ನವದೆಹಲಿ: ಇಸಿಸ್ನಂತಹ ಭಯಾನಕ ಉಗ್ರ ಸಂಘಟನೆ ಬಿತ್ತುತ್ತಿರುವ ಅಪಾಯಕಾರಿ ಸಿದ್ಧಾಂತಕ್ಕೆ ಯುವ ಜನತೆ ಸುಲಭವಾಗಿ ತೆರೆದುಕೊಳ್ಳುತ್ತಿದ್ದಾರೆ. ವಿಶ್ವ ಮಾತ್ರವಲ್ಲದೇ ಭಾರತದಲ್ಲೂ ನಿಧಾನವಾಗಿ ಇಸಿಸ್ ಸಿದ್ಧಾಂತಗಳು ಮೊಳಕೆಯೊಡೆಯುತ್ತಿದೆ. ಕಾಶ್ಮೀರದಂತಹ ಭಾಗದಲ್ಲಿ ಆಗಾಗ ಹಾರುತ್ತಿರುವ ಕಪ್ಪು ಬಾವುಟಗಳೇ ಇದಕ್ಕೆ ಸಾಕ್ಷಿ.
ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿರುವ ಕೇಂದ್ರ ಗೃಹಸಚಿವಾಲಯ ಶನಿವಾರ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆದಿದೆ. ಇಲ್ಲಿ ಭಾರತದ ಮೇಲೆ ಇಸಿಸ್ ಬೀರುತ್ತಿರುವ ಪ್ರಭಾವ ಮತ್ತು ಅದನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
12 ರಾಜ್ಯಗಳ ಗೃಹ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾವುದೇ ಧರ್ಮದ ಮೂಲಭೂತ ಸಿದ್ಧಾಂತಕ್ಕೆ ಆರ್ಷಿತರಾಗುವುದು ಗಂಭೀರ ವಿಷಯ, ಇಸಿಸ್ನ ಖಲೀಫತ್ ಸೇರಿದಂತೆ ಹಲವಾರು ವಿಧದ ಉಗ್ರ ಸಿದ್ಧಾಂತಕ್ಕೆ ಭಾರತೀಯ ಯುವಕರು ಆಕರ್ಷಿತರಾಗುತ್ತಿದ್ದಾರೆ ಎಂಬ ಮಾಹಿತಿಗಳು ಸಿಗುತ್ತಿವೆ. ಯುವಕರಿಗೆ ಕೌನ್ಸೆಲಿಂಗ್ ಮಾಡುವ ಮೂಲಕ, ಸಮುದಾಯದ ನಾಯಕರಿಗೆ ಈ ಬಗ್ಗೆ ಅರಿವು ಮೂಡಿಸುವ ಮೂಲಕ, ಸಾಮಾಜಿಕ ಜಾಲತಾಣಗಳನ್ನು ನಿರಂತರ ಪರಿಶೀಲನೆಗೆ ಒಳಪಡಿಸುವ ಮೂಲಕ ಉಗ್ರ ಸಿದ್ಧಾಂತಗಳು ಪಸರಿಸುವುದನ್ನು ತಡೆಯಬೇಕಾಗಿದೆ. ಇಸಿಸ್ ಸೇರಲು ಹೊರಟಿರುವ ಯುವಕರ ಯೋಜನೆಗೆ ತ್ವರಿತಗತಿಯಲ್ಲಿ ಪ್ರತಿಕ್ರಿಯೆ ನೀಡಿ, ಅವರನ್ನು ತಡೆಯಬೇಕಾದ ಜವಾಬ್ದಾರಿಯೂ ಇದೆ ಎಂದು ಗೃಹ ಸಚಿವಾಲಯ ಹೇಳಿದೆ.
ಇಸಿಸ್ ಭಾರತೀಯ ಮುಸ್ಲಿಂ ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಆ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯೋಜನೆ ರೂಪಿಸಿದೆ ಎಂಬ ಭಯಾನಕ ಸುದ್ದಿ ಇತ್ತೀಚಿಗಷ್ಟೇ ವರದಿಯಾಗಿತ್ತು. ಇದು ಭಾರತವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.