ಕಾಸರಗೋಡು : ಕಾಸರಗೋಡು ಹಾಗೂ ಮಂಗಳೂರು ನಡುವೆ ದಿನ ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ ಹಾಗೂ ಆರೋಗ್ಯ ಮೊದಲಾದ ವಿಷಯಗಳಿಗಾಗಿ ಸುಮಾರು 40000ಕ್ಕೂ ಹೆಚ್ಚು ಮಂದಿ ಪ್ರಯಾಣಿಸುವರಿದ್ದಾರೆ.
ಈಗ ಕೊರೋನದಿಂದಾಗಿ ಲಾಕ್ಡೌನ್ ಆದ ಮೇಲೆ ಉಭಯ ರಾಜ್ಯಗಳ ಮಧ್ಯೆ ಸಂಚಾರ ನಿಷೇಧಗೊಂಡು ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸೂಕ್ತ ಚಿಕಿತ್ಸೆಗೆ ಕಾಸರಗೋಡಲ್ಲಿ ಆಸ್ಪತ್ರೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಮಂಗಳೂರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಚಿಂತೆಯೂ ಎಲ್ಲರಿಗೂ ಕಾಡಿದೆ.
ಈ ಸಂದರ್ಭದಲ್ಲಿ ಕಾಸರಗೋಡು ಮಂಗಳೂರಿನ ನಡುವಿನ ನಿತ್ಯ ಪಯಣಿಗರು ಸಹಯಾತ್ರಿ ಎಂಬ ಒಂದು ಸಂಘಟನೆಯ ಮೂಲಕ ದಕ್ಷಿಣ ಕನ್ನಡಕ್ಕೆ ನಿತ್ಯ ಪ್ರಯಾಣಿಸುವವರ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ಹಲವು ಚಟುವಟಿಕೆಗಳನ್ನು ಕೈಗೊಂಡಿದೆ. ಕೇರಳ ಸರಕಾರದ ನಡೆಯಿಂದಾಗಿ ತೊಂದರೆಗೊಳಗಾಗಿರುವ ಕಾಸರಗೋಡಿಗರ ಬವಣೆಯ ವಿಚಾರವನ್ನು ರಾಷ್ಟ್ರ ಮಟ್ಟದ ಮಾಧ್ಯಮಗಳಿಗೆ ತಲುಪಿಸುವ ಕೆಲಸ ಸಹಯಾತ್ರಿಯ ಮೂಲಕ ಆಗಿದೆ.
ದೇಶದಾತ್ಯಂತ unlock 4 ಆರಂಭವಾಗಿದ್ದು ಅಂತರರಾಜ್ಯ ಮಕ್ತ ಪ್ರವೇಶವನ್ನು ಆದೇಶಿಸಿದೆ. ಆದರೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕೇರಳ ಸರಕಾರ ಕೇಂದ್ರದ ಈ ನಿಯಮ ಜಾರಿ ಮಾಡಲಿಲ್ಲ. ಕೊನೆಗೆ ಜನರ ಒತ್ತಡಗಳಿಗೆ ಮಣಿದ ಕಾಸರಗೋಡು ಜಿಲ್ಲಾಡಳಿತ Antigen ಪರೀಕ್ಷೆ ವಾರಕ್ಕೊಮ್ಮೆ ಮಾಡಿ ಅದನ್ನು ಲಗತ್ತಿಸಿದಲ್ಲಿ ಪಾಸ್ ಕೊಡುವುದಾಗಿ ಮೊದಲಿಗೆ ಹೇಳಿತು. ನಂತರ RT PCR ಪರೀಕ್ಷೆ ನಡೆಸಬೇಕು ಎಂದು ತನ್ನ ನಿಲುವು ಬದಲಿಸಿತು.
ಇದೇ ಸಂದರ್ಭದಲ್ಲಿ ಗಡಿಯಲ್ಲಿ ಮುಕ್ತ ಸಂಚಾರವಾಗಬೇಕೆಂದು ಕೇರಳ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ತೀರ್ಮಾನ ಬಂದು ಪಾಸ್ ಇಲ್ಲದೆ ಪ್ರವೇಶ ನೀಡಬೇಕು ಹಾಗೂ ಪಾಣತ್ತೂರು ಜಾಲ್ಸೂರು, ಬಂದಡ್ಕ, ಸಾರಡ್ಕ ಗಡಿ ತೆರೆಯುವಂತೆ ಕೋರ್ಟ್ ಆದೇಶ ನೀಡಿತು. ಕೋರ್ಟ್ನ ಈ ಆದೇಶದಂತೆ ಪಾಸ್ ವ್ಯವಸ್ಥೆಯನ್ನು ಹಿಂದೆಗೆದ ಕಾಸರಗೋಡು ಜಿಲ್ಲಾಡಳಿತ ಮತ್ತೊಮ್ಮೆ Antigen Negetive test ನ್ನು ಕೋವಿಡ್ ಜಾಗೃತ ವೆಬ್ಸೈಟ್ ನಲ್ಲಿ ದಾಖಲಿಸಬೇಕು ಹಾಗೂ 21 ದಿನಗಳಲ್ಲಿ ಇದನ್ನು ಮತ್ತೊಮ್ಮೆ ಮಾಡಬೇಕೆಂದು ನಿಯಮ ಜಾರಿಗೊಳಿಸಿದೆ.
ಆದರೆ Antigen ಪರೀಕ್ಷೆ, ಸಮಯದ ನಿರ್ಬಂಧ ಹಾಗೂ ಕಡ್ಡಾಯ ಪಾಸ್ ಮುಂತಾದ ಯಾವುದೇ ಷರತ್ತುಗಳನ್ನು ಹಾಕದೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಕಾಸರಗೋಡಿನ ಜನರ ಬೇಡಿಕೆಯಾಗಿದೆ.
ಕಾಸರಗೋಡು ಜಿಲ್ಲೆಯ ಎಲ್ಲ ಕಡೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಾಗಗಳಿಗೆ ಸಂಚರಿಸಲು ಅವಕಾಶ ನೀಡಬೇಕೆಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ ಕಾಸರಗೋಡು ಕನ್ನಡಿಗರು ಹಲವು ಬಾರಿ ಕಾಸರಗೋಡು ಜಿಲ್ಲಾಡಳಿತಕ್ಕೆ ಈ ಮನವಿ ನೀಡಿದರೂ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.
ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳು ಸೇರಿಕೊಂಡು ದಿನಾಂಕ 28-8-2020 ರಂದು ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ಹೋರಾಟ ಸಮಿತಿಯನ್ನು ರೂಪಿಸಲಾಗಿದೆ.
ಹೋರಾಟ ಸಮಿತಿಯ ಸಂಚಾಲಕರಾಗಿ ವಿಪಿನ್ ದಾಸ್ ನಂಬಿಯಾರ್ ಅವರನ್ನು ನೇಮಕ ಮಾಡಿ, ಸಮಿತಿಯ ಸದಸ್ಯರನ್ನಾಗಿ ಡಾ. ಸಪ್ನಾ ಜೆ. ಉಕ್ಕಿನಡ್ಕ, ಭಾಸ್ಕರ್ ಕಾಸರಗೋಡು, ಗಣೇಶ ಭಟ್ ವಾರಣಾಸಿ, ಶಿವಾನಂದ ಚೌಟ ಹಾಗೂ ಹರಿಪ್ರಸಾದ್ ಕಾನ ಇವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಡಳಿತವು ಗಡಿಗಳನ್ನು ತೆರೆಯದೆ ಗಡಿನಾಡ ಜನರನ್ನು ಸತಾಯಿಸುತ್ತಿರುವುದರ ವಿರುದ್ಧ ವಿವಿಧ ಸ್ತರಗಳಲ್ಲಿ ಹೋರಾಟವನ್ನು ಮಾಡುವುದೆಂದು ಸಮಿತಿಯು ನಿಶ್ಚಯಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.