ಆಹಾರ ಎಲ್ಲರ ಹಕ್ಕು. ಬದುಕಬೇಕಾದರೆ ಆಹಾರ, ನೀರು, ಗಾಳಿ ಮೊದಲಾದ ಕೆಲವು ವಿಚಾರಗಳು ಜೀವವಿರುವ ಪ್ರತಿಯೊಂದು ವಸ್ತು, ವಿಚಾರಗಳ ಆದ್ಯತೆಯೇ ಹೌದು. ಆಹಾರ ಸೇವಿಸದೆಯೇ ಬದುಕುವುದು ಅಸಾಧ್ಯ. ಹಾಗೆಯೇ ಆರೋಗ್ಯಪೂರ್ಣ ಜೀವನಕ್ರಮಕ್ಕೆ ಸಂಬಂಧಿಸಿದಂತೆಯೂ ಆಹಾರ ಅತೀ ಮುಖ್ಯ ಎಂದೇ ಹೇಳಬಹುದು. ಆಹಾರ ಅಗತ್ಯತೆ, ಅವಶ್ಯಕತೆ ಮಾತ್ರವಲ್ಲ. ಆರೋಗ್ಯಪೂರ್ಣ ಬದುಕಿನ ರಹಸ್ಯವೂ ಹೌದು.
ಇಂದು ವಿಶ್ವ ಆಹಾರ ದಿನ. 1945 ರ ಅಕ್ಟೋಬರ್ 16 ರಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಮುಖ್ಯ ಕಛೇರಿ ರೋಮ್ ನಲ್ಲಿ ಆರಂಭವಾದ ದಿನ. ಈ ದಿನದ ಸವಿನೆನಪಿಗಾಗಿ ಇಂದಿಗೂ ಅಕ್ಟೋಬರ್ 16 ರಂದು ಪ್ರಪಂಚದಾದ್ಯಂತ ವಿಶ್ವ ಆಹಾರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಅಂದ ಹಾಗೆ ಈ ವರ್ಷ ಎಫ್ಎಒ ಗೆ 75ರ ಹರೆಯ. ‘ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ, ಜೊತೆಗೂಡಿ’ ಎಂಬ ಧ್ಯೇಯವಾಕ್ಯದ ಜೊತೆಗೆ ಈ ಬಾರಿಯ ವಿಶ್ವ ಆಹಾರ ದಿನ ಆಚರಿಸಲ್ಪಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಎಲ್ಲಾ ರಾಷ್ಟ್ರಗಳೂ ಅಭಿವೃದ್ಧಿ ಸಾಧಿಸಿ, ತಮ್ಮ ಆಹಾರ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ, ಆ ಮೂಲಕ ಹಸಿವು ಮುಕ್ತ ಸಮಾಜ, ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸುವ, ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಆಹಾರ ದಿನ ಆಚರಿಸಲ್ಪಡುತ್ತಿದೆ.
ಜಗತ್ತಿನ ಅನೇಕ ರಾಷ್ಟ್ರಗಳು ಸತ್ವಯುತ ಆಹಾರ ಸಿಗದೆ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಭಾರತದಲ್ಲಿಯೂ ಅನೇಕ ಮಂದಿ ಕಡು ಬಡವರು ಒಪ್ಪೊತ್ತಿನ ಆಹಾರ ಸಂಪಾದನೆ ಮಾಡಿಕೊಳ್ಳುವುದಕ್ಕೂ ಪರದಾಡುವ ಪರಿಸ್ಥಿತಿ ಇದೆ. ಅದೆಷ್ಟೋ ಮಕ್ಕಳು ದೇಹಕ್ಕೆ ಆರೋಗ್ಯ ದೊರೆಯುವ ಪೌಷ್ಟಿಕ ಆಹಾರವನ್ನು ಸೇವಿಸಲು ಬೇಕಾದ ವ್ಯವಸ್ಥೆಗಳಿಲ್ಲದೆ ನರಳಾಡುವ ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇಂತಹ ಸ್ಥಿತಿಯಿಂದ ಭಾರತವೂ ಸೇರಿದಂತೆ ಇಡೀ ಪ್ರಪಂಚ ಹೊರಬರಬೇಕಾದರೆ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಬೇಕಿದೆ. ಅಭೂತಪೂರ್ವ ಅಭಿವೃದ್ಧಿ ಸಾಧ್ಯವಾಗಬೇಕಿದೆ. ಹಾಗಾದಲ್ಲಿ ಮಾತ್ರವೇ ಆಹಾರ ಬಡತನ ನಿರ್ಮೂಲನೆಯಾಗುವುದು ಸಾಧ್ಯವಾಗುತ್ತದೆ. ಭಾರತದ ವಿಚಾರಕ್ಕೆ ಬಂದರೆ ಇಂದಿಗೂ ಸುಮಾರು 02 ಬಿಲಿಯನ್ ಜನರಿಗೆ ಪೌಷ್ಟಿಕ ಆಹಾರದ ಕೊರತೆ ಇದೆ. 2050 ರ ವೇಳೆಗೆ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ನಮ್ಮ ದೇಶದಲ್ಲಿ ಆಹಾರ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಆ ಮೂಲಕ ದೇಶದ ಆಹಾರ ಅಗತ್ಯತೆಯನ್ನು ಪೂರೈಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಹಾಗಾದಲ್ಲಿ ಮಾತ್ರವೇ ಆಹಾರ ಅಭದ್ರತೆ ಎಂಬ ಭೂತ ದೇಶದಿಂದ ಓಡಿ ಹೋಗಲು ಸಾಧ್ಯ.
ನಾವೇನು ಮಾಡಬಹುದು?
ಮೊದಲೇ ಹೇಳಿದಂತೆ, ಆಹಾರ ಎಲ್ಲರ ಹಕ್ಕು. ನಮ್ಮ ಸರ್ಕಾರಗಳು ಬಡವರಿಗೆ ಉಚಿತ ಆಹಾರ ನೀಡುತ್ತಿದ್ದರೂ ಸಹ ಅಲ್ಲೋ ಇಲ್ಲೋ ಎಂಬಂತೆ ಕೆಲವರು ಇದರಿಂದ ವಂಚಿತರಾಗಿದ್ದಾರೆ. ಪರಿಣಾಮ ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ. ಒಂದು ಹೊತ್ತಿನ ಆಹಾರಕ್ಕೂ ಪರದಾಡುತ್ತಿದ್ದಾರೆ. ಇದರಿಂದಾಗಿ ಕೆಲವು ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ. ವೃದ್ಧರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿ ರಾಜ್ಯದ ಸರ್ಕಾರಗಳೂ ಅಲ್ಲಿನ ಜನರಿಗೆ ಸರಿಯಾದ ರೀತಿಯಲ್ಲಿ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಬಡವರು, ಕಡುಬಡವರನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಎಲ್ಲರಿಗೂ ಆಹಾರ ಭದ್ರತೆ ಒದಗಿಸುವತ್ತ ಚಿತ್ತ ಹರಿಸಬೇಕಿದೆ.
ಜೊತೆಗೆ ಜನಸಾಮಾನ್ಯರಾದ ನಾವು ಆಹಾರ ಪೋಲು ಮಾಡುವುದು, ಅನಾವಶ್ಯಕವಾಗಿ ಆಹಾರವನ್ನು ದುರುಪಯೋಗ ಮಾಡುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ನಮ್ಮ ಕೈಲಾದ ಮಟ್ಟಿಗೆ ನಮ್ಮ ಸುತ್ತಮುತ್ತಲಿನ ಬಡ ಜನರಿಗೆ, ಆಹಾರದ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವು ನೀಡುವತ್ತಲೂ ಮನ ಮಾಡಬೇಕು. ಸಭೆ, ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಎಸೆಯುವ ಬದಲು ಅನಾಥಾಶ್ರಮಗಳು, ಬಡ ಬಗ್ಗರಿಗೆ ದಾನ ಮಾಡುವ ಮೂಲಕ ಮಾದರಿಗಳಾಗಬೇಕಿದೆ. ಹಾಗೆಯೇ ನಮಗೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ನಮ್ಮ ತಟ್ಟೆಗೆ ಬಡಿಸಿಕೊಳ್ಳುವ ಮೂಲಕ ಹೆಚ್ಚಾದ ಆಹಾರ ಎಸೆಯುವಂತಹ ಅಭ್ಯಾಸಕ್ಕೆ ಕಡಿವಾಣ ಹಾಕಬೇಕಿದೆ.
ಮುಖ್ಯವಾಗಿ ನಮ್ಮ ಆಹಾರ ಅಗತ್ಯತೆಗಳನ್ನು ನಾವೇ ಪೂರೈಸಿಕೊಳ್ಳುವ ಮಟ್ಟಿಗಾದರೂ ಕೃಷಿ ಚಟುವಟಿಕೆಗಳನ್ನು ನಡೆಸಬೇಕಿದೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಡೀ ದೇಶಕ್ಕೆ ಅನ್ನ ನೀಡುವ ನಿಟ್ಟಿನಲ್ಲಿ ಶ್ರಮ ಪಡುತ್ತಿರುವ ರೈತರಿಗೆ ಬೆಂಬಲ ನೀಡುವ ಕೆಲಸವನ್ನು ನಾವು ಮಾಡಬೇಕಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ಕೃಷಿಕರಿಗೆ ಸರಿಯಾದ ರೀತಿಯಲ್ಲಿ ತಲುಪುವಂತೆ ಮಾಡುವತ್ತಲೂ ನಾವು ಗಮನ ಹರಿಸಬೇಕು. ರೈತನಿಗೆ ನೈತಿಕ ಬೆಂಬಲ ದೊರೆತಲ್ಲಿ ಕೃಷಿ ಚಟುವಟಿಕೆ ಹೆಚ್ಚುತ್ತದೆ, ಉತ್ಪಾದನೆಯೂ ಹೆಚ್ಚುತ್ತದೆ. ಹಾಗಾದಾಗ ದೇಶದಲ್ಲಿ ಆಹಾರ ಕೊರತೆಯ ಸಮಸ್ಯೆಯೂ ಕಡಿಮೆಯಾಗುತ್ತದೆ.
ಅದರೊಂದಿಗೆ ಬಹುಮುಖ್ಯವಾಗಿ ನಮ್ಮ ಸುತ್ತಮುತ್ತಲಲ್ಲೇ ಅದೆಷ್ಟೋ ಬಡ ವರ್ಗಗಳು ಸರ್ಕಾರ ನೀಡುವ ಆಹಾರ ಸೌಲಭ್ಯಗಳಿಂದ ವಂಚಿತವಾಗಿ ಬದುಕುತ್ತಿರುತ್ತವೆ. ಪಡಿತರ ಚೀಟಿ ಹೊಂದದೆ ಸರ್ಕಾರ ವಿತರಿಸುವ ಆಹಾರ ವಸ್ತುಗಳನ್ನು ಪಡೆದುಕೊಳ್ಳುವಲ್ಲಿಯೂ ಸಾಧ್ಯವಾಗಿರುವುದಿಲ್ಲ. ಅಂತಹವರನ್ನು ಗುರುತಿಸಿ ಅವರಿಗೆ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವತ್ತ ಚಿತ್ತ ಹರಿಸಬೇಕಿದೆ. ಆ ಮೂಲಕ ಆಹಾರ ಅಭದ್ರತೆ ಅನುಭವಿಸುವ ಕುಟುಂಬಗಳಿಗೆ ನೆರವಾಗುವ ಮೂಲಕ ಇತರರಿಗೂ ಮಾದರಿಯಾಗಬಹುದಾಗಿದೆ.
ನಮ್ಮ ಸುತ್ತಮುತ್ತಲಲ್ಲೇ ಅದೆಷ್ಟೋ ಬಡ ವರ್ಗಗಳು ಸರ್ಕಾರ ನೀಡುವ ಆಹಾರ ಸೌಲಭ್ಯಗಳಿಂದ ವಂಚಿತವಾಗಿ ಬದುಕುತ್ತಿರುತ್ತವೆ. ಪಡಿತರ ಚೀಟಿ ಹೊಂದದೆ ಸರ್ಕಾರ ವಿತರಿಸುವ ಆಹಾರ ವಸ್ತುಗಳನ್ನು ಪಡೆದುಕೊಳ್ಳುವಲ್ಲಿಯೂ ಸಾಧ್ಯವಾಗಿರುವುದಿಲ್ಲ. ಅಂತಹವರನ್ನು ಗುರುತಿಸಿ ಅವರಿಗೆ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವತ್ತ ಚಿತ್ತ ಹರಿಸಬೇಕಿದೆ.
✍️ ಭುವನಾ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.