ಇಂದು ಭಾರತದ ಪಾಲಿಗೆ ಮಹತ್ವಪೂರ್ಣವಾದ ದಿನ. 2016 ರ ಸೆಪ್ಟೆಂಬರ್ 29 ರಂದು ಶೌರ್ಯದ ಪ್ರತೀಕವಾದ ಭಾರತೀಯ ಸೇನೆಯು ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನಕ್ಕೆ ಅದರದೇ ಭಾಷೆಯಲ್ಲಿ ದಿಟ್ಟ ಉತ್ತರವನ್ನು ನೀಡಿದ ದಿನ. ಭಯೋತ್ಪಾದಕರನ್ನು ಛೂ ಬಿಟ್ಟು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ಥಾನದ ವಿರುದ್ಧ ಭಾರತವು ಸರ್ಜಿಕಲ್ ಸ್ಟ್ರೈಕ್ ಮಾಡಿದ ದಿನ. ಶತ್ರು ನೆಲದೊಳಗೆ ನುಗ್ಗಿ ಶತ್ರುವನ್ನು ಸದೆಬಡಿದು ವಿಶ್ವಕ್ಕೆ ಸಾಮರ್ಥ್ಯವನ್ನು, ತನ್ನ ಶೌರ್ಯವನ್ನು ಭಾರತ ತೋರಿಸಿದ ದಿನ.
ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿಯಲ್ಲಿ ಸೇನಾನೆಲೆಯ ಮೇಲೆ ಪಾಕಿಸ್ಥಾನ ಮೂಲದ ಭಯೋತ್ಪಾದಕರು ದಾಳಿಯನ್ನು ನಡೆಸಿದ್ದರು. ಘಟನೆಯಲ್ಲಿ ಭಾರತ ತನ್ನ 19 ಪರಾಕ್ರಮಿ ಯೋಧರನ್ನು ಕಳೆದುಕೊಂಡಿತು. ಇಡೀ ದೇಶವೇ ತನ್ನ ಪರಾಕ್ರಮಿ ಯೋಧರಿಗಾಗಿ ಕಂಬನಿ ಮಿಡಿಯಿತು. ಆ ಘಟನೆ ಭಾರತೀಯರ ಹೃದಯವನ್ನು ಘಾಸಿಗೊಳಿಸಿತು. ಆದರೆ ಈ ಘಟನೆಗೆ ಪ್ರತೀಕಾರವನ್ನು ತೀರಿಸದೆ ಭಾರತ ವಿರಮಿಸಲಿಲ್ಲ. ಈ ದಾಳಿಗೆ ದಿಟ್ಟ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು, ಸೆಪ್ಟೆಂಬರ್ 28-29 ರ ರಾತ್ರಿ ಪಿಒಕೆ ದಾಟಿ ಪಾಕ್ ಪ್ರದೇಶದ ಒಳಗೆ ನುಗ್ಗಿ ಅಲ್ಲಿದ್ದ ಭಯೋತ್ಪಾದನಾ ಶಿಬಿರಗಳನ್ನು ನಾಶಪಡಿಸಿತು.
ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಾವು ತಿಳಿಯಲೇಬೇಕಾದ ಕೆಳವೊಂದಿಷ್ಟು ಮಾಹಿತಿ ಇಲ್ಲಿದೆ
* ಸೆಪ್ಟೆಂಬರ್ 18, 2016 ರಂದು ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಮಿಲಿಟರಿ ನೆಲೆಯ ಮೇಲೆ ಅಮಾನುಷ ದಾಳಿಯನ್ನು ನಡೆಸಿದರು.
* ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಪ್ಯಾಡ್ಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಈ ಘಟನೆಗೆ ಸೇನೆಯು ಪ್ರತಿಕಾರ ತೀರಿಸಿಕೊಂಡಿತು.
* ಪ್ರಧಾನಿ ನರೇಂದ್ರ ಮೋದಿ, ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ಉರಿ ದಾಳಿ ಬಳಿಕ ಈ ಘಟನೆಯನ್ನು “ಭಾರತವು ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ” ಎಂದು ಪ್ರಧಾನಿ ಮೋದಿ ಘೋಷಿಸಿದ್ದರು, ಸರ್ಜಿಕಲ್ ಸ್ಟ್ರೈಕ್ ಮೂಲಕ ಆ ಮಾತನ್ನು ಉಳಿಸಿಕೊಂಡರು.
* ಸ್ಟ್ರೈಕ್ಗಳಿಗಾಗಿ ಸೇನೆಯ ಸಿದ್ಧತೆಯು ಸೆಪ್ಟೆಂಬರ್ 24 ರಂದು ಪ್ರಾರಂಭವಾಯಿತು. ವಿಶೇಷ ರಾತ್ರಿ ದೃಷ್ಟಿ ಸಾಧನಗಳು, Tavor 21 ಮತ್ತು ಎಕೆ -47 ಆಕ್ರಮಣಕಾರಿ ರೈಫಲ್ಗಳು, ರಾಕೆಟ್ ಚಾಲಿತ ಗ್ರೆನೇಡ್ಗಳು, houlder-fired ಕ್ಷಿಪಣಿಗಳು, ಹೆಕ್ಲರ್ ಮತ್ತು ಕೋಚ್ ಪಿಸ್ತೂಲ್ಗಳು, ಹೆಚ್ಚಿನ ಸ್ಫೋಟದ ಗ್ರೆನೇಡ್ಗಳು ಮತ್ತು ಪ್ಲಾಸ್ಟಿಕ್ ಸ್ಫೋಟಕಗಳು ಮುಂದಾದ ಪ್ರಬಲ ಅಸ್ತ್ರಗಳನ್ನು ಒಳಗೊಂಡ ಸರ್ವ ಸನ್ನದ್ಧ ಪಡೆ ದಾಳಿಗೆ ಸಿದ್ಧವಾಗಿ ನಿಂತಿತು. 30 ಸಿಬ್ಬಂದಿಯನ್ನು ಒಳಗೊಂಡ ತಂಡಗಳು ಪ್ರಬಲವಾಗಿದ್ದವು ಮತ್ತು ನಿರ್ದಿಷ್ಟ ಗುರಿಗಳನ್ನು ಹೊಂದಿದ್ದವು.
* ಯೋಜನೆ ಹೇಗಿತ್ತೆಂದರೆ, ದೂರದ ಗುರಿಯತ್ತ ದಾಳಿ ಮಾಡಬೇಕಿದ್ದ ತಂಡಗಳು ಸೆಪ್ಟೆಂಬರ್ 28ರ ಸಂಜೆ ಬೇಗನೆ ಹೊರಟುಬಿಟ್ಟವು, ಈ ಮೂಲಕ ದಾಳಿಯನ್ನು ಸಮನ್ವಯ ಗೊಳಿಸಲಾಯಿತು. ಏಕಕಾಲದಲ್ಲಿ ಎಲ್ಲ ಗುರಿಗಳತ್ತ ದಾಳಿ ನಡೆಸುವುದು ಯೋಜನೆಯಾಗಿತ್ತು. ಇದರಿಂದಾಗಿ ಯಾವೊಬ್ಬ ಶತ್ರು ಕೂಡ ರಕ್ಷಿಸಲ್ಪಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಲಾಗಿತ್ತು.
* ಭಾರತೀಯ ಸೈನಿಕರು ಹೊರಡುವುದಕ್ಕೂ ಮುನ್ನ ಸೆಪ್ಟೆಂಬರ್ 28ರಂದು ರಾತ್ರಿ 10 ಗಂಟೆಗೂ ಮೊದಲೇ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಗಡಿಪ್ರದೇಶದಲ್ಲಿನ ನಾಗರಿಕರನ್ನು ಸ್ಥಳಾಂತರ ಮಾಡಲಾಗಿತ್ತು.
* ಸೈನಿಕರು ಒಳನುಗ್ಗಿ ತಮ್ಮ ಕಾರ್ಯವನ್ನು ಮುಗಿಸುವ ಮೊದಲೇ, ಲಾಂಚ್ಪ್ಯಾಡ್ಗಳಲ್ಲಿನ ಸೆಂಟ್ರಿಗಳನ್ನು ಸ್ನೈಪರ್ಗಳ ಮೂಲಕ ತಟಸ್ಥಗೊಳಿಸಿದರು.
* ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಎಲ್ಲಾ ತಂಡಗಳು ತಮ್ಮ ನೆಲೆಗಳಿಗೆ ಮರಳಿದವು. ಓರ್ವ ಭಾರತೀಯ ಸೇನಾ ಸೈನಿಕ ಕೂಡ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡಿಲ್ಲ ಎಂಬುದು ಹೆಮ್ಮೆಯ ಸಂಗತಿ.
* ಸೈನಿಕರು ದಾಳಿಯ ವೇಳೆ ವಿವಿಧ ಸ್ಥಳಗಳಲ್ಲಿ ಇದ್ದ ಉಗ್ರರ ಆರು ಲಾಂಚ್ಪ್ಯಾಡ್ಗಳನ್ನು ನೆಲಕ್ಕೆ ಉರುಳಿಸಿ 45 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸೇನಾ ಮಾಹಿತಿ ತಿಳಿಸುತ್ತದೆ.
* 2018ರಲ್ಲಿ, ದಾಳಿಯ ಎರಡು ವರ್ಷಗಳ ನಂತರ, ಸೆಪ್ಟೆಂಬರ್ 29 ಅನ್ನು ‘ಸರ್ಜಿಕಲ್ ಸ್ಟ್ರೈಕ್ ಡೇ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿತು.
ಭಾರತದ ಮೇಲೆ ಅನೇಕ ಬಾರಿ ಪಾಕಿಸ್ಥಾನದ ಪ್ರಾಯೋಜಿತ ಭಯೋತ್ಪಾದಕ ದಾಳಿಗಳು ನಡೆದಿವೆ. ಆದರೆ ಎಂದಿಗೂ ಭಾರತ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಕಾರವನ್ನು ತೀರಿಸಿಕೊಂಡಿರಲಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯೋಧರ ಹುತಾತ್ಮತೆಯನ್ನು ವ್ಯರ್ಥವಾಗಲು ಬಿಡದೆ ದಿಟ್ಟವಾದ ರೀತಿಯಲ್ಲಿ ಪ್ರತಿಕಾರವನ್ನು ತೀರಿಸಿಕೊಂಡಿತು. ಉಗ್ರರ ಸಂಹಾರದ ಆ ಮಹತ್ವದ ದಿನಕ್ಕೆ ಇಂದು 4 ವರ್ಷಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.