ಸೂರ್ಯ ಸೂಸುವ ಅತಿ ನೇರಳೆ ವಿಕಿರಣಗಳು ಭೂಮಿಗೆ ಸೋಕದಂತೆ ತಡೆದು ಭೂಮಿಯ ರಕ್ಷಣೆಯ ಕೆಲಸವನ್ನು ಓಝೋನ್ ಪದರ ಮಾಡುತ್ತಿದೆ ಎಂಬುದನ್ನು ನಾವು ಓದಿದ್ದೇವೆ. ವಿಜ್ಞಾನ ಪಠ್ಯದಲ್ಲಿಯೂ ನಾವು ಈ ಅಂಶವನ್ನು ತಿಳಿದುಕೊಂಡಿದ್ದೇವೆ. ಅಂತಹ ಓಝೋನ್ ಪದರ ಭೂಮಿಯಿಂದ ಉತ್ಪಾದನೆಯಾಗುತ್ತಿರುವ ಅಂದರೆ ಮಾನವ ನಿರ್ಮಿತ ವಸ್ತುಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹಾನಿಗೊಳಗಾಗುತ್ತಿದೆ. ಇದನ್ನು ತಪ್ಪಿಸದೇ ಹೋದಲ್ಲಿ ಈಗಾಗಲೇ ಹಾನಿಗೊಳಗಾಗಿರುವ ಓಝೋನ್ ಮತ್ತಷ್ಟು ಹಾನಿಗೊಳಗಾಗಿ ಭೂಮಿಗೆ ಅಪಾಯವನ್ನೊಡ್ಡುವ ಪರಿಸ್ಥಿತಿ ಬರಬಹುದು.
ಅಂದ ಹಾಗೆ ಇಂದು ವಿಶ್ವ ಓಝೋನ್ ಪದರ ದಿನ. ಈ ವರ್ಷದ ಓಝೋನ್ ದಿನದ ಘೋಷಣೆ “ಜೀವನಕ್ಕಾಗಿ ಓಝೋನ್, 35 ವರ್ಷಗಳ ಓಝೋನ್ ಪದರ ರಕ್ಷಣೆ’ ಎಂಬುದಾಗಿದೆ. ಈ ದಿನದಂದು ಓಝೋನ್ ಪದರ ಹಾನಿಗೊಳಗಾಗಲು ಕಾರಣವಾಗುವ ಅಂಶಗಳ ಬಳಕೆಯನ್ನು ಕಡಿಮೆ ಮಾಡುವಂತೆ ನಾವೆಲ್ಲರೂ ಪಣ ತೊಡಬೇಕಾಗಿದೆ. ಓಝೋನ್ ಪದರ ಇದ್ದರಷ್ಟೇ ನಾವು ಈಗಿನಂತೆ ಬದುಕಬಹುದು. ಆ ಪದರ ಇರದೇ ಹೋದಲ್ಲಿ ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಪೂರಕವಾಗುವ ಸೂರ್ಯನ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು, ಇಲ್ಲಿರುವ ಸಕಲ ಚರಾಚರ ವಸ್ತುಗಳೂ ನಾಶ ಹೊಂದುವಂತಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹ ಬೇಡ. ಈಗಲೇ ಎಚ್ಚೆತ್ತುಕೊಂಡಲ್ಲಿ ಕೈಮೀರುವ ಮೊದಲೇ ಓಝೋನ್ ರಕ್ಷಣೆ ನಮ್ಮಿಂದ ಸಾಧ್ಯವಾಗಲಿದೆ.
ಹಾಗಾದರೆ ಓಝೋನ್ ಪದರ ರಕ್ಷಣೆಗೆ ನಾವೇನು ಮಾಡಬಹುದು?
ಮನುಷ್ಯ ಬಳಸುವ ವಾಹನಗಳು, ದಟ್ಟವಾದ ಹೊಗೆ, ಕಾರ್ಖಾನೆಗಳ ಹೊಗೆ ಸೇರಿದಂತೆ ಇನ್ನಿತರ ಪರಿಸರವನ್ನು ಕಲುಷಿತಗೊಳಿಸುವ ಅಂಶಗಳು ಓಝೋನ್ ಪದರ ಹಾನಿಗೊಳಗಾಗಲು ಕಾರಣವಾಗುತ್ತಿದೆ. ಮನುಷ್ಯ ಅಭಿವೃದ್ಧಿ ಎಂದು ಬೊಬ್ಬೆ ಹೊಡೆದು, ಹೆಚ್ಚು ಆಧುನಿಕತೆಗೆ ವಾಲಿಕೊಂಡಂತೆಲ್ಲ ಪರಿಸರದ ಮೇಲೆ ಅಡ್ಡ ಪರಿಣಾಮ ಹೆಚ್ಚುತ್ತಲೇ ಇದೆ. ಜೊತೆಗೆ ಪರಿಸರವನ್ನು ಶುದ್ಧಗೊಳಿಸುವ ಶಕ್ತಿಯನ್ನು ಹೊಂದಿರುವ ಮರ, ಗಿಡಗಳ ಸಂಖ್ಯೆಯೂ ಕಡಿಮೆಯಾಗುತ್ತಿರುವುದರಿಂದಾಗಿ ಪರಿಸರ ಮಲಿನಗೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ. ಆದ್ದರಿಂದ ನಾವು ನಮ್ಮ ಜೀವನಕ್ರಮಗಳಿಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳುವ ಮೂಲಕ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅನವಶ್ಯಕ ಹಾದಿಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ಓಝೋನ್ ಪದರದ ಮೇಲಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ.
ಸಿಎಫ್ಸಿ ಕ್ಲೋರೊಫ್ಲೋರೊಕಾರ್ಬನ್ಗಳು (ಸಿಎಫ್ಸಿ), ಹ್ಯಾಲೊಜೆನೇಟೆಡ್ ಹೈಡ್ರೋಕಾರ್ಬನ್, ಮೀಥೈಲ್ ಬ್ರೋಮೈಡ್ ಮತ್ತು ನೈಟ್ರಸ್ ಆಕ್ಸೈಡ್ನಂತಹ ಹಾನಿಕಾರಕ ಅನಿಲಗಳನ್ನು ಪರಿಸರಕ್ಕೆ ಸೇರದಂತೆ ತಡೆಯುವ ಕೆಲಸ ನಮ್ಮಿಂದಾಗಬೇಕು. ಅಂದರೆ ಅಂತಹ ವಿಷಾನಿಲಗಳನ್ನು ಸೂಸುವ ವಸ್ತುಗಳ ಬಳಕೆ ಕಡಿಮೆಯಾಗಬೇಕು. ವೈಯಕ್ತಿಕ ವಾಹನಗಳನ್ನು ಹೆಚ್ಚು ಬಳಸುವ ಬದಲಾಗಿ ಸಾರ್ವಜನಿಕ ವಾಹನಗಳನ್ನು ಹೆಚ್ಚು ಆಶ್ರಯಿಸಬೇಕು. ಇದರಿಂದಾಗಿ ಸಂಚಾರ ದಟ್ಟಣೆ, ಇಂಧನ ಉಳಿತಾಯದ ಜೊತೆಗೆ ಪರಿಸರ ಸೇರುವ ಹೊಗೆ ( ಕಾರ್ಬನ್ ಮಾನಾಕ್ಸೈಡ್ ಮತ್ತು ಸಾರಜನಕ ಆಕ್ಸೈಡ್) ಗಳು ಪರಿಸರ ಸೇರುವ ಸಂದರ್ಭ ಕಡಿಮೆಯಾಗುತ್ತದೆ. ಪ್ರಕೃತಿಯೂ ನಿರ್ಮಲವಾಗಲು ಇದು ಸಹಾಯ ಮಾಡುತ್ತದೆ. ಜೊತೆಗೆ ಓಝೋನ್ ಪದರ ಹಾನಿಯಾಗುವುದನ್ನು ಇದು ಕಡಿಮೆ ಮಾಡುತ್ತದೆ.
ಹೆಚ್ಚಿನ ಸಂಸ್ಥೆಗಳಲ್ಲಿ, ಮನೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಸಿ (ಹವಾ ನಿಯಂತ್ರಣ ಸಾಧನ) ಸಾಮಾನ್ಯ ಎಂಬಂತಾಗಿದೆ. ಈ ಎಸಿ ಹೊರಸೂಸುವ ಕ್ಲೋರೊಫ್ಲೋರೊಕಾರ್ಬನ್ಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಎಸಿ ಬಳಕೆ ಕಡಿಮೆ ಮಾಡುವ ಮೂಲಕವೂ ಓಝೋನ್ ರಕ್ಷಣೆ ಸಾಧ್ಯ. ಸಾವಯವ ಪದಾರ್ಥಗಳನ್ನು ಬಳಕೆ ಮಾಡಿ ಕೃಷಿ ಚಟುವಟಿಕೆ ಮಾಡುವುದು, ಹಸಿರು ನಿರ್ಮಾಣಕ್ಕೆ ಹೆಚ್ಚು ಆಧ್ಯತೆ ನೀಡುವ ಮೂಲಕವೂ ಹರಿದಿರುವ ಓಝೋನ್ ಮತ್ತಷ್ಟು ಹಾನಿಯಾಗದಂತೆ ತಡೆಯಬಹುದು. ಜೊತೆಗೆ ಸೌಂದರ್ಯವರ್ಧಕಗಳ ಬಳಕೆ, ಹೇರ್ ಸ್ಪ್ರೇ, ರೂಂ ಸ್ಪ್ರೇ ಗಳ ಬಳಕೆಯನ್ನು ನಿಲ್ಲಿಸುವ ಮೂಲಕವೂ ವಾತಾವರಣ ಸೇರುವ ಹಾನಿಕಾರಕ ಅನಿಲಗಳನ್ನು ತಡೆಯುವುದು ಸಾಧ್ಯ. ಹಾಗಾದಲ್ಲಿ ಓಝೋನ್ ಪದರ ಉಳಿಯಬಹುದು.
ಇದಕ್ಕೆ ತಾಜಾ ಉದಾಹರಣೆ ಎಂದರೆ ಎಪ್ರಿಲ್ ನಿಂದ 2 ತಿಂಗಳುಳಗಳು ವಿಶ್ವದೆಲ್ಲೆಡೆ ಕೊರೋನಾ ಲಾಕ್ಡೌನ್ನಿಂದಾಗಿ ಪರಿಸರ ಮಾಲಿನ್ಯ ಸಮಸ್ಯೆಯೂ ಕಡಿಮೆಯಾಗಿತ್ತು. ಇದರಿಂದಾಗಿ ನದಿ, ತೊರೆಗಳು ಹೆಚ್ಚು ನೈರ್ಮಲ್ಯಗೊಂಡಿದ್ದವು. ಜೊತೆಗೆ ಪರಿಸರದಲ್ಲಿ ತುಂಬಿಕೊಂಡಿದ್ದ ಮಾಲಿನ್ಯಕಾರಕ ಅಂಶಗಳು ಕಡಿಮೆಯಾಗಿ ಪರಿಸರ ಮತ್ತೆ ನಳನಳಿಸುವಂತಾಗಿತ್ತು ಎಂಬುದು. ಈ ವಿಚಾರ ಅನೇಕ ಸಂಶೋಧನಾ ವರದಿಗಳಿಂದಲೂ ದೃಢಪಟ್ಟಿದೆ. ಹರಿದು ಹೋಗಿದ್ದ ಓಝೋನ್ ಪದರ ಸಹ ಈ ಲಾಕ್ಡೌನ್ ಸಂದರ್ಭದಲ್ಲಿ ಕೊಂಚ ಮಟ್ಟದಲ್ಲಿ ಸರಿಹೋಗಿತ್ತು ಎಂಬುದನ್ನು ಗಮನಿಸಬಹುದು.
ಹೌದು, ಓಝೋನ್ ಇದ್ದರಷ್ಟೇ ಮನುಷ್ಯ, ಭೂಮಿಯ ಸಕಲ ಚರಾಚರ ವಸ್ತುಗಳ ಉಳಿವು. ಓಝೋನ್ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಅನಗತ್ಯ ಕಾರಣಗಳಿಂದ ನಮ್ಮಿಂದಾಗುತ್ತಿರುವ ಪರಿಸರ ಮಾಲಿನ್ಯ ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಹಾಗಿದ್ದಲ್ಲಿ ಓಝೋನ್ ಪದರ ಹಾನಿಗೊಳಗಾಗುವುದು ತಪ್ಪುತ್ತದೆ. ನಾವದನ್ನು ರಕ್ಷಿಸಿದರೆ, ಓಝೋನ್ ನಮ್ಮನ್ನು ರಕ್ಷಿಸುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಓಝೋನ್ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.