ಸರ್ ಎಂ. ವಿಶ್ವೇಶ್ವರಯ್ಯ… ಯಾರು ತಾನೆ ಈ ಹೆಸರನ್ನು ಕೇಳಿಲ್ಲ ಹೇಳಿ… ಕರ್ನಾಟಕದ ಭಗೀರಥ ಎಂದೇ ಜನಪ್ರಿಯರಾಗಿರುವ ಇವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಆ ಕಾಲದಲ್ಲಿಯೇ ಮಾಡಿದ ಸಾಧನೆಗಳನ್ನು ನೆನೆಯುವ ಸಲುವಾಗಿ, ಅವರು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಹಾಕಿಕೊಟ್ಟ ಭದ್ರ ತಳಪಾಯದ ಹಿನ್ನೆಲೆಯಲ್ಲಿ ಇವರ ಜನ್ಮದಿನ (ಸೆ.15)ನ್ನು ಎಂಜಿನಿಯರ್ಸ್ ಡೇ (ಅಭಿಯಂತರರ ದಿನ) ಎಂಬುದಾಗಿಯೇ ಆಚರಿಸಿಕೊಂಡು ಬರಲಾಗುತ್ತಿದೆ.
ಇವರು ಹುಟ್ಟಿದ್ದು, ಸೆ. 15, 1860ರಲ್ಲಿ. ಕರ್ನಾಟಕದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ. ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಇವರ ಹಿರಿಯರ ಊರು ಆಂಧ್ರಪ್ರದೇಶದ ಮೋಕ್ಷಗುಂಡಂ ಎಂಬ ಹಳ್ಳಿಯಾಗಿದ್ದರಿಂದ ವಿಶ್ವೇಶ್ವರಯ್ಯ ಅವರ ಹೆಸರಿನ ಜೊತೆಗೂ ಮೋಕ್ಷಗುಂಡಂ ಸೇರಿಕೊಂಡಿದೆ. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿಯೂ, ಪ್ರೌಢಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡವರಾಗಿದ್ದಾರೆ. ಮದ್ರಾಸು ವಿವಿ ಇಂದ ಪದವಿ ಪಡೆದು, ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. ಬಳಿಕ ಬಾಂಬೆ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು.
ಇವರ ಜೀವನದ ಬಗ್ಗೆ ಹೇಳುವುದಾದರೆ, ಇವರು ತಮ್ಮ ಜೀವಮಾನದ ಸಾಧನೆಗಳ ಕಾರಣಗಳಿಂದಲೇ ಇಂದಿಗೂ ಬಹುಮಾನ್ಯರಾಗಿ ಜನಪ್ರಿಯರಾದವರಾಗಿದ್ದಾರೆ. ಅತ್ಯದ್ಭುತ ವಾಸ್ತುಶಿಲ್ಪಿಯಾಗಿದ್ದ ಇವರ ಸಾಧನೆಗಳ ಕಾರಣದಿಂದಲೇ ಅವರು ಹುಟ್ಟಿದ ದಿನವನ್ನು ಅಭಿರಂತರರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇವರ ಪ್ರಮುಖ ಸಾಧನೆಯನ್ನು ಹೇಳುವುದಾದರೆ ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಸಂದರ್ಭದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಕಟ್ಟಲಾದ ಕೃಷ್ಣ ರಾಜ ಸಾಗರ (K.R.S) ಅಣೆಕಟ್ಟು. ಆ ಕಾಲದಲ್ಲೇ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸುವ ಮೂಲಕ ಸಾವಿರಾರು ಜನರಿಗೆ ನೀರಾವರಿ ಸೌಕರ್ಯ ಕಲ್ಪಿಸಿಕೊಡುವಲ್ಲಿ ಇವರ ಪಾತ್ರ ಮಹತ್ವದ್ದು. ಅಲ್ಲದೆ ಇಂದಿಗೂ ಅನುರಣಣೀಯ, ಅನುಕರಣೀಯ ಮತ್ತು ಅನುಸ್ಮರಣೀಯ.
ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ. 1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣ ಗೊಳಿಸಿದರು.
1912 ರಲ್ಲಿ ಮೈಸೂರಿನ ದಿವಾನರಾಗುತ್ತಾರೆ. 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆರಂಭ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ ಸ್ಥಾಪನೆ, 1916 ಮೈಸೂರು ವಿವಿ ಸ್ಥಾಪನೆ, ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಆರಂಭ, ಸಾಕ್ಷರತೆಗೆ ಒತ್ತು, ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗುವಲ್ಲಿಯೂ ಇವರ ಪಾತ್ರ ಅಪಾರ. 1917 ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಇತ್ಯಾದಿಗಳು ರಾಜ್ಯಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಗಳಾಗಿವೆ ಎಂಬುದನ್ನು ನಾವು ಸ್ಮರಿಸಲೇ ಬೇಕು.
ಹಾಗೆಯೇ ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ ” ಮೇಡ್ ಇನ್ ಇಂಡಿಯಾ” ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ತಾಂತ್ರಿಕ ಸಾಧನೆಗಳ ಸರದಾರನಾಗಿ ವಿಶ್ವೇಶ್ವರಯ್ಯ ಅವರು ನಮ್ಮ ಮುಂದೆ ನಿಲ್ಲುತ್ತಾರೆ.
ಬ್ರಿಟಿಷ್ ಸರ್ಕಾರದಿಂದ ನೈಟ್ಹುಡ್, 1955 ರಲ್ಲಿ ಇವರಿಗೆ ಭಾರತ ರತ್ನ ಗೌರವವೂ ದೊರೆತಿದೆ. ಇಷ್ಟೇ ಅಲ್ಲದೆ ಇವರ ಸಾಧನೆಯ ಪ್ರಯಾಣದ ಹಾದಿಯಲ್ಲಿ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಗಳ ಹಿಂದೆಯೂ ಸರ್. ಎಂ. ವಿಶ್ವೇಶ್ವರಯ್ಯ ಅವರ ಶ್ರಮ ಅಪಾರ. 1962 ಎಪ್ರಿಲ್ 12 ರಂದು ವಿಶ್ವೇಶ್ವರಯ್ಯ ಅವರು ಕೊನೆಯುಸಿರೆಳೆದರು. ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ.
ಇವರ ಸಾಧನೆಯನ್ನು ಪರಿಗಣಿಸಿ ಹಲವಾರು ಸಂಸ್ಥೆಗಳು ಇಂದಿಗೂ ಇವರ ಹೆಸರಿನಲ್ಲಿ ಗೌರವ ಪುರಸ್ಕಾರಗಳನ್ನು ನೀಡುತ್ತಿವೆ ಎಂಬುದೇ ಇವರ ಜೀವಮಾನದ ಸಾಧನೆಗೆ ಸಾಕ್ಷಿ ನುಡಿಯುತ್ತದೆ. ಅವರ ಜೀವನ ಇನ್ನಷ್ಟು ಜನರಿಗೆ ದಾರಿದೀಪ, ಮಾದರಿಯಾಗಲಿ ಎಂಬ ಆಶಯ ನಮ್ಮದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.