ಅಪೌಷ್ಟಿಕತೆ ಎಂಬುದು ಪ್ರಸ್ತುತ ದಿನಮಾನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದರೆ ತಪ್ಪಾಗಲಾರದು. ಸೇವಿಸುವ ಆಹಾರ ಅಥವಾ ಇನ್ನಿತರ ಕಾರಣಗಳಿಂದಾಗಿ ಮಕ್ಕಳು ಅಪೌಷ್ಟಿಕತೆಯಿಂದ ನರಳುವುದನ್ನು ನಾವು ನೋಡಿರುವುದು, ಕೇಳಿರುವುದು ಸಾಮಾನ್ಯ ವಿಚಾರ. ಇಂತಹ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೌಷ್ಟಿಕ ಕರ್ನಾಟಕದ ಸಂಕಲ್ಪದ ಜೊತೆಗೆ ‘ರಾಷ್ಟ್ರೀಯ ಪೋಷಣ್ ಮಾಸಾಚರಣೆ ಸೆಪ್ಟೆಂಬರ್ 2020’ ಯನ್ನು ಆಯೋಜಿಸಿದೆ.
ರಾಜ್ಯದ ಅಪೌಷ್ಟಿಕತೆಯಲ್ಲಿ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು, ದೇಹಕ್ಕೆ ಪೋಷಕಾಂಶ ಒದಗಿಸಿಕೊಡುವ ಆಹಾರದ ಸೇವನೆಗೆ ಉತ್ತೇಜನ ನೀಡುವುದು, ರಾಜ್ಯದ ಪ್ರತಿಯೊಂದು ಪಂಚಾಯತ್ನ ಮಟ್ಟದಲ್ಲಿ ವಿಶೇಷ ಪೋಷಣಾ ಸಭೆಗಳನ್ನು ನಡೆಸುವ ಮೂಲಕ ಈ ಕಾರ್ಯಕ್ರಮ ನಡೆಸಲು ಇಲಾಖೆ ಮುಂದಾಗಿದೆ.
ಅಪೌಷ್ಟಿಕತೆ ಹೋಗಲಾಡಿಸಿ ಪೌಷ್ಟಿಕ ಸಮಾಜ ನಿರ್ಮಾಣದ ಸದುದ್ದೇಶದಿಂದ ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಇಲಾಖೆ ರಾಷ್ಟ್ರೀಯ ಪೋಷಣ್ ಮಾಸಾಚರಣೆಯನ್ನು ಆಚರಿಸುತ್ತದೆ. ಈ ಬಾರಿ ಡಿಜಿಟಲ್ ಅಭಿಯಾನದ ಮೂಲಕ ಈ ಮಾಸಾಚರಣೆಯನ್ನು ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ಬಾರಿಯ ಪೋಷಣ್ ಮಾಸಾಚರಣೆಯನ್ನು ಎರಡು ಮುಖ್ಯ ವಿಚಾರಕ್ಕೆ ಕೇಂದ್ರೀಕರಿಸಿ ಆಚರಣೆ ಮಾಡಲು ರೂಪುರೇಶೆಗಳನ್ನು ಇಲಾಖೆ ಹಾಕಿಕೊಂಡಿದೆ.
* ತೀವ್ರ ಅಪೌಷ್ಟಿಕ ಮಕ್ಕಳ ಗುರುತಿಸುವಿಕೆ ಮತ್ತು ಚಿಕಿತ್ಸೆ
* ಕೈ ತೋಟಗಳ ಅಭಿವೃದ್ಧಿ
ಮಕ್ಕಳು ವಯಸ್ಸಿಗೆ ತಕ್ಕಂತೆ ಎತ್ತರ, ತೂಕ ಹೊಂದಿರದಿದ್ದಲ್ಲಿ, ಮಗುವು ದುರ್ಬಲವಾಗಿದ್ದು, ನಿರುತ್ಸಾಹದಿಂದಿರುವುದು, ಮಾಂಸ ಖಂಡಗಳು ಸವೆದಿದ್ದರೆ, ಮಗುವು ಪದೇ ಪದೇ ಸೋಂಕಿಗೊಳಗಾಗುತ್ತಿದ್ದರೆ ಅದನ್ನು ಅಪೌಷ್ಟಿಕತೆ ಎಂದು ತಿಳಿಯಲಾಗುತ್ತದೆ. ಇದನ್ನು ಪರೀಕ್ಷೆಗೆ ಒಳಪಡಿಸಲು, 6 ತಿಂಗಳಿಂದ 5 ವರ್ಷದವರೆಗಿನ ಮಕ್ಕಳ ಎತ್ತರ, ತೂಕ ಪರೀಕ್ಷೆ ಮಾಡಿ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡುವ ಮೂಲಕ ಮಗುವು ಪೌಷ್ಟಿಕವಾಗಲು ಬೇಕಾದ ಕ್ರಮ ಕೈಗೊಳ್ಳುವುದನ್ನು ಈ ಬಾರಿಯ ಪೋಷಣ್ ಮಾಸಾಚರಣೆಯ ಮುಖ್ಯ ಅಂಶವಾಗಿ ಪರಿಗಣಿಸಲಾಗಿದೆ.
ಅಂತೆಯೇ ಎರಡನೇ ಅಂಶವಾಗಿ ಕೈತೋಟವನ್ನು ಇಲಾಖೆ ಪರಿಗಣಿಸಿದ್ದು, ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶಗಳಲ್ಲಿ ಕೈತೋಟ ನಿರ್ಮಾಣ, ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಉಲ್ಲಾಸ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಜನರಿಗೆ ತಿಳಿಸುವುದು ಮತ್ತು ಅಂಗನವಾಡಿಗಳಲ್ಲಿ ಕೈತೋಟಗಳ ನಿರ್ಮಾಣದಿಂದ ಮಕ್ಕಳ ಮನೋ ವಿಕಾಸ, ಆಸಕ್ತಿಗಳು ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದರ ಅರಿವು ಮೂಡಿಸುವ ದೃಷ್ಟಿಯಿಂದ ಈ ಅಂಶ ಮುಖ್ಯವಾಗಿದೆ.
ಜೊತೆಗೆ ನಮ್ಮ ಆರೋಗ್ಯ ವೃದ್ಧಿ, ಪೌಷ್ಟಿಕತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನಾವೇ ನಮ್ಮ ಕೈತೋಟದಲ್ಲಿ ಬೆಳೆದ ಸಾವಯವ ತರಕಾರಿ ಹಣ್ಣುಗಳ ಸೇವನೆ ಆರೋಗ್ಯ ವೃದ್ಧಿಗೂ ಸಹಾಯಕವಾಗಲಿದೆ. ಗರ್ಭಿಣಿ, ಬಾಣಂತಿಯರಿಗೆ ಕೈತೋಟದ ವಾತಾವರಣ ಮನಸ್ಸಿಗೆ ಹಿತ ನೀಡುವುದರ ಜೊತೆಗೆ ಮಕ್ಕಳ ಆರೋಗ್ಯದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತವೆ. ತಾಜಾ ಆಹಾರಗಳು ನಮ್ಮ ದೇಹದ ಪೌಷ್ಟಿಕಾಂಶ ಹೆಚ್ಚಿಸುವ ಜೊತೆಗೆ ಮಾನಸಿಕ ಆರೋಗ್ಯದ ಮೇಲೆಯೂ ಪೂರಕ ಪರಿಣಾಮ ಬೀರುತ್ತವೆ ಎಂಬ ಅಂಶವನ್ನು ಪರಿಗಣಿಸಿರುವ ಇಲಾಖೆ ಈ ನಿಟ್ಟಿನಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟ ನಡೆಸುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ಮಾಸಾಚರಣೆಯ ಜೊತೆಗೆ ಜನಸಾಮಾನ್ಯರಾದ ನಾವು, ನೀವುಗಳೂ ಕೈ ಜೋಡಿಸುವ ಮೂಲಕ ಅಪೌಷ್ಟಿಕತೆಯ ವಿರುದ್ಧ ಹೋರಾಡೋಣ. ಪೌಷ್ಟಿಕ ಕರ್ನಾಟಕ ನಿರ್ಮಾಣದಲ್ಲಿ ಭಾಗಿಗಳಾಗೋಣ. ಇಲಾಖೆ ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವೂ ಅದೇ ದಾರಿಯಲ್ಲಿ ಸಾಗುವ ಮೂಲಕ ಸತ್ವ ಭರಿತ ಜೀವನಕ್ಕೆ ಮುನ್ನುಡಿ ಬರೆಯೋಣ. ಪೋಷಣ್ ಮಾಸಾಚರಣೆಯಲ್ಲಿ ನಾವೂ ಪಾಲ್ಗೊಳ್ಳೋಣ, ಪೌಷ್ಟಿಕ ಕರ್ನಾಟಕ ನಿರ್ಮಿಸೋಣ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.