News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 31st October 2020
×
Home About Us Advertise With s Contact Us

ಶ್ರದ್ಧೆಯ ಪುಷ್ಪಗಳು

ಮಿರಮಿರ ಮಿನುಗುವ ಮರಳಿನ ದಿಬ್ಬಗಳು ಎಷ್ಟು ಸುಂದರವಾಗಿ ಕಾಣುತ್ತವೆ. ಆದರೆ ಈ ದೈತ್ಯ ಮರಳಿನ ದಿಬ್ಬಗಳು ನೀರಿನ ಪ್ರವಾಹಕ್ಕೆ ಒಳಪಟ್ಟು ಹರಿದು ಬಂದು ಮನೆಗಳನ್ನು ಪ್ರವೇಶಿಸಿದರೆ, ಕ್ಷಣಾರ್ಧದಲ್ಲಿ ಎಲ್ಲವೂ ಸರ್ವನಾಶವಾಗುತ್ತವೆ.14 ಆಗಸ್ಟ್,2020ರ ಬೆಳಿಗ್ಗೆ 10 ಗಂಟೆಗೆ ಜೈಪುರದ ಗಣೇಶ್ ಪುರಿಯ ಮಣ್ಣಿನ ಸೇವಾಬಸ್ತಿಗಳಲ್ಲಿ ಮಳೆಯು ಎಂತಹ ವಿನಾಶದ ಕಥೆಯನ್ನು ಬರೆಯಿತೆಂದರೆ ಸ್ವಲ್ಪ-ಸ್ವಲ್ಪವೇ ಕೂಡಿಟ್ಟು ಕಟ್ಟಿದ್ದ ಮನೆಗಳು ಕೆಲವೇ ನಿಮಿಷಗಳಲ್ಲಿ ಟನ್ ಗಟ್ಟಲೆ ಮಣ್ಣಿನ ಅಡಿಯಲ್ಲಿ ಸೇರಿ ಹೋಯಿತು.

ಪರಿಸ್ಥಿತಿ ಹೇಗಿತ್ತು ಎಂದರೆ, ಬಟ್ಟೆಬರೆ, ಅಡಿಗೆ ಮನೆಯ ಪಾತ್ರೆ, ಒಲೆಗಳು, ಶಾಲೆಯ ಚೀಲಗಳು, ಅಷ್ಟೇಅಲ್ಲ ಬಾಗಿಲ ಬಳಿ ನಿಂತಿದ್ದ ಆಟೋ ರಿಕ್ಷಾಗಳ ತನಕ ಎಲ್ಲವೂ ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದವು, ಸುತ್ತಲೂ ಕೂಗಾಟ-ಚೀರಾಟ ಕೇಳಿಬರುತ್ತಿತ್ತು.

ತಪ್ಪಲುಗಳಲ್ಲಿ ನಿರ್ಮಿತವಾದ ಆ ಮೂರು ಸೇವಾಬಸ್ತಿಗಳ (ಕೊಳಗೇರಿ) 150 ಕುಟುಂಬಗಳ ಜಗತ್ತು ಕೆಲವೇ ನಿಮಿಷಗಳಲ್ಲಿ ಧ್ವಂಸವಾಗಿ ಹೋಗಿತ್ತು. ಕಗ್ಗತ್ತಲಿನಲ್ಲಿ ಅಸಹಾಯಕರಾಗಿ ಕುಳಿತಿದ್ದವರ ಮನೆಗಳಲ್ಲಿ 6ಅಡಿಯಷ್ಟು ಮಣ್ಣು ನುಗ್ಗಿ ಬಂದಿದ್ದರಿಂದ ಅಲ್ಲಿ ಹಸಿದಿದ್ದ, ಬಾಯಾರಿದ್ದ , ಆಕ್ರಂದಿಸುತ್ತಿದ್ದ ಜನರ ಬಳಿ ದೇವದೂತರಂತೆ ಪ್ರತ್ಯಕ್ಷರಾದವರು ಸಂಘದ ಸ್ವಯಂಸೇವಕರು.

ಈ ಪರಿಸ್ಥಿತಿಯಲ್ಲಿ ಅಲ್ಲಿನ ಮೊದಲ ಆದ್ಯತೆ ಆಹಾರದ್ದಾಗಿತ್ತು, ಏಕೆಂದರೆ ಆ ಮನೆಗಳಲ್ಲಿದ್ದ ಎಲ್ಲಾ ಪಾತ್ರೆಗಳು, ಆಹಾರ ಪದಾರ್ಥಗಳು ನೆಲಸಮವಾಗಿತ್ತು. ಮೊದಲನೆಯದಾಗಿ ಸೇವಾಬಸ್ತಿಯ ಜನರನ್ನು ಆ ಮನೆಗಳಿಂದ ಸುರಕ್ಷಿತವಾಗಿ ಹೊರತೆಗೆದ ನಂತರ ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಜೈಪುರ ನಗರದ ಪ್ರೌಢ ಶಾಖೆಯ ಕಾರ್ಯವಾಹ ಮತ್ತು ಈ ಪರಿಹಾರ ವ್ಯವಸ್ಥೆಗಳನ್ನು ನೋಡಿಕೊಳ್ಳುವ ರಾಜ್ ಕುಮಾರ್ ಗುಪ್ತಾರವರು ಹೇಳುವಂತೆ; ಸ್ವಯಂಸೇವಕರಿಗೆ ಸಂಜೆ 3.30ಕ್ಕೆ ಈ ದುರ್ಘಟನೆಯ ಬಗ್ಗೆ ಸೂಚನೆ ಸಿಕ್ಕಿತು ಹಾಗು ರಾತ್ರಿ 8ಗಂಟೆಯ ಒಳಗೆ ಸಂಘದ ಪರಿವಾರಗಳಿಂದ 2800 ಭೋಜನದ ಪೊಟ್ಟಣಗಳು ಘಟನೆಯ ಸ್ಥಳಕ್ಕೆ ತಲುಪಿದ್ದವು.

ಟಾರ್ಚಿನ ಬೆಳಕಿನಲ್ಲಿ ಅಹಾರಗಳನ್ನು ಹಂಚುತ್ತಿದ್ದಾಗ, ನಿಸ್ಸಹಾಯಕರಾಗಿ ಅಳುತ್ತಿದ್ದ ಆ ಕುಟುಂಬಗಳನ್ನು ನೋಡಿ ಎಲ್ಲರ ಮನಸ್ಸು ಕುಗ್ಗಿಹೋಗಿತ್ತು. ಸೇವಾಬಸ್ತಿಯಿಂದ 2ಕಿಲೋ ಮೀಟರ್ ದೂರದಲ್ಲಿರುವ ಸಮುದಾಯ ಭವನದಲ್ಲಿ ಸೇವಾಬಸ್ತಿಯ ನಿವಾಸಿಗಳಿಗೆ ಮಲಗುವ ವ್ಯವಸ್ಥೆ ಮಾಡಿದ ನಂತರ ಸ್ವಯಂಸೇವಕರು ತಡರಾತ್ರಿಯಲ್ಲಿ ಭಾರವಾದ ಮನಸ್ಸಿನಿಂದ ಹಾಗು  ಸೇವಾಬಸ್ತಿಯ ಜನರನ್ನು ಈ ಕಷ್ಟದ ಪರಿಸ್ಥಿತಿಯಿಂದ ಸಂರಕ್ಷಿಸುವ ಸಂಕಲ್ಪದೊಂದಿಗೆ ತಮ್ಮ ಮನೆಗಳಿಗೆ ಹಿಂದಿರುಗಿದರು.

ಈ ವಿನಾಶದ ಲೀಲೆ ಪ್ರಾರಂಭವಾದದ್ದು 14 ಆಗಸ್ಟ್ 2020ರ ಬೆಳಿಗ್ಗೆ. ಗುಲಾಬಿ ನಗರವಾದ ಜೈಪುರದಲ್ಲಿ ಇಂದ್ರ ದೇವನು ಎಷ್ಟು ಮಳೆ ಸುರಿಸಿದನೆಂದರೆ ಇಡೀ ನಗರವೇ ಕೆರೆಯಂತಾಗಿತ್ತು. ವಾಹನಗಳು ಆಟಿಕೆಗಳಂತೆ ನೀರಿನಲ್ಲಿ ತೇಲಿ ಹೋಗುತ್ತಿದ್ದವು. ಆದರೆ ಹೆಚ್ಚಿನ ಪರಿಣಾಮ ಆದದ್ದು ಕೆಳಗಿನ ಸ್ಥಳಗಳಲ್ಲಿ ನೆಲೆಸಿದ್ದ ಸೇವಾಬಸ್ತಿಗಳ ಮೇಲೆ. ತಪ್ಪಲುಗಳಲ್ಲಿ ನೆಲೆಗೊಂಡಿದ್ದ ಗಣೇಶಪುರಿಯ ಹಿಂಬಾಗದಲ್ಲಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಗೋಡೆಯು ನೀರಿನ ಒತ್ತಡವನ್ನು ತಡೆದುಕೊಳ್ಳಲಾಗದೆ ಹತ್ತಿರದಲ್ಲೆ ಇದ್ದ ಮರಳಿನ ವಿಶಾಲವಾದ ದಿಬ್ಬಗಳ ಮೇಲೆ ಅಣೆಕಟ್ಟಿನ ನೀರು ಹರಿದು ಬಂದು ಆ ಮೂರು ಮಣ್ಣಿನ ಸೇವಾಬಸ್ತಿಯೊಳಗೆ ಪ್ರವೇಶಿಸಿತು. ಸರ್ಕಾರವು ಜೆ.ಸಿ.ಬಿ ಯಿಂದ ಮಣ್ಣನ್ನು ಹೊರ ತೆಗೆದು ತನ್ನ ಕರ್ತವ್ಯಕ್ಕೆ ಇತಿಶ್ರೀ ಹಾಡಿತು.

ಆದರೆ ಸಂಘದ ಸ್ವಯಂಸೇವಕರು 8 ದಿನಗಳ ಕಾಲ ವಾತಾವರಣ ಯಥಾಸ್ಥಿತಿಗೆ ಮರಳುವವರೆಗೂ ಅಲ್ಲಿಯೇ ಅಚಲವಾಗಿ ನಿಂತಿದ್ದರು. ಹತ್ತಿರದ ಲಾಲ್ ಡುಂಗ್ರಿ ಗಣೇಶ ದೇವಸ್ಥಾನದಲ್ಲಿ ತಾತ್ಕಾಲಿಕವಾದ ಅಡುಗೆ ಮನೆಯನ್ನು ನಿರ್ಮಿಸಿ ಸೇವಾಬಸ್ತಿಯ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು.

“ಸಂಘದ ಸ್ವಯಂಸೇವಕರು ಇಲ್ಲಿಗೇ ನಿಲ್ಲಲಿಲ್ಲ, ಕೆಲವರು ಗುದ್ದಲಿ ಮತ್ತು ಸಲಿಕೆಗಳನ್ನು ಹಿಡಿದು ಸೇವಾಬಸ್ತಿಯ ಜನರೊಂದಿಗೆ ಮನೆಯೊಳಗಿನ ಮಣ್ಣನ್ನು ತೆಗೆದರು ಹಾಗು ಅಲ್ಲಿದ್ದ ಪಾತ್ರೆ ಮತ್ತು ಬಟ್ಟೆಗಳನ್ನು ಒಣಗಿಸಲು ಸಹಾಯ ಮಾಡಿದರು. ಆದರೆ ಬಟ್ಟೆಗಳು ಎಷ್ಟು ಹಾಳಾಗಿದ್ದವು ಎಂದರೆ ನಗರದಿಂದ ಬಟ್ಟೆ ಹಾಗು ಅವಶ್ಯಕವಾದ ಪಾತ್ರೆಗಳನ್ನು ಸಂಗ್ರಹಿಸಿ ಗಣೇಶಪುರಿಯ ಸೇವಾಬಸ್ತಿಗಳಿಗೆ ವಿತರಿಸಬೇಕಾಯಿತು. ಅಷ್ಟೇ ಅಲ್ಲದೆ ಮುಂದಿನ ಹತ್ತು ದಿನಗಳ ಕಾಲ ಅವರು ಹಸಿವಿನಿಂದ ಬಳಲಬಾರದು ಎಂದು 150 ರೇಶನ್ ಕಿಟ್ ಗಳನ್ನೂ ವಿತರಿಸಲಾಯಿತು” ಎಂದು ಸಂಘದ ದೃಷ್ಟಿಯಿಂದ ರಿಷಿಗಾಲವ್ ನಗರದ ಸಾಮಾಜಿಕ ಸಾಮರಸ್ಯದ ಸಹಪ್ರಮುಖರಾದ ಮನೋಜ್ ಜೈನ್ ರವರು ಈ ಘಟನೆಯ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತಾ ಹೇಳಿದರು.

8 ದಿನಗಳ ಕಾಲ ನಡೆದ ಈ ಕಸರತ್ತಿನಲ್ಲಿ ಮಣ್ಣನ್ನು ಮನೆಗಳಿಂದ ಹೊರತೆಗೆಯಲಾಗಿತ್ತು, ವಸ್ತುಗಳು ಒಣಗಿದ್ದವು, ಸೇವಾಬಸ್ತಿಯ ಜನರ ಜೀವನ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿತ್ತು. ಹಾಗೆಯೆ ಇವರ ಪರಿಸ್ಥಿತಿಯನ್ನು ನೋಡಲು ಬಂದಿದ್ದ ಕೆಲವು ರಾಜಕೀಯ ವ್ಯಕ್ತಿಗಳು ಸೇವಾಬಸ್ತಿಯ ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲು ಬಂದಾಗ ಅದನ್ನು ಅವರು ನಿರಾಕರಿಸಿದ್ದಲ್ಲದೆ ಅವರಿಗೆ “ನಿಮ್ಮ ತೋರ್ಪಡಿಕೆ ಬೇಕಾಗಿಲ್ಲ, ನಮಗೆ ತುಂಬಾ ಅವಶ್ಯಕತೆ ಇದ್ದಾಗ ಈ ಖಾಕಿ ನಿಕ್ಕರ್ ತೊಟ್ಟ ಜನರು ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದರು” ಎಂದು ಅವರಿಗೆ ಸ್ಪಷ್ಟವಾದ ಶಬ್ದಗಳಲ್ಲಿ ಹೇಳಿದರು.

ಎಲ್ಲೆಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆಯೋ, ಅಲ್ಲೆಲ್ಲ, ಮನುಷ್ಯನಲ್ಲಿ ಬೀಜರೂಪದಲ್ಲಿರುವ ಮಾನವತೆಯು ಚಿಗುರಿ ಶ್ರದ್ಧೆಯ ಪುಷ್ಪಗಳಾಗಿ ಅರಳುತ್ತದೆ. ಇದೇ ಕೆಲಸವನ್ನು ದೇಶವ್ಯಾಪಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಾಡುತ್ತಿದ್ದಾರೆ.

✍️ ಶ್ರೀಮತಿ ಮೇಘ ಪ್ರಮೋದ್

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top