ಆತ ಎಂ.ಟೆಕ್. ಓದಿದ್ದಾನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದಾನೆ. ಭಿನ್ನಭಿನ್ನ ಮತ-ಸಂಪ್ರದಾಯಗಳ ಜನರ ಸಂಪರ್ಕವಿರುವುದು ಪ್ರಚಾರಕನಿಗೆ ಸಹಜ ಸಾಮಾನ್ಯ. ಆದರೆ ಆತನಿಗೆ ಸಮಾಜ ಜೀವನದ ಸಾಕ್ಷಾತ್ ಅನುಭವ ಪಡೆಯಬೇಕೆಂಬ ಹಂಬಲ. ಯಾವುದು ಅನುಭವವನ್ನು ದಕ್ಕಿಸಿಕೊಡುತ್ತದೆ? ಶ್ರೀಮಂತ ಬದುಕೆ? ಬಡತನದ್ದೇ? ಮೇಲರಿಮೆಯುಳ್ಳ ಜನಮಾನಸದೆ? ಸಾಮಾಜಿಕವಾಗಿ ಕೆಳಸ್ತರದಲ್ಲಿರುವವರದ್ದೇ? ಬಡತನ ನೀಡುವಷ್ಟು ಪುಷ್ಕಳ ಅನುಭವವನ್ನು ಶ್ರೀಮಂತಿಕೆಗೆ ನೀಡಲು ಎಂದೂ ಸಾಧ್ಯವಾಗದು. ಕೆಳಸ್ತರದ ಜನರ ಬದುಕಿನ ಅನುಭವವೇ ನಿಜ ಅನುಭವ. ಬದುಕಿನ ಸರ್ವರಸಗಳನ್ನೂ ಹೀರಿಕೊಳ್ಳಲು ಸಾಧ್ಯವಾದಾಗ ಅನುಭವ. ಬದುಕು ಕಷ್ಟದಲ್ಲಿದ್ದಾಗ, ಬವಣೆಪಡುತ್ತಲಿದ್ದಾಗ ಇದು ಸಮರ್ಥವಾಗಿ ಸಾಧ್ಯವಾಗುತ್ತದೆ.
ಆರ್ಥಿಕವಾಗೂ ಸಾಮಾಜಿಕವಾಗೂ ಇನ್ನಿಲ್ಲದ ಬವಣೆಪಟ್ಟಾಗ ನಿಜ ಸಮಾಜಾನುಭವವಾಗುತ್ತದೆ. ಸಮಾಜದ ಮಧ್ಯೆ ಕೆಲಸ ಮಾಡುವವನಿಗೆ ಇಂಥ ಅನುಭವಗಳು ಇದ್ದರೆ ಅವು ಹಾಡುಗಾರನಿಗೆ ಪಕ್ಕವಾದ್ಯಗಳಿದ್ದಂತೆ. ಅವು ಕಾರ್ಯಕರ್ತನ ಮನಸ್ಸನ್ನೂ ಕಾರ್ಯವನ್ನೂ ಹೆಚ್ಚು ಪುಷ್ಟಗೊಳಿಸುತ್ತವೆ. ಈ ಪುಷ್ಟತೆಯೊದಗುವುದು ಹೆಚ್ಚುವರಿ ಫಲವಾಗಿ ಅಷ್ಟೆ. ಆದರೆ ಅನುಭವ ಆಗುವುದು ಅದಕ್ಕಾಗಲ್ಲವಲ್ಲ. ಸಮಾಜದ ಕೆಲಸ ಮಾಡುವಾಗ ಅದರ ಕಷ್ಟದ ಅರಿವಿರಬೇಕು. ಅನುಭವಿಸಿ ಪಡೆದಾಗಲೇ ಅರಿವು ಸಮಗ್ರವಾಗುವುದು.
ಯಾವುದು ಹೇಸಿಗೆ?
ಇಂಥ ಸಮಾಜಕಷ್ಟದ ಅರಿವನ್ನು ಹೊಂದಲು ಈ ಪ್ರಚಾರಕ ಒಬ್ಬ ಭಂಗಿಯ ಬದುಕನ್ನೇ ಆರಿಸಿಕೊಂಡ. ಆತನ ಜತೆ ಎರಡು ದಿನಗಳ ಕಾಲ ಇರುವುದಾಗಿ ತಿಳಿಸಿದ. ತನ್ನ ಹಿನ್ನೆಲೆಯನ್ನಾವುದನ್ನೂ ಯಾರಿಗೂ ಯಾವುದೇ ರೀತಿ ತಿಳಿಸಕೂಡದೆಂದೂ ನಿವೇದಿಸಿಕೊಂಡ. ಭಂಗಿಯ ಜತೆ ಭಂಗಿಯ ಸಹಾಯಕನಾಗಿ ಎರಡು ದಿನ ಇದ್ದ. ಚರಂಡಿಗಿಳಿದು ಸ್ವಚ್ಛ ಮಾಡಿದ. ಮ್ಯಾನ್ಹೋಲಲ್ಲೂ ಇಳಿಯಬೇಕಾಗಿ ಬಂತು. ಶ್ರೀಮಂತರ ಮನೆಯ ಶೌಚಾಲಯವನ್ನೂ ಸ್ವಚ್ಛ ಮಾಡಬೇಕಾಗಿ ಬಂತು. ಮಲಹೊರಬೇಕಾಗಿಯೂ ಬಂತು. ಎಲ್ಲವನ್ನೂ ನಿಸ್ಸಂಕೋಚದಿಂದಲೇ ಮಾಡಿದ. ಒಂದು ಮನೆಯಲ್ಲಂತೂ ಆ ಮನೆಯ ಶ್ರೀಮಂತ ಯಜಮಾನ, ಭಂಗಿಯದ್ದೇನೂ ತಪ್ಪಿಲ್ಲದಿದ್ದರೂ ಯದ್ವಾತದ್ವಾ ಬೈದ, ಕೆಟ್ಟ ಶಬ್ದಗಳಲ್ಲಿ ಬೈದ. ಈತನೂ ಬೈಸಿಕೊಂಡ, ಈತನ ವೇಷ, ಕೆಲಸದಲ್ಲಿನ ಶ್ರದ್ಧೆ ಇವುಗಳಿಂದಾಗಿ ಎಲ್ಲೂ ಯಾರಿಗೂ ಈತನ ಪರಿಚಯವೂ ಸಿಗಲಿಲ್ಲ. ಸಂದೇಹವೂ ಮೂಡಲಿಲ್ಲ.
ಭಂಗಿ ಕೆಲಸದ ಬಗೆಗೆ ಹೇವರಿಕೆ ಇದೆ. ಆ ಹೇವರಿಕೆಯ ಕೆಲಸ ನಡೆಯದಿದ್ದರೆ ಇಡಿಯ ಪ್ರದೇಶವೇ ಕೊಳೆತು ನಾರುವಂತಾಗುತ್ತದೆ. ಯಾರೂ ಅಲ್ಲಿಗೆ ಸುಳಿಯದಂತಾಗುತ್ತದೆ. ಅಂಥಲ್ಲಿಗೆ ಭಂಗಿ ಹೋಗುತ್ತಾನೆ, ಯಾವ ಹೇವರಿಕೆಯನ್ನೂ ಇಟ್ಟುಕೊಳ್ಳದೆ. ಎಲ್ಲವನ್ನೂ ಸ್ವಚ್ಛಗೊಳಿಸುತ್ತಾನೆ, ಯಾರ ಬಗೆಗೂ ಹೇಸಿಗೆಪಟ್ಟುಕೊಳ್ಳದೆ. ಸ್ವಚ್ಛ ಮಾಡುವ ಭಂಗಿಗೆ ಹೇಸಿಗೆ ಮಾಡಿದವರ ಬಗೆಗೆ ಹೇಸಿಗೆ ಇಲ್ಲ. ಆದರೆ ಹೇಸಿಗೆ ಮಾಡಿದವರಿಗೆ ತಮ್ಮದೇ ಹೇಸಿಗೆಯನ್ನು ಸ್ವಚ್ಛ ಮಾಡುವವನ ಬಗೆಗೆ ಹೇಸಿಗೆ! ಆತ ಸ್ವಚ್ಛತೆಯ ಕಾರ್ಯಕ್ಕಾಗಿ ಹತ್ತಿರ ಬರಬೇಕು. ಆದರೆ ಉಳಿದಂತೆ ಉಳಿದೆಲ್ಲರಿಗಿಂತ ದೂರ ನಿಲ್ಲಬೇಕು.
ಸ್ವಚ್ಛಗೊಳಿಸುವವರು ಮಾತೃಸಮಾನರಲ್ಲವೆ?
ನಿಜಕ್ಕಾದರೆ ಅವನು ತಾಯಿಯೊಬ್ಬಳು ಮಗುವಿನ ಸ್ವಚ್ಛತೆಯನ್ನು ಮಾಡುವ ಬಗೆಯಲ್ಲೇ ಕೆಲಸ ಮಾಡುತ್ತಾನೆ. ಹೇಸಿಗೆ ಮಾಡುವ ಮಗುವಿನ ಬಗೆಗೆ ತಾಯಿಗೆ ಯಾವುದೇ ರೀತಿಯಲ್ಲಿ ಹೇಸಿಗೆಯೆನಿಸುವುದಿಲ್ಲ. ಇದು ಒಂದು ಸಹಜ ಮುಖ. ಇಷ್ಟೇ ಸಹಜವಾದ ಇನ್ನೊಂದು ಮುಖವೆಂದರೆ ತನ್ನ ಹೇಸಿಗೆಯನ್ನು ಸ್ವಚ್ಛಗೈವ ತಾಯಿಯ ಬಗೆಗೆ ಮಗುವಿಗೂ ಯಾವುದೇ ರೀತಿಯಲ್ಲಿ ಹೇಸಿಗೆಯೆನಿಸುವುದಿಲ್ಲ. ಈ ಎರಡೂ ಮುಖಗಳು ಜತೆ ಇದ್ದಾಗ ಒಟ್ಟೂ ಭಾವಚಿತ್ರಣ ಸಮಗ್ರವಾಯಿತು. ಇಂಥ ಸಮಗ್ರ ಭಾವಚಿತ್ರಣ ಸಮಾಜದಲ್ಲೂ ಇರುವುದು, ಅತ್ಯಂತ ಸಹಜವಾಗಿ ಇರುವುದು, ಅತ್ಯಂತ ಅಪೇಕ್ಷಣೀಯ.
ಚರಂಡಿಯ ಸ್ವಚ್ಛತೆ, ಶ್ರೀಮಂತನ ಬೈಗುಳ ಎಲ್ಲ ಸೇರಿದಂತೆ ಪ್ರಚಾರಕನಿಗೆ ಎರಡೇ ದಿನಗಳಲ್ಲಿ ಉತ್ತಮ ಸಮಾಜಾನುಭವ ಆಯಿತು. ಆದರೂ ಆತ ದಿನಗಟ್ಟಲೆ ಆ ಕಾರ್ಯದಲ್ಲಿ ತೊಡಗಿದ. ಅನುಭವದ ಜತೆಜತೆಗೆ ಸಮಾಜದ ಒಂದು ಅಂಗಕ್ಕೆ, ಒಂದು ಪ್ರಮುಖ ಅಂಗಕ್ಕೆ ಹಾರ್ದಿಕವಾಗಿ ಸ್ಪಂದಿಸುವುದೂ ಆತನ ಉದ್ದೇಶವಾಗಿತ್ತು. ಆತ ಸ್ವಚ್ಛತೆಗೆ ಅವಕಾಶ ಕಲ್ಪಿಸಿದ ಭಂಗಿಗೂ ಕೃತಜ್ಞ, ಬೈಗುಳ ಸುರಿಸಿದ ಶ್ರೀಮಂತನಿಗೂ ಕೃತಜ್ಞ.
ಪ್ರೀತಿಯಿರುವಲ್ಲಿ ತಂತ್ರವೆಲ್ಲಿ?
ಮುಂದೆ ಆತ ಆ ಶ್ರೀಮಂತ ಸಾಹುಕಾರನ ಮನೆಗೂ ಹೋದ. ಇಡಿಯ ಸಮಾಜವನ್ನು ಸಂಘಟಿಸುವ ಕಾರ್ಯವಲ್ಲವೇ ಅವನದು. ತನ್ನನ್ನು ಹೊಡೆದ ತಾಯಿಯನ್ನೇ ಮಗು ಅಪ್ಪಿಕೊಳ್ಳುವಂತೆ, ತಾಯಿಯನ್ನು ಬಿಟ್ಟು ಇನ್ಯಾರ ಬಳಿಗೂ ಹೋಗದಂತೆ ಸಂಘಟಕನೂ ತನ್ನನ್ನು ಬೈದ ವ್ಯಕ್ತಿಗಳನ್ನೂ ಬಿಡಲಾರ. ಆತ್ಮೀಯ ಅಪ್ಪುಗೆ ಆತನಲ್ಲಿ ಸದಾ ಜೀವಂತ. ಆತನ ಈ ಆತ್ಮೀಯ ಅಪ್ಪುಗೆಗೆ ಎಲ್ಲರೂ, ತುಚ್ಛೀಕರಿಸುವವರೂ ಪಾತ್ರರೇ. ಕೆಲವರಿದನ್ನು ತಂತ್ರವೆಂದುಕೊಂಡಾರು. ತಾವು ಕೈಗೊಂಡ ಕೆಲಸ ಆಗುವವರೆಗೆ ಯಾರೇ ಆದರೂ ಮಾಡುವ ಯಾವುದೇ ರೀತಿಯ ತುಚ್ಛೀಕಾರವನ್ನು ಒಂದು ತಂತ್ರವಾಗಿ ಕೆಲವರು ಸಹಿಸುವುದಿದೆ. ನೋಡಿ ಮತಾಂತರಕ್ಕೆ ತೊಡಗುವವರಲ್ಲಿ ಈ ಸ್ವಭಾವವನ್ನು ನಾವು ಚೆನ್ನಾಗಿ ನೋಡಬಹುದು. ಅವರು ನಿರಂತರವಾಗಿ ಸುದೀರ್ಘವಾಗಿ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದರೆ, ಒಬ್ಬ ವ್ಯಕ್ತಿಯ ಕುರಿತಾದ ಅಂಥ ಪ್ರಯತ್ನ ವಿಫಲವಾದರೆ ಆತನ ವಿರುದ್ಧ ಮುಂದೆ ಪೊಲೀಸ್ ಠಾಣೆ, ನ್ಯಾಯಾಲಯ, ಮಾಧ್ಯಮ ಇತ್ಯಾದಿ ಮಾರ್ಗಗಳ ಮೂಲಕ ಯಾವುದೇ ಬಗೆಯ ದಾಳಿಗೂ ಅವರು ಸಿದ್ಧರಾಗುತ್ತಾರೆ. ಇದು, ಇಂಥದ್ದು ತಂತ್ರ. ತಂತ್ರದಲ್ಲಿ ಪ್ರೀತಿ ಆತ್ಮೀಯತೆಗಳು ಹತ್ತಿರವೂ ಸುಳಿಯುವುದಿಲ್ಲ. ಆತ್ಮೀಯತೆಗೆ ಬರ ಇರುವಲ್ಲಿ ತಂತ್ರ ಬೇಕಾದೀತೇನೋ. ಆತ್ಮೀಯತೆಗೆ ತಂತ್ರದ ಹಂಗಿಲ್ಲ. ಕೆಲವೊಮ್ಮೆ ಆತ್ಮೀಯತೆಯನ್ನು ದಕ್ಕಿಸಿಕೊಳ್ಳಲು ತಂತ್ರಕ್ಕೆ ಮೊರೆಹೋಗಬೇಕಾದೀತು. ಅದು ತಾತ್ಕಾಲಿಕ. ಅಲ್ಲಿ ಸ್ಥಾಯಿಯಾಗಿ ನಿಲ್ಲುವುದು ಪ್ರೀತಿಯೇ.
ಎಲ್ಲವೂ ಬದಲಾವಣೆಗಾಗಿ
ಈಗ ಆ ಸಾಹುಕಾರನಿಗೆ ಈ ಪ್ರಚಾರಕನನ್ನು ಎಲ್ಲೋ ನೋಡಿದ ನೆನಪಾಗುತ್ತಿದೆ. ಆತ ಎಲ್ಲೆಂದು ನೆನಪಿಸಿಕೊಳ್ಳುತ್ತಿರುವುದನ್ನು ನೋಡಿ ಪ್ರಚಾರಕ ಇಡಿಯ ಪ್ರಕರಣವನ್ನು ವಿವರಿಸಿದ. ಯಾವುದನ್ನೂ ಮುಚ್ಚಿಟ್ಟುಕೊಳ್ಳಬೇಕಾದ ಪ್ರಮೇಯ ಅವನಿಗಿಲ್ಲವಲ್ಲ. ಹಾಗೇ ಸಾಹುಕಾರನನ್ನು ತರಾಟೆಗೆ ತೆಗೆದುಕೊಳ್ಳುವುದಾಗಲೀ, ಆತನ ಮಾನವನ್ನು ಹರಾಜುಮಾಡುವುದಾಗಲೀ ಇಂಥ ‘ಅನ್ಯ’ ಉದ್ದೇಶವಂತೂ ಪ್ರಚಾರಕನ ಹತ್ತಿರವೂ ಸುಳಿಯದು. ಸುಂದರಸಮಾಜ ರೂಪುಗೊಳ್ಳಬೇಕೆಂಬುದು ಅವನ ಕನಸು. ಅಂಥ ಸಮಾಜನಿರ್ಮಾಣದಲ್ಲಿ ಎಲ್ಲರಿಗೂ ಪಾತ್ರವಿದೆ; ಸಾಹುಕಾರನಿಗೂ ಕೂಡ, ಭಂಗಿಗೂ ಕೂಡ. ಈ ನಿಟ್ಟಿನಲಿ ಭಂಗಿಗಳನ್ನು ಹೇವರಿಕೆಯಿಂದ ನೋಡುವ ಸಾಹುಕಾರನ ಮನೋಭಾವವು ಒಂದು ಮುಖ್ಯ ಅಡ್ಡಿಯೇ; ಅದಂತೂ ನಿವಾರಿಸಲೇಬೇಕಾದ ಅಡ್ಡಿ. ಈ ಹಿನ್ನೆಲೆಯಲ್ಲಿ ಸಾಹುಕಾರನ ಬಳಿ ಪ್ರಚಾರಕ ವಿನಯದ ಧಾಟಿಯಲ್ಲಿ ಮಾತಿಗಿಳಿದ. ಭಂಗಿಯನ್ನೂ ಗೌರವಿಸಬೇಕಾದುದನ್ನು ಮನವರಿಕೆ ಮಾಡಿಸಿದ.
ಸಾಹುಕಾರ ಬದಲಾದ! ಮುಂದಕ್ಕೆ ಆ ಪ್ರಚಾರಕ ಭಂಗಿ ಮತ್ತು ಶ್ರೀಮಂತ ಇಬ್ಬರ ಸಂಪರ್ಕವನ್ನೂ ನಿಯಮಿತವಾಗಿ ಇಟ್ಟುಕೊಂಡ. ಅವರೊಳಗಿನ ಭೇದ ನಿವಾರಣೆಯಾಗುವುದರ ಜತೆಗೆ ಸಂಘಟನೆಯ ಕಾರ್ಯಕ್ಕೂ ತನ್ಮೂಲಕ ಸಮಾಜಪರಿವರ್ತನೆಯ ಕಾರ್ಯಕ್ಕೂ ಅವರು ಹೆಗಲು ನೀಡುವಂತಾಯಿತು.
ಬದಲಾಗಬೇಕಾದ ಸ್ವಭಾವ
ಸಮಾಜದ ಏಕತೆಗೆ ಅಡ್ಡಿಯಾಗಬಲ್ಲಂಥ ಭೇದಭಾವಾದಿ ಸಾಮಾಜಿಕ ಸಮಸ್ಯೆಗಳು ಹತ್ತಾರಿವೆ. ಮೂಲದಲ್ಲಿ ಇದು ಇದ್ದಿರಲಶಕ್ಯ. ಮೂಲವೆಲ್ಲಿದೆ ಗೊತ್ತಿಲ್ಲ. ಸಾವಿರಾರು ವರ್ಷಗಳ ಸುದೀರ್ಘ ಸಮಾಜಜೀವನದಲ್ಲಿ ಇಂಥ ಅನೇಕ ಕುರೀತಿ-ಕುರೂಢಿಗಳು ಎಲ್ಲೋ ಮಧ್ಯದಲ್ಲಿ ನುಸುಳಿರಬೇಕು.
ಸ್ವಭಾವವನ್ನು ಬದಲಾಯಿಸಲಾಗದು ಎಂಬ ಅನುಭವದ ಮಾತಿದೆ. ಆದರೆ ಸಾಧನೆ-ಪ್ರಯತ್ನಗಳಿಂದ ತನ್ನನ್ನು ಬದಲಿಸಿಕೊಳ್ಳಬಲ್ಲ ದ್ರವ್ಯವೂ ಅದೇ ಸ್ವಭಾವದಲ್ಲಿ ನಿಹಿತವಾಗಿರುವುದೂ ಅನುಭವವೇದ್ಯವೇ ಆಗಿದೆ. ಒಬ್ಬ ವ್ಯಕ್ತಿಯ ಸ್ವಭಾವಕ್ಕೆ ಹೇಗೋ ಹಾಗೇ ಸಾಮೂಹಿಕ ಸ್ವಭಾವಕ್ಕೂ ಬದಲಾಗಬಲ್ಲ ಸಾಧ್ಯತೆ ಇರಲಿಕ್ಕೇ ಬೇಕು.
ಚಾಂಚಲ್ಯವೇ ಮನಸ್ಸಿನ ಸ್ವಭಾವ. ಅಂದರೆ ಮನಸ್ಸಿನಲ್ಲುದಿಸುವ ಭಾವಗಳು ಬದಲಾಗುತ್ತಿರುತ್ತವೆ. ಯಾವುದೋ ಕಾರಣದಿಂದ ಉದಿಸಿ ಸ್ಥಾಯಿಯಾಗುವ ದುರ್ಭಾವಗಳಂತೋ ಅಂತೆಯೇ; ಇಚ್ಛಾಶಕ್ತಿಯಿಂದ ಉತ್ತಮ ಭಾವಗಳೇ ಬರುವಂತೆ ಮತ್ತವು ಸ್ಥಾಯಿಯೂ ಆಗುವಂತೆ ಸಾಧಿಸಲೂ ಆಗುತ್ತದೆ. ಬದಲಾಗಬಲ್ಲ ಸಾಧ್ಯತೆಯು ವ್ಯಕ್ತಿಗತ ಮನಸ್ಸಿಗೆ ಇರುವಂತೆ ಸಾಮೂಹಿಕ ಮನಸ್ಸಿಗೂ ಇದೆ. ಹೀಗೆ ತನ್ನ ಬದಲಾಗಬಲ್ಲ ಸ್ವಭಾವದಿಂದಾಗಿ ಯಾವುದೋ ಸನ್ನಿವೇಶದಲ್ಲಿ ಸಮಾಜದ ಮನಸ್ಸಿನಲ್ಲಿ ಈಗಿರುವ ಕೊಳೆಯು ಆವರಿಸಿಕೊಂಡಿರಬೇಕು. ಈ ವಿಕೃತ ಬದಲಾವಣೆಯು ಸಮಾಜದ ಏಕತೆಗೇ ಅಡ್ಡಿಯಾಗುವಂಥ ವಿಷಮತೆಯಾಗಿ ಪರಿಣಮಿಸಿ ಉಳಕೊಂಡಿರಬೇಕು. ವಿಷಮಕರವಾಗಿಯೇ ಇದ್ದರೂ ಸಾಮಾಜಿಕಮನಸ್ಸಿನ ಬದಲಾವಣೆಯಿಂದ ಈ ವಿಕಾರ ಉಂಟಾಗಿದೆ ಎಂಬುದು ಈಗ ಭರವಸೆ. ಏನೀ ಭರವಸೆ ಎಂದರೆ; ನಡುವೆ ನುಸುಳಿದ್ದು ನಡುವೆ ಹೋಗಲೂ ಶಕ್ಯ. ಮನಸ್ಸಿನ ಬದಲಾವಣೆಯಿಂದ ನುಸುಳಿದ್ದು ಅದೇ ಮನಸ್ಸಿನ ಬದಲಾವಣೆಯಿಂದ ನಿಶ್ಶೇಷಗೊಳ್ಳಲೂ ಶಕ್ಯ. ಸದ್ಭಾವವನ್ನು ಮೂಡಿಸಿ ಅದನ್ನು ಸ್ಥಾಯಿಯಾಗಿಸಲೂ ಶಕ್ಯ.
ಈಗ ಹೀಗೆ; ವ್ಯಕ್ತಿಗತವಾಗಿ ಬದಲಾಗುವ ಮನಸ್ಸು ಸಮಾಜದ ಏಕತೆಯ ನಿಟ್ಟಿನಲ್ಲಿಯೂ ಬದಲಾಗಬೇಕಾಗಿದೆ. ಹಾಗೇ ಬದಲಾಗಬಲ್ಲ ಮನಸ್ಸುಗಳನ್ನು ಬದಲಾಯಿಸುವವರು ಬೇಕಾಗಿದ್ದಾರೆ. ಹೀಗೆ; ಬದಲಾಯಿಸಬೇಕಾಗಿದೆ ಎಂಬುದನ್ನು ಒಪ್ಪಿಕೊಂಡರೆ ಸಾಕು, ಅದೇ ಅರ್ಹತೆ. ಯಾರೂ ಬೇಕಾದರೂ ಅರ್ಜಿ ಗುಜರಾಯಿಸಬಹುದು, ನೋಡಿ.
✍️ ನಾರಾಯಣ ಶೇವಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.