡ್ಡ ರಾಷ್ಟ್ರ, ಎರಡನೇ ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ, ಆದರೂ ನಮ್ಮ ವೈದ್ಯಕೀಯ ವ್ಯವಸ್ಥೆ ಬುಡಮೇಲಾಗದಂತೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕವನ್ನು ನಿಭಾಯಿಸಲಾಗುತ್ತಿದೆ. ಭಾರತದ ಔಷಧ ರಫ್ತು ಈಗ ಹಿಂದಿಗಿಂತ ವೃದ್ಧಿಯಾಗಿದೆ, ಪಿಪಿಇ ಕಿಟ್ಗಳನ್ನು ಭಾರತ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದೆ. ಕೋವಿಡ್ ಮರಣ ದರ ಭಾರತದಲ್ಲಿ ಅತಿ ಕಡಿಮೆ ಇದೆ. ಭಾರತದ ಈ ಸಾಧನೆಗಳನ್ನು ಪಾಕಿಸ್ಥಾನದ ಮುಂದೆ ಹೋಲಿಕೆ ಮಾಡಲು ಸಾಧ್ಯವೇ? . ಭಾರತದ ಕಾಲು ಭಾಗ ಭೂಭಾಗವನ್ನೂ ಅದು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ತಿಳಿಯದ ವಿಚಾರವೇ? ಅಷ್ಟಕ್ಕೂ ಆ ದೇಶ ಕೊರೋನಾವನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಕಾಂಗ್ರೆಸ್ಸಿಗರು ಖುದ್ದಾಗಿ ಹೋಗಿ ನೋಡಿ ಬಂದಿದ್ದಾರೆಯೇ?
ಶತ್ರು ರಾಷ್ಟ್ರದ ಮುಂದೆ ಭಾರತವನ್ನು ಅವಮಾನ ಮಾಡುವುದರಿಂದ ಕಾಂಗ್ರೆಸ್ಸಿಗರಿಗೆ ಸಿಗುವ ಲಾಭವಾದರೂ ಏನು?, ಭಾರತದ ನಿರ್ಧಾರಗಳನ್ನು ಪ್ರಶ್ನೆ ಮಾಡುವುದಿದ್ದರೆ ಭಾರತದಲ್ಲೇ ಪ್ರಶ್ನೆ ಮಾಡಲಿ. ಮನೆಯೊಳಗಿನ ಸಮಸ್ಯೆಯನ್ನು ಮನೆಯೊಳಗೆಯೇ ಪರಿಹರಿಸಿಕೊಳ್ಳಬೇಕು, ಅದನ್ನು ಊರು ತುಂಬ ಡಂಗೂರ ಸಾರಲು ಹೋದರೆ ಹೋಗುವುದು ನಮ್ಮ ಮರ್ಯಾದೆ. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರ್ಥಮಾಡಿಕೊಳ್ಳಬೇಕು.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.