ಟಿ.ಬಿ.ಯಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 11 ವರ್ಷದ ಬಾಲಕ ಸೋನು, ತನ್ನ ಆರು ವರ್ಷದ ತಂಗಿ ಖುಷ್ಬೂಳೊಂದಿಗೆ, ಎಲ್ಲಿಂದಲೋ ಬೇಡಿ ತಂದ ಬೆಳೆಯನ್ನು ಅಂದೂ ಸಹ ನೀರಿನೊಂದಿಗೆ ಒಗ್ಗರಣೆ ಕೊಡುವ ತಯಾರಿ ಮಾಡುತ್ತಲಿದ್ದ. ಆಗಲೇ ರೀನಾ ಅಕ್ಕ ಕಿಶೋರಿ ವಿಕಾಸ ಕೇಂದ್ರದ ಹುಡುಗಿಯರೊಂದಿಗೆ ‘ರೇಷನ್ ಕಿಟ್’ನೊಂದಿಗೆ ಅವನ ಬಳಿ ಬಂದಳು. ಆಗ ಸೋನುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದು ಕೇವಲ ಆರಂಭ ಮಾತ್ರ.
ಆಗ್ರಾದ ಸೇವಾಬಸ್ತಿಯಲ್ಲಿ ವಾಸಿಸುತ್ತಿರುವ ಈ ಅನಾಥ ಅಣ್ಣ-ತಂಗಿಯರ ಪೋಷಣೆಯ ಜೊತೆಗೆ, ಓದು ಹಾಗೂ ಔಷಧದ ವ್ಯವಸ್ಥೆಯನ್ನು ಸಹ ಈಗ ಆಗ್ರಾ ಸೇವಾಭಾರತಿ ಮಾತೃ ಮಂಡಳಿಯ ಸಹೋದರಿಯರು ಮಾಡುತ್ತಿರುವರು.
ಈ ಸಹೋದರಿಯರು ವಲಸೆ ಕಾರ್ಮಿಕ ಕುಟುಂಬದ ಯಾರಿಗೂ ಹೇಳಲಾರದ ಆ ಮಹಿಳೆಯರ ವ್ಯಥೆಯನ್ನು ಸಹ ಅರಿತಿರುವರು. ಆರ್ಥಿಕ ಬಿಕ್ಕಟ್ಟು, ಮೈಲುಗಟ್ಟಲೆ ಪ್ರಯಾಣ, ಅದರ ಮೇಲೆ ಮುಟ್ಟಿನ ಸಮಸ್ಯೆ, ಈ ವಲಸೆ ಮಹಿಳೆಯರ ಇಂತಹ ಸ್ಥಿತಿ ನೋಡಿ ಸೇವಾಭಾರತಿ ಸಂರಕ್ಷಕಿ ಆಗ್ರ ಡಾ. ರೇಣುಕಾ ಉತ್ಸವ್’ರ ಸಹಾಯದಿಂದ ಸೇವಾ ಭಾರತಿ, ಮಾತೃ ಮಂಡಲದ ಬೌದ್ಧಿಕ್ ಪ್ರಮುಖ್ ರೀನಾ ಸಿಂಗ್’ರೊಂದಿಗೆ ಮಮತಾ ಸಿಂಗ್, ಸುಪ್ರಿಯಾ ಜೈನ್, ಅಂಜಲಿ ಗೌತಮ್ ಹಾಗೂ ಸುಪ್ರಿತಾ ಸಿಂಗ್’ರ ಈ ಗುಂಪು ಈ ವಲಸೆ ಮಹಿಳೆಯರ ಹೊರತಾಗಿ ಬಸ್ ನಿಲ್ದಾಣ, ಸೇವಾಬಸ್ತಿಗಳಲ್ಲಿ ವಾಸಿಸುವ ಬಡ ಮಹಿಳೆಯರಿಗೂ ಉಚಿತ ಸ್ಯಾನಿಟರಿ ನ್ಯಾಪ್ಕಿನ್’ಗಳನ್ನು ಹಂಚತೊಡಗಿದರು. ಆಗ್ರಾ ಹಾಗೂ ಸುತ್ತಮುತ್ತಲಿನ 127 ಸೇವಾಬಸ್ತಿಗಳಲ್ಲಿರುವ 20 ಸಾವಿರ ಮಹಿಳೆಯರಿಗೆ ನ್ಯಾಪ್ಕಿನ್’ಗಳನ್ನು ಹಂಚಲಾಯಿತು ಹಾಗೂ ಕೊರೋನಾ ಸಮಯದಲ್ಲಿ ಆರೋಗ್ಯ ಮಾಹಿತಿಯನ್ನು ಸಹ ಕೊಡಲಾಯಿತು.
ಯಾವಾಗ ಒಬ್ಬ ತಾಯಿ ತನ್ನ ಸೆರಗನ್ನು ಹರಡುತ್ತಾಳೋ ಆಗ ಸಂಪೂರ್ಣ ಸೃಷ್ಟಿ ಅದರಲ್ಲಿ ಒಂದಾಗುವುದೆಂದು ಹೇಳಲಾಗಿದೆ. ದೇಶಾದ್ಯಂತ ಸೇವಾಭಾರತಿ – ಮಾತೃ ಮಂಡಳಿಯ ಮಹಿಳೆಯರು ಕೊರೋನಾ ಕಾಲದ ಸಮಸ್ಯೆಯೊಂದಿಗೆ ಹೆಣಗುತ್ತಿರುವ ಜನರಿಗೆ ರೇಷನ್ ಹಂಚುವುದರೊಂದಿಗೆ ಮಾಸ್ಕ್, ಪಿಪಿಇ ಕಿಟ್, ಬಾರ್ಲಿ, ಉಪ್ಪಿನಕಾಯಿ, ಹಪ್ಪಳ, ರಾಖಿಗಳನ್ನು ಮಾಡುವ ಹಾಗೂ ಕೊರೋನಾ+ ರೋಗಿಗಳಿಗೆ ಸಹಾಯವಾಣಿ ನಡೆಸುವಂತಹ ಅನೇಕ ಕಾರ್ಯಗಳನ್ನು ಮಾಡಿರುವರು.
ತ್ರಿಪುರದಲ್ಲಿ ವಾಸಿಸುವ ಮೀರಾ ಸಾಹ್’ರೊಂದಿಗೆ ಭೇಟಿ ಮಾಡೋಣ ಬನ್ನಿ. ಇವರು ಕೊರೋನಾ ಕಾಲದಲ್ಲಿ ಪತಿಯ ಮರಣದ ನಂತರ ಸ್ವಯಂ ಖಿನ್ನತೆಯೊಂದಿಗೆ ಹೋರಾಡಿ, “ಗಂಗಾ ಸೇವಾ ಸಂಸ್ಥಾನ”ದ ತತ್ವವಾದಾನದಲ್ಲಿ 25 ಸಹೋದರಿಯರಿಗೆ ಮಾಸ್ಕ್ ಹಾಗೂ ಇತರ ಉಪಯೋಗಿ ಬಟ್ಟೆಗಳನ್ನು ಹೊಲಿಯುವ ತರಬೇತಿ ಕೊಟ್ಟಿರುವರು ಹಾಗೂ ರಾತ್ರಿ-ಹಗಲು ಮಾಸ್ಕ್ ಹೊಲಿದಿರುವರು. ಇದರಿಂದಾಗಿ ಇವರ ಮನೆಗಳಲ್ಲಿ ಒಲೆಯು ಉರಿಯುತ್ತಿದೆ.
ಹಾಗೆ ಮಾಂಗಿಲಾಲ್ (ಒಬ್ಬ ವೃದ್ಧ ಭಿಕ್ಷುಕ) ದಿನಾಲು 10 ರೂಪಾಯಿಯಲ್ಲಿ ಸೇವಾಪುರದ ಉದ್ಯೋಗವರ್ಧಿನಿ ಅಡುಗೆಮನೆಯಿಂದ ಒಂದು ತಟ್ಟೆ ಊಟ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಲಾಕ್ಡೌನ್ ನಲ್ಲಿ ಅವರು ಎರಡು ತಟ್ಟಿ ಊಟ ತೆಗೆದುಕೊಂಡು ಹೋಗುತ್ತಿದ್ದಾಗ, ಚಂದ್ರಿಕಾ ತಾಯಿ ಅವರು ಭಿಕ್ಷೆಯಿಂದ ಸಿಗುತ್ತಿರುವ ಹಣದಿಂದ ಇತರ ಭಿಕ್ಷುಕರಿಗೂ ತಿನ್ನಿಸುತ್ತಿದ್ದರೆಂಬುದನ್ನು ಮನಗಂಡರು. ಇದನ್ನು ನೋಡಿ ಒಬ್ಬ ತಾಯಿಯ ಹೃದಯ ತುಂಬಿಬಂದಿತ್ತು. ರಾಷ್ಟ್ರೀಯ ಸೇವಾ ಭಾರತಿ ಟ್ರಸ್ಟ್ ಬೋರ್ಡ್’ನ ಸಹ ಸಚಿವ ಚಂದ್ರಿಕಾ ಚೌಹಾನ್’ರು ಅಕ್ಕಪಕ್ಕದ ಎಲ್ಲಾ ಮಂದಿರಗಳ ಬಿಕ್ಷುಕರು, ಬಸ್ತಿಯ ಅನಾಥ ದಿವ್ಯಾಂಗರೊಂದಿಗೆ, ಮನೆಯಲ್ಲಿರುವ ವೃದ್ಧರಿಗೆ ಲಾಕ್ಡೌನ್ ಸಮಯದಲ್ಲಿ ಉಚಿತ ಊಟ ಕೊಡಲಾರಂಭಿಸಿದರು. 26 ಮಾರ್ಚ್ ನಿಂದ ಸತತ ನಾಲ್ಕು ತಿಂಗಳು 250ಕ್ಕಿಂತ ಅಧಿಕ ಜನರಿಗೆ ಉಚಿತ ಹಾಗೂ ಸಾವಿರಾರು ವಲಸೆ ಕಾರ್ಮಿಕರಿಗೆ ಕೇವಲ ಇಪ್ಪತ್ತು ರೂಪಾಯಿಯಲ್ಲಿ ಹೊಟ್ಟೆ ತುಂಬ ಊಟವನ್ನು ಸೇವಾಭಾರತಿಯ ಮಹಿಳೆಯರು ನೀಡಿದರು.
ಸಂಘದ ಸಂಸ್ಕಾರ ಪಡೆದ ಈ ಮಹಿಳೆಯರ ಸೇವಾ ಯಾತ್ರೆಯ ಚರ್ಚೆ ಮಾಡುತ್ತಾ, ಸೇವಾ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷೆ ಅಮಿತಾ ಜೈನ್……
82 ವರ್ಷದ ಹರಿದಿನಿ ಜೋಶಿ ಹಾಗೂ 80 ವರ್ಷದ ಪ್ರಕಾಶ್ ಖನೂಜ ಇವರ ಉದಾಹರಣೆ ಕೊಡುತ್ತಾರೆ. ಇವರು ಈ ಇಳಿವಯಸ್ಸಿನಲ್ಲಿ ಮಾಸ್ಕ್ ಹೊಲಿದು ಸೇವಾಬಸ್ತಿಗಳಲ್ಲಿ ಉಚಿತವಾಗಿ ಹಂಚಿರುವರು.
ಅಣ್ಣನ (ಕೈ) ಮಣಿಕಟ್ಟು ಬರಿದಾಗದಿರಲೆಂದು ತಂಗಿಯ ಈ ಚಿಂತೆ ದೂರ ಮಾಡಲು 65 ವರ್ಷದ ಆರತಿ ಅಕ್ಕ, ಸವಿತಾ ಅಕ್ಕ ಬುರಹಾನ್ಪುರದ ಮೇಘ ಸಹೋದರಿಯರು ರಾಖೀ, ರಾಗಿ, ಅಕ್ಕಿ, ತೆಂಗಿನಕಾಯಿಯೊಂದಿಗೆ ಧನ್ವಂತರಿ ಕಾಲನಿಯ ಅವರ ಸಹೋದರನ ಮನೆಗೆ ತಲುಪಿಸಿದರು. ಮಾಲ್ವಾ ಪ್ರಾಂತದ 9 ಪಟ್ಟಣದಲ್ಲಿ ಸಹೋದರಿಯರು ರಾಖೀಗಳನ್ನು ತಯಾರಿಸಿ ಅವಶ್ಯಕತೆ ಇರುವ ಮಹಿಳೆಯರಿಗೆ ಆದಾಯದ ಮೂಲವನ್ನು ನೀಡಿದರು ಮಾತ್ರವಲ್ಲ ಹಾಟ್ಸ್ಪಾಟ್ ಆಗಿದ್ದ ಇಂದೋರ್’ನಲ್ಲಿ ಸಹೋದರಿಯರ ರಾಖಿಗಳನ್ನು ಸಹೋದರರಿಗೆ ತಲುಪಿಸಿ ಈ ವಿಶಿಷ್ಟ ಸೇವಾ ಕಾರ್ಯದಿಂದ ರಕ್ಷಾಬಂಧನ ಹಬ್ಬವನ್ನು ಅವಿಸ್ಮರಣೀಯಗೊಳಿಸಲಾಯಿತು.
ಸೇವಾಭಾರತಿ ಮಾತೃ ಮಂಡಳಿ ಮಾಲ್ವಾ ಪ್ರಾಂತ್ಯದ ಸಂಯೋಜಕಿ ಸುನೀತಾ ತಾಯಿ ಹೇಳುವರು – ಸಹೋದರಿಯರು ಲಾಕ್ಡೌನ್ ಕಾಲದಲ್ಲಿ ಆಲೂಗಡ್ಡೆ ಚಿಪ್ಸ್, ಮಾವಿನ ಹಪ್ಪಳ, ಬೆಳ್ಳುಳ್ಳಿ ಉಪ್ಪಿನಕಾಯಿ, ಮಿನಿ ಸಮೋಸ ಇಂತಹ ಅನೇಕ ಖಾದ್ಯ ಸಾಮಾಗ್ರಿಗಳನ್ನು ಉತ್ತಮ ಪ್ಯಾಕೇಜ್ ನೊಂದಿಗೆ ಮಾರಿ ಕೊರೋನಾ ಕಾಲದಲ್ಲಿಯೇ “ಮಾ ಅನ್ನಪೂರ್ಣ ಸ್ವಸಹಾಯ ಸಂಘ” ದ ನಿರ್ಮಾಣ ಮಾಡಿದರು, ಅಲ್ಲದೇ ಹಲವು ಪರಿವಾರಗಳು ಆರ್ಥಿಕ ಸಂಕಷ್ಟದಿಂದ ಮೇಲಕ್ಕೆ ಬಂದವು.
ಜಮ್ಮು-ಕಾಶ್ಮೀರದ ನಗರೌಟಾದ ಉದಾಹರಣೆ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಸ್ಥಳಾಂತರ ಹೊಂದಿದ ಕಾಶ್ಮೀರಿ ಪಂಡಿತರಿಗಾಗಿ ನಿರ್ಮಾಣವಾಗಿರುವ ಜಗತಿ ಕಾಲನಿಯ ಪರಿವಾರದ ಮೇಲೆ ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಸಂಕಟ ಹೆಚ್ಚಾದಾಗ ಅಂಜಲಿ ಅಕ್ಕನ ನೇತೃತ್ವದಲ್ಲಿ 100 ಪರಿವಾರದ ಸಹೋದರಿಯರು ಮಾಸ್ಕ್, ಪಿಪಿಇ ಕಿಟ್ ಹೊಲಿಯುವುದರಿಂದ ಹಿಡಿದು, ಉಪ್ಪಿನಕಾಯಿ ಮಾರಿ ತನ್ನ ಮನೆಯ ಖರ್ಚು ಸರಿದೂಗಿಸಿದರು. ಕೊರೋನ ಕಾಲದಲ್ಲಿ ಪಾಸಿಟಿವ್ ರೋಗಿಗಳಿಗೆ ಫೋನ್ ಮಾಡಿ ಅವರ ಚಿಂತೆಯನ್ನು ದೂರ ಮಾಡುವ ಹಾಗೂ ಮನೋಬಲ ಹೆಚ್ಚಿಸುವ ಕೆಲಸವನ್ನು ಸಹ ನಮ್ಮ ಸಹೋದರಿಯರು ಮಾಡಿರುವರು. ಎರಡು ದಿನದಿಂದ ಫೋನಲ್ಲಿ ರೀಚಾರ್ಜ್ ಮುಗಿದಿರುವ ಚಿಂತೆ ಮಾಡುತ್ತಿರುವ 70 ವರ್ಷದ ಒಬ್ಬಂಟಿ ವೃದ್ಧತಾಯಿಗೆ, ಒಬ್ಬ ಅಪರಿಚಿತ ಮಹಿಳೆಯ ಮಧುರ ಸ್ವರ-
“ನೀವು ಹೇಗಿರುವಿರಿ, ನಿಮಗೆ ಯಾವುದೇ ತೊಂದರೆ ಇಲ್ಲವಲ್ಲ..?” ಅವರಿಗೆ ಸ್ವಯಂ ದೇವರೇ ಬಂದು ಕಾಳಜಿ ವಹಿಸಿದಂತಾಯಿತು.
ಭೋಪಾಲ ಮಹಾನಗರ ಮಹಿಳಾ ಸಹ ಸಂಯೋಜಕಿ ಅಭಾ ಪಾಂಡೆ ಅಕ್ಕ ಹಾಗೂ ಅವರ ಮಾತೃ ಮಂಡಳಿಯ ಸ್ನೇಹಿತರು ‘ಸೇವಾಭಾರತಿ ದೂರ ಭಾಷಾ ಮಿತ್ರ ಅಭಿಯಾನ’ದ ಈ ಪ್ರಶಂಸನೀಯ ಕಾರ್ಯಕ್ರಮದ ಮೂಲಕ 1400 ಕೊರೋನಾ ಪಾಸಿಟಿವ್ ರೋಗಿಗಳು, ಶಂಕಿತ ರೋಗಿಗಳು ಹಾಗೂ ವೃದ್ಧರು ಇವರೆಲ್ಲರ ಪಟ್ಟಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು 24ಗಂಟೆಯೊಳಗೆ ಫೋನ್ ರಿಚಾರ್ಜ್ ಮಾಡಿ ಔಷಧಿಗಳನ್ನು ತಲುಪಿಸಿ ಕೊರೋನ ಪಾಸಿಟಿವ್ ರೋಗಿಗಳ ಪರಿವಾರದೊಂದಿಗೆ ಕೌನ್ಸಿಲಿಂಗ್ ಮಾಡಿ ಅನೇಕ ಜನರ ಮನದಲ್ಲಿರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡಿರುವರು.
ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸೇವಾಭಾರತಿಯ ಸಹೋದರಿಯರು ಕೆಲವು ಸ್ಥಳಗಳಲ್ಲಿ ಮೆಡಿಕಲ್ ಸಹಾಯವಾಣಿಯನ್ನು ಸಹ ನಡೆಸಿದರು. ತೆಲಂಗಾಣ ಸಂಘಟನಾ ಮಂತ್ರಿ ಜಯಪ್ರದಾ ಅಕ್ಕ ಹೇಳುವರು – ಹೈದರಾಬಾದ್ ನಲ್ಲಿ ನಡೆಯುತ್ತಿರುವ ಸೇವಾಭಾರತಿ ಕೋವಿಡ್ ಸಹಾಯವಾಣಿಯ ಕಾಲ್ ಸೆಂಟರ್ ನಲ್ಲಿ 50 ಯುವತಿಯರು ಹಾಗೂ ಮಹಿಳೆಯರ ತಂಡ ಡಾಕ್ಟರ್ ಸಹಾಯದಿಂದ ಜನರಿಗೆ ಮನೆಯಲ್ಲಿ ಜ್ವರ – ಶೀತ – ಕೆಮ್ಮು ಇತ್ಯಾದಿ ಚಿಕಿತ್ಸೆ ನೀಡುತ್ತಿರುವರು. ಗರ್ಭವತಿ ಮಹಿಳೆಯರಿಗೆ ಸುರಕ್ಷಿತ ಆಸ್ಪತ್ರೆಗಳ ದಾರಿ ತೋರಿಸುತ್ತಿರುವರು ಹಾಗೂ ಸ್ವಯಂಸೇವಕ ಸಹೋದರರ ಸಹಾಯದಿಂದ 500ಕ್ಕಿಂತಲೂ ಹೆಚ್ಚು ಕೊರೋನ ರೋಗಿಗಳಿಗಾಗಿ, ಮನೆಯಲ್ಲಿಯೇ ಕೊರೋನಾ ಕಿಟ್ ತಯಾರಿಸಿ ಮಾರುತ್ತಿರುವರು.
ಯಾವಾಗಲೆಲ್ಲ ಸಮಯವು ನಾರಿಯ ಪರೀಕ್ಷೆ ಮಾಡಿದೆಯೋ ಆವಾಗಲೆಲ್ಲಾ ನಾರಿಯು ಸವಾಲುಗಳನ್ನು ಎದುರಿಸಿ ಹೊಸ ಶಕ್ತಿಗೆ ಜನ್ಮ ನೀಡಿರುವಳೆಂಬದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ದೇಶದಲ್ಲಿ ಹರಡುತ್ತಿರುವ ಕೊರೋನ ಸಂಕಟದಲ್ಲಿ ರಾಷ್ಟ್ರೀಯ ಸೇವಾ ಭಾರತಿ, ಮಾತೃ ಮಂಡಳಿಯ ಮಾತೆಯರು ಕೆಲವರ ತಾಯಿಯಾಗಿ, ಕೆಲವರ ತಂಗಿಯಾಗಿ, ಕೆಲವರ ಮಗಳಾಗಿ ಕಷ್ಟದಲ್ಲಿರುವ ಜನರಿಗೆ ಸಹಾಯ ನೀಡಿರುವರು.
✍️ ಶ್ರೀಮತಿ ಸಹನಾ ವಿಠಲ ಕುಮಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.